Advertisement

ಬಿಜೆಪಿಯ ಶಕ್ತಿ ಕುಂದಿದ್ದು ಎಲ್ಲಿ? 8 ಕ್ಷೇತ್ರಗಳಲ್ಲಿ ಬಿದ್ದ ಒಳ ಏಟು

11:24 PM Jun 08, 2024 | Team Udayavani |

ಬೆಂಗಳೂರು: ಕಲ್ಯಾಣ ಕರ್ನಾಟಕದ 5 ಲೋಕಸಭಾ ಕ್ಷೇತ್ರ ಸಹಿತ ಒಟ್ಟು 8 ಕ್ಷೇತ್ರಗಳನ್ನು ಕಳೆದುಕೊಂಡಿರುವ ಬಿಜೆಪಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಂಡಿದೆ. ಆದರೆ 8 ಕ್ಷೇತ್ರಗಳಲ್ಲಿ ಬಿದ್ದ ಒಳ ಏಟು ಹಾಗೂ ಸಂಘಟನೆಗೆ ಆಗಿರುವ ಹಿನ್ನಡೆ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ಇನ್ನಷ್ಟೇ ಆರಂಭವಾಗಬೇಕಿದೆ.

Advertisement

ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿದ್ದರ ಫ‌ಲವಾಗಿ ಹಲವೆಡೆ ಬಿಜೆಪಿಗೆ ಅನುಕೂಲವಾಗಿದೆ ಎಂಬುದು ಎಷ್ಟು ಸತ್ಯವೋ, ಅಂಥ ಕ್ಷೇತ್ರಗಳಲ್ಲಿ ಬಿಜೆಪಿಯ ಸ್ವಂತ ಶಕ್ತಿ ಎಷ್ಟರ ಮಟ್ಟಿಗೆ ಕುಸಿದಿದೆ? ಅದನ್ನು ಮೇಲೆಕ್ಕೆತ್ತುವುದು ಹೇಗೆ? ಒಂದು ವೇಳೆ ಜೆಡಿಎಸ್‌ ಆಶ್ರಯ ಇಲ್ಲದಿದ್ದರೆ ಇನ್ನಷ್ಟು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಿತ್ತೇ ಎನ್ನುವುದನ್ನೂ ಆಲೋಚಿಸಬೇಕಿದೆ.

ಖೂಬಾಗೆ ಖೆಡ್ಡಾ, ಒಳ ಏಟಿನ ಕಹಿ
ಕೇಂದ್ರ ಸಚಿವರಾಗಿದ್ದ ಭಗವಂತ್‌ ಖೂಬಾ ಬಿಜೆಪಿ ಶಾಸಕರ ವಿರೋಧದ ನಡುವೆಯೂ ಬೀದರ್‌ನಿಂದ ಟಿಕೆಟ್‌ ಗಿಟ್ಟಿಸಿಕೊಂಡಿದ್ದರು. ಕಣಕ್ಕಿಳಿಯಲು ಆಸಕ್ತರಾಗಿದ್ದ ಶಾಸಕ ಪ್ರಭು ಚವ್ಹಾಣ್‌ರನ್ನು ಬಿಜೆಪಿ ಶಾಸಕರನೇಕರು ಬೆಂಬಲಿಸಲು ಸಿದ್ಧರಿದ್ದರು. ಆದರೂ 2 ಬಾರಿ ಸಂಸದರಾಗಿದ್ದ ಖೂಬಾಗೆ 3ನೇ ಬಾರಿ ಅವಕಾಶ ಮಾಡಿಕೊಡಲಾಗಿತ್ತು. 2019ರಲ್ಲಿ 5,85,471 ಮತಗಳನ್ನು ಪಡೆದಿದ್ದ ಖೂಬಾ ಈ ಬಾರಿ 5,37,442 ಮತಗಳನ್ನಷ್ಟೇ ಪಡೆದಿದ್ದು, ಉಳಿದ 48,029 ಮತಗಳು ಎಲ್ಲಿ ಹೋದವು ಎಂಬುದರ ಚಿಂತನೆ ನಡೆಯಬೇಕಿದೆ.

ರಾಮುಲು ಆಯ್ಕೆ ಸರಿಯೇ?
ಬಳ್ಳಾರಿಯಲ್ಲಿ ಶ್ರೀರಾಮುಲು 6,31,853 ಮತಗಳನ್ನು ಪಡೆದಿದ್ದು, ಕಾಂಗ್ರೆಸ್‌ನ ಈ. ತುಕಾರಾಂ ಎದುರು 7,889 ಮತಗಳ ಅಂತರದಿಂದ ಸೋತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲೂ ಸೋತ ರಾಮುಲು ಆಯ್ಕೆ ಸರಿಯೇ ಎಂಬುದೀಗ ಬಳ್ಳಾರಿ ಬಿಜೆಪಿಯ ಪಡಸಾಲೆಯಲ್ಲಿ ಚರ್ಚೆಗೊಳಗಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಲುಬುರಗಿ ಕ್ಷೇತ್ರದಿಂದ ಮೋದಿ ಪ್ರಚಾರ ಆರಂಭಿಸಿದ್ದರು. ಕಳೆದ ಬಾರಿ ಗೆದ್ದಿದ್ದ ಉಮೇಶ್‌ ಜಾಧವ್‌ಗೆ ಗುಲ್ಬರ್ಗಾ ಗ್ರಾಮೀಣ ಬಿಟ್ಟರೆ ಬೇರೆಲ್ಲೂ ಬಿಜೆಪಿಯ ಶಾಸಕರಿಲ್ಲದ್ದು ಮುಳುವಾಯಿತು. ಜೆಡಿಎಸ್‌ನ ಶರಣುಗೌಡ ಕಂದಕೂರು ಒಳ ಏಟು ಕೂಡ ಬಿಜೆಪಿ ಅಭ್ಯರ್ಥಿಗೆ ಬಿದ್ದಂತಿದೆ. ಚಿಕ್ಕೋಡಿ ಕ್ಷೇತ್ರದಿಂದ ಮೊದಲ ಬಾರಿ ಗೆದ್ದಿದ್ದ ಅಣ್ಣಾ ಸಾಹೇಬ್‌ ಜೊಲ್ಲೆ ಎರಡನೇ ಬಾರಿಗೆ ಮುಗ್ಗರಿಸಿದ್ದು, ಪತ್ನಿ ಶಶಿಕಲಾ ಜೊಲ್ಲೆ ಸಹಿತ ಇಬ್ಬರು ಬಿಜೆಪಿ ಶಾಸಕರಿದ್ದೂ ಸೋಲನುಭವಿಸಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 4 ಬಾರಿ ಗೆದ್ದಿದ್ದ ಜಿ.ಎಂ. ಸಿದ್ದೇಶ್ವರ್‌ ಅವರು ಪತ್ನಿ ಗಾಯತ್ರಿ ಸಿದ್ದೇಶ್ವರ್‌ಗೆ ಟಿಕೆಟ್‌ ಕೊಡಿಸಿದರಾದರೂ ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ ಗೆದ್ದಿದ್ದಾರೆ. ಬಿಜೆಪಿಯಿಂದ ಪರ್ಯಾಯ ಅಭ್ಯರ್ಥಿ ಇಲ್ಲದ್ದೇ ಇಲ್ಲಿ ಸೋಲಿಗೆ ಕಾರಣವಾಯಿತು ಎಂಬ ಚರ್ಚೆಗಳಿವೆ.

Advertisement

ಕೊಪ್ಪಳದಲ್ಲಿ ಎರಡು ಬಾರಿ ಗೆದ್ದಿದ್ದ ಕರಡಿ ಸಂಗಣ್ಣರನ್ನು ಬದಲಿಸಿದ್ದೂ ಅಲ್ಲದೆ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಪ್ರಯೋಗ ಫ‌ಲಿಸಿಲ್ಲ. ರಾಯಚೂರಿನಲ್ಲಿ ಜೆಡಿಎಸ್‌ ಕರೆಮ್ಮ ಹಾಗೂ ಇಬ್ಬರು ಬಿಜೆಪಿ ಶಾಸಕರಿದ್ದರೂ ಬಿ.ವಿ. ನಾಯಕ್‌ ಬದಲಿಗೆ ಮತ್ತೆ ರಾಜಾ ಅಮರೇಶ್ವರ್‌ ನಾಯಕ್‌ಗೆ ಮಣೆ ಹಾಕಿದ್ದು ಮುಳುವಾದಂತಿದೆ. ಶ್ರೀನಿವಾಸ ಪ್ರಸಾದ್‌ ಗೆದ್ದಿದ್ದ ಚಾಮರಾಜನಗರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ವಿಫ‌ಲವಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ| ಸಿ.ಎನ್‌. ಮಂಜುನಾಥ್‌ ಗೆದ್ದಿದ್ದೊಂದೇ ಬಿಜೆಪಿಗೆ ಲಾಭ.

Advertisement

Udayavani is now on Telegram. Click here to join our channel and stay updated with the latest news.

Next