Advertisement

ಕಾಲುವೆ ಆಧುನೀಕರಣ ಪೂರ್ಣ ಯಾವಾಗ?

02:40 PM Aug 05, 2022 | Team Udayavani |

ಚಿಂಚೋಳಿ: ಮೂರು ದಶಕಗಳು ಉರುಳಿದರೂ ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಪೂರ್ಣಗೊಳ್ಳದೇ ಇರುವುದಕ್ಕೆ ಶಾಸಕ ಡಾ| ಅವಿನಾಶ ಜಾಧವ ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಾಪಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ 1973-74ನೇ ಸಾಲಿನಲ್ಲಿ ಪ್ರಾರಂಭವಾದ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗೆ ಕಳೆದ ಮೂರು ದಶಕಗಳಿಂದ ಸರ್ಕಾರದಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ಹೀಗಿದ್ದರೂ ಮುಖ್ಯ ಕಾಲುವೆ ಆಧುನೀಕರಣ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಯಾಕೆ ಎಂದು ಯೋಜನೆ ಎಇಇ ಹಣಮಂತಪ್ಪ ಪೂಜಾರಿ ಅವರನ್ನು ಪ್ರಶ್ನಿಸಿದರು.

ಅರಣ್ಯ ಕಾಲೇಜಿಗೆ ಅನುದಾನ: ಸಚಿವ ಉಮೇಶ ಕತ್ತಿ ತಾಲೂಕಿನ ಚಂದ್ರಂಪಳ್ಳಿ ಪ್ರವಾಸಿತಾಣದಲ್ಲಿ ಅರಣ್ಯಕಾಲೇಜು ಮಂಜೂರಿಗೊಳಿಸಿ 10ಕೋಟಿ ರೂ. ಅನುದಾನ ನೀಡಿದ್ದಾರೆ. ಜಂಗಲ್‌ ಲಾಡ್ಜ್ಗೆ 5ಕೋಟಿ ರೂ.ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ಎಇಇ ಶಿವಶರಣಪ್ಪ ಮಾತನಾಡಿ, ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ 20ಕೆರೆಗಳ ಪೈಕಿ ನಾಲ್ಕು ಕೆರೆಗಳು ತುಂಬಿ ಹರಿಯುತ್ತಿವೆ. ಇನ್ನುಳಿದ ಕೆರೆಗಳು ಭರ್ತಿಗೊಳ್ಳುತ್ತಿವೆ ಎಂದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್‌ ಅಂಜುಮ ತಬಸುಮ, ಸಣ್ಣ ನೀರಾವರಿ ಕೆರೆಗಳ ಬಗ್ಗೆ ಆಗಾಗ ಭೇಟಿ ನೀಡಿ, ಅವುಗಳ ಸ್ಥಿತಿಗತಿ, ಪ್ರವಾಹ ಪರಿಸ್ಥಿತಿ ಕುರಿತು ಗಮನಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಅಡಿಯಲ್ಲಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಹಕ್ಕುಪತ್ರ ನೀಡಿಲ್ಲ. ಒಬ್ಬರ ಹೆಸರಿನಲ್ಲಿ ಇನ್ನೊಬ್ಬರು ಹಕ್ಕುಪತ್ರ ನೀಡಿದ ದೂರುಗಳಿವೆ. ಶಾಶ್ವತ ಪರಿಹಾರಕ್ಕಾಗಿ ಜನರಿಗೆ ನ್ಯಾಯಕೊಡಿಸುವುದಕ್ಕಾಗಿ ಕಂದಾಯ ಇಲಾಖೆ, ನೀರಾವರಿ ಇಲಾಖೆ ಜಂಟಿಯಾಗಿ ಜಂಟಿಸರ್ವೇ ನಡೆಸಿ ಆಸ್ತಿಕಳೆದುಕೊಂಡವರಿಗೆ ಹಕ್ಕುಪತ್ರ ನೀಡಬೇಕಾಗಿದೆ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಮಹಮ್ಮದ್‌ ಗಫಾರ್‌ ಮಾತನಾಡಿ, ತಾಲೂಕಿನಲ್ಲಿ ಏಳು ಕೊರೊನಾ ಪ್ರಕರಣಗಳಿವೆ. ಹೆಚ್ಚು ಜನರಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತಿದೆ. ಕಲುಷಿತ ನೀರಿನಿಂದ ವಾಂತಿಭೇದಿ ಪ್ರಕರಣಗಳಾಗುತ್ತಿವೆ. ಜನರಿಗೆ ಬಿಸಿ ನೀರು ಕಾಯಿಸಿ, ಆರಿಸಿ ಕುಡಿಯಬೇಕೆಂದು ಆರೋಗ್ಯ ಸಿಬ್ಬಂದಿ ತಿಳಿಸುತ್ತಿದ್ದಾರೆ ಎಂದರು.

ಬಿಇಒ ರಾಚಪ್ಪ ಭದ್ರಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಒಟ್ಟು 1200 ಶಾಲಾ ಕೋಣೆಗಳು ಸೋರಿಕೆಯಾಗುತ್ತಿವೆ. ಸಾಕಷ್ಟು ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಾಗಿ ಜಿಪಂ ಎಇಇಗೆ ಪತ್ರ ನೀಡಲಾಗಿದೆ ಎಂದು ಹೇಳಿದರು.

ತಾಲೂಕಿನಲ್ಲಿ ವ್ಯಾಪಕ ಮಳೆಯಿಂದ 185ಮನೆಗಳು ಬಿದ್ದಿವೆ. ಎಲ್ಲ ಫಲಾನುಭವಿಗಳಿಗೆ 10ಸಾವಿರ ರೂ. ಪರಿಹಾರ ನೀಡಲಾಗಿದೆ. ಕುಂಚಾವರಂನಲ್ಲಿರುವ ಡಾ| ಬಿ.ಆರ್‌.ಅಂಬೇಡ್ಕರ್‌ ಆಂಗ್ಲ ಮಾಧ್ಯಮ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ 9ಕೋಟಿ ರೂ.ಅನುದಾನ ಮಂಜೂರಿಯಾಗಿದೆ. ಅಲ್ಲದೇ ಸರಕಾರದಿಂದ ಜಮೀನು ಗುರುತಿಸಲಾಗಿದೆ ಎಂದು ಶಾಸಕರು ಸಭೆ ಗಮನಕ್ಕೆ ತಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್‌. ಹಂಪಣ್ಣ, ಡಾ| ಧನರಾಜ ಬೊಮ್ಮ, ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೊಡ, ಎಇಇ ಉಮೇಶ ಗೋಳಾ, ಲೋಕೋಪಯೋಗಿ ಇಲಾಖೆ ಎಇಇ ಆನಂದಕಟ್ಟಿ, ಎಇಇ ಪ್ರಕಾಶ ಕುಲಕರ್ಣಿ, ಪ್ರಭುಲಿಂಗ ಬುಳ್ಳ, ರಾಚಪ್ಪ ಭದ್ರಶೆಟ್ಟಿ, ಪದ್ಮಾವತಿ, ಬಿಸಿಎಂ ಅಧಿಕಾರಿ ಅನುಸೂಜ ಚವ್ಹಾಣ, ಶಾಂತವೀರಯ್ಯ ಹಿರೇಮಠ, ಡಾ| ಮಹಮ್ಮದ ಗಫಾರ, ಜೆಇ ಸುಭಾಷ ರಾಠೊಡ, ಭಾಸ್ಕರ ರಾಠೊಡ, ಜಯಪ್ಪ ಚಾಪೆಲ್‌, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಪಿಎಸ್‌ಐ ಉದ್ದಂಡಪ್ಪ ಇನ್ನಿತರ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿ ವರದಿಯನ್ನು ತಿಳಿಸಿದರು. ಎಡಿಎ ಅಧಿಕಾರಿ ನಾಗೇಂದ್ರಪ್ಪ ಬೆಡಕಪಳ್ಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next