ಹೊಸದಿಲ್ಲಿ: ವಿಮೆ, ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಸೇರಿದಂತೆ ಬಹುತೇಕ ಸಾರ್ವಜನಿಕ ಸೇವೆಗಳಿಗೆ ಆಧಾರ್ ಸಂಪರ್ಕ ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರ, ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಲವು ನೋಂದಣಿ ಮತ್ತು ಸೇವಾ ಕೇಂದ್ರಗಳನ್ನೂ ತೆರೆದಿದೆ. ಜನರು ತಮಗೆ ಹತ್ತಿರದ ಕೇಂದ್ರಗಳನ್ನು ಹುಡುಕಲು ಸುಲಭವಾಗುವಂತೆ ಆಧಾರ್ ವೆಬ್‌ತಾಣದಲ್ಲಿ ಮಾರ್ಗದರ್ಶನವನ್ನೂ ನೀಡಲಾಗಿದೆ. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
– ಆಧಾರ್ ವೆಬ್‌ತಾಣ “uidai.gov.in’ ಗೆ ಹೋಗಬೇಕು.
– “ಎನ್‌ರೋಲ್‌ಮೆಂಟ್ ಆ್ಯಂಡ್ ಅಪ್‌ಡೇಟ್ ಸೆಂಟರ್ಸ್ ಇನ್ ಬ್ಯಾಂಕ್ಸ್ ಆ್ಯಂಡ್ ಪೋಸ್ಟ್ ಆಫೀಸಸ್’ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
– ಈಗ ಹುಡುಕುವ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ “ಸ್ಟೇಟ್, ಪಿನ್‌ಕೋಡ್ ಮತ್ತು ಸರ್ಚ್ ಬಾಕ್ಸ್’ ಎಂಬ ಮೂರು ಆಯ್ಕೆಗಳು ಕಾಣಿಸುತ್ತವೆ.
– “ಸ್ಟೇಟ್’ ಆಯ್ಕೆಯಲ್ಲಿ ವ್ಯಕ್ತಿಯ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಅಥವಾ ನಗರ ಪ್ರದೇಶವನ್ನು ಆಯ್ಕೆ ಮಾಡಲು ತಿಳಿಸಲಾಗುತ್ತದೆ.
– “ಪಿನ್‌ಕೋಡ್’ ಆಯ್ಕೆಯಲ್ಲಿ ನಿವಾಸ ಸ್ಥಳದ ಪಿನ್‌ಕೋಡ್ ಟೈಪ್ ಮಾಡಬೇಕು.
– “ಸರ್ಚ್ ಬಾಕ್ಸ್’ ಆಯ್ದುಕೊಂಡರೆ ನಗರ ಪ್ರದೇಶವನ್ನು ಟೈಪ್ ಮಾಡಬೇಕು. (ಈ ಮೂರೂ ಆಯ್ಕೆಯಲ್ಲಿ “ಪರ್ಮನೆಂಟ್ ಸೆಂಟರ್ಸ್’ ಮೇಲೆ ಕ್ಲಿಕ್ ಮಾಡುವ ಅವಕಾಶವಿದ್ದು, ಆಗ ಶಾಶ್ವತ ಕೇಂದ್ರಗಳು ಮಾತ್ರ ಕಾಣಿಸುತ್ತವೆ.)
– ಈಗ ಒಂದು ಪರಿಶೀಲನಾ ಸಂಕೇತ ಕಂಡುಬರುತ್ತದೆ. ಈ ಸಂಕೇತವನ್ನು ಟೈಪ್ ಮಾಡಿ ಎಂಟರ್ ಒತ್ತಬೇಕು. ಆಗ ವ್ಯಕ್ತಿಯ ಸುತ್ತಮುತ್ತಲೂ ಇರುವ ಆಧಾರ್ ನೋಂದಣಿ ಮತ್ತು ಸೇವಾ ಕೇಂದ್ರಗಳ ವಿವರಗಳು ಲಭ್ಯವಾಗುತ್ತವೆ.