Advertisement

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

05:30 PM Sep 18, 2024 | Team Udayavani |

ಮನುಷ್ಯ ಎಂದು ಕರೆಸಿಕೊಳ್ಳುವ ಪ್ರತಿಯೊಬ್ಬನಲ್ಲೂ ಮನುಷ್ಯತ್ವ ಎಂಬುದು ಇದ್ದೇ ಇರುತ್ತದೆ, ಇರಲೇ ಬೇಕು. ಆದರೆ ಈಗಿನ ಜಗತ್ತನಲ್ಲಿ ಇದು ಮಾಯವಾಗಿದೆ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ನಾನು ಈ ಅಭಿಪ್ರಾಯಕ್ಕೆ ಬರಲು ಒಂದು ಕಾರಣವಿದೆ. ನೀವೂ ಗಮನಿಸಿರಬಹುದು. ಯಾವುದಾದರೊಂದು ಅವಘಡ ಅಥವಾ ಅಪಘಾತ ಸಂಭವಿಸಿದಾಗ ಅಲ್ಲಿ ಹತ್ತಾರು ಜನರಿದ್ದರೂ ಸಹಾಯಕ್ಕೆ ಯಾರೂ ಧಾವಿಸುವುದಿಲ್ಲ.

Advertisement

ಬದಲಾಗಿ ಥಟ್ಟನೆ ಅವರವರ ಮೊಬೈಲ್‌ ಫೋನ್‌ನಲ್ಲಿ ವೀಡಿಯೋ ಮಾಡುತ್ತಾ ನಿಂತುಬಿಡುತ್ತಾರೆ. ಅದೇ ತಮ್ಮ ಸಂಬಂಧಿಕರು ಅಥವಾ ಪರಿಚಯಸ್ಥರು ಅದೇ ಪರಿಸ್ಥಿತಿಯಲ್ಲಿ ಸಿಲುಕಿದ್ದರೆ ಓಡಿ ಹೋಗಿ ಸಹಾಯ ಮಾಡುತ್ತಾರೆ, ಸಹಾಯಕ್ಕೆ ಅಂಗಲಾಚುತ್ತಾರೆ. ಅದೇ ಅಪರಿಚಿತನಾದರೆ ನಾವು ಸೈಲೆಂಟ್‌. ಇದನ್ನೆಲ್ಲಾ ಕಂಡಾಗ ನನಗನಿಸುವುದು, ಎತ್ತ ಸಾಗುತ್ತಿದೆ ನಮ್ಮ ಈ ಪ್ರಪಂಚ ಎಂದು.

ಪ್ರಸ್ತುತ ಸಾಕಿ ಬೆಳೆಸಿದ ತಂದೆ ತಾಯಿಗೆ ಗೌರವ ನೀಡದ ಮಕ್ಕಳಿದ್ದಾರೆ. ಅದೊಂದು ಕಾಲವಿತ್ತು. ತಾಯಿಯೇ ಮೊದಲ ದೇವರು, ತಂದೆಯೇ ಮೊದಲ ಗುರು ಎಂದು ಮಕ್ಕಳು ಹೆತ್ತವರನ್ನು ಪೂಜಿಸುತ್ತಿದ್ದರು.

ಆದರೆ ಈಗಿನ ಮಕ್ಕಳು ತಮ್ಮ ಜೀವನದ ಸುಖ ಶಾಂತಿ ನೆಮ್ಮದಿಗಾಗಿ, ಎಷ್ಟೇ ಕಷ್ಟವಾದರೂ ತಾವು ಕೇಳಿದ್ದನ್ನು ಕೊಡಿಸಿದ, ನಮ್ಮನ್ನು ಚೆನ್ನಾಗಿ ನೋಡಿಕೊಂಡ ತಂದೆ ತಾಯಿಯನ್ನೇ ದೂರ ಮಾಡಿ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ವಿಪರ್ಯಾಸವೇ ಸರಿ. ತಮಗೆ ಜನ್ಮ ನೀಡಿ, ಸಾಕಿ ಸಲುಹಿ ಬೆಳೆಸಿದ ಆ ಹಿರಿಯ ಜೀವಗಳನ್ನೇ ಯಾವ ಗೌರವವೂ ಇಲ್ಲದೇ ಮನೆಯಿಂದ ಹೊರ ದಬ್ಬುವುದನ್ನು ನೋಡಿದಾಗ ನನಗೆ ಅನಿಸುವುದು ಇಷ್ಟೆ, ಎತ್ತ ಸಾಗಿತ್ತಿದೆ ನಮ್ಮ ಈ ಪ್ರಪಂಚ ಎಂದು.

ಯುವಕರೇ ದೇಶದ ಭವಿಷ್ಯ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಕಾಲವಿತ್ತು. ಆದರೆ ಇಂದಿನ ಯುವಕರನ್ನು ಕಂಡಾಗ ಮುಂದೆ ಎಂತಹ ಪ್ರಜೆಗಳಾಗುತ್ತಾರೆ ಎಂಬ ಭಯ ಕಾಡದಿರದು. ಮುಂದೆ ಸತ್‌ಪ್ರಜೆಗಳಾಗಿ ಬೆಳೆಯಬೇಕಾದ ಅದೆಷ್ಟೋ ಯುವಕ-ಯುವತಿಯರು ದಾರಿ ತಪ್ಪಿ ಬೇರೆ ಬೇರೆ ಆಮಿಷಗಳಿಗೆ ತಮ್ಮನ್ನು ತಾವು ಬಲಿ ಕೊಡುತ್ತಿದ್ದಾರೆ. ಗಾಂಜಾ, ಸಿಗರೇಟು, ಮದ್ಯಪಾನ ಇತ್ಯಾದಿ ಚಟಗಳನ್ನು ಈಗಲೇ ಮೈಗಂಟಿಸಿಕೊಂಡಿ¨ªಾರೆ. ಸಣ್ಣಪುಟ್ಟ ಸೋಲುಗಳು, ಸಮಸ್ಯೆಗಳಿಗೆ ಹೆದರಿ, ಅದನ್ನು ಎದುರಿಸಲಾಗದೆ ಅದಕ್ಕೆಲ್ಲ ಆತ್ಮಹತ್ಯೆ ಒಂದೇ ದಾರಿ ಎಂಬ ನಿರ್ಧಾರಕ್ಕೆ ಯುವಜನತೆ ಬರುತ್ತಿರುವುದನ್ನು ಕಂಡಾಗ ನನಗೆ ಅನಿಸುವುದು ಇಷ್ಟೆ, ಎತ್ತ ಸಾಗುತ್ತಿದೆ ನಮ್ಮ ಈ ಪ್ರಪಂಚ ಎಂದು.

Advertisement

ಆಗಿನ ಕಾಲದಲ್ಲಿ ಪುಟ್ಟಮಕ್ಕಳಿಗೆ ತನ್ನ ಅಜ್ಜಿ ಮನೆಗೆ ಹೋಗುವಾಗ ಆಗುತ್ತಿದ್ದ ಖುಷಿ ಈಗಿನ ಮಕ್ಕಳ ಅದೃಷ್ಟದಲ್ಲಿಲ್ಲ. ಇದ್ದಕ್ಕೆ ಕಾರಣ ಮೊಬೈಲ್‌ ಅಲ್ಲದೇ ಬೇರೇನೂ ಅಲ್ಲ. ಇಂದು ಮೊಬೈಲ್‌ ಇಲ್ಲದಿದ್ದರೆ ಮಕ್ಕಳು ಊಟವನ್ನೂ ಮಾಡುವುದಿಲ್ಲ. ನಾವುಬಾಲ್ಯದಲ್ಲಿ ಚಂದ್ರನನ್ನು ನೋಡುತ್ತಾ ಊಟವನ್ನು ಸವಿಯುತ್ತಿದ್ದೆವು. ಈಗ ನೂತನ ತಂತ್ರಜ್ಞಾನ, ಆವಿಷ್ಕಾರಗಳನ್ನು ಬಳಸುತ್ತಾ ನಮ್ಮ ಸಂಪ್ರದಾಯವನ್ನು ಮರೆಯುತ್ತಿದ್ದೇವೆ ಎಂದರೆ ತಪ್ಪಾಗಲಾರದು.

ಹಾಗಂತ ಮೊಬೈಲ್‌ ಅಥವಾ ಹೊಸ ಆವಿಷ್ಕಾರ ಬಳಸಬಾರದೆಂದಲ್ಲ. ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಅದಕ್ಕೊಂದು ಇತಿಮಿತಯನ್ನು ನಾವೇ ರೂಪಿಸಿಕೊಳ್ಳಬೇಕು. ಆದರೆ ಇಂದು ಎಲ್ಲವನ್ನೂ ಬಿಟ್ಟು ಮೊಬೈಲ್‌ ಗೀಳಿನಲ್ಲಿ ಸಿಲುಕುತ್ತಿರುವವರನ್ನು ಕಂಡಾಗ ಮತ್ತೇ ಕಾಡುವಂತಹ ಪ್ರಶ್ನೆ ಎತ್ತ ಸಾಗುತ್ತಿದೆ ಈ ಪ್ರಪಂಚ…

-ಕವನಾ

ಬಿವೋಕ್‌ (ಡಿಎಂಎಫ್),

ಎಸ್‌ಡಿಎಂ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next