ಸುಂದರಿ, ಶಿವಭಕ್ತೆ, ಸುಬಲ ರಾಜನ ಪುತ್ರಿ, ಶಕುನಿಯ ತಂಗಿ ಗಾಂಧಾರಿಯನ್ನು ಧೃತರಾಷ್ಟ್ರನಿಗೆ ಮದುವೆ ಮಾಡಿಕೊಡಲಾಗುತ್ತದೆ. ತಾನು ಮದುವೆಯಾಗಲಿರುವ ಹುಡುಗ ಕುರುಡ ಎಂದು ಗೊತ್ತಾದಾಗ ಆಕೆಯ ಮನಸ್ಸಿನಲ್ಲಿ ಎಂತಹ ತಳಮಳಗಳಾಗಿರಬಹುದು? ಕುರುಡನಿಗೆ ಸುಂದರಿಯಾದರೆ ಏನು? ಕುರೂಪಿಯಾದರೆ ಏನು? ಅಲ್ಲಿಗೆ ಆಕೆಯ ಸೌಂದರ್ಯಕ್ಕೆ ಯಾವ ಬೆಲೆಯೂ ಇಲ್ಲ! ರಾಜ ಮನೆತನಕ್ಕೆ ಮಾತ್ರ, ಇಂತಹ ಸುಂದರಿ ನಮ್ಮ ಸೊಸೆ, ಕುರುಡನಿಗೂ ಎಂತಹ ಹೆಣ್ಣನ್ನು ತಂದಿದ್ದೇವೆ ನೋಡಿ ಎಂದು ಹೇಳಿಕೊಳ್ಳಲಿಕ್ಕೆ ಅದು ಉಪಯೋಗಕ್ಕೆ ಬರಬಹುದು. ಗಂಡನಿಗೇ ತನ್ನ ಸೌಂದರ್ಯ ಕಾಣುವುದಿಲ್ಲವೆಂದರೆ, ತಾನು ಸುಂದರಿ ಎಂಬ ಸುಪ್ತ ಅಹಂಕಾರ (ಇದ್ದರೆ!)ನಿರ್ನಾಮವಾದಂತೆ! ಮಹಾಭಾರತದಲ್ಲಿ ಅವಳ ಅಂತರಂಗ ಶೋಧ ನಡೆಯುವುದೇ ಇಲ್ಲ.
ಪತಿ ಕುರುಡನೆಂದು ಗೊತ್ತಾದಾಗ, ಪತಿಗಿಲ್ಲದ ಸಂತೋಷ ತನಗೂ ಬೇಡವೆಂದು ನಿರ್ಧರಿಸಿ, ಆಕೆ ಜೀವನಪೂರ್ತಿ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳಲು ನಿರ್ಧರಿಸುತ್ತಾಳೆ ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ದೇಶದ ಖ್ಯಾತ ಬರೆಹಗಾರ ಎಸ್.ಎಲ್.ಭೈರಪ್ಪನವರು ಮಹಾಭಾರತವನ್ನು ಬದಲಿಸಿ ಪರ್ವವೆಂಬ ಕಾದಂಬರಿ ಹೆಸರಿನಲ್ಲಿ ಬರೆದಿದ್ದಾರೆ. ಅದರಲ್ಲಿ ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿದ್ದು, ಪಾತಿವ್ರತ್ಯದ ಕಾರಣಕ್ಕಾಗಿಯಲ್ಲ, ಕುರುಡನನ್ನು ಬಲಾತ್ಕಾರದಿಂದ ತನಗೆ ಕಟ್ಟಿದ ಭೀಷ್ಮನ ವಿರುದ್ಧದ ಪ್ರತಿಭಟನಾರ್ಥವಾಗಿ ಎನ್ನಲಾಗಿದೆ. ಇದು ಭೈರಪ್ಪನವರ ಒಳನೋಟ. ಅವರಲ್ಲಿನ ಬರಹಗಾರನಿಗೆ ಸಿಕ್ಕಿದ ಒಂದು ಹೊಳಹು. ಆಕೆ ನಿಜಕ್ಕೂ ಏನೆಂದು ಯಾರಿಗೂ ಗೊತ್ತಾಗುವುದಿಲ್ಲ. ಒಂದುವೇಳೆ ಮಹಾಭಾರತ ಕಥೆಯನ್ನು ಬರೆದಿದ್ದ ವ್ಯಾಸರು, ಆಕೆಯನ್ನು ಸ್ವತಃ ಖಾಸಗಿಯಾಗಿ ಸಂದರ್ಶಿಸಿ, ನಿನ್ನ ಅಭಿಪ್ರಾಯ ಏನು? ಎಂದು ಕೇಳಿ ಅನಂತರ ಮಹಾಭಾರತದ ಹರಹಿನಲ್ಲಿ ಅವಳನ್ನು ವಿಸ್ತರಿಸಿದ್ದರೆ ಏನಾದರೂ ಒಪ್ಪಬಹುದಿತ್ತು. ಇಲ್ಲಿ ಅಂತಹದ್ದು ನಡೆದಿಲ್ಲವಾದ್ದರಿಂದ ನಾವು ಯಾರು ಏನೇ ಹೇಳಿದರೂ, ಅದು ನಮಗೆ ದಕ್ಕಿದ್ದು ಅಷ್ಟೇ ಆಗಿ ಉಳಿಯುತ್ತದೆ.
ಆದರೆ ಭೈರಪ್ಪನವರ ಈ ರೂಪಾಂತರಕ್ಕೆ ಒಂದು ತೂಕವಿದೆ. ಗಾಂಧಾರಿಯನ್ನು ಮದುವೆಯಾಗುವ ಮುನ್ನ ಕುರು ರಾಜರು ಧೃತರಾಷ್ಟ್ರನ ಆದೇಶದಂತೆ ಯುದ್ಧದಲ್ಲಿ ಸಂಪೂರ್ಣ ಸೋಲಿಸಿರುತ್ತಾರೆ. ಅನಂತರ ಭೀಷ್ಮ ಹೋಗಿ ಸುಬಲನಲ್ಲಿ ಹೆಣ್ಣು ಕೇಳುತ್ತಾನೆ. ಅವನಿಗೆ ಧೃತರಾಷ್ಟ್ರನಿಗೆ ಮಗಳನ್ನು ಮದುವೆ ಮಾಡಿಸದೇ ಗತ್ಯಂತರವೇ ಇರಲಿಲ್ಲ. ಹಿಂದೆ ಕಾಶೀರಾಜನ ಪುತ್ರಿಯರನ್ನು ಭೀಷ್ಮ ಹೊತ್ತುಕೊಂಡು ಬರುವಾಗ, ಕಾಶೀರಾಜನೂ ಇಂತಹದ್ದೇ ಪರಿಸ್ಥಿತಿ ಎದುರಿಸಿರುತ್ತಾನೆ. ಅನಂತರ ಆ ಪುತ್ರಿಯರ ಕಥೆ ಏನಾಯಿತು ಎನ್ನುವುದನ್ನು ಹಿಂದಿನ ಅಂಕಣಗಳಲ್ಲಿ ಹೇಳಲಾಗಿದೆ. ಅವಳಲ್ಲಿ ಅಂಬೆಯಂತೂ ಭೀಷ್ಮನ ಸಾವೇ ತನ್ನ ಜೀವನದ ಏಕೈಕ ಗುರಿಯೆಂದು ಶಪಥ ಮಾಡುವ ಮಟ್ಟಕ್ಕೆ ದ್ವೇಷ ಬೆಳೆಯುತ್ತದೆ. ಅಂತಹ ದುರ್ಬಲಸ್ಥಿತಿಯಲ್ಲಿ ಗಾಂಧಾರಿಯನ್ನು ಕುರುಡನಿಗೆ ಮದುವೆ ಮಾಡಿಸಲು ಯುವರಾಜ ಶಕುನಿ ಪೂರ್ಣ ವಿರೋಧಿಸುತ್ತಾನೆ. ಇದೊಂದು ಆಕ್ರಂದನವಷ್ಟೇ! ಅದಕ್ಕಿಂತ ಮಿಗಿಲಾಗಲು ಸಾಧ್ಯವಿಲ್ಲ. ದುರ್ವಿಧಿ ಹೇಗಿರುತ್ತದೆ ನೋಡಿ, ತನ್ನ 99 ಜನ ಸಹೋದರರ ಸಾವಿಗೆ ಕಾರಣವಾದ ಅದೇ ಕುರುವಂಶದ ಕುಡಿಯನ್ನು ಗಾಂಧಾರಿ ವರಿಸಬೇಕಾಗಿ ಬರುತ್ತದೆ. ಬದುಕುಳಿದ ಒಬ್ಬನೇ ಒಬ್ಬ ಶಕುನಿ ಧಾರ್ತರಾಷ್ಟ್ರರ ಸರ್ವನಾಶವೇ ತನ್ನ ಗುರಿಯೆಂದು ತೀರ್ಮಾನಿಸಿರುತ್ತಾನೆ.
ಒಂದು ಕಡೆ ಶಕುನಿ ದುರ್ಯೋಧನನ ಬೆಂಬಲಕ್ಕೆ ನಿಂತು ಪಗಡೆಯಾಟದಲ್ಲಿ ಧರ್ಮರಾಜನನ್ನು ಸೋಲಿಸಿ, ಧಾರ್ತರಾಷ್ಟ್ರರ ಪ್ರೀತಿಗೆ ಪಾತ್ರನಾಗುತ್ತಾನೆ. ಅದೇ ಸಮಯದಲ್ಲಿ ಅವನು ಪಾಂಡವರನ್ನು ಅವರ ಬೆಂಬಲಿಗ ರಾಜರನ್ನು ಕೆರಳಿಸುತ್ತಿರುತ್ತಾನೆ. ಈ ಪಗಡೆಯಾಟ ಮತ್ತು ಅದರಿಂದ ಧರ್ಮರಾಜ ಅನುಭವಿಸಿದ ಸೋಲು ಯುದ್ಧದಂತಹ ವಿಕೋಪಸ್ಥಿತಿಗೆ ಕುರುವಂಶವನ್ನು ತಂದು ನಿಲ್ಲಿಸುತ್ತದೆ. ಇಲ್ಲಿನ ವಿಡಂಬನೆಯನ್ನು ಗಮನಿಸಿ, ಮದುವೆಗೆ ಮುನ್ನ ಗಾಂಧಾರಿಗೆ ಕುರುವಂಶ ಶತೃವಾಗಿರುತ್ತದೆ. ಮುಂದೆ ಅದೇ ಕುರುವಂಶವನ್ನು ಬೆಳೆಸುವ ಅನಿವಾರ್ಯತೆಗೆ ಬೀಳುತ್ತಾಳೆ. ಒಂದುಕಡೆ ಕುರುವಂಶ ನಾಶವಾಗುತ್ತಿರುತ್ತದೆ, ಅದರ ಕ್ಷಣಕ್ಷಣದ ಮಾಹಿತಿ ಗಾಂಧಾರಿಗೆ ಸಿಗುತ್ತಿರುತ್ತದೆ. ಆಗ ಸಾಯುತ್ತಿರುವುದು ಬರೀ ಕುರುವಂಶವಲ್ಲ, ಆಕೆಯ ಸ್ವಂತ ಮಕ್ಕಳು. ಇದನ್ನು ಅವಳು ಸಂಭ್ರಮಿಸಬೇಕೋ? ಒಳಗೊಳಗೇ ಕುಣಿದಾಡುತ್ತಿರುವ ಶಕುನಿಗೆ ಶಾಪ ಹಾಕಬೇಕೋ?
-ನಿರೂಪ