Advertisement
ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ಟಿ.ಎಂ.ಭಾಸ್ಕರರಾವ್ 2020 ಫೆ.2ರಂದು ಆದೇಶ ಹೊರಡಿಸಿ ವರ್ಗಾವಣೆಯಾಗಿರುವ ಕಚೇರಿಗಳು 2020 ಫೆ.17ರೊಳಗೆ ಸ್ಥಳಾಂತರಿಸುವಂತೆ ಹಾಗೂ ಪಾಲನೆಯಾದ ಕ್ರಮ ಕುರಿತು ತಿಳಿಸಲು ಸೂಚಿಸಿದ್ದರು. ಆದರೆ ಸರ್ಕಾರದ ಆದೇಶದಂತೆ ಕಚೇರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ.
Related Articles
Advertisement
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಪೈಕಿ ಎರಡು ಮಾಹಿತಿ ಆಯುಕ್ತರ ಕಚೇರಿಗಳಲ್ಲಿ ಒಂದು ಪೀಠ ಕಲ್ಬುರ್ಗಿಗೆ ಹಾಗೂ ಒಂದು ಪೀಠ ಬೆಳಗಾವಿಗೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕರ್ನಾಟಕ ಲೋಕಾಯುಕ್ತದಲ್ಲಿರುವ ಎರಡು ಉಪ ಲೋಕಾಯುಕ್ತ ಕಚೇರಿಗಳ ಪೈಕಿ ಒಂದು ಉಪ ಲೋಕಾಯುಕ್ತ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾತರಿಸಿ ಒಟ್ಟು 9 ಕಚೇರಿಗಳನ್ನು ಸ್ಥಳಾಂತರಿಸಿ 2019ರ ಏ. 1ರಂದು ಜಾರಿಗೆ ಬರುತ್ತದೆ ಎಂದು ತಿಳಿಸಲಾಗಿದ್ದರೂ ಕಚೇರಿಗಳು ಬಾರದೇ ಇರುವುದರಿಂದ ಮತ್ತೆ ನೂತನವಾಗಿ 23-9-2019ರಂದು ಸರ್ಕಾರದ ವತಿಯಿಂದ ಮತ್ತೂಮ್ಮೆ ಆದೇಶ ಹೊರಡಿಸಿ ಸ್ಥಳಾಂತರಗೊಳ್ಳದ ಕಚೇರಿಗಳು ಅಕ್ಟೋಬರ್ ಅಂತ್ಯದೊಳಗೆ ಸ್ಥಳಾಂತರಗೊಳ್ಳಬೇಕೆಂದು ಮತ್ತೆ ಆದೇಶ ನೀಡಿತ್ತು.
ಇದರಿಂದ ವಿಚಲಿತರಾದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ದಶಕಗಳಿಂದ ರಾಜಧಾನಿಯಲ್ಲಯೇ ಉಳಿದುಕೊಂಡಿದ್ದ ನೌಕರರು ತಮ್ಮ ಕುತಂತ್ರ ಬುದ್ಧಿ ಬಳಸಿ ಆಲಮಟ್ಟಿಯಲ್ಲಿರುವ ಕಚೇರಿಗೆ ಬಾರದೇ ಕಚೇರಿಯ ನಾಮಫಲಕದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ನೋಂದಾಯಿತ ಕಚೇರಿ ಆಲಮಟ್ಟಿ ಎಂದು ಬರೆದು ಅದರ ಕೆಳಭಾಗದಲ್ಲಿ ಸಂಪರ್ಕ ಕಚೇರಿ ಪಿಡಬ್ಲ್ಯೂಡಿ ಕಚೇರಿ ಪೂರಕ ಕಟ್ಟಡ 3ನೇಮಹಡಿ, ಕೆ.ಆರ್.ವೃತ್ತ ಬೆಂಗಳೂರು ಎಂದು ನಮೂದಿಸಿದ್ದಾರೆ. ಇದರಿಂದ ಮತ್ತೆ ಎಂ.ಡಿ.ಯವರ ಕಚೇರಿಯನ್ನು ಬೆಂಗಳೂರಿನಲ್ಲೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯವರು ಅಧಿವೇಶನದಲ್ಲಿ ನೀಡಿದ ಭರವಸೆಗಳು ಹಾಗೂ ಸರ್ಕಾರದ ಆದೇಶಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲವೇ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌಲಭ್ಯಗಳಿದ್ದರೂ ಬಾರದ ಕಚೇರಿ: ಕೋಟ್ಯಂತರ ರೂ.ಗಳನ್ನು ವ್ಯಯ ಮಾಡಿ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಆಡಳಿತಾತ್ಮಕ ಹಾಗೂ ಆರ್ಥಿಕ ವಿಭಾಗದ ಇಬ್ಬರು ವ್ಯವಸ್ಥಾಪಕ ನಿರ್ದೇಶಕರು, ತಾಂತ್ರಿಕ ಸಿಬ್ಬಂದಿ ಹೀಗೆ ಎಲ್ಲ ಅಧಿಕಾರಿಗಳಿಗೆ ಅನುಕೂಲವಾಗುವಂತೆ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಎಲ್ಲ ಅ ಧಿಕಾರಿಗಳು ವಾಸಿಸಲು ಸುಸಜ್ಜಿತ ಎಲ್ಲ ಸೌಲಭ್ಯ ಹೊಂದಿರುವ ಬಂಗಲೆಗಳು ಇಂದು ಬೂತ ಬಂಗಲೆಗಳಂತೆ ಬಿಕೋ ಎನ್ನುವಂತಾಗಿವೆ.
ಉತ್ತರ ಕರ್ನಾಟಕದವರೇ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನ ಎಂ.ಡಿ.ಕಚೇರಿಯಲ್ಲಿದ್ದಾರೆ. ಅವರು ಅಲ್ಲಿಯೇ ವಾಸಿಸಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ದಕ್ಷಿಣದಿಂದ ಉತ್ತರಕ್ಕೆ ಬರಲಾಗದ ಸಿಬ್ಬಂದಿಗಳ ಮೇಲೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. – ಹೆಸರು ಹೇಳಲು ಇಚ್ಚಿಸದ ಕೃಷ್ಣಾ ಭಾಗ್ಯಜಲನಿಗಮದ ಉದ್ಯೋಗಿ
-ಶಂಕರ ಜಲ್ಲಿ