Advertisement

ಗೋರಕ್ಷಣೆಯ ಹಿಂಸಾಚಾರಗಳ ಬಿಸಿ ಮೋದಿಗೂ ತಟ್ಟಿದೆ: ಶಿವಸೇನೆ

10:35 AM Jul 20, 2017 | Team Udayavani |

ಮುಂಬಯಿ: ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಬೆಳೆಯತ್ತಿರುವ ಹಿಂಸಾಚಾರದ ಘಟನೆಗಳಿಗೆ ಶಿವಸೇನೆಯು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇತ್ತೀಚೆಗೆ ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆದಾಗ‌, ಈ ಸ್ವಯಂಘೋಷಿತ ಗೋರಕ್ಷಕರು ಎಲ್ಲಿಗೆ ಹೋಗಿದ್ದರು ? ಎಂದು ಕೇಳಿದೆ.

Advertisement

ಗೋರಕ್ಷಣೆಯ ಹೆಸರಿನಲ್ಲಿ ಆರಂಭವಾದ ಈ ಹಿಂಸಾಚಾರಗಳ ಬಿಸಿಯು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ತಟ್ಟಿದೆ ಎಂದು ಆಡಳಿತಾರೂಢ ಎನ್‌ಡಿಎ ಮಿತ್ರಪಕ್ಷ ಶಿವಸೇನೆಯು ಬುಧವಾರ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.

ಪಾಕಿಸ್ಥಾನ ಕೂಡ ರಾಷ್ಟ್ರವನ್ನು ಗೆೋರಕ್ಷಣೆಯ ಹೆಸರಿನಲ್ಲಿ ವಿಭಜಿಸಲು ಬಯಸುತ್ತಿದೆ ಎಂದು ಪಕ್ಷ ನುಡಿದಿದೆ.

ಗೋರಕ್ಷಣೆಯ ಹೆಸರಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಇತ್ತೀಚಿನ ಹಿಂಸಾಚಾರದ ಘಟನೆಗಳ ಹಿನ್ನೆಲೆಯಲ್ಲಿ  ಶಿವಸೇನೆಯಿಂದ ಈ ಹೇಳಿಕೆ ಹೊರಬಂದಿರುವುದಾಗಿದೆ.

ರಾಷ್ಟ್ರದಾದ್ಯಂತ ಗೋರಕ್ಷಕರು ಸೃಷ್ಟಿಸಿರುವ  ದಾಂಧಲೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಟೀಕೆ ಎದುರಿಸಬೇಕಾಯಿತು. ಪ್ರಧಾನಿ ಅವರ ಕಟು ಎಚ್ಚರಿಕೆಯ ಹೊರತಾಗಿಯೂ ಹಿಂಸೆಯ ಘಟನೆಗಳು ನಿಲ್ಲುತ್ತಿಲ್ಲ ಎಂದು ಶಿವಸೇನೆ ಸಂಪಾದಕೀಯದಲ್ಲಿ ನುಡಿದಿದೆ.

Advertisement

ದೇಶದಾದ್ಯಂತ ನಿರಂತರವಾಗಿ ಮುಸಲ್ಮಾನರ ಮೇಲೆ ಗೋಮಾಂಸ ಸಾಗಣೆಯ ಸಂಶಯದ ಮೇರೆಗೆ ದಾಳಿ ನಡೆಸಿ, ಅವರ ಪ್ರಾಣ ತೆಗೆದುಕೊಳ್ಳಲಾಗುತ್ತಿದೆ. ಜನರು ಇದನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅದು ತಿಳಿಸಿದೆ.
ಭಾರತದಲ್ಲಿ ಜನರು ಗೋರಕ್ಷಣೆಯ ಹೆಸರಿನಲ್ಲಿ ವಿಭಜನೆಯಾಗಬೇಕೆಂದು ಪಾಕಿಸ್ಥಾನ ಬಯಸುತ್ತಿದೆ. ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿರುವ ಸಮಯದಲ್ಲಿ ದೇಶದ ಆಂತರಿಕ ಜಗಳವು ರಾಷ್ಟ್ರದ ಏಕತೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ಶಿವಸೇನೆ ಅಭಿಪ್ರಾಯವಾಗಿದೆ.

ಪ್ರಧಾನಮಂತ್ರಿ ಮೋದಿ ಅವರ  ಗೃಹ ರಾಜ್ಯ ಗುಜರಾತ್‌ನಲ್ಲೂ ಗೋರಕ್ಷಕರು ಹಸುವಿನ ರಕ್ಷಣೆಯ ಹೆಸರಿನಲ್ಲಿ ಜನರನ್ನು ನಿಷ್ಕರುಣೆಯಿಂದ ಕೊಂದಿದ್ದಾರೆ. ಆದರೆ, ಆ ರಾಜ್ಯದ ಜನರು ಅಮರನಾಥ ಯಾತ್ರೆಯ ವೇಳೆ ಭಯೋತ್ಪಾದಕರಿಂದ  ಕೊಲ್ಲಲ್ಪಟ್ಟಾಗ, ಅವರು (ಗೋರಕ್ಷಕರು) ಎಲ್ಲಿಗೆ ಹೋಗಿದ್ದರು ?  ಎಂದು ಶಿವಸೇನೆ ತನ್ನ ಮುಖವಾಣಿಯ ಸಂಪಾದಕೀಯದಲ್ಲಿ ಕೇಳಿದೆ.

ಗೋರಕ್ಷಕರು ಪ್ರತಿಯೊಂದು ಮಟ್ಟದಲ್ಲೂ ಸಾಹಸವನ್ನು ಪ್ರದರ್ಶಿಸಬೇಕು. ಧರ್ಮದ ಹೆಸರಿನಲ್ಲಿ ಗೋರಕ್ಷಣೆ ಆವಶ್ಯಕ ಎಂದಾದರೆ, ಧರ್ಮದ ಹೆಸರಿನಲ್ಲಿ ರಾಷ್ಟ್ರದ ರಕ್ಷಣೆಯೂ ಅವಶ್ಯಕವಾಗುತ್ತದೆ ಎಂದು ಪಕ್ಷ ಪ್ರತಿಪಾದಿಸಿದೆ.

ಗೋರಕ್ಷಕರು ಪ್ರಧಾನಿಯವರ ದಾರಿಗೆ ಮುಳುವಾಗು ತ್ತಿದ್ದಾರೆ. ಅವರ ಎಚ್ಚರಿಕೆಯ ಹೊರತಾಗಿಯೂ ಇವರು ತಮ್ಮ ಕೈಗೆಲಸವನ್ನು ಬಿಡುತ್ತಿಲ್ಲ ಎಂದು ಶಿವಸೇನೆ ನುಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next