Advertisement
ಸದನದ ಸದಸ್ಯರೇ, “ನನಗೆ ಮೂವತ್ತು ಕೋಟಿ ರೂ. ಆಫರ್ ಬಂದಿತ್ತು, ನನ್ನ ಮನೆ ಬಾಗಿಲಿಗೆ ಐದು ಕೋಟಿ ರೂ. ತಂದಿಟ್ಟುಹೋಗಿದ್ದರು’ ಎಂದು ಹೇಳಿದ್ದು, ಮತ್ತೂಬ್ಬ ಸದಸ್ಯರು, “ನಮ್ಮದೇ ಪಕ್ಷದ ಶಾಸಕರೊಬ್ಬರು ಸಾಲ ತೀರಿಸಬೇಕು ಎಂದು ಹಣಕ್ಕಾಗಿ ತನ್ನ ಬಳಿ ಬಂದಿದ್ದರು. ಬಿಜೆಪಿಯವರು ನನಗೆ ಇಂತಿಷ್ಟು ಕೋಟಿ ರೂ. ಆಫರ್ ಮಾಡಿದ್ದಾರೆ ಎಂದು ತಿಳಿಸಿದ್ದರು. ನನ್ನ ತಂದೆ-ತಾಯಿ, ಹೆಂಡತಿ-ಮಕ್ಕಳ ಮೇಲಾಣೆ ಇದು ಸತ್ಯ’ ಎಂದು ಹೇಳಿದ್ದು ಕಲಾಪದಲ್ಲಿ ದಾಖಲೆಯೂ ಆಗಿ ಹೋಯಿತು.
Related Articles
Advertisement
ಟೇಪ್ ಹಗರಣ: ರಾಜ್ಯದಲ್ಲಿ ಶಾಸಕರನ್ನು ಸೆಳೆಯುವುದು ಹೊಸದಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೂ ಮುನ್ನ 1983 ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಉರುಳಿಸಲು ವೀರಪ್ಪ ಮೊಯ್ಲಿ ಅವರು ಸಿ.ಬೈರೇಗೌಡರಿಗೆ ಹಣ ನೀಡಿ ಕಾಂಗ್ರೆಸ್‌ಗೆ ಸೆಳೆಯಲು ಯತ್ನಿಸಿದ್ದ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಇತ್ತೀಚೆಗೆ ಯಡಿಯೂರಪ್ಪ ಅವರು ಗುರುಮಿಟ್ಕಲ್ ಶಾಸಕ ನಾಗನಗೌಡ ಕುಂದಕೂರ್ ಸೆಳೆಯಲು ಅವರ ಪುತ್ರನ ಮೂಲಕ ಯತ್ನಿಸಿದ್ದರು ಎಂಬ ಆಡಿಯೋ ಸಹ ದೊಡ್ಡ ಸದ್ದು ಮಾಡಿತ್ತು. ಸದನದಲ್ಲೂ ಇದು ಪ್ರತಿಧ್ವನಿಸಿತ್ತು. ಆದರೆ, ಈ ಬಾರಿ ಸದನದ ಸದಸ್ಯರೇ ಕೋಟಿ ಕೋಟಿ ರೂ. ಆಫರ್ ಬಗ್ಗೆ ಸದನದಲ್ಲಿ ಮಾತನಾಡುತ್ತಿದ್ದಾರೆ. ಅದಕ್ಕೆ ಆಣೆ-ಪ್ರಮಾಣದ ಸಾಕ್ಷಿ ಒದಗಿಸುತ್ತಿದ್ದಾರೆ.
ಆಂಧ್ರದಲ್ಲೂ ಆಗಿತ್ತು: ಹಿಂದೊಮ್ಮೆ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಎನ್.ಟಿ.ರಾಮರಾವ್ ಅವರು 1984 ರಲ್ಲಿ ಹೃದಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾಗ ಅವರದ್ದೇ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ನಾದೆಂಡ್ಲ ಭಾಸ್ಕರ್‌ರಾವ್ ಅವರು ಬಂಡಾಯ ಎದ್ದು ಶಾಸಕರ ಬಲ ತಮಗಿದೆ ಎಂದು ರಾಜ್ಯಪಾಲರಿಗೆ ಪತ್ರ ಸಲ್ಲಿಸಿ ಮುಖ್ಯಮಂತ್ರಿಯೂ ಆಗಿದ್ದರು. ಆಗ ರಾಮರಾವ್ ಅವರು “ಚೈತನ್ಯರಥಂ’ಯಾತ್ರೆ ನಡೆಸಿ ಎಲ್ಲ ಪಕ್ಷಗಳ ಬೆಂಬಲ ಪಡೆದು ಹೋರಾಟ ಮಾಡಿ ಮತ್ತೆ ಮುಖ್ಯಮಂತ್ರಿಯಾಗಿದ್ದರು. ಆದರೆ, ಕರ್ನಾಟಕದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಮೆರಿಕಕ್ಕೆ ತೆರಳಿದ್ದಾಗ ತಮ್ಮ ಹಾಗೂ ಮೈತ್ರಿ ಪಕ್ಷದ ನಾಯಕರ ವಿಶ್ವಾಸಾರ್ಹ ಶಾಸಕರೇ ಸೈಲೆಂಟ್ ಆಪರೇಷನ್‌ಗೊಳಗಾಗಿ ಮುಂಬೈ ವಿಶೇಷ ವಿಮಾನ ಹತ್ತಿ ಹೋಟೆಲ್ ಸೇರಿಕೊಂಡರು.
150 ಶಾಸಕರ ಕೇರ್ ಆಫ್ ಅಡ್ರೆಸ್ ಹೋಟೆಲ್-ರೆಸಾರ್ಟ್: ಹದಿನೈದು ದಿನಗಳಿಂದ ರಾಜ್ಯದ 224 ಶಾಸಕರಲ್ಲಿ ಮೂರೂ ಪಕ್ಷದ ಸುಮಾರು 150 ಶಾಸಕರು ಹೋಟೆಲ್ ಹಾಗೂ ರೆಸಾರ್ಟ್‌ನಲ್ಲೇ ವಾಸ್ತವ್ಯ ಇದ್ದಾರೆ. ಕೆಲವು ಶಾಸಕರ ಫೋನ್ ಆನ್ ಇದೆ, ಕೆಲವರದ್ದು ನಾಟ್ ರೀಚಬಲ್ ಇದೆ, ಮತ್ತೆ ಕೆಲವರದು ಸಿಮ್ ಬದಲಾವಣೆಯಾಗಿ ಹೊಸ ನಂಬರ್ ಬಂದಿದೆ. ಆ ನಂಬರ್ ಸೀಮಿತ ಕರೆಗಳಿಗಷ್ಟೇ ಸಂಪರ್ಕ ಸಿಗುತ್ತಿದೆ. ಇದು ರಾಜ್ಯದ ಪರಿಸ್ಥಿತಿ. ಮೂರೂ ಪಕ್ಷಗಳ ನಾಯಕರು ತಮ್ಮ ಶಾಸಕರನ್ನೇ ನಂಬದ, ವಿಧಾನಸಭೆಯಲ್ಲಿ ಶೌಚಾಲಯಕ್ಕೆ ಹೋದರೂ, ಮೊಗಸಾಲೆಯಲ್ಲಿ ಕುಳಿತರೂ ಹಿಂಬಾಲಿಸುವ ಸ್ಥಿತಿಗೆ ಬಂದು ತಲುಪಿದೆ. ಗುರುವಾರ, ಶುಕ್ರವಾರದಂದು ವಿಧಾನಸಭೆಯಲ್ಲಿ ಶಾಸಕರ ಕಾಯಲು ನಾಯಕರೇ “ಬೌನ್ಸರ್’ಗಳಾಗಿದ್ದರು.
ಜಂಗೀಕುಸ್ತಿಗೆ ಸೀಮಿತ: ದಿಢೀರ್ ರಾಜಕೀಯ ವಿದ್ಯಮಾನಗಳು ನಡೆದಿರದಿದ್ದರೆ ಜುಲೈ 12 ರಂದು ನಿಗದಿಯಂತೆ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಿ ಸಂತಾಪ ನಿರ್ಣಯದ ನಂತರ ಪ್ರಶ್ನೋತ್ತರ, ಜನಸಾಮಾನ್ಯರಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳ ಪ್ರಸ್ತಾಪ ಸೇರಿ ಜುಲೈ 26 ರವರೆಗೆ ಕಲಾಪ ನಡೆಯಬೇಕಿತ್ತು. ಏಳು ದಿನ ಇದ್ಯಾವುದೂ ಇಲ್ಲದೆ ಅಂತ್ಯಗೊಂಡಿದೆ. ಈಗಿನ ಸ್ಥಿತಿ ನೋಡಿದರೆ ಮುಂದಿನ ವಾರವೂ ವಿಶ್ವಾಸಮತ ಬಿಟ್ಟು ಬೇರ್ಯಾವುದೇ ಕಾರ್ಯಕಲಾಪ ನಡೆಯುವುದು ಅನುಮಾನ. ಹೀಗಾಗಿ, ಹನ್ನೆರಡು ದಿನ ಸರ್ಕಾರ ಉಳಿಸಿಕೊಳ್ಳುವ ಹಾಗೂ ಪತನಗೊಳಿಸುವ ಜಂಗಿಕುಸ್ತಿಗಷ್ಟೇ ಸೀಮಿತವಾಗಬಹುದು.
* ಎಸ್.ಲಕ್ಷ್ಮಿನಾರಾಯಣ