ಬಾಗಲಕೋಟೆ: ರಾಜ್ಯದ ಮೊದಲ ರಾಷ್ಟ್ರೀಯ ಉತ್ಸವ ಎಂಬ ಖ್ಯಾತಿ ಪಡೆದ ಚಾಲುಕ್ಯ ಉತ್ಸವ ಇಚ್ಛಾಸಕ್ತಿಯ ಕೊರತೆಯಿಂದ ಕಳೆದ ನಾಲ್ಕು ವರ್ಷಗಳಿಂದ ನಡೆದೇ ಇಲ್ಲ. ಈ ವರ್ಷವಾದರೂ ಉತ್ಸವಕ್ಕೆ ಕಾಲ ಕೂಡಿ ಬರುತ್ತಾ ಎಂಬ ಪ್ರಶ್ನೆ ಚಾಲುಕ್ಯರ ನಾಡಿನಿಂದ ಕೇಳಿ ಬರುತ್ತಿದೆ.
ಬೆಳಗಾವಿಯಲ್ಲಿ ಅತಿ ಹೆಚ್ಚು ಪ್ರವಾಹ ಬಂದರೂ ಕಿತ್ತೂರು ಉತ್ಸವ ನಡೆದಿದೆ. ಹಂಪಿ ಉತ್ಸವ ಜನವರಿಯಲ್ಲಿ ನಡೆಸಲು ದಿನ ನಿಗದಿಯಾಗಿದೆ. ರಾಜ್ಯದಲ್ಲಿ ಎಲ್ಲೇ ಪ್ರವಾಹ, ಬರ ಬಂದರೂ ಮೈಸೂರು ದಸರಾ ನಡೆಯುತ್ತೆ, ಹಂಪಿ ಉತ್ಸವ ನಡೆಯುತ್ತೆ ಆದರೆ ಚಾಲುಕ್ಯ ಉತ್ಸವಕ್ಕೆ ಮಾತ್ರ ಇಂತಹ ತಾತ್ಸಾರ ಎಂಬುದು ಜಿಲ್ಲೆಯ ಜನರ ಪ್ರಶ್ನೆಯಾಗಿದೆ.
ನಮ್ಮ ಜಿಲ್ಲೆಯಲ್ಲೇ ರನ್ನ ಉತ್ಸವ ನಡೆಯುತ್ತದೆ. ಆ ಉತ್ಸವ ನಡೆಸಲು ಯಾವ ನೆರೆ-ಬರ ಅಡ್ಡಿಯಾಗುವುದಿಲ್ಲ. ಅಲ್ಲಿನ ಹಾಲಿ-ಮಾಜಿ ಸಚಿವರು ಪೈಪೋಟಿಗೆ ಬಿದ್ದು ರನ್ನ ಉತ್ಸವ ನಡೆಸಿದ್ದಾರೆ. ಆದರೆ, ಚಾಲುಕ್ಯ ಉತ್ಸವಕ್ಕೆ ಮಾತ್ರ ಯಾವುದಾದರೂ ಕಾರಣ ಹೇಳುತ್ತಲೇ ಬರಲಾಗುತ್ತಿದೆ.
ಬಾದಾಮಿ, ಪಟ್ಟದಕಲ್ಲ, ಐಹೊಳೆ ಮೂರು ಪಾರಂಪರಿಕ ತಾಣಗಳಲ್ಲಿ ಒಂದೊಂದು ವರ್ಷ, ಮೂರು ದಿನ ಉತ್ಸವ ನಡೆಯಲಿ. ಸುಂದರ ವೇದಿಕೆಯಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಕಲಾವಿದರ ಜತೆಗೆ ಸ್ಥಳೀಯ ಕಲಾವಿದರಿಗೆ ವೇದಿಕೆಯಾಗಲಿ. ಮುಖ್ಯವಾಗಿ ಚಾಲುಕ್ಯ ಅರಸರ ಸ್ಮರಣೆಯ ಜತೆಗೆ, ಈ ತಾಣಗಳ ಸಮಗ್ರ ಅಭಿವೃದ್ಧಿಯ ಚರ್ಚೆ, ಚಿಂತನೆ ಹೊರ ಬೀಳಲು, ಚಾಲುಕ್ಯ ಉತ್ಸವ ಬಳಕೆಯಾಗಲಿ ಎಂಬುದು ಪ್ರಜ್ಞಾವಂತರ ಅಭಿಪ್ರಾಯ. ಇದಕ್ಕೆ ಜನಪ್ರತಿನಿಧಿಗಳು,ಅಧಿಕಾರಿಗಳು ಸ್ಪಂದಿಸಬೇಕು. ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರಿಗೆ ತಕ್ಷಣ ಪರಿಹಾರ, ಸೌಲಭ್ಯ ಕಲ್ಪಿಸಿ, ಫೆಬ್ರವರಿ-ಮಾರ್ಚ್ ವೇಳೆಗೆ ಉತ್ಸವಕ್ಕೆ ಅಣಿಯಾಗಲಿ ಎಂಬುದು ಜಿಲ್ಲೆಯ ಜನರ ಒತ್ತಾಯ.
-ಶ್ರೀಶೈಲ ಕೆ. ಬಿರಾದಾರ