Advertisement

ಸಂಪತ್ತು ಇದ್ದಾಗ ದಾನ, ಧರ್ಮ ಮಾಡಿ: ಶಾಸಕ

08:20 PM Feb 18, 2020 | Lakshmi GovindaRaj |

ಅರಸೀಕೆರೆ: ಮನುಷ್ಯ ಸಂಪತ್ತು ಇದ್ದಾಗ ದಾನ ಧರ್ಮ, ಅಧಿಕಾರ ಇದ್ದಾಗ ಜನಪರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದರೆ ಭಗವಂತನ ಕೃಪೆಗೆ ಪಾತ್ರನಾಗುತ್ತಾನೆ ಎಂದು ಶಾಸಕ ಕೆ. ಎಂ. ಶಿವಲಿಂಗೇಗೌಡ ಹೇಳಿದರು.

Advertisement

ತಾಲೂಕಿನ ಗಂಡಸಿ ಹೋಬಳಿ ಚಗಚಗೆರೆ ಶೆಟ್ಟಿಕೊಪ್ಪಲು ಗ್ರಾಮಸ್ಥರು ಹಾಗೂ ಭಕ್ತ ವೃಂದಿಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮುತ್ತುರಾಯಸ್ವಾಮಿ ದೇವಾಲಯದ ಲೋಕಾರ್ಪಣೆ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಹಣ ಐಶ್ವರ್ಯ ಕೂಡಿಟ್ಟವರು ಶ್ರೀಮಂತರಾಗುತ್ತಾರೆ. ಗಳಿಸಿದ ಆದಾಯದಲ್ಲಿ ಸ್ವಲ್ಪ ಭಾಗವನ್ನು ಧಾಮಿಕ ಕಾರ್ಯಗಳಿಗೆ ಬಳಸಿದರೆ ಹೃದಯ ಶ್ರೀಮಂತರಾಗುತ್ತಾರೆ ಎಂದರು.

ದೇಗುಲಗಳ ಜೀರ್ಣೋದ್ಧಾರ: ದೇವರು, ಧರ್ಮದ ಬಗ್ಗೆ ನನಗೆ ಅಪಾರ ನಂಬಿಕೆಯಿರುವುದರಿಂದ ಅರಸೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಾರು ದೇಗುಲಗಳ ಜಿರ್ಣೋದ್ಧಾರಕ್ಕೆ ಕೈಲಾದ ನೆರವು ನೀಡಿದ್ದೇನೆ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಜಯರಾಂ ಮಾತನಾಡಿ, ಗ್ರಾಮದ ನೂರಾರು ಕುಟುಂಬಗಳಿಗೆ ಸಾವಿರಾರು ಭಕ್ತರಿಗೆ ಆರಾಧ್ಯ ದೈವ ವಾಗಿರುವ ಮುತ್ತುರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಹಾಗೂ ಭಕ್ತ ವೃಂದ ಸಂಕಲ್ಪ ಮಾಡಿಕೊಂಡು ದೇವರ ಸೇವೆಗೆ ಮುಂದಾದೆವು.

ಅಂದುಕೊಂಡಂತೆ ಸುಸೂತ್ರವಾಗಿ ಧಾರ್ಮಿಕ ವಿದಿವಿಧಾನಗಳೊಂದಿಗೆ ಶೆಟ್ಟಿಕೊಪ್ಪಲು ಹಾಗೂ ಚಗಚಗೆರೆ ಗ್ರಾಮದೇವತೆಗಳ ಸಮ್ಮುಖದಲ್ಲಿ ಮುತ್ತುರಾಯಸ್ವಾಮಿಯ ದೇವಾಲಯ ಲೋಕಾರ್ಪಣೆಗೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದರು.

Advertisement

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹುಚ್ಚೇಗೌಡ ಮಾತನಾಡಿ, ಶಾಸಕರು ಕ್ಷೇತ್ರದಲ್ಲಿನ ನೂರಾರು ದೇವಾಲಯಗಳ ಜೀರ್ಣೋದ್ಧಾರವಾಗಿದೆ. ಗ್ರಾಮೀಣ ಭಾಗದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುವ ಮೂಲಕ ಶಾಸಕರು ಸಭೆ, ಸಮಾರಂಭ ಗಳನ್ನು ನಡೆಸಲು ಅನುಕೂಲ ಮಾಡಿದ್ದಾರೆ ಎಂದರು.

ಶಾಸಕರಿಗೆ ಸನ್ಮಾನ: ಸಮಾರಂಭದಲ್ಲಿ ಗ್ರಾಮಸ್ಥರು ಹಾಗೂ ಭಕ್ತ ವೃಂದದ ವತಿಯಿಂದ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಬೆಳ್ಳಿಗದೆ ನೀಡುವ ಮೂಲಕ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಪಂ ಮಾಜಿ ಸದಸ್ಯ ಗಂಗಾಧರ್‌, ಮಲ್ಲೇಶ್‌, ಚಗಚಗೆರೆ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ಎಪಿಎಂಸಿ ಮಾಜಿ ನಿರ್ದೇಶಕ ರಾಮಚಂದ್ರು, ಗ್ರಾಪಂ ಸದಸ್ಯ ನಾಗರಾಜು, ರಾಜ್ಯ ಕುರುಬ ಸಮಾಜದ ನಿರ್ದೇಶಕ ಕೇಶವ್‌ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ಮುತ್ತುರಾಯಸ್ವಾಮಿಯ ವಿಗ್ರಹಕ್ಕೆ ಬಿಂಬ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜಾ ಕಾರ್ಯ ಗ್ರಾಮದೇವತೆಗಳಾದ ಮಲ್ಲೇಶ್ವರಸ್ವಾಮಿ, ಮೈಲಾರಲಿಂಗೇಶ್ವರ ಆದಿಶಕ್ತಿದೇವಿ ಮುತ್ತುರಾಯಪ್ಪ ಹಾಗೂ ರಾಮದೇವರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next