Advertisement
ಬುಧವಾರ ಐಎಂಎ ಕಂಪೆನಿ ಮುಂದೆ ದಿಕ್ಕುತೋಚದೆ ಕಂಗಾಲಾಗಿ ಕುಳಿತಿದ್ದ ಸುಮಾರು 40 ವರ್ಷ ವಯೋಮಾನದ ಅಂಧ ಬಾಬಾಜಾನ್ ಕರುಣಾಜನಕ ಸ್ಥಿತಿಯಿದು. ಐಎಂಎ ಕಂಪೆನಿ ಬಾಗಿಲು ಮುಚ್ಚಿದೆ ಎಂಬ ವಿಚಾರವನ್ನು ಪಕ್ಕದ ಮನೆಯ ನಿವಾಸಿಗಳಿಂದ ಕೇಳಿಸಿಕೊಂಡ ಬಾಬಾಜಾನ್, ಅವರಿವರ ಬಳಿ ಬೇಡಿ ಪಡೆದು ಕಟ್ಟಿದ ಹಣ ಹೋಯಿತೇ ಎಂದು ಕಂಗಾಲಾಗಿ ಕಚೇರಿ ಮುಂದೆ ಆಗಮಿಸಿದ್ದರು.
Related Articles
Advertisement
ಸುಂದರ ಕುಟುಂಬದ ಜತೆ ಜೀವನ ನಡೆಸುತ್ತಿದ್ದ ಬಾಬಾಜಾನ್‌ಗೆ ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ಡಯಾಬಿಟಿಸ್ ಕಾಯಿಲೆ ಜೀವನದ ಬೆಳಕು ಕಿತ್ತುಕೊಂಡು ಬಿಟ್ಟಿತ್ತು. ಅತಿಯಾದ ಡಯಾಬಿಟಿಸ್‌ನಿಂದ ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡರು. ಬದುಕು ನಿಂತ ನೀರಾಗಿಬಿಟ್ಟಿತ್ತು.. ಕುಟುಂಬ ನಿರ್ವಹಣೆ ಹೇಗೆ ಮಾಡುವುದು ಎಂಬ ಚಿಂತೆ ಶುರುವಾಗಿತ್ತು.
ಈ ಮಧ್ಯೆ ಕಣ್ಣಿನ ಆಪರೇಶನ್ ಮಾಡಿಸಿಕೊಂಡರೆ ದೃಷ್ಟಿ ಬರಲಿದೆ. ಆದರೆ ಅದಕ್ಕೆ ಐದು ಲಕ್ಷ ರೂ. ಖರ್ಚಾಗಲಿದೆ ಎಂಬ ವೈದ್ಯರ ಸಲಹೆ ಅವರಿಗೆ ಚಿಂತೆಗೀಡು ಮಾಡಿತ್ತು. ಕಣ್ಣಿನ ಆಪರೇಶನ್‌ಗೆ ಹಣ ಹೊಂದಿಸಲು ಎರಡು ವರ್ಷ ಹೆಣಗಾಡಿದ್ದೇನೆ. ಅವರಿವರ ಕೈ ಕಾಲು ಹಿಡಿದು ಹಣ ಕೂಡಿಟ್ಟಿದ್ದೆ.
ಕೆಲವೊಮ್ಮೆ ಭಿಕ್ಷೆಯೂ ಬೇಡಿ ಎರಡೂವರೆ ಲಕ್ಷ ರೂ. ಸಂಗ್ರಹಿಸಿದ್ದೆ. ಐಎಂಎನಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಲಾಭಾಂಶ ನೀಡುತ್ತಾರೆ ಎಂದು ಕೆಲವರು ಹೇಳಿದ್ದರು. ಹೀಗಾಗಿ, ಹಣ ಹೂಡಿಕೆ ಮಾಡಿದರೆ ಸ್ವಲ್ಪ ಐದು ಲಕ್ಷ ರೂ. ಆಗುವತನಕ ಕಾದು ಆಪರೇಶನ್ ಮಾಡಿಸಿಕೊಳ್ಳಬಹುದು ಎಂದು ನಿರ್ಧರಿಸಿ ಸಹೋದರ ಹನೀಫ್ ಸಹಾಯ ಪಡೆದು ಎಂಟು ತಿಂಗಳ ಹಿಂದೆ 2.5 ಲಕ್ಷ ರೂ. ಹೂಡಿಕೆ ಮಾಡಿದ್ದೆ. ಇದೀಗ ಹಣವೇ ಸಿಗದಂತಾಗಿದೆ ಎಂದು ನೋವು ತೋಡಿಕೊಂಡರು.
ಈಗಾಗಲೇ ಬದುಕು ಅರ್ಧಕತ್ತಲೆಯಾಗಿದೆ. ಈ ಹಣವೂ ಸಿಗದಿದ್ದರೆ ಆಪರೇಶನ್ ಆಗುವುದು ದೂರದ ಮಾತಾಗಲಿದೆ ಎಂದು ಗದ್ಗದಿತರಾದ ಬಾಬಾಜಾನ್, ದೂರು ನೀಡುತ್ತೇನೆ. ಪೊಲೀಸರು ತನಿಖೆ ನಡೆಸಿ ಹಣ ವಾಪಾಸ್ ಬಂದರೆ ಸಾಕು ಎಂದು ನಿಟ್ಟುಸಿರುಬಿಟ್ಟರು.