Advertisement

“ಔಮುವಾಮುವಾ’ಎಲ್ಲಿಂದ ಬಂದಿದ್ದು? ಯಾರಲ್ಲಿದ್ದವರು?

03:30 AM Dec 09, 2018 | Team Udayavani |

  ನಮ್ಮ ಪೃಥ್ವಿಯ ರಕ್ಷಣೆ ಹೇಗಾಗುತ್ತಿದೆ ಅಂದರೆ ಅಂತರಿಕ್ಷದಿಂದ ಧೂಮಕೇತು, ಕ್ಷುದ್ರಗ್ರಹ, ಅಂತರಿಕ್ಷದ ಅವಶೇಷಗಳು ಹೀಗೆ ಯಾವುದೇ ಆಕಾಶಕಾಯವಿರಲಿ ಅವು ಭೂಮಿಯ ಹೊರ ಪದರವನ್ನು ಪ್ರವೇಶಿಸುತ್ತಿದ್ದ ಹಾಗೆಯೇ ಸುಟ್ಟು ಬೂದಿಯಾಗುತ್ತದೆ. ಈ ರಕ್ಷಣೆಯಿಂದಲೇ ಭೂಮಿಗೆ ಇನ್ನೂ ತನಕ ಸೌರವ್ಯೂಹದ ಯಾವುದೇ ವಸ್ತುಗಳಿಂದ ಹಾನಿಯಾಗಿಲ್ಲ. 

Advertisement

ಆದರೆ ಒಂದು ವರ್ಷದ ಹಿಂದೆ ತಾರಾಮಂಡಲದಿಂದ ನಮ್ಮ ಸೌರಮಂಡಲಕ್ಕೆ ಒಂದು ಹೊಸದಾದ ವಸ್ತುವಿನ ಪ್ರವೇಶವಾಗಿದೆ. ಅಂದು ಅಕ್ಟೋಬರ್‌ ಹದಿನೇಳನೆಯ ತಾರೀಖು 2017ನೇ ಇಸ್ವಿ. ಮೊದಲ ಬಾರಿಗೆ ಖಗೋಳಶಾಸ್ತ್ರಜ್ಞ ಹಾಗೂ ಭೌತಶಾಸ್ತ್ರಜ್ಞ ರಾಬರ್ಟ್‌ ವೇರಿಕ್‌ ಅವರ ಕಣ್ಣಿಗೆ ಪಾನ್‌-ಸ್ಟಾರ್ಸ್‌ ದೂರದರ್ಶಕದ ಮುಖಾಂತರ ಪ್ರತಿ ಗಂಟೆಗೆ 1,56,428 ಕಿಮೀ ವೇಗದಲ್ಲಿ ಭೂಮಿಯ ಕಡೆ ಬರುತ್ತಿರುವ ಒಂದು ಆಕಾಶಕಾಯ ಕಂಡಬಂತು. ನಂತರ ಅದೇ ವಾರದಲ್ಲಿ ಹಲವಾರು ಖಗೋಳಶಾಸ್ತ್ರಜ್ಞರು, ಪ್ರಯೋಗಾಲಯಗಳು ಸುಮಾರು 34 ಬಾರಿ ಆ ಬಾಹ್ಯಾಕಾಶದ ಅವಶೇಷವನ್ನು ಪತ್ತೆ ಮಾಡಿದರು. ಭೂಮಿಯಿಂದ ಚಂದ್ರನ ದೂರ ಎಷ್ಟಿದೆಯೋ ಅದರ 85 ಪಟ್ಟು ದೂರದಿಂದ ಆ ವಸ್ತು ಹಾದುಹೋಗುವುದನ್ನು ವಿಜ್ಞಾನಿಗಳು ಖಚಿತಪಡಿಸಿದರು. ಇದು ನಮ್ಮ ಆಧುನಿಕ ಇತಿಹಾಸದಲ್ಲಿ ಕಂಡ ಮೊದಲ ಅಂತರ ನಕ್ಷತ್ರೀಯ ವಸ್ತುವಾಗಿತ್ತು. ಅದರ ವೇಗ ಹಾಗೂ ಚಲನವಲನಗಳು ಜಗತ್ತಿನ ಖಗೋಳಶಾಸ್ತ್ರಜ್ಞರನ್ನು ದಿಗ್ಭ್ರಮೆಗೊಳಿಸಿತ್ತು. ಆ ಅಪರಿಚಿತ ವಸ್ತುವಿಗೆ ಹವಾಯಿ ವಿಜ್ಞಾನಿಗಳು “ಔಮುವಾಮುವಾ’ ಎಂದು ಹೆಸರಿಟ್ಟಿದ್ದಾರೆ. 

ಹವಾಯಿಯನ್‌ನಲ್ಲಿ “ಔಮುವಾಮುವಾ’ ಪದಕ್ಕೆ “ಶೋಧಿಸು’ ಅಥವಾ “ಸಂದೇಶಕಾರ’ ಎಂಬರ್ಥ. ಅಂದರೆ ದೂರದ ಯಾವುದೋ ಒಂದು ನಕ್ಷತ್ರಲೋಕದಿಂದ ನಮ್ಮ ಜೀವಸಂಕುಲವನ್ನು ಅಧ್ಯಯನ ಮಾಡಲು ಬಂದಂತಹ ಗಗನನೌಕೆ ಎಂಬ ಅರ್ಥವನ್ನು ಕೊಡುತ್ತದೆ ಈ ಪದ.

ಔಮುವಾಮುವಾ ವಿಜ್ಞಾನಿಗಳ ಅಕ್ಷಿಪಟಲವನ್ನು ಸ್ಪರ್ಶಿಸಿದಾಗಿನಿಂದ ಅವರ ಬಣದಲ್ಲಿ ಇಬ್ಭಾಗವಾಗಿದೆ. ಒಂದು ಬಳಗ ಹೇಳುತ್ತಿದೆ ಇದು ಕ್ಷುದ್ರಗ್ರಹ ಎಂದು, ಇನ್ನೊಂದು ಇದು ಅನ್ಯಲೋಕದ ಜೀವಿಗಳ ಗಗನನೌಕೆ ಇರಬಹುದು ಅಥವಾ ಅವರು ಕಳಿಸಿರಬಹು ದಾದ ತನಿಖಾ ದರ್ಶಕವಿರಬಹುದು ಎಂದು. ಮೊದಲನೆಯದು ಸರಿಯಾಗಿದ್ದರೆ ಇದನ್ನು ಲೆಕ್ಕಿಸದೇ ಇಲ್ಲಿಗೇ ಬಿಡಬಹುದು ಆದರೆ ಎರಡನೆಯ ಸಿದ್ಧಾಂತ ಸರಿಯಾಗಿದ್ದರೆ ಇದು ಕುತೂಹಲ ಜಗತ್ತಿನ ಬಾಗಿಲನ್ನೇ ತೆರೆದಂತಿದೆ, ಕುತೂಹಲದ ಜೊತೆಗೆ ಭಯವನ್ನು ಕೂಡ! 

ಅಂತರಿಕ್ಷವನ್ನು ಅಧ್ಯಯನ ಮಾಡುವವರಿಗೆ ಆಕಾಶಕಾಯಗಳ ಚಲನವಲನ ಹೊಸತೇನಲ್ಲ. ಆದರೆ ಔಮುವಾಮುವಾ ಸಂಶೋಧನೆ ಮಾತ್ರ ವಿಶೇಷವಾಗಿತ್ತು. ಮನೆಯ ಪಕ್ಕ ಯಾರಾದರೂ ಅಪರಿಚಿತರು ಓಡಾಡುತ್ತಿರುವುದು ಕಂಡರೆ ಮಾಡುತ್ತಿರುವ ಕೆಲಸವನ್ನು ಬಿಟ್ಟು ಹೇಗೆ ನಾವು ಆ ಕಡೆ ಲಕ್ಷ ಕೊಡುತ್ತೇವೆಯೋ ಹಾಗೆಯೇ ಜಗತ್ತಿನ ಎಲ್ಲ ಖಗೋಳಶಾಸ್ತ್ರಜ್ಞರು ಕೈಯಲ್ಲಿದ್ದ ತಮ್ಮ ಕೆಲಸವನ್ನು ಬಿಟ್ಟು ಈ ಹೊಸ ಕಾಯವನ್ನು ಕೆಲ ತಿಂಗಳುಗಳ ಕಾಲ ಅಧ್ಯಯನ ಮಾಡಿದರು. ಇದು ಎಲ್ಲಿಂದ ಬಂದಿರಬಹುದು? ಇದರ ಉದ್ಭವ ಹೇಗಾಗಿರಬಹುದು? ಸೌರಮಂಡಲಕ್ಕೇ ಯಾಕೆ ಬಂತು? ಹೀಗೆ ಲಕ್ಷಾಂತರ ಪ್ರಶ್ನೆಗಳು. ನಮ್ಮ ಸೌರಮಂಡಲದಲ್ಲಿ ಹೊರಗಡೆಯಿಂದ ಬರಬಹುದಾದ ಯಾವುದೇ ಕಾಯವನ್ನು ಪತ್ತೆ ಮಾಡಲು ನಮ್ಮ ವಿಜ್ಞಾನಿಗಳು ಕಳೆದ ಮೂವತ್ತು ನಲವತ್ತು-ಐವತ್ತು ವರ್ಷಗಳಿಂದ ಕಾಯುತ್ತಿ¨ªಾರೆ. ಆದರೆ ಈ ತರಹದ ಒಂದು ಸಂಭ್ರಮಿಸುವ ಸನ್ನಿವೇಶ ಬಂದಿದ್ದು ಇದೇ ಮೊದಲು ಬಾರಿ. ಸೌರಮಂಡಲವೇ ಎಷ್ಟು ದೊಡ್ಡ, ಅಂದರೆ ಸೂರ್ಯನ ಪಕ್ಕದ ಯಾವುದೇ ಹತ್ತಿರದ ನಕ್ಷತ್ರದಿಂದ ಒಂದು ಪಾರ್ಸಲ್‌ ತರಲು ಕೂಡ 50 ಸಾವಿರ ವರ್ಷಗಳು ಬೇಕು. ಅಂದರೆ ಔಮುವಾಮು 50 ಸಾವಿರ ವರ್ಷಕ್ಕೂ ಹೆಚ್ಚು ಕಾಲದಿಂದ ಚಲಿಸುತ್ತಾ ಸೌರಮಂಡಲವನ್ನು ಒಳಹೊಕ್ಕಿ ಇಷ್ಟು ದೂರ ಬಂದಿದೆ. ಅದರ ಪಯಣ ಎಲ್ಲಿಯೋ ಗೊತ್ತಿಲ್ಲ. ಆದರೆ ಇಲ್ಲಿಂದ ಸೌರಮಂಡಲವನ್ನು ದಾಟಲು ಅದಕ್ಕೆ ಕನಿಷ್ಠ ಇಪ್ಪತ್ತು ಸಾವಿರ ವರ್ಷಗಳಾದರೂ ಬೇಕು. ವಿಜ್ಞಾನಿಗಳು ಅದನ್ನು ಅಧ್ಯಯನ ಮಾಡಿದಾಗ ಕಂಡುಬಂದ ವಿಷಯವೆಂದರೆ ಅದರ ಗಾತ್ರ ಅರ್ಧ ಕಿಮೀಗಿಂತ ಹೆಚ್ಚು ಉದ್ದವಿದೆ. ಮೂಲದ ವಿಷಯದಲ್ಲಿರುವ ಭಿನ್ನಾಭಿಪ್ರಾಯವೇ ಇದರಲ್ಲಿ ಕೂಡ ಇದೆ. ಒಂದೊಂದು ವಿಜ್ಞಾನಿಯ ಒಂದೊಂದು ಲೆಕ್ಕಾಚಾರ. ಅದೇನೆ ಇರಲಿ ಎಲ್ಲರೂ ಗ್ರಹಿಸಿದ ಒಂದು ವಿಶಿಷ್ಟತೆ ಅಂದರೆ ಉದ್ದ ಹಾಗೂ ಅಗಲದ ಅನುಪಾತ. ನಮ್ಮ ಸೌರಮಂಡಲದ ಯಾವುದೇ ಕಾಯದ ಉದ್ದ ಹಾಗೂ ಅಗಲದ ಅನುಪಾತ 5:1 ಗಿಂತ ಜಾಸ್ತಿ ಇಲ್ಲ. ಆದರೆ ಔಮುವಾಮುವಾದ ಉದ್ದ ಹಾಗೂ ಅಗಲದ ಅನುಪಾತ 10:1ರಷ್ಟಿದೆ. ಇಂತಹ ವಿಚಿತ್ರ ವಿನ್ಯಾಸವನ್ನು ನಾವು ಮೊದಲು ಕಂಡಿದ್ದು, ಇದು ವಿಜ್ಞಾನಿಗಳನ್ನು ಬೆರಗುಗೊಳಿಸಿದ್ದು. ಹೇಗಪ್ಪಾ ಇದು ಸಾಧ್ಯ? ನೈಸರ್ಗಿಕವಾದ ಯಾವುದೇ ಅಂತರಿಕ್ಷ ಕಾಯವಾದರೆ ಇದು ಶಕ್ಯವೇ ಇರಲಿಲ್ಲ, ಹಾಗಿದ್ದರೆ ಇದು ಕೃತಕವೇ ಆಗಿರಬೇಕು ಎನ್ನುವ ಅಭಿಪ್ರಾಯ ಮೂಡಿತು. ಕೃತಕವಾಗಿದ್ದರೆ ಯಾರು ತಯಾರಿಸಿರಬಹುದು? 

Advertisement

ಇದನ್ನು ಅರಿಯಲು ವಿಜ್ಞಾನಿಗಳು ಪ್ರತಿಫ‌ಲನ ಪರೀಕ್ಷೆ ನಡೆಸಿದರು. ಪ್ರತಿಫ‌ಲನ ಪರೀಕ್ಷೆಯ ಫ‌ಲಿತಾಂಶ ಏನು ಹೇಳುತ್ತದೆ?ಔಮುವಾಮುವಾ ಕೆಂಪು ಬಣ್ಣವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕೃತಕವಾಗಿದ್ದರೆ ಲೋಹವಾಗಿರಬೇಕು, ಇಲ್ಲವೇ ಕಾರ್ಬನ್‌ ಮೂಲವಾಗಿರಬೇಕು. ಕೆಲವರು ಇದನ್ನು ಮಂಜುಗಡ್ಡೆ ಹಾಗೂ ಧೂಳು ಮುತ್ತಿದೆ ಎನ್ನುತ್ತಿ¨ªಾರೆ. ಹಾಗಿದ್ದರೆ ವಿಕಿರಣ ಪರೀಕ್ಷೆ ನಡೆಸಬಹುದಲ್ಲ? ಅದನ್ನೂ ಮಾಡಿ ನೋಡಿದರು. ಅದರ ಪ್ರತಿಫ‌ಲನದ ಸಾಮರ್ಥ್ಯ ಮೊಬೈಲ್‌ಗಿಂತ ಕಡಿಮೆ. ಈ ಮಾಹಿತಿಯನ್ನು ವಿಶ್ಲೇಷಣೆ ಮಾಡಿದರೆ ಬಹಳ ತೆಳ್ಳಗಿನ ಲೋಹದ ಹೊರ ಕವಚ ಇರಬಹುದೇನೋ? ಹೊರಗಡೆ ಹೇಗಿದೆ ಎನ್ನುವುದು ಇಷ್ಟು ರಹಸ್ಯವಾಗಿರುವಾಗ ಒಳಗಡೆ ಏನಿದೆ? ಯಾರಿ¨ªಾರೆ ಎನ್ನುವುದು ಇನ್ನೂ ಹೆಚ್ಚು ಕುತೂಹಲ ಕೆರಳಿಸುವಂತಹದ್ದು. ಅದಕ್ಕಾಗಿ ರೇಡಿಯೋ ಟೆÓr… ಮಾಡಿದರು. ಔಮುವಾಮುವಾ ಸಂಪೂರ್ಣ ಮೌನಿ, ಒಂದಿಷ್ಟು ಶಬ್ದವಿಲ್ಲ. ನಂತರ ವಿಜ್ಞಾನಿಗಳು ಔಮುವಾಮುವಾದ ಹೊಳಪನ್ನು ಆಳವಾಗಿ ಅಧ್ಯಯನ ಮಾಡಿದರು. ಆಶ್ಚರ್ಯಕರ ವಿಷಯ ಅಂದರೆ ಅದರ ಹೊಳಪಿನ ವೈಪರೀತ್ಯಗಳು ಬಹಳ. ಇದು ಅದರ ಆಕಾರ ಹಾಗೂ ಚಲನವಲನದ ಕುರಿತು ಹೇಳುತ್ತದೆ. ಹೊಳಪಿನ ವೈಪರೀತ್ಯ ಕೇವಲ ಒಂದೇ ದಿಕ್ಕಿನ ವೇಗವನ್ನು ಸೂಚಿಸದೆ ಹಲವಾರು ರೀತಿಯ ಚಲನವಲನದ ಬಗ್ಗೆ ಹೇಳುತ್ತಿದೆ. ಗಮನಿಸಬೇಕಾದ ವಿಷಯವೆಂದರೆ ಅಧ್ಯಯನದ ನಡುವೆ ಔಮುವಾಮುವಾದ ವೇಗ ಕಡಿಮೆಯಾಗಿಲ್ಲ. ನಿರಂತರವಾಗಿ ಅದೇ ವೇಗದಲ್ಲಿ ಚಲಿಸುತ್ತಿದೆ. ಕ್ಷುದ್ರಗ್ರಹ ಅಥವಾ ಧೂಮಕೇತು ಆಗಿದ್ದರೆ ಅದರೆ ವೇಗದಲ್ಲಿ ಬದಲಾವಣೆ ಆಗಬೇಕಿತ್ತು. ಆ ಲಕ್ಷಣಗಳು ಕಾಣುತ್ತಿಲ್ಲ. ಹೇಗೆ ಇದು ತನ್ನ ವೇಗವನ್ನು ಕಾಪಾಡಿಕೊಂಡು ಬರುತ್ತಿದೆ? ಇದೊಂದು ಆಕಾಶಕಾಯ ಎನ್ನುವವರು ಇದನ್ನು ಉತ್ತರಿಸಲು ಅಸಮರ್ಥರು. ಔಮುವಾಮುವಾದ ಇನ್ನೊಂದು ಚರ್ಚಿಸಲೇಬೇಕಾದ ಗುಣ ಅಂದರೆ ಸೌರಮಂಡಲದ ಎಲ್ಲ ಕಾಯಗಳಿಗಿಂತ ಇದರ ಕಕ್ಷೆ ಬೇರೆಯೇ ಇದೆ. ಇದು ಔಮುವಾಮುವಾ ನಮ್ಮ ನಕ್ಷತ್ರದ್ದಲ್ಲ ಎನ್ನುವುದನ್ನು ಖಾತ್ರಿಪಡಿಸುತ್ತದೆ. ಬೇರೆಯೇ ಕಕ್ಷೆ , ವೇಗ ನಿರಂತರ, ಹೊಳಪಿನ ವೈಪರೀತ್ಯ, ಉದ್ದ ಅಗಲದ ಅನುಪಾತ ಅಸಹಜ ಇವೆಲ್ಲ ಇದೊಂದು ನೈಸರ್ಗಿಕವಾದ ಆಕಾಶಕಾಯವಲ್ಲ ಎನ್ನುವುದನ್ನು ಸೂಚಿಸುತ್ತದೆ. ಹಾಗಿದ್ದರೆ ಇನ್ನೊಂದು ನಕ್ಷತ್ರದಿಂದ ಜೀವಿಗಳು ಸೌರಮಂಡಲವನ್ನು ಅಧ್ಯಯನ ಮಾಡಲು ಬಂದಿದ್ದಾರೆಯೇ? ಹಾರ್ವರ್ಡ್‌ ವಿಜ್ಞಾನಿಗಳು ಪ್ರಕಟಿಸಿದ ಸಂಶೋಧನಾ ವರದಿ ಇದನ್ನು ಎತ್ತಿ ಹೇಳುತ್ತದೆ.

ಔಮುವಾಮುವಾದ ವೇಗವರ್ಧನೆಯು ಗುರುತ್ವಾಕರ್ಷಣೆಯಿಂದ ಹೊರತಾಗಿದೆ. ಬೆಳಕಿನ ಕಾಂತೀಯ ಒತ್ತಡದ ಮೇಲೆ ಆಧಾರವಾಗಿದೆ. ಅಂದರೆ ಕೇವಲ ಬೆಳಕಿನಿಂದಲೇ ಔಮುವಾಮುವಾ ಚಲಿಸುತ್ತಿದೆಯೇ? ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರ ತಲುಪುವ ಗ್ಯಾಲಕ್ಟಿಕ್‌ ದೂರವನ್ನು ತಲುಪಲು ಇದರಿಂದ ಮಾತ್ರ ಸಾಧ್ಯ. ಇಂತಹ ಒಂದು ತಂತ್ರಜ್ಞಾನ ಆ ನಕ್ಷತ್ರದಲ್ಲಿ ಈಗಾಗಲೇ ಇರಬಹುದೇ? ಇಷ್ಟು ದೂರ, ಒಂದೇ ವೇಗದಲ್ಲಿ, ಹೊರ ಕವಚವು ಸವೆಯದಂತೆ ಕ್ರಮಿಸುವುದು ನಮ್ಮ ಇವತ್ತಿನ ತಂತ್ರಜ್ಞಾನದೊಂದಿಗೆ ಕಲ್ಪನೆಗೂ ಮೀರಿದ್ದು. ಹಾಗಿದ್ದರೆ ಅಸಹಜವಾದ ಉದ್ದ ಅಗಲದ ಅನುಪಾತ, ತೆಳ್ಳಗಿನ ಹೊರ ಪದರು, ವಿನ್ಯಾಸ, ನಿರ್ಮಾಣಕ್ಕೆ ಬಳಸಿದ ವಸ್ತು ಇವೆಲ್ಲ ಎಷ್ಟೋ ಲಕ್ಷ ವರ್ಷಗಳು, ಕೋಟಿ ಕೋಟಿ ಮೈಲುಗಳು, ಅತ್ಯಂತ ವೇಗದಲ್ಲಿ ಅಂತರಿಕ್ಷಯಾನ ಕ್ರಮಿಸಲು ಪೂರಕವಾಗಿರಬಹುದು. ಹಾರ್ವರ್ಡ್‌ ವಿಜ್ಞಾನಿಗಳು ಇದನ್ನು ಅನ್ಯಲೋಕದವರು ಕಳುಹಿಸಿದ ತನಿಖಾ ದರ್ಶಕ ಎಂದು ಊಹಿಸಿ¨ªಾರೆ. ಪರಿಪೂರ್ಣವಾದ ಅಂತರಿಕ್ಷ ನೌಕೆ ಸೌರಮಂಡಲದ ಹೊರಗಿರಬಹುದು, ಅಲ್ಲಿಂದ ಈ ಸಾಧನವನ್ನು ಸಂಪೂರ್ಣ ಸೌರಮಂಡಲದ ಅಧ್ಯಯನಕ್ಕೆ, ವಿಶೇಷವಾಗಿ ಪೃಥ್ವಿಯ ಪರಿಶೀಲನೆಗೆ ಕಳುಹಿಸಿರಬಹುದಲ್ಲ! ಇವತ್ತು ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಶಕ್ಯವಿಲ್ಲ, ನಮ್ಮ ಎಲ್ಲ ದೂರದರ್ಶಕದ ಮಿತಿಯನ್ನು ಪಾರು ಮಾಡಿ ಹೋಗಿದೆ. ನಾವು ಅದನ್ನು ಗುರುತಿಸಿದ್ದು ಅದಕ್ಕೆ ಗೊತ್ತಾಗಿರಬಹುದೇ? ಹಾರ್ವರ್ಡ್‌ ಖಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಅವಿ ಲೋಯಬ್‌ ಹೇಳುವ ಹಾಗೆ ನಮ್ಮ ಗ್ಯಾಲಕ್ಸಿಯ ಕಾಲು ಭಾಗ ನಕ್ಷತ್ರಗಳಲ್ಲಿ ಭೂಮಿಯ ತರಹದ್ದೇ ಜೀವಿಗಳು ವಾಸಿಸಬಹುದಾದ ಗ್ರಹಗಳು ಇವೆ. ಹೀಗಾಗಿ ಅಲ್ಲಿ ಜೀವಿಗಳು ಇಲ್ಲ ಎನ್ನುವುದು ಸಾಧ್ಯವಿಲ್ಲ. 

ಔಮುವಾಮುವಾ ಇಂದು ಹೊಸ ಅಧ್ಯಾಯವನ್ನು ಶುರುಮಾಡಿದೆ. ಗ್ರಹಗಳಂತೆ, ನಕ್ಷತ್ರಗಳು ಕೂಡ ಒಂದಕ್ಕೊಂದು ಸಂಪರ್ಕ ಮಾಡಬಹುದಾಗಿದೆ. ನಕ್ಷತ್ರಗಳು ತಮ್ಮಲ್ಲಿ ತಾವೇ ವಿವಿಕ್ತ ಸ್ಥಳವಲ್ಲ. ಮನುಷ್ಯನಿಗೆ ಹಾರುವುದೇ ಒಂದು ದೊಡ್ಡ ವಿಷಯವಾಗಿತ್ತು, ಇಂದು ಮಂಗಳಯಾನ ಮುಗಿಸಿದ್ದಾನೆ, ಚಂದ್ರನಲ್ಲಿ ಮಾನವನ ಪಾದಾರ್ಪಣೆಯಾಗಿದೆ. ನಮಗೆ ಇಂದು ರಾಕೆಟ್‌ ಎನ್ನುವುದು ಹೊಸ ತಂತ್ರಜ್ಞಾನ ಅಲ್ಲವೇ ಅಲ್ಲ, ಹೀಗೆ ಆ ನಕ್ಷತ್ರದ ಪೃಥ್ವಿಯ ತಂತ್ರಜ್ಞಾನ ಬೆಳಕಿನಿಂದಲೇ ಚಲಿಸಬಹುದಾದ ಅಂತರಿಕ್ಷ ನೌಕೆಯನ್ನು ಅನ್ವೇಷಣೆ ಮಾಡಿರಬಹುದು. 2010ರಲ್ಲಿ ಇಂತಹದ್ದೇ ಒಂದು ತಂತ್ರಜ್ಞಾನವನ್ನು ಇಕ್ರೋಸ್‌ ಪ್ರಾಜೆಕ್ಟ್ ಮೂಲಕ ಜಗತ್ತಿಗೆ ಪರಿಚಯಿಸಲಾಗಿತ್ತು. ಏನೇ ಇರಲಿ ಔಮುವಾಮುವಾ ನಮ್ಮ ಕಣ್ಣಿಗೆ ಬಿದ್ದಿದ್ದು ನಮ್ಮನ್ನು ನಾವು ಅಧ್ಯಯನ ಮಾಡುವ ಹಾಗೆ ಮಾಡಿದೆ. ನಾವು ಬೆಳವಣಿಗೆಯ ಯಾವ ವೇಗ, ಹಂತ ಹಾಗೂ ರೂಪದಲ್ಲಿದೇವೆ ಎನ್ನುವುದು ಹೊರಗಿನ ಜಗತ್ತನ್ನು ಕಂಡಾಗಲೇ. ಇವತ್ತು ಭೂಮಂಡಲದ ಕೂಪ ಮಂಡೂಕ ನಾವಾಗಿದ್ದೇವೆಯೇ? ನಮ್ಮನ್ನು ಹೊರ ಜಗತ್ತಿನವರು ವೀಕ್ಷಿಸುತ್ತಿ¨ªಾರೆಯೇ? ಅದೆಷ್ಟು ದೂರದಿಂದ ನಮ್ಮ ನಡವಳಿಕೆಯನ್ನು ಗುರುತಿಸಬಲ್ಲರು? ಮುಂದೆ ಇಬ್ಬರ ನಡುವೆ ಸಂಪರ್ಕ ಏರ್ಪಡಬಹುದೇ? ಎಷ್ಟೊಂದು ಪ್ರಶ್ನೆಗಳು. ಇಷ್ಟಕ್ಕೂ ಔಮುವಾಮುವಾ ಎಲ್ಲಿಂದ ಬಂದಿದ್ದು? ಅಲ್ಲಿ ಇದ್ದವರು ಯಾರು? ನಮ್ಮ ಸುತ್ತ ಇನ್ನೆಷ್ಟು ಈ ತರಹದ ಅನ್ಯಜೀವಿಗಳಿರಬಹುದು? ಇದನ್ನೆಲ್ಲ ಉತ್ತರಿಸಲು, ಖಗೋಳಶಾಸ್ತ್ರಜ್ಞರು ಅವರ ಅಧ್ಯಯನದಲ್ಲಿ ಇನ್ನೂ ಹೆಚ್ಚು ಚುರುಕಾಗಬೇಕು! 

ವಿಕ್ರಮ್‌ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next