Advertisement

ಕ್ಷೇತ್ರಕ್ಕೆ ಅನ್ಯಾಯವಾದಾಗ ಮೊಯ್ಲಿ, ದಿನೇಶ್‌ ಎಲ್ಲಿದ್ದರು?

09:01 PM Nov 24, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜು ಹಾಗೂ ಅದಕ್ಕೆ ಹೊಂದಿಕೊಂಡಂತೆ ಆಸ್ಪತ್ರೆಯನ್ನು ಇಲ್ಲಿಂದ ಕಿತ್ತು ಕನಕಪುರಕ್ಕೆ ತೆಗೆದುಕೊಂಡು ಹೋದಾಗ ಯಾವ ನಾಯಕರೂ ನನ್ನ ಜತೆ ನಿಲ್ಲಲಿಲ್ಲ. ನಮ್ಮ ಜನರ ಬೆಂಬಲಕ್ಕೆ ಯಾರಾದರೂ ನಿಂತರಾ? ಅಂದು ಕ್ಷೇತ್ರದ ಜನರಿಗೆ ಅನ್ಯಾಯವಾದಾಗ ಅದರ ವಿರುದ್ಧ ನಾನು ದನಿ ಎತ್ತಿದಾಗ ಇವರೆಲ್ಲಾ ಎಲ್ಲಿದ್ದರು? ಎಂದು ಮಾಜಿ ಸಂಸದ ವೀರಪ್ಪ ಮೊಯ್ಲಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ಸುಧಾಕರ್‌ ಕಿಡಿಕಾರಿದರು.

Advertisement

ನಗರದ ವಿವಿಧ ವಾರ್ಡ್‌ಗಳಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದ ಅವರು, ಬೆಂಗಳೂರಿನ ಗಾಂಧಿನಗರದಲ್ಲಿ ನಡೆಯುವ ಎಲ್ಲಾ ಅನೈತಿಕ, ಅಕ್ರಮ ಚಟುವಟಿಕೆಗಳಿಂದ ದಿನೇಶ್‌ ಗುಂಡೂರಾವ್‌ಗೆ ಪಾಲು ಇದೆ ಎಂದು ಆರೋಪ ಮಾಡಿದರು.

ಜನರ ಅಭಿವೃದ್ಧಿಗಾಗಿ: ಒಬ್ಬ ವೈದ್ಯನಾಗಿ ನನ್ನ ಹೃದಯಕ್ಕೆ ಹತ್ತಿರವಾಗಿದ್ದ ಜನಸೇವೆ ಎಂದರೆ ಮೆಡಿಕಲ್‌ ಕಾಲೇಜನ್ನು ಜಿಲ್ಲೆಗೆ ತರುವುದು. ಅದಕ್ಕಾಗಿ, ಜನರ ಹಿತಕ್ಕಾಗಿ ನಾನು ಅನಿವಾರ್ಯವಾಗಿ ಕಾಂಗ್ರೆಸ್‌ ಬಿಡಬೇಕಾಯಿತು. ಇದೆಲ್ಲಾ ಮಾಡಿದ್ದು ಜನರಿಗಾಗಿ, ಜನರ ಅಭಿವೃದ್ಧಿಗಾಗಿ ಎಂದ ಅವರು, ದಿನೇಶ್‌ ಗುಂಡೂರಾವ್‌ ದೊಡ್ಡ ಭ್ರಷ್ಟ, ನನ್ನ ವಿರುದ್ಧ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಡಾ.ಕೆ.ಸುಧಾಕರ್‌ ತಮ್ಮ ಆಕ್ರೋಶ ಹೊರ ಹಾಕಿದರು.

ಪ್ರಚಾರ ಮಾಡಿ: ಚುನಾವಣಾ ಪ್ರಚಾರ ಫ‌ುಟ್‌ಬಾಲ್‌ ಇದ್ದಂತೆ. ಎಲ್ಲಿ ತಳ್ಳಿದರೂ, ಆಹ್ವಾನಿಸಿದರೂ ಹೋಗಬೇಕಾಗುತ್ತದೆ. ಕೇವಲ 9 ದಿನ ಬಾಕಿ ಇದೆ. 17 ಗ್ರಾಮ ಪಂಚಾಯಿತಿಗಳಲ್ಲಿ ಓಡಾಡಬೇಕಿದೆ. ಅರ್ಧಕ್ಕಿಂತ ಹೆಚ್ಚು ನಗರಸಭೆ ವಾರ್ಡ್‌ಗಳಲ್ಲಿ ಓಡಾಡಬೇಕಿದೆ. ತಾವೆಲ್ಲಾ ಮನೆ ಮಗ, ಸಹೋದರ ಎಂದು ಭಾವಿಸಿ ನನ್ನ ಪರವಾಗಿ ಪ್ರಚಾರ ಮಾಡಬೇಕು ಎಂದು ಮನವಿ ಮಾಡಿದರು.

ರಾಜೀನಾಮೆಯಿಂದ ಉಪ ಚುನಾವಣೆ ಬಂದಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ರಾಜೀನಾಮೆ ಯಾಕೆ ಕೊಟ್ಟೆ ಎಂದು ಯಾರೂ ಹೇಳುತ್ತಿಲ್ಲ. ಕಾಂಗ್ರೆಸ್‌ ಮುಖಂಡರು ಪಕ್ಷದ್ರೋಹಿ ಎನ್ನುತ್ತಿದ್ದಾರೆ. ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಏಕೆ ಬಂದೆ ಎಂದು ಹೇಳಲ್ಲ ಎಂದರು. ಉಪ ಚುನಾವಣೆಯಲ್ಲಿ ಬಂದು ಏಕೆ ಮಾತನಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳ ಜಾರಿಗೆ ನನ್ನನ್ನು ವೈರಿಯಂತೆ ಕಂಡರು. ಕಾಂಗ್ರೆಸ್‌ ಮಾತ್ರವಲ್ಲ, ಜೆಡಿಎಸ್‌ನವರು ಕೂಡ ಮಲತಾಯಿ ಧೋರಣೆ ತೋರಿದರು ಎಂದರು.

Advertisement

ಸ್ವಾಭಿಮಾನದ ಚುನಾವಣೆ: ಕಾಂಗ್ರೆಸ್‌ ಪಕ್ಷ ದೇವನಹಳ್ಳಿಯವರನ್ನು ತಂದು ನಿಲ್ಲಿಸಿದ್ದಾರೆ. ಜೆಡಿಎಸ್‌ನವರು ಶಿಡ್ಲಘಟ್ಟದವರನ್ನು ಕಣಕ್ಕಿಳಿಸಿದ್ದಾರೆ. ಇವತ್ತು ಕಬಡ್ಡಿ, ಕ್ರಿಕೆಟ್‌ ಮ್ಯಾಚ್‌ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ದೇವನಹಳ್ಳಿಯವರ ನಡುವೆ ನಡೆಯುತ್ತಿದೆ. ಇದೇ ರೀತಿ ಚುನಾವಣೆ ಕೂಡ ಅದೇ ಆಗಿದೆ. ಇಲ್ಲಿ ಯಾರಿಗೆ ಬೆಂಬಲ ನೀಡುತ್ತೀರಿ ಎಂದು ನಿರ್ಧರಿಸಿ. ಚುನಾವಣೆಯು ನನ್ನ ಚುನಾವಣೆ ಅಲ್ಲ, ನಿಮ್ಮೆಲ್ಲರ ಚುನಾವಣೆ, ಚಿಕ್ಕಬಳ್ಳಾಪುರ ಜನರ ಸ್ವಾಭಿಮಾನದ ಚುನಾವಣೆ. ನಿಮ್ಮ ಮಕ್ಕಳ ಭವಿಷ್ಯದ ಚುನಾವಣೆ. ಬಿಜೆಪಿ ಗೆದ್ದರೆ, ಕೇಂದ್ರ, ರಾಜ್ಯ ಸರ್ಕಾರದಿಂದ ಅನುದಾನ ಬರಲಿದೆ. ಆಗ ನವ ಚಿಕ್ಕಬಳ್ಳಾಪುರ ಆಗಲಿದೆ ಎಂದರು.

ದಿನೇಶ್‌, ಎಚ್ಡಿಕೆ, ಮೊಯ್ಲಿ ವಿರುದ್ಧ ಗರಂ: ಬೆಂಗಳೂರಿನಲ್ಲಿ ಬಾರ್‌, ಪಬ್‌ ಸೇರಿದಂತೆ ಎಲ್ಲಾ ಮಾಫಿಯಾದಿಂದ ಹಫ್ತಾ ವಸೂಲಿ ಮಾಡುವುದರಲ್ಲಿ ದಿನೇಶ್‌ ಗುಂಡೂರಾವ್‌ ಮೊದಲಿಗರು. ಅವರಿಗಿರುವ ಕಲೆಕ್ಷನ್‌ ಯಾವ ಮಂತ್ರಿಗೂ ಇಲ್ಲ. ಆತ ನಂಬರ್‌ ಒನ್‌ ಭ್ರಷ್ಟಾಚಾರಿ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ದೂರಿದರು. ಅವರಿಗೆ ನೈತಿಕತೆ ಇದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಾಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು.

ದಿನೇಶ್‌ ನಾಯಕತ್ವ ಬಂದ ಮೇಲೆ ಪಕ್ಷ ದಿವಾಳಿ ಆಯಿತು. ವೀರಪ್ಪ ಮೊಯ್ಲಿ 10 ವರ್ಷದಿಂದ ಸುಳ್ಳು ಹೇಳಿಕೊಂಡು ಜೀವನ ನಡೆಸಿದರು. ಸಂಸದರಾಗಿ ಈ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆಂದು ಪ್ರಶ್ನಿಸಿದರು. ಮಾಜಿ ಸಿಎಂ ಕುಮಾರಸ್ವಾಮಿ ನನ್ನ ಸಂಬಂಧಿ ಅಲ್ಲ. ನಾನು ಅವರ ಸಂಬಂಧಿ ಆಗಿದ್ದರೆ ಅವರ ಪಕ್ಷದಲ್ಲಿ ಚುನಾವಣೆಗೆ ನಿಲ್ಲುತ್ತಿದ್ದೆ. ಯಡಿಯೂರಪ್ಪ ನವ ಕರ್ನಾಟಕ ನಿರ್ಮಾಣಕ್ಕಾಗಿ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next