Advertisement

ಮಳೆ ನಿಂತು ಹೋದ ಮೇಲೆ…

02:22 PM Sep 04, 2017 | |

ಪಕ್ಕದ ಮನೆಗಿಂತ ನಮ್ಮ ಮನೆ ಕೆಳಗಿನ ಮಟ್ಟದಲ್ಲಿದ್ದು, ಅವರ ಮನೆಯ ನೀರು ಬೀದಿಗೆ ಬಿದ್ದು, ನಂತರ ರಸ್ತೆಯಲ್ಲಿ ಹರಿದು ಹೋಗಲಾಗದೆ, ಹಾಗೆಯೇ ನಿಂತರೆ ನಮ್ಮ ಮನೆಯ ಮುಂದೆ ಎಂಟು ಇಂಚಿನ ನೀರು ನಿಲ್ಲಬಹುದು. ಹೀಗೆ ನೀವು ಲೆಕ್ಕಹಾಕಿದರೆ, ಧೋ ಎಂದು ಮಳೆ ಸುರಿದೊಡನೆ ಕೆಲಪ್ರದೇಶಗಳಲ್ಲಿ ಏಕೆ ನೀರು ಮನೆಯೊಳಗೆ ಹರಿಯುತ್ತದೆ ಎಂಬುದು ಸುಲಭದಲ್ಲಿ ಅರಿವಾಗುತ್ತದೆ. 

Advertisement

ಮನೆ ಹೊರಗೆ “ಧೋ’ ಎಂದು ಮಳೆ ಸುರಿಯುತ್ತಿದ್ದರೆ, ನಮಗೆ ಎದುರಾಗುವ ಮೊದಲ ಚಿಂತೆ- ಅಪ್ಪಿತಪ್ಪಿ ಈ ನೀರೆಲ್ಲ ಒಳಗೆ ಬಂದರೆ ಏನು ಮಾಡುವುದು? ಎಂಬುದು. ಮನೆಯನ್ನು ಎಷ್ಟೇ ಗಟ್ಟಿಮುಟ್ಟಾಗಿ ಕಟ್ಟಿದ್ದರೂ, ನೀರು ಒಳಗೆ ಹರಿದು ಬಂದರೆ ಹೇಗೆ ತಡೆಯುವುದು ಎಂಬುದು ಪ್ರಶ್ನೆಯಾಗಬಹುದು. ಹಾಗಾಗಿ, ಮನೆ ಕಟ್ಟುವಾಗ ಕೆಲ ವಿಷಯಗಳನ್ನು ಗಮನಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡರೆ, ಮುಂದಾಗಬಹುದಾದ ಅವಘಡಗಳನ್ನು ಸುಲಭದಲ್ಲಿ ತಪ್ಪಿಸಬಹುದು.

ಕರಾವಳಿ ಹಾಗೂ ಘಟ್ಟ ಪ್ರದೇಶಗಳನ್ನು ಬಿಟ್ಟರೆ, ಬಹುತೇಕ ಕಡೆ ವರ್ಷಕ್ಕೆ ನೂರು ಸೆಂಟಿ ಮೀಟರ್‌ ಮಳೆ ಆಗುತ್ತದೆ ಅಷ್ಟೆ. ಇದನ್ನು ದಿನದ ಲೆಕ್ಕದಲ್ಲಿ ಹೇಳಬೇಕೆಂದರೆ, ವರ್ಷವಿಡೀ ಪ್ರತಿದಿನ ಸುಮಾರು ಮೂರು ಮಿಲಿ ಮೀಟರ್‌ ಆಗುತ್ತದೆ.  ಈ ಲೆಕ್ಕದಲ್ಲಿ ಮಳೆ ಪ್ರತಿದಿನ ಬಿದ್ದರೆ, ಅದು ನಮ್ಮ ರಸ್ತೆಗಳನ್ನು ನೆನೆಸಲೂ ಕೂಡ ಸಾಕಾಗುವುದಿಲ್ಲ. ಮಳೆ ಯಾವಾಗ, ಎಷ್ಟು ಬೀಳುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಬಿದ್ದರೆ ಕೆಲವೇ ಗಂಟೆಗಳಲ್ಲಿ ನೂರು ಮಿಲಿ ಮೀಟರ್‌ ಬಿದ್ದುಬಿಡುತ್ತದೆ. ಇದು ರಸ್ತೆ ಹಾಗೂ ಮೋರಿಗಳಲ್ಲಿ ಹರಿದು, ಕಡೆಗೆ ತಗ್ಗು ಪ್ರದೇಶಗಳಲ್ಲಿ ಅಡೆತಡೆಯಾದರೆ, ಮನೆಯೊಳಗೆ ನುಗ್ಗುತ್ತದೆ. ಆದುದರಿಂದ ನಾವು ನಮ್ಮ ಮನೆ ಕಟ್ಟುವ ಪ್ರದೇಶ ತಗ್ಗಾಗಿದೆಯೇ? ನೀರು ಹರಿದು ಹೋಗಲು ತೊಡಕುಗಳಿವೆಯೇ? ಎಂಬುದನ್ನು ಪರಿಶೀಲಿಸಿ ಮುಂದುವರಿಯುವುದು ಸೂಕ್ತ.

ಪ್ಲಿಂತ್‌ ಲೆಕ್ಕಾಚಾರ
ಮನೆಯ ಪ್ರವೇಶ ದ್ವಾರದ ಮಟ್ಟ ನಿರ್ಧರಿಸುವ ಪ್ಲಿಂತ್‌ಅನ್ನು ಸಾಮಾನ್ಯವಾಗಿ ರೋಡಿನ ಮಧ್ಯ ಮಟ್ಟದಿಂದ ಒಂದೂವರೆ ಅಡಿ ಎತ್ತರ ಇರಿಸಲಾಗುವುದು. ಕೆಲವೇ ಗಂಟೆಗಳಲ್ಲಿ ನೂರು ಎಮ್‌ ಎಮ್‌ ಅಂದರೆ ಸುಮಾರು ನಾಲ್ಕು ಇಂಚಿನಷ್ಟು ಮಳೆ ಬಿದ್ದರೆ, ನಮ್ಮ ಮನೆ ಒಂದೂವರೆ ಅಡಿ ಎತ್ತರದಲ್ಲಿ ಇರುವುದರಿಂದ ಏನೂ ತೊಂದರೆ ಆಗಕೂಡದು ಎಂಬುದು ನಮ್ಮ ಲೆಕ್ಕಾಚಾರ ಇರಬಹುದು. ಆದರೆ ನೀರು ಸರಾಗವಾಗಿ ಹರಿದು ಹೋದರೆ ಮಾತ್ರ ಈ ಲೆಕ್ಕಾಚಾರ ಸರಿಯಾಗುತ್ತದೆ. ಉದಾಹರಣೆಗೆ, ಪಕ್ಕದ ಮನೆಗಿಂತ ನಮ್ಮ ಮನೆ ಕೆಳಗಿನ ಮಟ್ಟದಲ್ಲಿದ್ದು, ಅವರ ಮನೆಯ ನೀರು ಬೀದಿಗೆ ಬಿದ್ದು, ನಂತರ ರಸ್ತೆಯಲ್ಲಿ ಹರಿದು ಹೋಗಲಾಗದೆ, ಹಾಗೆಯೇ ನಿಂತರೆ ನಮ್ಮ ಮನೆಯ ಮುಂದೆ ಎಂಟು ಇಂಚಿನ ನೀರು ನಿಲ್ಲಬಹುದು. ಹೀಗೆ ನೀವು ಲೆಕ್ಕಹಾಕಿದರೆ, ಧೋ ಎಂದು ಮಳೆ ಸುರಿದೊಡನೆ ಕೆಲಪ್ರದೇಶಗಳಲ್ಲಿ ಏಕೆ ನೀರು ಮನೆಯೊಳಗೆ ಹರಿಯುತ್ತದೆ ಎಂಬುದು ಸುಲಭದಲ್ಲಿ ಅರಿವಾಗುತ್ತದೆ. ಇದು ಮಳೆ ಸುರಿಯುವುದಕ್ಕಿಂತ, ಸುರಿದ ಮಳೆ ಸರಾಗವಾಗಿ ಹರಿದು ಹೋಗದ ಕಾರಣ ಉಂಟಾಗುವ ತೊಂದರೆ ಎಂಬುದೂ ಗೊತ್ತಾಗುತ್ತದೆ.

ನೀರಿನ ಸ್ವಾಭಾವಿಕ ಗುಣ
ಮಳೆ ಎಷ್ಟೇ ಜೋರಾಗಿ ಸುರಿದರೂ, ಎಷ್ಟೇ ಅಡೆತಡೆಗಳಿದ್ದರೂ, ನಾಲ್ಕಾರು ಗಂಟೆಗಳಲ್ಲಿ ಅಲ್ಲದಿದ್ದರೂ ನಾಲ್ಕಾರು ದಿನಗಳಲ್ಲಿ ನೀರು ಹೇಗೋ ದಾರಿ ಕಂಡುಕೊಂಡು ಪ್ರವಾಹ ಕಡಿಮೆ ಆಗುತ್ತದೆ. ಆದರೆ ಒಮ್ಮೆ ಫ್ಲಡ್‌ ಆದರೆ, ಸಾಕಷ್ಟು ಹಾನಿ ಉಂಟಾಗುವುದರಿಂದ, ನಮ್ಮ ಗುರಿ ಒಂದು ಕ್ಷಣವೂ ಮನೆಯೊಳಗೆ ನೀರು ಹರಿದುಬಾರದಂತೆ ತಡೆಯುವುದೇ ಆಗಿರಬೇಕು. ಮನೆ ಕಟ್ಟುವ ಮೊದಲು, ಅದರಲ್ಲೂ ನಿಮ್ಮ ನಿವೇಶನ ತಗ್ಗಾದ ಪ್ರದೇಶದಲ್ಲಿದ್ದರೆ,  ಅಲ್ಲಿಂದ ನೀರು ಹರಿದು ಹೋಗಲು ಸಾಕಷ್ಟು ವಿಶಾಲವಾದ ಮೋರಿ ಹಾಗೂ ಕಾಲುವೆಗಳಿವೆಯೇ? ಎಂಬುದನ್ನು ಪರಿಶೀಲಿಸಿ. ಹತ್ತಾರು ವರ್ಷಗಳಿಂದ ಅದೇ ಪ್ರದೇಶಗಳಲ್ಲಿ ವಾಸಿಸುತ್ತಿರುವ  ಮನೆ ಮಾಲೀಕರಿಂದ ಗರಿಷ್ಠ ನೀರಿನ ಮಟ್ಟದ ಬಗ್ಗೆ ಹಾಗೂ ಅವರಿಗೆ ಏನಾದರೂ ಮಳೆಗಾಲದಲ್ಲಿ ತೊಂದರೆ ಆಗುತ್ತದೆಯೇ? ಎಂಬುದನ್ನು ಕೇಳಿಕೊಳ್ಳಿ. ನಂತರ ಮಾಮೂಲಿ ಪ್ಲಿಂತ್‌ಗಿಂತ ಒಂದೆರಡು ಅಡಿ ಎತ್ತರಕ್ಕೆ ಮನೆಯ ಮುಖ್ಯಬಾಗಿಲನ್ನು ಇಟ್ಟರೆ, ಜೋರು ಮಳೆಗೂ, ನೀರು ಸರಾಗವಾಗಿ ಹರಿದು ಹೋಗದಿದ್ದರೂ, ಮನೆಯೊಳಗೆ ನೀರು ಹರಿದು ಬರುವುದು ತಪ್ಪುತ್ತದೆ.

Advertisement

ಹಣ ಉಳಿತಾಯಕ್ಕೆ ವಿಧಾನಗಳು
ಹೇಳಿ ಕೇಳಿ ಪ್ಲಿಂತ್‌ ಎತ್ತರಿಸುವುದು ದುಬಾರಿ ಸಂಗತಿ. ಇಡೀ ಮನೆಯನ್ನು ಒಂದೆರಡು ಅಡಿ ಹೆಚ್ಚುವರಿಯಾಗಿ ಎತ್ತರಿಸಬೇಕೆಂದರೆ,  ಪಾಯದ ಲೆಕ್ಕದಲ್ಲಿ ಹೆಚ್ಚಾ ಕಡಿಮೆ ಶೇ. ಇಪ್ಪತ್ತರಷ್ಟು ದುಬಾರಿ ಆಗಬಹುದು. ಇದನ್ನು ತಪ್ಪಿಸಲು ನಮ್ಮಲ್ಲಿ, ಅದರಲ್ಲೂ ಹಳ್ಳಿಗಳಲ್ಲಿ, ಮನೆಯ ಮುಂದಿನ ಜಗುಲಿ ಹಾಗೂ ಪ್ರವೇಶದ್ವಾರವನ್ನು ಮಾತ್ರ ಸುಮಾರು ಮೂರು ನಾಲ್ಕು ಅಡಿ ಎತ್ತರಿಸಿ, ನಂತರ ಅಲ್ಲಿಂದ ಮುಂದೆ ಮನೆಯ ಮಟ್ಟ ಹೆಚ್ಚಾ ಕಡಿಮೆ ಭೂಮಿ ಮಟ್ಟದಲ್ಲೇ ಇರುವಂತೆ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ರಸ್ತೆಯ ಧೂಳು ಮನೆಯನ್ನು ಪ್ರವೇಶಿಸುವುದು ಕಡಿಮೆ ಆಗುವುದರ ಜೊತೆಗೆ -ಹುಳ ಹುಪ್ಪಡಿ ಕೂಡ ಒಳನುಸುಳಲು ಸುಲಭವಾಗುತ್ತಿರಲಿಲ್ಲ. ಹೀಗೆ ಮಾಡುವುದರ ಮತ್ತೂಂದು ಮುಖ್ಯ ಉದ್ದೇಶ- ಮೂರು ನಾಲ್ಕು ಅಡಿ ಎತ್ತರದ ಪ್ರವಾಹದ ನೀರು ಮನೆಯನ್ನು ಪ್ರವೇಶಿಸದಂತೆ ಈ ಎತ್ತರದ ಜಗುಲಿ ಹಾಗೂ ಮುಂಬಾಗಿಲು ತಡೆಯುತ್ತಿತ್ತು.

ಹಳ್ಳಿಗಳಲ್ಲಾದರೆ, ಊರಹೊರಗೆ ಸಾಕಷ್ಟು ಜಮೀನಿದ್ದು, ನೀರು ಹರಿದುಹೋಗಲು ಹೆಚ್ಚು ಅಡೆತಡೆಗಳಿರುವುದಿಲ್ಲ. ಆದರೆ ನಗರ ಪ್ರದೇಶಗಳಲ್ಲಿ ಅಡೆತಡೆಗಳು ಸಾಮಾನ್ಯವಾಗಿದ್ದು, ಎಷ್ಟು ನೀರು ಶೇಖರಣೆ ಆಗುತ್ತದೆ ಎಂದು ನಿಖರವಾಗಿ ಹೇಳಲು ಕಷ್ಟ. ಆದುದರಿಂದ, ನೀವು ತಗ್ಗು ಪ್ರದೇಶದಲ್ಲಿ ಮನೆ ಕಟ್ಟುವರಿದ್ದರೆ, ಮಳೆ ನೀರಿನಿಂದಲೇ ಪ್ರವಾಹ ಎದುರಾಗುವಂತಿದ್ದರೆ, ಅನಿವಾರ್ಯವಾಗಿ ಸಿಲ್ಟ್ – ಕಂಬದ ಮೇಲೆ ಮನೆ ಕಟ್ಟಬೇಕಾಗುತ್ತದೆ! ಇತ್ತೀಚಿನ ದಿನಗಳಲ್ಲಿ ಜನರು ಕೆಳಗೆ ಕಾರುಗಳಿಗೆ ಸ್ಥಳ ಮಾಡಿ ಸುಮಾರು ಏಳು ಎಂಟು ಅಡಿ ಎತ್ತರದಲ್ಲಿ ನೆಲಮಹಡಿ ಕಟ್ಟುವುದನ್ನು ಅಪೇಕ್ಷಿಸುತ್ತಾರೆ. ಈ ಮಾದರಿಯ ಮನೆಯ ವಿನ್ಯಾಸ, ಕಾರುಗಳಿಗೆ ರಕ್ಷಣೆ ನೀಡದಿದ್ದರೂ ಮೊದಲ ಮಹಡಿಯಂತಿರುವ ನೆಲಮಹಡಿ- ಗ್ರೌಂಡ್‌ ಫ್ಲೋರ್‌ ಮನೆಗೆ ಸಾಕಷ್ಟು ರಕ್ಷಣೆ ನೀಡಬಲ್ಲದು. 

ಟಾಯ್ಲೆಟ್‌ ಮಟ್ಟ ನಿರ್ಧರಿಸುವ ಬಗ್ಗೆ
ಅನೇಕಬಾರಿ ಮನೆಯೊಳಗೆ ನೀರು ನುಗ್ಗುವ ಮೊದಲೇ ಶೌಚಾಲಯದಿಂದ ಕೊಳಚೆ ನೀರು ಹಿಂದೆ ಸರಿಯಲು ತೊಡಗಿ ಇಡೀ ಮನೆ ಗಬ್ಬೆದ್ದು ಹೋಗುತ್ತದೆ. ಹೀಗಾಗಲು ಮುಖ್ಯ ಕಾರಣ- ರಸ್ತೆಯಲ್ಲಿ ಇರುವ ಮುಖ್ಯ ಸ್ಯಾನಿಟರಿ ಕೊಳವೆಗಳೂ ಕೂಡ ತುಂಬಿಕೊಳ್ಳುವುದೇ ಆಗಿರುತ್ತದೆ. ಕೊಳಚೆ ನೀರು ಮನೆಯೊಳಗೆ ಹರಿದು ಬರದಂತೆ ತಡೆಯಲು ನಾವು ಮುಖ್ಯವಾಗಿ ಮಾಡಬೇಕಾಗಿರುವ ಮುಂಜಾಗರೂಕತಾ ಕ್ರಮ- ರೋಡಿನ ಪಕ್ಕದಲ್ಲಿ, ನಮ್ಮ ನಿವೇಶನದ ಕೊನೆಯಲ್ಲಿ ಒಂದು ಇನ್ಸ್‌ಪೆಕ್ಷನ್‌ ಚೇಂಬರ್‌ ಕಟ್ಟಿ, ಅದಕ್ಕೆ ಸೂಕ್ತ ವೆಂಟ್‌ ಪೈಪ್‌ ನೀಡಿ, ಗಲ್ಲಿ ಟ್ರಾಪ್‌ ಒಂದನ್ನು ಅಳವಡಿಸಬೇಕು.  ಹೀಗೆ ಮಾಡುವುದರಿಂದ ಮನೆಯೊಳಗೆ ನೀರು ಹರಿದು ಬರುವುದಕ್ಕೆ ಮೊದಲು ಈ ಟ್ರಾಪ್‌ ಮೂಲಕ ಹೊರಹರಿಯಲು ತೊಡಗುತ್ತದೆ. ನಮಗೆ ಸಂಬಂಧಿಸಿದವರನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಸಮಯವೂ ಸಿಗುತ್ತದೆ. 

ಹೆಚ್ಚಿನ ಮಾತಿಗೆ ಫೋನ್‌ 98441 32826

ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next