ಚೆನ್ನೈ: ರಸ್ತೆ ಯೋಜನೆಗೆ ಹಿಂದೂ ಅರ್ಚಕರ ಮುಖೇನ ಭೂಮಿ ಪೂಜೆಗೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಢ ಡಿಎಂಕೆಯ ಲೋಕಸಭಾ ಸಂಸದ ಎಸ್. ಸೆಂಥಿಲ್‌ಕುಮಾರ್,ಇಂತಹ ಯಾವುದೇ ಕಾರ್ಯಕ್ರಮಕ್ಕೆ ಪ್ರಾರ್ಥನೆ ಸಲ್ಲಿಸಲು ಎಲ್ಲಾ ಧರ್ಮಗಳ ಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದು ಹೇಳಿದ ಪ್ರಸಂಗ ನಡೆದಿದೆ.
ಧರ್ಮಪುರಿ ಲೋಕಸಭಾ ಸಂಸದರು ತಮ್ಮ ತವರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಧರ್ಮದ ಪ್ರಾರ್ಥನೆಯನ್ನು ಒಳಗೊಂಡಂತೆ ಸರ್ಕಾರಿ ಕಾರ್ಯಕ್ರಮವನ್ನು ನಡೆಸಬಾರದು ಎಂದು ನಿಮಗೆ ತಿಳಿದಿದೆಯೇ ಎಂದು ಅಧಿಕಾರಿಯೊಬ್ಬರನ್ನು ಕೇಳಿದರು. ಸರ್ಕಾರಿ ಕಾರ್ಯಕ್ರಮಗಳು ಹೀಗೆ ನಡೆಯಬಾರದು ಎಂಬ ಸೂಚನೆ ಇದೆಯಲ್ಲವೇ. ನಿಮಗೆ ಅರಿವಿದೆಯೋ ಇಲ್ಲವೋ” ಎಂದು ಕೇಳಿದರು.
ಕೇಸರಿ ವಸ್ತ್ರ ತೊಟ್ಟಿದ್ದ ಹಿಂದೂ ಧರ್ಮಗುರುಗಳತ್ತ ಕೈ ತೋರಿಸಿ, ಸಂಸದರು ಅಧಿಕಾರಿಯನ್ನು ಪ್ರಶ್ನಿಸಿ “ಇದೇನು? ಎಲ್ಲಿ ಬೇರೆ ಧರ್ಮಗಳು?, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಎಲ್ಲಿದ್ದಾರೆ? ಚರ್ಚ್ ಫಾದರ್, ಇಮಾಮ್ ಅವರನ್ನು ಆಹ್ವಾನಿಸಿ, ಯಾವುದೇ ಧರ್ಮವನ್ನು ಹೇಳದವರನ್ನು ಆಹ್ವಾನಿಸಿ., ನಾವು ನಾಸ್ತಿಕರು, ದ್ರಾವಿಡರ್ ಕಳಗಂ (ಪ್ರತಿನಿಧಿಗಳು),” ಎಂದು ಅವರು ಹೇಳಿದರು.
ಸಂಸದರ ಪ್ರಶ್ನೆಗೆ, ಅಧಿಕಾರಿ ತಮ್ಮನ್ನು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂದು ಗುರುತಿಸಿಕೊಂಡರು ಮತ್ತು ಕ್ಷಮೆಯಾಚಿಸಿದರು. “ಇದು ದ್ರಾವಿಡ ಮಾದರಿಯ ಆಡಳಿತ. ಸರ್ಕಾರವು ಎಲ್ಲಾ ಧರ್ಮಗಳಿಗೆ ಸೇರಿದ ಜನರಿಗಾಗಿ” ಎಂದು ಸಂಸದರು ಅಧಿಕಾರಿಗೆ ತಿಳಿಸಿದರು.
ಆದಾಗ್ಯೂ, ಪೂಜೆಗೆ ತಾನು ವಿರೋಧಿಯಲ್ಲ ಎಂದು ಸೆಂಥಿಲ್‌ಕುಮಾರ್ ಸ್ಪಷ್ಟಪಡಿಸಿದರು. ಇಂತಹ ಘಟನೆಗಳು ಎಲ್ಲಾ ನಂಬಿಕೆಗಳನ್ನು ಒಳಗೊಂಡಿರಬೇಕು.ಎಲ್ಲರನ್ನು ಆಹ್ವಾನಿಸುವ ಮೂಲಕ ಇದನ್ನು ಮಾಡಿ ಎಂದರು.
ಸಾಮಾಜಿಕ ನ್ಯಾಯದ ಐಕಾನ್ ಎಂದು ಖ್ಯಾತರಾಗಿದ್ದ ಪೆರಿಯಾರ್ ಇ ವಿ ರಾಮಸಾಮಿ ಸ್ಥಾಪಿಸಿದ ವಿಚಾರವಾದಿ ಸಂಘಟನೆಯಾದ ದ್ರಾವಿಡರ್ ಕಳಗಂ ಆಡಳಿತಾರೂಢ ಡಿಎಂಕೆಯ ಮಾತೃಸಂಸ್ಥೆಯಾಗಿದೆ.