ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ! ಅವರ ಅಸಮಾಧಾನಕ್ಕೆ ಕಾರಣ, ಕನ್ನಡ ಚಿತ್ರಗಳಿಗೆ ಹಳೆಯ ಮತ್ತು ಜನಪ್ರಿಯ ಹೆಸರುಗಳನ್ನು ಪುನಃ ಇಡುತ್ತಿರುವುದು. ಈ ಕುರಿತು ಅವರು “ಜನ ಗಣ ಮನ’ ಚಿತ್ರದ ಆಡಿಯೋ ಸಿಡಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಮರುಶೀರ್ಷಿಕೆ ಕುರಿತು ಮಾತನಾಡಿದರು.
ಅದಕ್ಕೆ ಕಾರಣವಾಗಿದ್ದು, ಶರಣ್ ಅಭಿನಯದ “ಸತ್ಯ ಹರಿಶ್ಚಂದ್ರ’. ಈ ಶೀರ್ಷಿಕೆ ಕುರಿತಂತೆ ಸಾ.ರಾ.ಗೋವಿಂದು ಮಾತನಾಡಿದರು. “ವರನಟ ಡಾ.ರಾಜ್‌ಕುಮಾರ್ ಅಭಿನಯದ “ಸತ್ಯ ಹರಿಶ್ಚಂದ್ರ’ ದಾಖಲೆ ಬರೆದ ಚಿತ್ರ. ಅಂತಹ ಅದ್ಭುತ ಚಿತ್ರದ ಶೀರ್ಷಿಕೆಯನ್ನೇ ಪುನಃ ಶರಣ್ ಅಭಿನಯದ ಚಿತ್ರಕ್ಕೆ “ಸತ್ಯಹರಿಶ್ಚಂದ್ರ’ ಅಂತ ಮರುಬಳಕೆ ಮಾಡಿದ್ದು ಎಲ್ಲರಿಗೂ ಗೊತ್ತು.
ಆರಂಭದಲ್ಲಿ “ಸತ್ಯ ಹರಿಶ್ಚಂದ್ರ’ ಶೀರ್ಷಿಕೆ ಇಟ್ಟು ಚಿತ್ರ ಮಾಡುತ್ತಿರುವ ಬಗ್ಗೆ ಸುದ್ದಿ ಹೊರ ಬರುತ್ತಿದ್ದಂತೆಯೇ ರಾಜ್‌ಕುಮಾರ್ ಅಭಿಮಾನಿಗಳು, ಸಂಘದ ಪದಾಧಿಕಾರಿಗಳು, ಆ ಶೀರ್ಷಿಕೆ ಕೊಡಬೇಡಿ ಅಂತ ಆಕ್ಷೇಪಿಸಿದ್ದರು. ಒಂದು ಸಂದೇಶವುಳ್ಳ, ಮೌಲ್ಯ ಇರುವಂತಹ ರಾಜ್‌ಕುಮಾರ್ ಅವರ “ಸತ್ಯಹರಿಶ್ಚಂದ್ರ’ ಚಿತ್ರದ ಶೀರ್ಷಿಕೆಯನ್ನು, ಕೇವಲ ಒಂದು ಕಾಮಿಡಿ ಕಥೆಗೆ ಇಟ್ಟು ಅವಮಾನಿಸಬೇಡಿ ಎಂದು ಮನವಿ ಮಾಡಿದ್ದರು.
ಆದರೆ, ಅದೇ ಶೀರ್ಷಿಕೆಯಡಿ ಆ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರ ನೋಡಿದ ರಾಜ್‌ಕುಮಾರ್ ಅವರ ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.ಇನ್ನು ಮುಂದೆ ಅಣ್ಣಾವ್ರ ಸಿನಿಮಾಗಳ ಶೀರ್ಷಿಕೆ ಮರುಬಳಸುವ ಮುನ್ನ ಗಂಭೀರವಾಗಿ ಯೋಚಿಸಬೇಕು ಎಂಬ ಮನವಿಯನ್ನು ಇಟ್ಟಿದ್ದಾರೆ’ ಎಂದರು ಸಾ.ರಾ. ಗೋವಿಂದು. “ಡಾ ರಾಜ್‌ಕುಮಾರ್ ಅಭಿನಯಿಸಿದ ಆ “ಸತ್ಯ ಹರಿಶ್ಚಂದ್ರ’ ಎಲ್ಲಿ, ಈ “ಸತ್ಯ ಹರಿಶ್ಚಂದ್ರ’ ಎಲ್ಲಿ? ದೊಡ್ಡ ಯಶಸ್ಸು ಪಡೆದ ಚಿತ್ರದ ಶೀರ್ಷಿಕೆ ಬಳಸಿ, ನಿರೀಕ್ಷೆ ಹುಸಿಗೊಳಿಸುವ ಮೂಲಕ ಅಭಿಮಾನಿಗಳ ಕೋಪಕ್ಕೆ ಚಿತ್ರತಂಡ ಗುರಿಯಾಗಿದೆ.
ಇನ್ನು ಮುಂದೆ ಅಣ್ಣಾವ್ರು ಅಭಿನಯಿಸಿದ “ಬಬ್ರುವಾಹನ’, “ಮಯೂರ’, “ಭಕ್ತ ಕುಂಬಾರ’ ಸೇರಿದಂತೆ ಇತರೆ ಮೌಲ್ಯವುಳ್ಳ ಚಿತ್ರಗಳ ಶೀರ್ಷಿಕೆ ಮರುಬಳಕೆ ಮಾಡಲು ಬಿಡದಿರಲು ಮಂಡಳಿ ನಿರ್ಧರಿಸಲಿದೆ. ಅಲ್ಲದೆ, ಸೂಕ್ತ, ಕಥೆ, ನಟ, ನಿರ್ದೇಶಕ ಮತ್ತು ಒಳ್ಳೆಯ ತಂಡವಿದ್ದರೆ ಮಾತ್ರ, ಆ ಶೀರ್ಷಿಕೆಗೆ ಅವರು ಅರ್ಹರೋ ಇಲ್ಲವೋ ಎಂಬುದನ್ನು ಅರಿತು, ಆ ಬಳಿಕ ಮಂಡಳಿ ಗಂಭೀರವಾಗಿ ಶೀರ್ಷಿಕೆಗೆ ಅನುಮತಿ ಕೊಡಬೇಕೋ ಬೇಡವೋ ಎಂದು ಪರಿಗಣಿಸಲಿದೆ’ ಎನ್ನುತ್ತಾರೆ ಸಾ.ರಾ.ಗೋವಿಂದು.