Advertisement
ಚಿಕ್ಕಂದಿನಲ್ಲಿ “ಕೊಂಡಾಡಿರಿ ಮಹಿಳೆಯಾಗಿರುವುದರ ಮಹದಾನಂದವನ್ನು…’ ಎಂಬ ಟ್ಯಾಗ್‌ಲೈನ್ ಹೊಂದಿದ ಗಾರ್ಡನ್ ವರೇಲಿಯ ವಿಜ್ಞಾಪನೆಯನ್ನು ಪತ್ರಿಕೆಗಳಲ್ಲಿ ನೋಡಿದಾಗಲೆಲ್ಲ “ವ್ಹಾ, ನಾನು ಹೆಣ್ಣು. ನಾನು ಅದೃಷ್ಟವಂತೆ’ ಅನ್ನಿಸುತ್ತಿತ್ತು. ಬರಬರುತ್ತಾ ಬಂಗಾರದ ಅಂಗಡಿಗಳಲ್ಲಿ, ಬಟ್ಟೆ ಬರೆಗಳಲ್ಲಿ ನಮಗಿರೋ ಆಯ್ಕೆ ನೆನೆದು “ಛೆ ಪಾಪ, ಗಂಡು ಮಕ್ಕಳಿಗೆ ಏನೇನೂ ಇರಲ್ಲ. ಅವೇ ಅಂಗಿ, ಚಡ್ಡಿ..’ಅನ್ನಿಸೋದು ಬಿಟ್ರೆ ವಿಶೇಷ ಯಾವ ಯೋಚನೆಯೂ ಬರುತ್ತಲೇ ಇರಲಿಲ್ಲ. ನಾವೂ ಗಂಡು ಹುಡುಗರಂತೆ ಗೋಲಿಯಾಡುತ್ತಿದ್ದೆವು. ಸೈಕಲ್ ಹೊಡೆಯುತ್ತಿದ್ದೆವು. ಈಜು ಕಲಿಯಲು ಹೋಗುತ್ತಿದ್ದೆವು. ಗಾಳಿಪಟ ಹಾರಿಸುತ್ತಿದ್ದೆವು. ಅವರು ನೀರಿನ ಕೊಡ ಹೆಗಲ ಮೇಲೆ ಹೊತ್ತು ತಂದರೆ, ನಾವು ಸೊಂಟದಲ್ಲಿ. ಅಷ್ಟೇ ವ್ಯತ್ಯಾಸ. ಇನ್ನು ಅವರಿಗೆ ನಮ್ಮ ಹಾಗೆ ಹೂಮಾಲೆ ಕಟ್ಟಲು ಬರುವುದಿಲ್ಲ. ರಂಗೋಲಿಯೂ ಬರಲ್ಲ. ಆದ್ದರಿಂದ ಅವರಿಗಿಂತ ಹೆಣ್ಣು ಮಕ್ಕಳಾದ ನಾವೇ ಜಾಣರು ಅಷ್ಟೇ.
Related Articles
Advertisement
ವಯಸ್ಸು ಮಾಗಿದಂತೆಲ್ಲಾ ಲಿಂಗ ತಾರತಮ್ಯದ ಕುರಿತು ತುಸು ತಿಳಿಯತೊಡಗಿತ್ತು. ರಾತ್ರಿ ಕುಡುಕ ಗಂಡನ ಏಟು ಸಹಿಸಿಕೊಂಡು ತುಟಿಯ ಗಾಯ ಕಾಣದಂತೆ ಸೆರಗು ಕಚ್ಚಿ ಪಾತ್ರೆ ತಿಕ್ಕಲು ಬರುತ್ತಿದ್ದ ಫಾತೀಮಾಳ ಜೀವನವೇ ಒಂದು ಪ್ರಶ್ನೆಯಾಗಿತ್ತು. ಕೋಟ್ಯಧಿಪತಿ ಗಂಡನ ಜೊತೆಗೆ ವರ್ಷಾನುವರ್ಷ ಸಂಸಾರ ಮಾಡಿದರೂ ಕನ್ಯಾಸೆರೆಯ ಬಂಧಿಯಾಗಿದ್ದ ಸರೋಜಾ, ಯಾವಾಗಲೂ ನಗುತ್ತಲೇ ಇರುತ್ತಿದ್ದಳು. ತಾನು ತುಟಿ ಕಚ್ಚಿ ಹಿಡಿದ ಬಿಕ್ಕು ಯಾರಿಗೂ ಕೇಳಗೊಡುತ್ತಿರಲಿಲ್ಲ. ಮೈಮೇಲೆ ಹ¨ªೆರಗಿದ ಗಿಣಿಮರಿಯಂತಹ ಎಳೆಯ ಕಂದಮ್ಮಗಳ ಧ್ವನಿ ನೋಟಿನ ಬಂಡಲ್ಲುಗಳಲ್ಲೋ, ಚಿನ್ನದ ಇಟ್ಟಿಗೆಗಳ ಕೆಳಗೋ ಹೂತು ಹೋಗುತ್ತಿತ್ತು. ಮೊದಲೇ ಮದುವೆಯಾಗಿದ್ದ ಗೆಳತಿಯ ಗಂಡ, ಪೋಷಕರ ಒತ್ತಾಯಕ್ಕೆ ಇವಳನ್ನೂ ಮದುವೆಯಾಗಿ ಪೋಷಕರೊಟ್ಟಿಗೇ ಬಿಟ್ಟು ಕೈತೊಳೆದುಕೊಂಡಿದ್ದ. ಹೆಂಡತಿ ಸತ್ತ ವರ್ಷದೊಳಗೆ ಮತ್ತೆ ಮದುವೆಯಾಗಿ ಹಾಯಾಗಿರುತ್ತಿದ್ದ ಗಂಡಸರೂ, ಗಂಡ ಸತ್ತ ದಿನದಿಂದ ಅತ್ಯಂತ ಪ್ರೀತಿಯ ಸಂಪಿಗೆ ಹೂವನ್ನೂ ಕದ್ದು ಮೂಸುವ ಹೆಂಗಸರ ಮಧ್ಯೆ ಏಕೀ ತಾರತಮ್ಯ.. ಕೊನೆಗೂ ತಿಳಿಯಲೇ ಇಲ್ಲ. ಮುಂದೆ ತುಸು ಓದು… ಅವಳು ಕ್ಷೇತ್ರ, ಸಂತತಿ ಸದೃಢವಾಗಿರಲೆಂದು ಈ ವ್ಯವಸ್ಥೆ.. “ಓಹ್. ಇದ್ದರೂ ಇರಬಹುದು. ಯತ್ರ ನಾರ್ಯಸ್ತು ಪೂಜ್ಯಂತೇ ಅಂದವರಲ್ಲವೇ ನಾವು. ಆದಿಶಕ್ತಿಯ ರೂಪದಲ್ಲಿ ಹೆಣ್ಣನ್ನು ಕಂಡವರು. ಆದರೂ ಎಲ್ಲಿ ಎಡವಟ್ಟಾಯಿತು?ಬಹುಶಃ ಹೊಡೆತದ ಮೇಲೆ ಸೆರಗು ಮುಚ್ಚಿಕೊಳ್ಳುವ ಹೆಣ್ಣಾಗಿ, ಸುಳ್ಳು ಹೇಳುವ ಅಮ್ಮನಾಗಿ, ನೋವ ನುಂಗುವ ಅವಳ ಈ ಗುಣಗಳೇ ಅವಳಿಗೆ ಮುಳುವಾಗಿಬಿಟ್ಟವೇ? ಬಹುಶಃ ಸರಳರೇಖೆಯಂತಹ ಜೀವನ ಪಡೆದ ಕೆಲ ಭಾಗ್ಯಶಾಲಿಗಳಿಗೆ ಬಹುಶಃ ಈ ತೊಳಲಾಟ ಅರಿವಿಗೆ ಬರಲಿಕ್ಕಿಲ್ಲ. ಆಸ್ಪತ್ರೆಯ ವಾರ್ಡ್ ಮೇಲೆ ವರ್ಷಾನುಗಟ್ಟಲೇ ನರಳಿ ಇಚ್ಛಾಮರಣ ಕೋರಿದ ಅರುಣಾ ಶಾನಭಾಗ್ ಅಂಥವರ ನೆನಪಾದರೆ ದೇವರೇ ಹೆಣ್ಣು ಮಕ್ಕಳನ್ನು ಕೊಡಬೇಡ.’ ಎನ್ನುವಂತಾಗುವುದು ನಿಜ.
ಏನೆಲ್ಲಾ ಸಾಧಿಸಿಯಾಯಿತು ನಾವು. ಕವಿಯೊಬ್ಬನ ಮಾತಿನಂತೆ ಹೆಣ್ಣೆಂದರೆ ಒಂದು ಕನಸು.. ಹೆಣ್ಣೆಂದರೆ ಅದೇ ವಾಸ್ತವ. ಎಂತಹ ವಿರೋಧಾಭಾಸವಿದು. ಹೌದು. ಹೀಗೆಯೇ ಹೆಣ್ಣಿನ ಜೀವನ. ಗಗನಕ್ಕೆ ಹಾರಿದರೂ, ನಾಳಿನ ತಿಂಡಿಯ ಚಿಂತೆ ಹೊತ್ತು. ಸಾಗರದಾಳಕ್ಕೆ ಇಳಿದರೂ, ತೇಲಿಸುವ ಮನೆಯ ಚಿಂತೆ. ತನ್ನತನಕ್ಕಾಗಿ ಬಡಿದಾಡುವ ಅನಿವಾರ್ಯತೆಯಲ್ಲಿ ಅವಳು ಪಾಶ್ಚಾತ್ತೀಕರಣಕ್ಕೆ ತುಸು ತುಸುವಾಗಿ ಬಾಗುತ್ತಿರುವುದೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ. ಯಾವುದೇ ಒತ್ತಾಯವಿರದೇ ಆಕೆಗೆ ಸಿಗಬೇಕಾದ ಗೌರವ ಆಕೆಗೆ ಸಿಗಲಿ. ಸುಭದ್ರ, ಸತ್ವಯುತ ಬಾಳು ಅನಾಯಸವಾಗಿ ಆಕೆಗೆ ಒದಗಲಿ. ಇಂತಹ ಒಂದು ದಿನದ ಆಚರಣೆಯ ಅವಶ್ಯಕತೆ ಮಹಿಳೆಗೆ ಬಾರದೇ ಹೋಗಲಿ ಎಂಬುದೇ ಆಶಯ.
-ದೀಪಾ ಜೋಷಿ