Advertisement

ಅನಧಿಕೃತ ಮದ್ಯದಂಗಡಿಗೆ ಕಡಿವಾಣ ಯಾವಾಗ?

01:41 PM Apr 12, 2019 | Naveen |

ಸಿಂಧನೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲೋಕಸಭೆ ಚುನಾವಣೆ
ಬಿರುಸಿನ ಪ್ರಚಾರ ಹಿನ್ನೆಲೆಯಲ್ಲಿ ಅನಧಿಕೃತ ಮದ್ಯದಂಗಡಿಗಳು ತಲೆಯೆತ್ತಿವೆ.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯದಂಗಡಿಗಳು ಹೆಚ್ಚು
ಕಂಡುಬರುತ್ತಿದ್ದರೂ ಅಬಕಾರಿ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು
ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

Advertisement

ತಾಲೂಕಿನ ಜವಳಗೇರಾ, ಅರಗಿನಮರ, ಸಾಲಗುಂದಾ, ಬಸ್ಸಾಪೂರು (ಇ.ಜೆ),
ಜವಳಾಗೇರಾ, ಉಮಲೂಟಿ, ಆರ್‌. ಎಚ್‌. ಕ್ಯಾಂಪ್‌ಗ್ಳಾದ ನಂ-1 ರಿಂದ
5ರಲ್ಲಿ ಪಗಡದಿನ್ನಿ ಶ್ರಿಪುರಜಂಕ್ಷನ್‌ ಹಾಗೂ ಗಡಿ ಪ್ರದೇಶದಲ್ಲಿನ ಗೋನ್ವಾರ, ಚಿತ್ರಾಲಿ, ಚಿಂತಮಾನದೊಡ್ಡಿ ಗ್ರಾಮ ಸೇರಿದಂತೆ ನಗರದ ಅನೇಕ ಸಾವಜಿ ಖಾನಾವಳಿಗಳಲ್ಲಿ ರಾಜಾರೋಷವಾಗಿ ಅನ ಧಿಕೃತ ಮದ್ಯ ಮಾರಾಟದ ಹಾವಳಿ ಮಿತಿ ಮೀರಿರುವುದು ಅಶಾಂತಿ ಉಂಟಾಗುವಂತೆ ಮಾಡಿದೆ.
ಇದರಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು ನೆಮ್ಮದಿ ದೂರವಾಗಿದೆ.
ಅಬಕಾರಿ ಇಲಾಖೆಯವರು ನೆಪಕ್ಕೆ ಮಾತ್ರ ಅಂಗಡಿಗಳಿಗೆ ಭೇಟಿ ನೀಡಿ ಅಷ್ಟೋ-ಇಷ್ಟೋ ದಂಡ ಹಾಕಿ ಕೈತೊಳೆದುಕೊಳ್ಳುತ್ತಿದ್ದಾರೆ ಎನ್ನುವುದು ಹಲವರ ಆರೋಪ.

ಈ ಅಕ್ರಮ ಮದ್ಯ ಮಾರಾಟ ತಡೆಯದಿದ್ದರೆ ಲೋಕಸಭೆ
ಚುನಾವಣೆಯಲ್ಲಿ ಅನೇಕರು ಈ ದುಶ್ಚಟಕ್ಕೆ ಬಲಿಯಾಗುವ ಸಾಧ್ಯತೆಯಿದ್ದು, ಈ ಕೂಡಲೇ ಇಂತಹ ಅಕ್ರಮ ಮದ್ಯ ಮಾರಾಟ ಮಳಿಗೆಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

ತಾಲೂಕಿನಲ್ಲಿ ಮದ್ಯ ನಿಷೇಧಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ
ಪ್ರಯೋಜನವಾಗಿಲ್ಲ. ಈಗ ಹಳ್ಳಿಯಲ್ಲಿಯೂ ಇದರ ಹಾವಳಿ ಹೆಚ್ಚಾಗುತ್ತಿದೆ. ಇದರ ವಿರುದ್ಧ ನಮ್ಮ ಸಂಘಟನೆಯಿಂದ ಪತ್ರ ಚಳವಳಿ ಮಾಡುತ್ತೇವೆ. ಈ ಬಾರಿ ನಮ್ಮ ಸಂಘಟನೆಯಿಂದ ಮತದಾನ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮುಂದೆಯೂ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುತ್ತದೆ.
.ವಿರುಪಮ್ಮ, ಮದ್ಯ ನಿಷೇಧ ಹೋರಾಟ
ಸಮಿತಿ ಸಂಚಾಲಕರು, ಸಿಂಧನೂರು

ಈಗಾಗಲೇ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ
ಕ್ರಮ ಜರುಗಿಸಲಾಗಿದೆ. ಶೇ. 99ರಷ್ಟು ಅಕ್ರಮ ಮದ್ಯ ಮಾರಾಟವಿಲ್ಲ. ಆ
ತರಹದ ಸುಳಿವು ಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
.ಮಂಜುನಾಥ,
ಅಬಕಾರಿ ಪಿಎಸ್‌ಐ, ಸಿಂಧನೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next