ಹಿರಿಯ ನಟ ಸುಂದರ್ ರಾಜ್ ಅವರದ್ದು ಸುಮಾರು ನಾಲ್ಕು ದಶಕಗಳಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕುಟುಂಬ. ಸುಂದರ್ ರಾಜ್, ಅವರ ಪತ್ನಿ ಪ್ರಮೀಳಾ ಜೋಷಾಯ್, ಮಗಳು ಮೇಘನಾ ರಾಜ್, ಅಳಿಯ ಚಿರಂಜೀವಿ ಸರ್ಜಾ ಹೀಗೆ ಎಲ್ಲರೂ ಚಿತ್ರರಂಗದಲ್ಲಿ ಕಲಾವಿದರಾಗಿ ಗುರುತಿಸಿಕೊಂಡವರು. ಈಗ ಇದೇ ಕುಟುಂಬದಿಂದ ಮತ್ತೂಂದು ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ನಾಯಕ ಕಂ ನಿರ್ದೇಶಕನಾಗಿ ಪರಿಚಯವಾಗುತ್ತಿದೆ. ಅವರೇ ಪ್ರಮೀಳಾ ಜೋಷಾಯ್ ಅವರ ತಮ್ಮನ ಮಗ ತೇಜಸ್.
ಅಂದಹಾಗೆ, ತೇಜಸ್ ಈ ಹಿಂದೆಯೇ ಬಾಲನಟನಾಗಿ ಚಿತ್ರರಂಗಕ್ಕೆ ಅಡಿಯಿಟ್ಟ ಪ್ರತಿಭೆ. ಶಂಕರ್‌ನಾಗ್ ಅಭಿನಯದ “ಮಹೇಶ್ವರ’, ಸುರೇಶ್ ಹೆಬ್ಳೀಕರ್ ನಿರ್ದೇಶನದ “ಉಷಾಕಿರಣ’ ಮೊದಲಾದ ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿ ಸೈ ಎನಿಸಿಕೊಂಡಿದ್ದ ತೇಜಸ್, ನಂತರ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಕೊಟ್ಟಿದ್ದರಿಂದ ಚಿತ್ರರಂಗದಿಂದ ಕೆಲಕಾಲ ದೂರ ಉಳಿಯಬೇಕಾಯಿತು. ಇದೀಗ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ, ವಿಜ್ಞಾನಿಯಾಗಿ ಕೆಲಸ ಮಾಡುತ್ತ, ವಿದೇಶದಲ್ಲಿ ತನ್ನದೇಯಾದ ಸಂಸ್ಥೆಯನ್ನೂ ಕಟ್ಟಿರುವ ತೇಜಸ್, ಮತ್ತೆ ಚಂದನವನದತ್ತ ಮುಖ ಮಾಡುತ್ತಿದ್ದಾರೆ.
ಸದ್ಯ ತೇಜಸ್ ಸದ್ದಿಲ್ಲದೆ “ರಿವೈಂಡ್’ ಎನ್ನುವ ಹೆಸರಿನಲ್ಲಿ ಚಿತ್ರವನ್ನು ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ತೇಜಸ್, ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಹೊಣೆಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಈಗಾಗಲೇ “ರಿವೈಂಡ್’ ಚಿತ್ರದ ಶೇ.30ರಷ್ಟು ಚಿತ್ರೀಕರಣವನ್ನೂ ಪೂರ್ಣಗೊಳಿಸಿರುವ ತೇಜಸ್, ಇತ್ತೀಚೆಗೆ ತಮ್ಮ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಮಾಧ್ಯಮಗಳ ಮುಂದೆ ಬಂದಿದ್ದರು.
“ಇದೊಂದು ಸೈಂಟಿಫಿಕ್ ಫಿಕ್ಷನ್ ಸಿನಿಮಾ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಅನ್ನು ಬಳಸಿಕೊಂಡು ಜೀವನದಲ್ಲಿ ರಿವೈಂಡ್ ಹೋಗುವುದಾದರೆ, ಏನೆಲ್ಲಾ ನಡೆಯಬಹುದು ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಇದರಲ್ಲಿ ನಾನೊಬ್ಬ ಜರ್ನಲಿಸ್ಟ್ ಪಾತ್ರವನ್ನು ನಿರ್ವಹಿಸಿದ್ದೇನೆ. ಸೈನ್ಸ್, ಸಸ್ಪೆನ್ಸ್ ಮತ್ತು ಒಂದಷ್ಟು ಥ್ರಿಲ್ಲರ್ ಎಲಿಮೆಂಟ್ಸ್ ಸುತ್ತ ಈ ಸಿನಿಮಾ ಸಾಗುತ್ತದೆ. ಅಮೆರಿಕಾ ಮತ್ತು ಕರ್ನಾಟಕದ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಮುಂದಿನ ವರ್ಷದ ಮಧ್ಯ ಭಾಗಕ್ಕೆ “ರಿವೈಂಡ್’ ಅನ್ನು ಆಡಿಯನ್ಸ್ ಮುಂದೆ ತರುವ ಪ್ಲಾನ್ ಇದೆ’ ಎಂದು ಚಿತ್ರದ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟರು.
ಈಗಾಗಲೇ ಕಿರುತೆರೆಯ ಕೆಲ ಧಾರಾವಾಹಿಗಳಲ್ಲಿ ಮತ್ತು ಚಿತ್ರಗಳಲ್ಲಿ ಅಭಿನಯಿಸಿರುವ ಚಂದನಾ “ರಿವೈಂಡ್’ ಚಿತ್ರದಲ್ಲಿ ನಾಯಕಿ. ಎ.ಆರ್ ರೆಹಮಾನ್, ಹ್ಯಾರೀಸ್ ಜಯರಾಜ್ ಮೊದಲಾದ ಖ್ಯಾತನಾಮರ ಜೊತೆ ಕೆಲಸ ಮಾಡಿರುವ ಅನುಭವವಿರುವ ಸುರೇಶ್ ಸೋಲೋಮನ್ “ರಿವೈಂಡ್’ ಚಿತ್ರದ ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. “ಪನಾರೊಮಿಕ್ ಸ್ಟುಡಿಯೋ’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ರಿವೈಂಡ್’ ಚಿತ್ರಕ್ಕೆ ಪ್ರೇಮ್ ಛಾಯಾಗ್ರಹಣ, ವಿನೋದ್ ಬಸವರಾಜ್ ಸಂಕಲನ ಕಾರ್ಯವಿದೆ.
ಇದೇ ವೇಳೆ ಹಾಜರಿದ್ದ ಹಿರಿಯ ನಟ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಲಹರಿ ವೇಲು “ರಿವೈಂಡ್’ ಚಿತ್ರದ ಬಗ್ಗೆ ನವ ಪ್ರತಿಭೆ ತೇಜಸ್ ಬಗ್ಗೆ ಒಂದಷ್ಟು ಮಾತನಾಡಿದರು. ಒಟ್ಟಾರೆ ತನ್ನ ಟೈಟಲ್ ಮತ್ತು ಕಥಾಹಂದರದ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಿರುವ “ರಿವೈಂಡ್’ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಬಹುದು ಅನ್ನೋದು ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.