Advertisement

ರಾಮ ಲಕ್ಷ್ಮಣ ಎಲ್ಲಿ?

12:30 AM Feb 07, 2019 | |

ಅದರಲ್ಲೂ ಹಟ್ಟಿಯಲ್ಲಿದ್ದ ರಾಮ ಲಕ್ಷ್ಮಣ ಹೋರಿಗಳನ್ನು ಕಂಡರೆ ತುಂಬಾ ಪ್ರೀತಿ ತಮ್ಮಣ್ಣನಿಗೆ. ರಾಮ ಲಕ್ಷ್ಮಣರು ಮನೆಗೆ ಬಂದ ಮೇಲೆಯೇ ತನ್ನ ಕಷ್ಟ ಕೋಟಲೆಗಳೆಲ್ಲಾ ಕಳೆದಿದ್ದು ಎಂದು ಅವನು ನಂಬಿದ್ದ. ಒಂದು ದಿನ ಮನೆಗೆ ಬಂದಾಗ ರಾಮ ಲಕ್ಷ್ಮಣರು ಎಲ್ಲೂ ಕಾಣಲಿಲ್ಲ!

Advertisement

ಒಂದು ಹಳ್ಳಿಯಲ್ಲಿ ಜಯಣ್ಣ ಎಂಬ ಯುವಕನಿದ್ದನು. ಅವನು ರೈತನಾಗಿದ್ದನು. ದುಡಿಮೆಯಲ್ಲಿ ಲಾಭ ಕಡಿಮೆ ಇದ್ದರೂ ಜಯಣ್ಣ ಕಷ್ಟಪಟ್ಟು ದುಡಿಯುತಿದ್ದ. ಲಾಭಕ್ಕಾಗಿ ಎಂದೂ ಅಡ್ಡದಾರಿ ಹಿಡಿಯುತ್ತಿರಲಿಲ್ಲ. ಅವನ ಒಳ್ಳೆಯತನವನ್ನು ನೋಡಿಯೇ ಅದೇ ಊರಿನ ಶ್ರೀಮಂತ ತಮ್ಮಣ್ಣ ತನ್ನ ಒಬ್ಬಳೇ ಮಗಳು ಸೀತಾಳನ್ನು ಜಯಣ್ಣನಿಗೆ ಕೊಟ್ಟು, ಮದುವೆ ಮಾಡಿ, ಮನೆ ಅಳಿಯನನ್ನಾಗಿ ಮಾಡಿಕೊಂಡಿದ್ದ. ತನ್ನ ಹೊಲ-ಮನೆ, ದನಕರುಗಳನ್ನು ಅಳಿಯನಿಗೇ ಕೊಟ್ಟು ನೋಡಿಕೊಳ್ಳಲು ತಿಳಿಸಿದ. ಮನೆಯ ಜವಾಬ್ದಾರಿಯನ್ನು ಜಯಣ್ಣನಿಗೆ ವಹಿಸಿದ ತಮ್ಮಣ್ಣ ನೆಮ್ಮದಿಯಿಂದ ಇದ್ದನು. 

ಜಯಣ್ಣ ತನ್ನ ಹಸು, ತೋಟ, ಮನೆಗಳನ್ನು ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದ. ಅದರಲ್ಲೂ ಹಟ್ಟಿಯಲ್ಲಿದ್ದ ರಾಮ ಲಕ್ಷ್ಮಣ ಎತ್ತುಗಳನ್ನು ಕಂಡರೆ ತುಂಬಾ ಪ್ರೀತಿ ಅವನಿಗೆ. ರಾಮ ಲಕ್ಷ್ಮಣರು ಮನೆಗೆ ಬಂದ ಮೇಲೆಯೇ ತನ್ನ ಕಷ್ಟ ಕೋಟಲೆಗಳೆಲ್ಲಾ ಕಳೆದಿದ್ದು ಎಂದು ತಮ್ಮಣ್ಣ ನಂಬಿದ್ದ. ಹೀಗಾಗಿ ಜಯಣ್ಣ ಅವುಗಳ ಮೇಲೆ ತೋರುತ್ತಿದ್ದ ಪ್ರೀತಿ ಕಂಡು ತಮ್ಮಣ್ಮನಿಗೂ ಅಳಿಯನ ಮೇಲೆ ಅಭಿಮಾನ ಉಂಟಾಯಿತು. ಜಯಣ್ಣನೂ ಮಾವನವರನ್ನು ಗೌರವಾದರಗಳಿಂದ ಕಾಣುತ್ತಿದ್ದ. ಕಾಲ ಕಳೆದಂತೆ ಮನೆಗೊಂದು ಮುದ್ದಾದ ಮಗುವಿನ ಆಗಮನವೂ ಆಯಿತು. ತಮ್ಮಣ್ಣನ ಕಣ್ಣು ತುಂಬಿ ಬಂತು. ಅವನು ಎಂದೋ ತೀರಿಕೊಂಡಿದ್ದ ತನ್ನ ಹೆಂಡತಿಯನ್ನು ನೆನೆದು “ಸೀತೆ, ನಿಮ್ಮ ಅವ್ವ ಇದ್ದರೆ ಎಷ್ಟು ಸಂತೋಷ ಪಡುತ್ತಿದ್ದಳ್ಳೋ’ ಎಂದು ಕಣ್ಣೀರಾಗಿದ್ದ. 

ಹಟ್ಟಿಯಲ್ಲಿ ದನ ಕರುಗಳು ಸದಾ ಇರುತ್ತಿದ್ದವು. ಮಾವನಿಗೆ ಅಳಿಯನೂ, ಅಳಿಯನಿಗೆ ಮಾವನೂ ಪರಸ್ಪರ ನೆರವಾಗುತ್ತ, ಹಟ್ಟಿ ಸ್ವತ್ಛ ಮಾಡುವುದು, ಸಗಣಿ ಎತ್ತುವುದು, ಜಾನುವಾರುಗಳಿಗೆ ಹುಲ್ಲು ಹಾಕುವುದು ಮೊದಲಾದ ಕೆಲಸಗಳನ್ನು ಜೊತೆಗೂಡಿ ಮಾಡುತ್ತಿದ್ದರು. ತಮ್ಮಣ್ಣನಂತೂ ಕೆಲಸ ಮುಗಿದ ಕೂಡಲೇ ಮೊಮ್ಮಗನ ಜೊತೆಗೆ ಕಾಲ ಕಳೆಯಲು ಓಡುತ್ತಿದ್ದ. ಮಗುವನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಊರೆಲ್ಲಾ ಸುತ್ತಿ ಬರುತ್ತಿದ್ದ.

ತಮ್ಮಣ್ಣ ಹೆಚ್ಚಿನ ವೇಳೆಯನ್ನು ಹಟ್ಟಿ ಕೆಲಸದಲ್ಲಿ ತೊಡಗುತ್ತಿದ್ದುದನ್ನು ಸೀತೆ ಗಮನಿಸಿದ್ದಳು. ಈ ಮುಪ್ಪಿನ ವಯಸ್ಸಲ್ಲೂ ತನ್ನ ತಂದೆ ಕೆಲಸ ಮಾಡುವುದನ್ನು ಕಂಡು ಅವಳಿಗೆ ಬೇಸರವಾಯಿತು. ಈ ಕಾರಣಕ್ಕೆ ಅವಳು ಗಂಡ, ಅಪ್ಪ ಇಬ್ಬರೂ ಇಲ್ಲದ ಸಮಯದಲ್ಲಿ ರಾಮ ಲಕ್ಷ್ಮಣ ದನಕರುಗಳನ್ನು ಮಾರಲು ಸಂತೆಗೆ ಕಳಿಸಿದಳು. ಸಂಜೆ ಮನೆಗೆ ಹಿಂದಿರುಗಿದ ಜಯಣ್ಣ, ತಮ್ಮಣ್ಣ ಇಬ್ಬರೂ, ಎತ್ತುಗಳು ಇಲ್ಲದ್ದನ್ನು ಗಮನಿಸಿ ಸೀತೆಯನ್ನು ವಿಚಾರಿಸಿದರು. ಅವಳು ನಿಜ ಸಂಗತಿ ಹೇಳಿದಾಗ ಮಾವ ಅಳಿಯ ಇಬ್ಬರಿಗೂ ವಿಪರೀತ ಸಂಕಟವಾಯಿತು. “ಯಾರನ್ನು ಕೇಳಿ ಕೊಟ್ಟೆ?’ ಎಂದು ಗಂಡನೂ, “ಎಂಥಾ ಅನ್ಯಾಯ ಮಾಡಿದೆ ಸೀತವ್ವಾ…!’ ಎಂದು ಅಪ್ಪನೂ ನೊಂದುಕೊಂಡರು. ಮನೆಯ ಒಳಕ್ಕೂ ಬಾರದೇ ಇಬ್ಬರೂ ಹೋರಿಗಳನ್ನು ಹುಡುಕಿಕೊಂಡು ಹೊರಟೇ ಬಿಟ್ಟರು. “ರಾಮಾ, ಲಕ್ಷ್ಮಣಾ…’ ಎಂದು ಜೋರಾಗಿ ಕೂಗುತ್ತಾ ಅವರು ಹೋಗಿದ್ದನ್ನು ನೋಡಿ ಸೀತೆಗೂ ಸಂಕಟವೆನಿಸಿತು. ಅವಳು ರಾತ್ರಿ ಊಟ ಮಾಡಲಿಲ್ಲ. ಹೋರಿಗಳು ಸಂತೆಯಲ್ಲಿ ಮಾರಾಟವಾಗದೇ ಇರಲಪ್ಪಾ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಮಲಗಿದಳು. 

Advertisement

ಬೆಳಿಗ್ಗೆ ಸೀತಾಳಿಗೆ ಎಚ್ಚರವಾಯಿತು. ಯಾವತ್ತೂ ಅವಳು ಅಷ್ಟು ಬೇಗ ಎದ್ದವಳಲ್ಲ. ಅವಳನ್ನು ನಿದ್ದೆಯಿಂದ ಎಚ್ಚರಿಸಿದ್ದು “ಅಂಬಾ’ ಎನ್ನುವ ದನಿ. ಅವಳಿಗೆ ಅದು ರಾಮಲಕ್ಷ್ಮಣರ ಕೂಗು ಎಂದು ತಿಳಿದುಹೋಯಿತು. ಹಾಸಿಗೆಯಿಂದೆದ್ದು ದಡಬಡಾಯಿಸಿ ಹೊರಕ್ಕೆ ಓಡಿ ಬಂದು ನೋಡಿದರೆ ರಾಮ ಕಣ್ಣೀರು ಸುರಿಸುತ್ತಾ ನಿಂತಿದ್ದ. ಅಪ್ಪನೂ, ಗಂಡನೂ ಕೈಕಾಲು ಮುಖ ತೊಳೆದುಕೊಳ್ಳುತ್ತಿದ್ದರು. ಸೀತೆ, ರಾಮ ಲಕ್ಷ್ಮಣರ ಮೈದಡವಿ ಮುದ್ದಿಸಿದಳು. “ಇನ್ಯಾವತ್ತೂ ನಾನು ಇಂಥಾ ತಪ್ಪು ಮಾಡಲ್ಲ. ಕ್ಷಮಿಸಿ’ ಎಂದು ಜೋರಾಗಿ ಅತ್ತುಬಿಟ್ಟಳು. ಅಪ್ಪನೂ ಗಂಡನೂ ಅವಳನ್ನು ಸಮಾಧಾನಿಸಿದರು. ತಮ್ಮಣ್ಣ “ಮಗಳೇ ಸೀತವ್ವಾ, ಹಸು ಕರು ಹಾಕೋವಾಗ ನಾವು ಯಾವತ್ತೂ ಗಂಡು ಎಣ್ಣು ಅಂತ ನೋಡೊರಲ್ಲ. ಹೋರಿ ಕರಕ್ಕೂ ಹೊಟ್ಟೆ ತುಂಬಾ ಹಾಲು ಕುಡಿಯಾಕೆ ಬಿಟ್ಟ ಮಂದಿ ನಾವು. ಅವಕ್ಕೆ ಇರೋ ಪ್ರೀತಿ ಮನುಷ್ಯರಾದ ನಮಗೆ ಕಿಂಚಿತ್ತಾದರೂ ಇರಬೇಕಲ್ಲವ್ವಾ’ ಎಂದು ಬುದ್ಧಿ ಹೇಳಿದರು. ರಾಮಲಕ್ಷ್ಮಣರು ಸೀತಾಳನ್ನು ನೇವರಿಸತೊಡಗಿದವು. ಎಲ್ಲರ ಮುಖದ ಮೇಲೂ ನೆಮ್ಮದಿ ಮೂಡಿತ್ತು. ಇದೆಲ್ಲವನ್ನು ನೋಡುತ್ತಿದ್ದ ಮಗು ಕೇಕೆ ಹಾಕಿ ನಕ್ಕಿತು! 

ಸರಸ್ವತಿ ರಾಜು

Advertisement

Udayavani is now on Telegram. Click here to join our channel and stay updated with the latest news.

Next