Advertisement

ಕಾಮನ್ವೆಲ್ತ್‌ ವಿಜೇತರಿಗೆ ಎಲ್ಲಿ ನಿವೇಶನ?

12:12 PM Nov 14, 2019 | mahesh |

ಬೆಂಗಳೂರು: ಒಂಬತ್ತು ವರ್ಷಗಳ ಹಿಂದೆ ದಿಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ರಾಜ್ಯದ ಕ್ರೀಡಾಪಟುಗಳಿಗೆ ಕರ್ನಾಟಕ ಸರಕಾರದಿಂದ ಘೋಷಣೆಯಾಗಿದ್ದ ನಿವೇಶನ ಇನ್ನೂ ಗನಕುಸುಮವಾಗಿಯೇ ಉಳಿದಿದೆ. ರಾಜ್ಯದ ಅಥ್ಲೀಟ್‌ಗಳಾದ ಎಚ್‌.ಎಂ.ಜ್ಯೋತಿ, ಕಾಶಿನಾಥ್‌, ವಿಕಾಸ್‌ ಗೌಡ ಹಾಗೂ ಅಶ್ವಿ‌ನಿ ಅಕ್ಕುಂಜೆ ಅವರು ದಿಲ್ಲಿ ಗೇಮ್ಸ್‌ನಲ್ಲಿ ಭಾರತ ಪ್ರತಿನಿಧಿಸಿ ಪದಕ ಗೆದ್ದಿದ್ದರು. ಆ ಸಮಯದಲ್ಲಿ ಮುಖ್ಯ ಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ಎಲ್ಲ ವಿಜೇತರನ್ನು ವಿಧಾನಸೌಧಕ್ಕೆ ಕರೆಯಿಸಿ, ನಿವೇಶನದ ಭರವಸೆ ನೀಡಿದ್ದರು. ಒಂಬತ್ತು ವರ್ಷ ಕಳೆದಿವೆ. ಸರಕಾರಗಳು ಬದಲಾಗಿವೆ; ನಾಲ್ಕು ಮಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ನಿವೇಶನ ಮಾತ್ರ ಇನ್ನೂ ಸಿಕ್ಕಿಲ್ಲ.

Advertisement

ಈ ನಡುವೆ ನಿವೇಶನ ನೀಡುವಂತೆ ಅಥ್ಲೀಟ್‌ಗಳು ಹಲವು ಬಾರಿ ಸರಕಾರದ ಬಾಗಿಲಿಗೆ ಹೋಗಿದ್ದರೂ ಪ್ರಯೋಜನವಾಗಿಲ್ಲ. ಈ ವಿಷಯದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೂಡ ಮೌನವಹಿಸಿದೆ. ಈಗ ಈ ಅಥ್ಲೀಟ್‌ಗಳು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಈಗ ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವುದರಿಂದ ಅಥ್ಲೀಟ್‌ಗಳು ತಮ್ಮ ಕನಸು ನನಸಾಗಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ.

2014ರಲ್ಲೂ ಅರ್ಜಿ ಸಲ್ಲಿಸಿದ್ದ ಕ್ರೀಡಾಪಟುಗಳು
ಗ್ಲಾಸ್ಗೊ ಕಾಮನ್‌ವೆಲ್ತ್‌ 2014ರ ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪಟುಗಳಾದ ಪ್ರಕಾಶ್‌ ನಂಜಪ್ಪ ಹಾಗೂ ವಿಕಾಸ್‌ ಗೌಡ ಪದಕ ಗೆದ್ದಿದ್ದಾಗ ಇವರಿಬ್ಬರಿಗೆ ನಿವೇಶನ ನೀಡುವ ಕುರಿತಂತೆ ಅಂದಿನ ಕಾಂಗ್ರೆಸ್‌ ಸರಕಾರ ನಿರ್ಣಯ ತೆಗೆದುಕೊಂಡಿತ್ತು. ನಿವೇಶನಕ್ಕಾಗಿ ಅರ್ಜಿ ಹಾಕುವಂತೆ ಅಥ್ಲೀಟ್‌ಗಳಿಗೆ ತಿಳಿಸಿತ್ತು. ಆಗಲೂ ಈ ನಾಲ್ವರು ಅರ್ಜಿ ಸಲ್ಲಿಸಿದ್ದರು. ಆದರೂ ಭರವಸೆ ಈಡೇರಲಿಲ್ಲ.

ಮತ್ತೂಮ್ಮೆ ಯಡಿಯೂರಪ್ಪ ಅಧಿಕಾರದಲ್ಲಿರುವುದರಿಂದ ಅವರು ನಮ್ಮ ಕನಸನ್ನು ಪೂರ್ಣಗೊಳಿಸುತ್ತಾರೆ ಎನ್ನುವ ವಿಶ್ವಾಸವಿದೆ.  
ಕಾಶೀನಾಥ್‌ ನಾಯ್ಕ, ದಿಲ್ಲಿ ಕಾಮನ್ವೆಲ್ತ್‌ ಕಂಚಿನ ಪದಕ ವಿಜೇತ (ಜಾವೆಲಿನ್‌)

ಪದಕ ವಿಜೇತರ ಸಾಧನೆ
- ಎಚ್‌.ಎಂ. ಜ್ಯೋತಿ
ಎಚ್‌.ಎಂ. ಜ್ಯೋತಿ 2010ರ ಕಾಮನ್ವೆಲ್ತ್‌ ಗೇಮ್ಸ್‌ನ 4/100 ಮೀ. ರಿಲೇ ಓಟದಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯರಲ್ಲಿ ಒಬ್ಬರಾಗಿ ದ್ದರು. ಜ್ಯೋತಿ ಮೂಲತಃ ಚಿತ್ರದುರ್ಗದ ಹಿರಿ  ಯೂರಿನವರು. 2008 ಬೋಪಾಲ್‌ನಲ್ಲಿ ನಡೆದ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.

Advertisement

 ಕಾಶೀನಾಥ್‌ ನಾಯ್ಕ
ಜಾವೆಲಿನ್‌ ತಾರೆ ಕಾಶೀನಾಥ್‌ ನಾಯ್ಕ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಭಾರತೀಯ ಸೇನೆಯಲ್ಲಿ ಸುಬೇದಾರ್‌ ಆಗಿರುವ ಕಾಶೀನಾಥ್‌ 2010 ದಿಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ನಲ್ಲಿ ಕಂಚಿನ ಪದಕ ಗೆದ್ದಿದ್ದರು.

 ವಿಕಾಸ್‌ ಗೌಡ
ಮೈಸೂರು ಮೂಲದ ವಿಕಾಸ್‌ ಗೌಡ ಸದ್ಯ ನೆಲೆಸಿರುವುದು ಅಮೆರಿಕದಲ್ಲಿ. ಆದರೆ ವಿಕಾಸ್‌ ಗೌಡ ಪ್ರತಿನಿಧಿಸುವುದು ಭಾರತವನ್ನು. 2010ರ ದಿಲ್ಲಿ ಕಾಮನ್ವೆಲ್ತ್‌ ಕೂಟದಲ್ಲಿ ವಿಕಾಸ್‌ ಗೌಡ ಡಿಸ್ಕಸ್‌ ಥ್ರೋನಲ್ಲಿ ಬೆಳ್ಳಿ ಪದಕ ಪಡೆದಿದ್ದರು. 2014ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. 2014, 2010ರ ಏಷ್ಯನ್‌ ಗೇಮ್ಸ್‌ ನಲ್ಲಿ ಕ್ರಮವಾಗಿ ಬೆಳ್ಳಿ, ಕಂಚಿನ ಪದಕ ಗೆದ್ದಿದ್ದರು.

 ಅಶ್ವಿ‌ನಿ ಅಕ್ಕುಂಜೆ
ಅಶ್ವಿ‌ನಿ ಅಕ್ಕುಂಜೆ 2010 ದಿಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ನ 4/400 ಮೀ. ರಿಲೇನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಸದಸ್ಯರಲ್ಲಿ ಒಬ್ಬರು. ಮೂಲತಃ ಉಡುಪಿಯವರು. 2010 ಏಷ್ಯನ್‌ ಗೇಮ್ಸ್‌ 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಹಾಗೂ ಅದೇ ಕೂಟದ 4/400 ಮೀ. ರಿಲೇನಲ್ಲೂ ಚಿನ್ನದ ಪದಕ ಗೆದ್ದಿದ್ದರು.

- ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next