ಎಲ್ಲಿಯ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ? ಎಲ್ಲಿಯ ಅಮೆರಿಕದ ನ್ಯೂಜೆರ್ಸಿ? ಸರಿಸುಮಾರು 13, 105 ಕಿ.ಮೀ ದೂರವಿರುವ ನ್ಯೂಜೆರ್ಸಿ ಮತ್ತು ಯಲ್ಲಾಪುರವನ್ನು ಬೆಸೆದದ್ದು ಕಾಷ್ಠ ಶಿಲ್ಪಕಲೆ !
ದಕ್ಷಿಣಭಾರತದಲ್ಲಿ ಸತ್ಪತಿಗಳೆಂದು ಕರೆಯಲಾಗುವ ಕಾಷ್ಠಶಿಲ್ಪ ಕಲಾಕಾರರ ಗುಡಿಗಾರ ಕುಟುಂಬವೊಂದು ಯಲ್ಲಾಪುರದಲ್ಲಿ ನೆಲೆಸಿದೆ. ಈ ಕುಟುಂಬದ ಕಲೆಗೀಗ ಹೆಚ್ಚು ಬೇಡಿಕೆ ಬಂದಿದೆ. ಅಮೇರಿಕದ ನ್ಯೂಜೆರ್ಸಿಯಲ್ಲಿ ಈ ವರ್ಷ ಪ್ರತಿಷ್ಠಾಪನೆಗೊಳ್ಳಲಿರುವ ಸ್ವಾಮಿ ನಾರಾಯಣ ಮಂದಿರದ ಕಾಷ್ಠಶಿಲ್ಪ ತಯಾರಿಯ ಮೂಲಕ ಈ ಕುಟುಂಬ ಅಂತರಾಷ್ಟ್ರೀಯ ಪ್ರಸಿದ್ಧಿಯನ್ನು ಪಡೆದಿದೆ.
ಸ್ವಾಮಿ ನಾರಾಯಣ ಸಂಪ್ರದಾಯದ ಸ್ಥಾಪಕರಾದ ಸ್ವಾಮಿ ನಾರಾಯಣರು ಉತ್ತರಪ್ರದೇಶದಲ್ಲಿ ಜನಿಸಿ, ಗುಜರಾತ್‌ನಲ್ಲಿ ನೆಲೆಸಿದ್ದಾರೆ. ಸ್ವಾಮಿ ನಾರಾಯಣ ಮಂತ್ರದ ಮೂಲಕ ಜನಜನಿತರಾದ ಇವರ ಹೆಸರಿನಲ್ಲಿ ಇಂದು ಗುಜರಾತ್‌ನ ವಡೋದರಾ, ಭುಜ್, ಮುಳಿ, ವಡ್ತಾಳ್, ಜುನಾಗಢ್, ದೋಲೆರಾ, ಡೋಕ್ಲಾ, ಗದು³ರ್ ಮತ್ತು ಜೇತಲ್ಪುರ್‌ನಲ್ಲಿ ಮಂದಿರಗಳನ್ನು ಕಾಣಬಹುದು. ಗುಜರಾತ್‌ನ ವಡೋದರಾದ ಸ್ವಾಮಿ ನಾರಾಯಣ ಮಂದಿರ ತುಂಬಾ ಪ್ರಸಿದ್ಧವಾದುದು. ಕಾಷ್ಠ ಶಿಲ್ಪದ ಕೆತ್ತನೆಯಲ್ಲಿ ಮಂದಿರ ನಿರ್ಮಾಣದ ಪಣ ತೊಟ್ಟ ಅಲ್ಲಿನ ಸ್ವಾಮಿಜಿಗಳು ಕೆತ್ತನೆಕಾರರನ್ನು ಹುಡುಕಿಕೊಂಡು ಹೂರಟಿದ್ದು ಕರ್ನಾಟಕದ ಕಡೆಗೆ. ಹಾಗೆ ಕುಮಟಾ, ಅಂಕೋಲಾದಲ್ಲಿ ಸುತ್ತಾಡುವಾಗ ಯಲ್ಲಾಪುರಕ್ಕೂ ಬಂದ ಅವರಿಗೆ ಕಣ್ಣಿಗೆ ಬಿದ್ದದ್ದು ಬಿಕ್ಕು ಗುಡಿಗಾರರ ಕಲಾ ಕೇಂದ್ರ !
ಗುಡಿಕೈಗಾರಿಕೆಗೆ ರಾಷ್ಟ್ರಪ್ರಸಿದ್ಧಿ
ಅಲ್ಲಿಯವರೆಗೆ ತೆರೆಯ ಮರೆಯಲ್ಲಿ ಕೆತ್ತನೆಯನ್ನೇ ಜೀವನದ ಉಸಿರಾಗಿಸಿಕೊಂಡು ಬದುಕುತ್ತಿದ್ದ ಗುಡಿಗಾರರ ಕುಟುಂಬಕ್ಕೆ ರಾಷ್ಟ್ರಮನ್ನಣೆ ದೊರೆಯುವ ಅವಕಾಶ ದೊರೆಯಿತು. ಗುಡಿಗಾರ ಕುಟುಂಬದ ಕಲೆಯನ್ನು ಮೆಚ್ಚಿದ ಸ್ವಾಮಿಜೀಗಳು ವಡೋದರಾದ ಸ್ವಾಮಿ ನಾರಾಯಣ ಮಂದಿರದ ಕಾಷ್ಠ ಶಿಲ್ಪ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದರು. 2000ನೇ ಇಸವಿಯಲ್ಲಿ ನಿರ್ಮಾಣಗೊಂಡ ಗುಜರಾತಿನ ಸ್ವಾಮಿ ನಾರಾಯಣ ಮಂದಿರದ ಕಾಷ್ಠ ಶಿಲ್ಪದ ಕೆತ್ತನೆಯನ್ನು ಅತಿಯಾಗಿ ಮೆಚ್ಚಿಕೊಂಡ ಸ್ವಾವಿೂಗಳು ಈ ವರ್ಷ ಅಮೆರಿಕದ ನ್ಯೂಜೆರ್ಸಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಸ್ವಾಮಿ ನಾರಾಯಣ ಮಂದಿರದ ಕಾಷ್ಠ ಶಿಲ್ಪ ನಿರ್ಮಾಣದ ಉಸ್ತುವಾರಿಯನ್ನು ಗುಡಿಗಾರ ಕಲಾ ಕೇಂದ್ರಕ್ಕೆ ವಹಿಸಿದ್ದಾರೆೆ.
ಈ ಸ್ವಾಮಿ ನಾರಾಯಣ ಮಂದಿರದ ಮುಖ ಮಂಟಪ, ಛಾವಣಿ, ಬಾಗಿಲುಗಳು ಹಾಗೂ ದೇವರ ಪೀಠಗಳು ಗುಡಿಗಾರ ಕಲಾ ಕೇಂದ್ರದಲ್ಲಿ ಕಳೆದ ಏಳೆಂಟು ತಿಂಗಳಿನಿಂದ ಇಪ್ಪತ್ತಕ್ಕೂ ಹೆಚ್ಚು ಶಿಲ್ಪಿಗಳಿಂದ ರೂಪುಗೊಳ್ಳುತ್ತಿವೆ. ಇದರಲ್ಲಿ ನಾಲ್ವರು ಮಹಿಳಾ ಶಿಲ್ಪಿಗಳಿರುವುದು ವಿಶೇಷ. ಈ ಎಲ್ಲ ಕಲಾಕೃತಿಗಳನ್ನು ಭಾರತದಲ್ಲಿಯೇ ಎರಡನೆಯ ಅತಿ ದೊಡª ಕಟ್ಟಿಗೆ ಡಿಪೋವಾದ ಕಿರವತ್ತಿಯಲ್ಲಿ ಖರೀದಿಸಿದ ಸಾಗವಾನಿ ಮರದಿಂದ ತಯಾರಿಸಲಾಗುತ್ತಿದ್ದು, ಸುಮಾರು ಐದು ಸಾವಿರ ಘನ ಅಡಿ ಸಾಗವಾನಿ ಮರವನ್ನು ಈ ಕೆತ್ತನೆ ಕೆಲಸಕ್ಕೆ ಬಳಸಲಾಗುತ್ತಿದೆ ಎಂದು ಕೆತ್ತನೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕಲಾ ಕೇಂದ್ರದ ಮುಖ್ಯಸ್ಥರಾದ ಸಂತೋಷ ಗುಡಿಗಾರ ಮತ್ತು ಅರುಣ ಗುಡಿಗಾರ ಹೇಳುತ್ತಾರೆ.
ಈ ಎಲ್ಲ ಕಲಾಕೃತಿಗಳು ಒಂದೆರಡು ತಿಂಗಳಲ್ಲಿ ಅಂತಿಮಗೊಂಡು ಯಲ್ಲಾಪುರದಿಂದ ಮುಂಬಯಿಗೆ ರಸ್ತೆ ಮೂಲಕ ಚಲಿಸಿ, ಅಲ್ಲಿಂದ ನ್ಯೂಜೆರ್ಸಿಗೆ ಹಡಗಿನಲ್ಲಿ ಪ್ರಯಾಣಿಸಿ ಯಲ್ಲಾಪುರದ ಕಲಾ ಕೀರ್ತಿಯನ್ನು ಅಮೆರಿಕದಲ್ಲಿ ಬೆಳಗಿಸಲಿವೆ!