ಹೊಸದಿಲ್ಲಿ: ಕಾಶ್ಮೀರ ವಿಚಾರದಲ್ಲಿ ಯುದ್ಧದ ಮಾತನ್ನಾಡುತ್ತಲೇ ಇರುವ ಪಾಕಿಸ್ಥಾನ ಇದೀಗ ಇನ್ನೊಂದು ಹೇಳಿಕೆ ನೀಡಿದೆ.
ನೀವು ಯುದ್ಧ ಶುರು ಮಾಡಿದರೆ, ನಾವದನ್ನು ಮುಗಿಸುತ್ತೇವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ವಿಶೇಷ ಸಹಾಯಕ ಅಧಿಕಾರಿ ಡಾ|ಫಿರ್ದೋಸ್ ಆಶಿಕ್ ಆವಾನ್ ಹೇಳಿದ್ದಾರೆ.
ಇಲ್ಲಿನ ಗವರ್ನರ್ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರ ಅವರು, ಯಾವುದೇ ಕಾರಣಕ್ಕೂ ಪಾಕಿಸ್ಥಾನ ಯುದ್ಧಕ್ಕೆ ಮುಂದಾಗುವುದಿಲ್ಲ ಮತ್ತು ಯಾವುದೇ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸುವುದಿಲ್ಲ. ಒಂದು ವೇಳೆ ಯದ್ಧ ಸನ್ನಿವೇಶ ಉಂಟಾದರೆ ಪಾಕ್ ಹೋರಾಡಲಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಣ್ವಸ್ತ್ರ ಮೊದಲು ಬಳಕೆಯಿಲ್ಲ ಎಂಬ ನೀತಿ ಬದಲಾಗಲೂಬಹುದು ಎಂದು ಹೇಳಿಕೆ ನೀಡಿದ್ದು, ಇದರ ವಿರುದ್ಧ ಪಾಕ್‌ನ ವಿವಿಧ ಮಂದಿ ಹೇಳಿಕೆ ನೀಡುತ್ತಲೇ ಇದ್ದಾರೆ.
ಇನ್ನು ಪಾಕ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಟೀಕೆ ವ್ಯಕ್ತಪಡಿಸಿದ್ದು, ಯುದ್ಧವಾದರೆ ಪಾಕಿಸ್ಥಾನ ಸೋಲುವ ಮೂಲಕ ಮುಗಿಸುವುದು ಹೌದು ಎಂದು ಕಾಲೆಳೆದಿದ್ದಾರೆ.