Advertisement

ಎಲ್ಲಿ ಹೋಯಿತು ಆರ್ಟ್ಸ್?

10:35 PM Jul 11, 2019 | mahesh |

ನೀನು ಓದ್ಲಿಕ್ಕೆ ಜಾಣ ಇದ್ದೀಯಾ, ಆದ್ರೆ ಆರ್ಟ್ಸ್ ಏನಕ್ಕೆ ? ಎಸ್‌ಎಸ್‌ಎಲ್ಸಿಯಲ್ಲಿ ಕಮ್ಮಿ ಮಾರ್ಕ್ಸ್ ಬಂತಾ?- ಇದು ಯಾವುದೋ ಮಹಾನ್‌ ವ್ಯಕ್ತಿಯ ಉಲ್ಲೇಖವಲ್ಲ. ಹೊರತಾಗಿ ಕಲಾವಿದ್ಯಾರ್ಥಿ ಪ್ರತಿನಿತ್ಯ ಎದುರಿಸುವ ಸವಾಲುಗಳು. ಕವಿಯೆಂದರೆ ಅದು ಕಾಳಿದಾಸ. ಹಾಗೆ, ಪದವಿ ಎಂದರೆ ಅದು ಬಿಎ ಎಂದು ಹೇಳುತ್ತಿದ್ದ ಕಾಲವಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಅದು ತನ್ನ ಸುವರ್ಣ ಯುಗವನ್ನು ಸ್ಥಾಪಿಸಿತ್ತು. ಆದರೆ, ಅದೇ ಇವತ್ತು ತನ್ನ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಕಾರ್ಪೊರೇಟ್‌ ಜಗತ್ತನ್ನು ಎದುರಿಸಲಾಗದೆ ಅಳಿವಿನ ಪಥದಲ್ಲಿ ಸಾಗುತ್ತಿದೆ.

Advertisement

ಈ ವಿಚಾರಕ್ಕೆ ಬಂದರೆ ಬುದ್ಧಿವಂತರ ಜಿಲ್ಲೆಯು ಹೊರತಲ್ಲ. ಇಲ್ಲಿ ಇಂಜಿನಿಯರಿಂಗ್‌, ಮೆಡಿಕಲ್‌ ಹಾಗೂ ಸಿ.ಎ. ಪದವಿಗಳಿಗೆ ಸಿಕ್ಕುವ ಸ್ಥಾನಮಾನ ಬೇರೆ ಯಾವ ಕ್ಷೇತ್ರಕ್ಕೂ ಇಲ್ಲ. ಇವುಗಳಲ್ಲಿ ಮಾತ್ರ ಭವಿಷ್ಯವಿದೆ ಎಂಬುದು ಇಲ್ಲಿನ ಕೆಲವರ ಅಭಿಪ್ರಾಯ. ಈ ಮನಸ್ಥಿತಿಯಿಂದಲೇ ಇವತ್ತು ಕರಾವಳಿಯಲ್ಲಿ ಕಲಾ ವಿಭಾಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೊರಾಟ ನಡೆಸುತ್ತಿರುವುದು. ಕಲಾ ವಿಭಾಗದಲ್ಲಿ ಸ್ಕೋಪ್‌ ಇಲ್ಲ, ಬಿ. ಎ. ಪದವಿದಾರರಿಗೆ ಕೆಲಸ ಸಿಗುವುದಿಲ್ಲ ಎಂಬುದು ಸಾಮಾನ್ಯ ವಾಡಿಕೆ. ಇದೇ ಕಾರಣದಿಂದ ಪೋಷಕರು ತಮ್ಮ ಮಕ್ಕಳನ್ನು ಆರ್ಟ್ಸ್ನಿಂದ ದೂರ ಇಡಲು ಇಚ್ಛಿಸುತ್ತಾರೆ. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಉಳಿದೆಲ್ಲ ಕ್ಷೇತ್ರಗಳಿಗಿಂತ ಹೆಚ್ಚಿನ ಅವಕಾಶ ಹಾಗೂ ಮಾನ್ಯತೆ ಇಲ್ಲಿನ ವಿದ್ಯಾರ್ಥಿಗಳಿಗಿವೆ.

ಆಡು ಮೇಯದ ಸೊಪ್ಪು ಇಲ್ಲ. ಹಾಗೆ ಕಲಾ ಅಧ್ಯಯನಕ್ಕೆ ಬಾರದ ವಿಷಯವಿಲ್ಲ. ಮಾನಸಿಕ ಸ್ಥಿತಿಯಿಂದ ಆರ್ಥಿಕ ಸ್ಥಿತಿಯವರಗೆ, ಪ್ರೀತಿಯಿಂದ ಕ್ರಾಂತಿಯವರಗೆ ಎಲ್ಲವನ್ನೂ ಇದು ಒಳಗೊಂಡಿವೆ. ಹಾಗಂತ ಇದು ಕೇವಲ ಅಧ್ಯಯನಕ್ಕೆ ಸೀಮಿತವಲ್ಲ. ಮಾನವಿಕ ಶಾಸ್ತ್ರದ ವಿದ್ಯಾರ್ಥಿಗಳು ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐಟಿ ಕಂಪೆನಿಗಳಲ್ಲಿ ಸ್ಥಾನ ಪಡೆದುಕೊಂಡು ಕ್ಷೇತ್ರದ ವಿಸ್ತಾರವನ್ನು ವಿವರಿಸಿದ್ದಾರೆ. ನಮ್ಮ ದೇಶದ ಉನ್ನತ ಹುದ್ದೆ ಅಲಂಕರಿಸಿರುವ ಬಹುತೇಕ ಮಂದಿ ಮಾನವಿಕ ಶಾಸ್ತ್ರವನ್ನು ಓದಿದವರೇ. ನಮ್ಮ ಪ್ರಧಾನ ಮಂತ್ರಿಗಳು ಕೂಡ ಎಂ.ಎ. ಪದವೀಧರರು. ಒಟ್ಟಿನಲ್ಲಿ ಎಲ್ಲಿ ಓದು ಕಲಿಕೆಯಾಗಿ, ಕಲಿಕೆ ಜೀವನವಾಗುತ್ತೋ ಅದು ಮಾನವಿಕಶಾಸ್ತ್ರ. ಹಾಗಂತ ಮಾನವಿಕ ಶಾಸ್ತ್ರದ ವಿದ್ಯಾರ್ಥಿಗಳು ಎಲ್ಲದರಲ್ಲಿ ಉತ್ತಮರು ಎಂಬುದು ನನ್ನ ವಾದವಲ್ಲ. ಧನಾತ್ಮಕ ಅಂಶಗಳು ಇರುವ ಕಡೆ ಋಣಾತ್ಮಕ ಅಂಶಗಳು ಇರುತ್ತವೆ. ನಾನು ಪಿಯುಸಿಯಲ್ಲಿ ವಿಜ್ಞಾನ ಕಲಿತು ಈಗ ಪದವಿಯಲ್ಲಿ ಮಾನವಿಕ ಶಾಸ್ತ್ರ ಕಲಿಯುತ್ತಿದ್ದೇನೆ. ಈ ಕಾರಣದಿಂದ ಈ ಎರಡು ವಿಭಾಗದ ವಿದ್ಯಾರ್ಥಿಗಳಲ್ಲಿ ಇರುವ ವ್ಯತ್ಯಾಸವನ್ನು ಗಮನಿಸಲು ಸಾಧ್ಯವಾಯಿತು. ವಿಜ್ಞಾನದ ಅಧ್ಯಯನದಲ್ಲಿ ಇರುವ ಶಿಸ್ತು ಕಲಾ ಅಧ್ಯಯನದಲ್ಲಿ ಇಲ್ಲ. ಮಾನವಿಕ ಕ್ಷೇತ್ರದ ಅನೇಕ ವಿದ್ಯಾರ್ಥಿಗಳು ಸಮಯದ ಪೂರ್ಣ ಉಪಯೋಗ ಮಾಡುವುದಿಲ್ಲ. ತಮ್ಮನ್ನು ತಾವು ಮುಂದೆ ತಳ್ಳುವುದಿಲ್ಲ. ಇವೆಲ್ಲದಕ್ಕಿಂತ ಹೆಚ್ಚಾಗಿ ಒಂದು ರೀತಿಯಾಗಿರುವ ಕೀಳರಿಮೆಯಿಂದ ಬಳಲುತ್ತಿದ್ದಾರೆ. ಈ ವಿಚಾರಗಳು ಕೂಡ ಮಾನವಿಕ ಶಾಸ್ತ್ರದ ಇಂದಿನ ಪರಿಸ್ಥಿತಿಗೆ ಕಾರಣ.

ಏನೇ ಇರಲಿ, ಕಲಾ ವಿದ್ಯಾರ್ಥಿಗಳನ್ನು ಕಡೆಗಣಿಸುವುದು ಸರಿಯಲ್ಲ. ಇಲ್ಲಿ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ರಾಷ್ಟ್ರ-ಅಂತರಾಷ್ಟ್ರೀಯ ಸಾಧಕರಿದ್ದಾರೆ. ಹೀಗಿರುವಾಗ ಮಾನವಿಕ ಶಾಸ್ತ್ರದ ಪ್ರಾಮುಖ್ಯವನ್ನು ಮರೆಯುವುದು ತರವಲ್ಲ. ಮಾನವಿಕ ಶಾಸ್ತ್ರಕ್ಕೂ ಸಮಾಜದಲ್ಲಿ ಸಮಾನ ಗೌರವ ದೊರಕುವಂತಾಗಲಿ.

ಶ್ರೇಯಸ್‌ ಕೋಟ್ಯಾನ್‌
ತೃತೀಯ ಬಿ. ಎ.,
ಪತ್ರಿಕೋದ್ಯಮ, ಎಂ.ಜಿ.ಎಂ. ಕಾಲೇಜು, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next