Advertisement

34 ನೆಕ್ಕಿಲಾಡಿ: ಗ್ರಾ.ಪಂ. ಜನರೇಟರ್‌ ಎಲ್ಲಿ?

01:39 AM Jun 10, 2019 | sudhir |

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ. ಕಚೇರಿಯಲ್ಲಿದ್ದ ಸಾವಿರಾರು ರೂ. ಬೆಲೆಬಾಳುವ ಜನರೇಟರ್‌ ಸುಮಾರು ಎರಡು ವರ್ಷಗಳಿಂದ ನಾಪತ್ತೆಯಾಗಿದೆ. ಜನರೇಟರ್‌ ಖರೀದಿಸಿದ ದಾಖಲೆಗಳು ಪಂಚಾಯತ್‌ನಲ್ಲಿದ್ದು, ಜನರೇಟರ್‌ ಮಾತ್ರ ಇಲ್ಲ. ಸರಕಾರಿ ಸೊತ್ತು ಹೀಗೆ ನಾಪತ್ತೆಯಾಗಿರುವುದು ತೀವ್ರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ಪಂಚಾಯತ್‌ನಲ್ಲಿರುವ ದಾಖಲೆಗಳ ಪ್ರಕಾರ 34ನೇ ನೆಕ್ಕಿಲಾಡಿ ಗ್ರಾ.ಪಂ. ಹೋಂಡಾ ಕಂಪೆನಿಯ ಇಎಕ್ಸ್‌ಕೆ-2000 ಎಸಿ ಕೆರೋಸಿನ್‌ ಮೋಡೆಲ್ ಜನರೇಟರ್‌ ಅನ್ನು ಖರೀದಿಸಿತ್ತು. ಇದಕ್ಕಾಗಿ ಮಂಗಳೂರಿನ ತ್ರಿಭುವನ್‌ ಪವರ್‌ ಪ್ರಾಡಕ್ಟ್‌ನವರಿಗೆ 74279 ನಂಬರ್‌ನ ಚೆಕ್‌ನಲ್ಲಿ 2009ರ ಮಾ. 3ರಂದು 47,250 ರೂ. ಮೊತ್ತವನ್ನು ಪಾಪತಿ ಮಾಡಿತ್ತು. ಕೆಲ ವರ್ಷ ಗ್ರಾ.ಪಂ. ಕಚೇರಿಯಲ್ಲಿದ್ದ ಈ ಜನರೇಟರ್‌ ಸುಮಾರು ಎರಡು ವರ್ಷದಿಂದ ನಾಪತ್ತೆಯಾಗಿದೆ. ಈಗ ಪಂಚಾಯತ್‌ ಕಚೇರಿ ಯಲ್ಲಿ ಇನ್‌ವರ್ಟರ್‌ ಸೌಲಭ್ಯವಿರುವುದರಿಂದ ವಿದ್ಯುತ್‌ ಸ್ಥಗಿತ ಗೊಂಡಾಗ ಸಮಸ್ಯೆಯಿಲ್ಲದಿದ್ದರೂ ಸರಕಾರಿ ಸೊತ್ತಾದ ಗ್ರಾ.ಪಂ.ನ ಜನರೇಟರ್‌ ಎಲ್ಲಿಗೆ ಹೋಯಿತು ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಪಿಡಿಓಗೂ ಮಾಹಿತಿ ಇಲ್ಲ!

34ನೇ ನೆಕ್ಕಿಲಾಡಿ ಗ್ರಾ.ಪಂ.ನ ಪ್ರಭಾರ ಪಿಡಿಒ ಆಗಿ ಚಂದ್ರಾವತಿ ಅವರು ಸುಮಾರು ಒಂದೂವರೆ ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡಾಗ ಅವರಿಗೆ ಪಂಚಾಯತ್‌ಗೆ ಸಂಬಂಧಪಟ್ಟ ಸೊತ್ತುಗಳ ದಾಖಲೆ ಹಸ್ತಾಂತರಿಸುವಾಗ ಅದರಲ್ಲಿ ಜನರೇಟರ್‌ ಅನ್ನು ಕೈಬಿಡಲಾಗಿತ್ತು. ಪಂಚಾಯತ್‌ ಸೊತ್ತನ್ನು ಅವರಿಗೆ ಹಸ್ತಾಂತರ ಮಾಡದೆ ಏಕೆ ಮುಚ್ಚಿಡಲಾಯಿತು? ಎನ್ನುವುದೂ ಪ್ರಶ್ನಾರ್ಥಕವೇ ಆಗಿದೆ.

ಗ್ರಾ.ಪಂ. ಸಾಮಾನ್ಯ ಸಭೆಯಲ್ಲೂ ಪ್ರಸ್ತಾವ

Advertisement

ಏಳು ತಿಂಗಳ ಹಿಂದೆ ನಡೆದ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಸದಸ್ಯೆಯೋರ್ವರು ಈ ಜನರೇಟರ್‌ ವಿಷಯ ಪ್ರಸ್ತಾವಿಸಿ ದ್ದರು. ಒಂದೂವರೆ ವರ್ಷದಿಂದ ಇಲ್ಲಿದ್ದ ಜನರೇಟರ್‌ ನಾಪತ್ತೆ ಯಾಗಿದೆ. ಪ್ರಶ್ನಿಸಿದಾಗಲೆಲ್ಲ ಒಂದಲ್ಲ ಒಂದು ನೆಪಗಳು ಕೇಳಿ ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಜನರೇಟರ್‌ ತಾಂತ್ರಿಕ ತೊಂದರೆಗೆ ಸಿಲುಕಿದ್ದರಿಂದ ಅದನ್ನು ರಿಪೇರಿಗೆ ಕಳುಹಿಸಲಾಗಿದೆ ಎಂದು ಸದಸ್ಯರೋರ್ವರು ಸ್ಪಷ್ಟನೆ ನೀಡಿದ್ದರು. ಆಗ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿ, ಜನರೇಟರ್‌ ಅನ್ನು ರಿಪೇರಿಗೆ ಇಷ್ಟೊಂದು ಕಾಲಾವಕಾಶ ಬೇಕಾ? ಸರಕಾರಿ ಸೊತ್ತನ್ನು ಎಲ್ಲೆಂದರಲ್ಲಿ ಇಡುವುದು ಸರಿಯಲ್ಲ. ಅದನ್ನು ಮುಂದಿನ ಸಾಮಾನ್ಯ ಸಭೆಯೊಳಗೆ ಪಂಚಾಯತ್‌ ಕಚೇರಿಗೆ ತರಲೇಬೇಕು. ಇಲ್ಲದಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಸರಕಾರಿ ಸೊತ್ತು ದುರ್ಬಳಕೆಯ ಮಾಡಿಕೊಂಡಿರುವ ಬಗ್ಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದ್ದರು.

ಸದಸ್ಯರ ಮೌನದಲ್ಲೇ ಸಂಶಯ!

ಅನಂತರದಲ್ಲಿ ಸಾಮಾನ್ಯ ಸಭೆಗಳು ನಡೆದರೂ ಯಾರೂ ಇದರ ಬಗ್ಗೆ ಧ್ವನಿಯೆತ್ತಲಿಲ್ಲ. ಜನರೇಟರ್‌ ಕೂಡಾ ಪಂಚಾಯತ್‌ ಕಚೇರಿಗೆ ಬರಲಿಲ್ಲ. ತಿಂಗಳುಗಳು ಉರುಳುತ್ತಿವೆಯೇ ಹೊರತು ನಾಪತ್ತೆಯಾದ ಜನರೇಟರ್‌ನ ಪುನರಾಗಮನವಾಗಲಿ, ಅದು ಎಲ್ಲಿದೆ ಎನ್ನುವುದಕ್ಕೆ ಸ್ಪಷ್ಟ ಉತ್ತರವಾಗಲಿ ಯಾರಿಗೂ ಸಿಕ್ಕಿಲ್ಲ. ಸರಕಾರಿ ಸೊತ್ತು ಕಾಣೆಯಾದುದರ ಬಗ್ಗೆ ಸದಸ್ಯರ ಮೌನವೇ ಹಲವು ಸಂಶಯಕ್ಕೆ ಕಾರಣವಾಗುತ್ತಿದೆ.

ನಾಪತ್ತೆ ಸುತ್ತ ಸಂಶಯದ ಹುತ್ತ

ಗ್ರಾ.ಪಂ. ಸೊತ್ತಾದ ಜನರೇಟರ್‌ ದಿಢೀರ್‌ ನಾಪತ್ತೆಯಾಗಿದ್ದು ಹೇಗೆ? ಪ್ರಭಾರ ಪಿಡಿಒ ಆಗಿ ಚಂದ್ರಾವತಿ ಅವರು ಅಧಿಕಾರ ವಹಿಸಿಕೊಳ್ಳುವಾಗ ಅವರಿಗೆ ಹಸ್ತಾಂತರಿಸಿದ ಪಂಚಾಯತ್‌ ಸೊತ್ತುಗಳಲ್ಲಿ ಜನರೇಟರ್‌ ಕೈಬಿಟ್ಟದೇಕೆ? ಎರಡು ವರ್ಷಗಳಿಂದ ಅದು ರಿಪೇರಿಯಾಗಿಲ್ಲವೇಕೆ? ವಾಪಸ್‌ ಗ್ರಾ.ಪಂ.ಗೆ ತರಲಿಲ್ಲವೇಕೆ? ಜನರೇಟರ್‌ ನಾಪತ್ತೆಯ ಬಗ್ಗೆ ಗ್ರಾ.ಪಂ. ಸದಸ್ಯರು ಮೌನವಾದರೇಕೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಕಾಡುತ್ತಿದ್ದು, ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಸೂಕ್ತ ತನಿಖೆಯಾದರೆ ಮಾತ್ರ ಇದಕ್ಕೆಲ್ಲ ಸೂಕ್ತ ಉತ್ತರ ಸಿಗಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next