ಬೆಂಗಳೂರು: ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ದೊರೆತ ಸೇನಾ ತರಬೇತಿಗೆ ಬಳಸಲಾಗುವ ನಿರ್ಜೀವ ‘ಗ್ರೆನೇಡ್’ ಪ್ರಕರಣ ಮತ್ತೂಂದು ಗಂಭೀರ ತಿರುವು ಪಡೆದುಕೊಂಡಿದೆ.
ಬೆಂಗಳೂರಿನಿಂದ ರೈಲ್ವೇ ಮಾರ್ಗದಲ್ಲಿ ಮೇ 10ರಂದು ಝಾನ್ಸಿಗೆ ಕಳುಹಿಸಿದ್ದ ‘ಗ್ರೆನೇಡ್’ ಪಾರ್ಸೆಲ್ ಇದುವರೆಗೂ ತಲುಪಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ರಕ್ಷಣಾ ಇಲಾಖೆ ಈ ಕುರಿತು ರೈಲ್ವೇ ಪೊಲೀಸರಿಗೆ ಅಧಿಕೃತ ಮಾಹಿತಿ ನೀಡಿದೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಪಾರ್ಸೆಲ್ ನಾಪತ್ತೆಯ ನಿಗೂಢತೆ ಬೇಧಿಸಲು ಮುಂದಾಗಿದೆ.
ಮೇ 10ರಂದು ಕಳುಹಿಸಿಕೊಟ್ಟ ಗ್ರೆನೇಡ್ ಪಾರ್ಸೆಲ್ ಬಾಕ್ಸ್ ನಿಗದಿತ ಅವಧಿಯಲ್ಲಿ ಉತ್ತರಪ್ರದೇಶದ ಝಾನ್ಸಿ ಸೇನಾ ಘಟಕಕ್ಕೆ ತಲುಪಿಲ್ಲ. ಈ ಕುರಿತು ಅಲ್ಲಿನ ಅಧಿಕಾರಿಗಳು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರಿಸಿರುವ ಪೊಲೀಸರಿಗೆ ಇದುವರೆಗೂ ಪಾರ್ಸೆಲ್ ಬಗ್ಗೆ ಸುಳಿವು ಲಭ್ಯವಾಗಿಲ್ಲ. ರಕ್ಷಣಾ ಇಲಾಖೆ ನೀಡಿರುವ ಮಾಹಿತಿ ಆಧರಿಸಿ ಪತ್ತೆಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
ಮೇ 31ರಂದು ಫ್ಲಾಟ್ಫಾರ್ಮ್ ಒಂದರಲ್ಲಿ ದೊರೆತ ನಿರ್ಜೀವ ಗ್ರೆನೇಡ್ ಅದೇ ಬಾಕ್ಸ್‌ನ ಲ್ಲಿತ್ತೇ? ಅಥವಾ ಅದು ಪ್ರತ್ಯೇಕವಾಗಿ ಬಿದ್ದಿತ್ತೇ ಎಂಬುದರ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಪಾರ್ಸೆಲ್ ಕಳುವಾಗಿರಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಪಾರ್ಸೆಲ್ನಲ್ಲಿ ಎಷ್ಟು ಪ್ರಮಾಣದ ಗ್ರೆನೇಡ್‌ಗಳಿದ್ದವು ಸೇರಿದಂತೆ ಇನ್ನಿತರೆ ಮಾಹಿತಿಯನ್ನು ತನಿಖಾ ದೃಷ್ಟಿಯಿಂದ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಗ್ರೆನೇಡ್ ಪತ್ತೆ ಹಾಗೂ ಪಾರ್ಸೆಲ್ ಝಾನ್ಸಿಗೆ ತಲುಪದಿರುವ ಬಗ್ಗೆ ರೈಲ್ವೇ ಮಾರ್ಗದ ರಾಜ್ಯದ ಪೊಲೀಸರಿಗೆ ಹಾಗೂ ನೆರೆ ರಾಜ್ಯದ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ರೈಲ್ವೇ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.
ಸ್ಫೋಟಕ ಅಂಶವಿಲ್ಲ
ಮೇ 31ರಂದು ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ತರಬೇತಿಗೆ ಬಳಸುವ ಗ್ರೆನೇಡ್ ಹಾಗೂ ಝಾನ್ಸಿಗೆ ಪಾರ್ಸೆಲ್ ತಲುಪದಿರುವ ಬಗ್ಗೆ ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಕ್ಷಣಾ ಇಲಾಖೆ, ದೊರೆತಿರುವ ಗ್ರೆನೇಡ್ ತರಬೇತಿಗೆ ಮಾತ್ರ ಬಳಸಲಾಗುತ್ತದೆ. ಅದರಲ್ಲಿ ಯಾವುದೇ ರೀತಿಯ ಸ್ಫೋಟಕ ಅಂಶಗಳು ಒಳಗೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.