ನಿನ್ನ ಸುಗಂಧದಿಂದ, ಸೌಂದರ್ಯದಿಂದ ಮನ ತಿರುಗಿಸಲು ಆಗುತ್ತಲೇ ಇಲ್ಲ. ಅದೇಕೆ ಹೀಗೆ ಎಂದು ನೂರಾರು ಸಲ ಚಿಂತಿಸಿದ್ದೇನೆ. ಚಿಂತೆ ಚಿತೆಯಾಗಿ ಸುಟ್ಟಿದೆಯೇ ಹೊರತು, ಫಲ ನೀಡಿಲ್ಲ. ನೀನೇಕೆ ಯಾವುದೋ ಜನುಮದ ಮಧುರ ಗಾನದಂತೆ ಕಿವಿಗೆ ಇಂಪಾಗಿ ತಟ್ಟುತ್ತಿರುವೆ?
ಒಲುಮೆಯ ಗೆಳತಿ…..
ಪ್ರೀತಿಯಲ್ಲಿ ಮುಳುಗದವರಿಲ್ಲ. ಅದರ ಸುಮಧುರ ತೆಕ್ಕೆಗೆ ಸಿಗದವರಿಲ್ಲ. ಎಂಥ ಕಲ್ಲೆದೆಯವನನ್ನೂ ಕರಗಿಸಿ, ಅರಳಿಸುವ ಶಕ್ತಿ ಪ್ರೀತಿಗಿದೆ. ಪ್ರತಿಯೊಬ್ಬರೂ ಪ್ರೀತಿಗಾಗಿ ಹಪಹಪಿಸುವವರೇ. ಮೋಸ, ವಂಚನೆ, ಸ್ವಾರ್ಥವೇ ತುಂಬಿರುವ ಈ ಜಗತ್ತಿನಲ್ಲಿ, ಹಿಡಿ ಪ್ರೀತಿಗೆ ಜನ ತಹತಹಿಸುವುದು ಸಹಜ ತಾನೆ? ನೋವಿಗೆ ಆಸರೆಯಾಗಿ, ನಲಿವಿಗೆ ಹಿರಿಹಿರಿ ಹಿಗ್ಗಿ, ಓಲೈಸುವ, ಸಂತೈಸುವ ಜೀವ ಸಂಜೀವಿನಿ ಪ್ರೀತಿ.
ಇದರ ಕಬಂಧ ಬಾಹುಗಳಿಗೆ ಒಮ್ಮೆ ಸಿಲುಕಿದರೆ ಮುಗಿದೇ ಹೋಯಿತು. ಹೊರಬರುವ ಉಪಾಯವೇ ಗೊತ್ತಾಗುವುದಿಲ್ಲ. ನನ್ನ ಸ್ಥಿತಿ ಕೂಡಾ ಹೀಗೇ ಆಗಿದೆ ನೋಡು. ನಿನ್ನ ಸುಗಂಧದಿಂದ, ಸೌಂದರ್ಯದಿಂದ ಮನ ತಿರುಗಿಸಲು ಆಗುತ್ತಲೇ ಇಲ್ಲ. ಅದೇಕೆ ಹೀಗೆ ಎಂದು ನೂರಾರು ಸಲ ಚಿಂತಿಸಿದ್ದೇನೆ. ಚಿಂತೆ ಚಿತೆಯಾಗಿ ಸುಟ್ಟಿದೆಯೇ ಹೊರತು, ಫಲ ನೀಡಿಲ್ಲ. ನೀನೇಕೆ ಯಾವುದೋ ಜನುಮದ ಮಧುರ ಗಾನದಂತೆ ಕಿವಿಗೆ ಇಂಪಾಗಿ ತಟ್ಟುತ್ತಿರುವೆ? ತಿಳಿಯುತ್ತಿಲ್ಲ.
ಒಮ್ಮೊಮ್ಮೆ ಯೋಚನೆ ನಿರಾಸಕ್ತಿಯತ್ತ ಹೊರಳುತ್ತದೆ. ಜಗತ್ತನ್ನು ಬೆಳಗುವ ಸೂರ್ಯ ಚಂದ್ರರೇ ಅನವರತ ಭುವಿಯಲ್ಲಿ ಬೆಳಗುವುದಿಲ್ಲ. ಮನಕೆ ಆನಂದ ನೀಡುವ ಅಸಂಖ್ಯಾತ ತಾರೆಗಳೇ ಬೆಳಗಾಗೆದ್ದು ಕಣ್ಮರೆಯಾಗುತ್ತವೆ. ನಸುಕಿನಲ್ಲಿ ಅರಳುವ ಹೂವೇ ಸಂಜೆಗೆ ಬಾಡಿ ಹೋಗುತ್ತದೆ. ತುಂಬಿದ ನದಿಯೇ ಬಿರು ಬಿಸಿಲಿನ ಝಳಕ್ಕೆ ಬತ್ತಿ ಸೊರಗಿ ಹೋಗುತ್ತದೆ. ಅಂಥದರಲ್ಲಿ ನಮ್ಮಂತಹ ಬಡಪಾಯಿಗಳ ಪಾಡೇನು?
ನೀನು ಒಂದಲ್ಲ ಒಂದು ದಿನ, ನನಗೆ ಕಾರಣ ಹೇಳದೆ ದೂರ ದೂರಕೆ ಸಾಗಿಬಿಡಬಹುದೇ? ನನ್ನ ಯಾವುದೋ ಒಂದು ಸಣ್ಣ ತಪ್ಪಿಗೆ ಮುಖ ತಿರುಗಿಸಿ ಮರಳಿ ಬಾರದ ದಾರಿ ತುಳಿದು ಬಿಡಬಹುದೇ? ಹೀಗೆಲ್ಲ ಯೋಚಿಸಿ ಭಯಗೊಳ್ಳುತ್ತೇನೆ, ನನ್ನಿಂದ ಯಾವುದೇ ಪ್ರಮಾದ ಆಗದಂತೆ ಎಚ್ಚರವಹಿಸುತ್ತೇನೆ. ಆದರೂ ಅನುಮಾನ ಕಾಡದೆ ಬಿಡುವುದಿಲ್ಲ. ಒಂದರೆ ಘಳಿಗೆ ನೀನಿಲ್ಲದ ದಿನಗಳ ಊಹಿಸಿಕೊಂಡರೂ ಎದೆ, ಮನಸ್ಸು, ಹೃದಯ ಖಾಲಿ ಖಾಲಿಯಾದಂತೆ, ಶೂನ್ಯ ಕವಿದಂತೆ ಭಾಸವಾಗುತ್ತದೆ.
ಯಾರು ಶಾಶ್ವತ ಈ ಭೂಮಿಯ ಮೇಲೆ? ಬದುಕನ್ನೇ ಪ್ರೀತಿಗೆ ಮುಡಿಪಿಟ್ಟು, ಹಗಲಿರುಳು ಪ್ರೇಮದ ಕನವರಿಕೆಯಲ್ಲಿ ಕಾಲ ನೂಕಿ ಕಾಲಗರ್ಭದಲ್ಲಿ ಹೂತು ಹೋದ ಅಮರಪ್ರೇಮಿಗಳಿಲ್ಲವೆ? ನಾವು ಅಮರ ಪ್ರೇಮಿಗಳಾಗದಿದ್ದರೂ ನಿರ್ಮಲ ಪ್ರೇಮಿಗಳಾಗೋಣ, ಸದಾ ಪ್ರೀತಿಗಾಗಿ, ಪ್ರೀತಿಗೋಸ್ಕರ, ಪ್ರೀತಿಯಿಂದಲೇ ಬದುಕೋಣ. ಇವೆಲ್ಲ ಈಡೇರದ ಹುಚ್ಚು ಮನದ ಕಲ್ಪನೆಗಳು ಎನ್ನುವೆಯಾ? ಇಲ್ಲ ಗೆಳತಿ… ಇವು ಹುಚ್ಚು ಕಲ್ಪನೆಗಳಲ್ಲ. ಬದುಕಿನ ಪ್ರಮುಖ ವಾಸ್ತವಗಳು!
ಪತ್ರ ದೀರ್ಘವಾಗಿ ಬೇಸರವೆನಿಸಿತೇ? ಪ್ರೀತಿ ಯಾಚಿಸುವ ಫಕೀರನೊಬ್ಬ ತನ್ನ ನಲ್ಲೆಯ ಎದುರಿಗಲ್ಲದೆ ಮತ್ಯಾರ ಬಳಿ ತನ್ನ ಭಾವನೆಗಳನ್ನು ಬಿಚ್ಚಿಡಬಲ್ಲ? ನೀನೇ ಬೇಸರಿಸಿಕೊಂಡರೆ ಮಾತುಗಳು ಮೊಟಕುಗೊಂಡಾವು, ನಿರಂತರ ಪತ್ರಗಳು ನಿಂತು ಹೋದಾವು, ಬಿಚ್ಚಿಡಬೇಕಾದ ಗುಟ್ಟುಗಳು ಗುಂಡಿಗೆಯಲ್ಲಿಯೇ ಗಟ್ಟಿಯಾಗಿ ತಳಕಚ್ಯಾವು, ಬೇಸರಿಸಿಕೊಳ್ಳದಿರು.
ಇಂತಿ ನಿನ್ನವನು
* ನಾಗೇಶ್ ಜೆ. ನಾಯಕ