ಹೆಂಡತಿ ಊರಿಗೆ ಹೋದಾಗ ಗಂಡ ಖುಷಿಯಾಗಿರ್ತಾನೋ ಅಥವಾ ಗಂಡ ಊರಿಗೆ ಹೋದಾಗ ಹೆಂಡತಿ ಖುಷಿಯಾಗಿರುತ್ತಾಳ್ಳೋ?
– ಯಾರು ಹೆಚ್ಚು ಖುಷಿಯಾಗಿರುತ್ತಾರೋ ಗೊತ್ತಿಲ್ಲ. ಆದರೆ, “ಗಂಡ ಊರಿಗೆ ಹೋದಾಗ …’ ಚಿತ್ರ ತಂಡ ಖುಷಿಯಾಗಿದೆ. ಚಿತ್ರದಲ್ಲಿ ಹೊಸ ಸಂದೇಶವನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ ನಿರ್ದೇಶಕ ಸಾಯಿಕೃಷ್ಣ. ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಅದಕ್ಕೂ ಮುನ್ನ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಚಿತ್ರದ ವಿವರ ಕೊಟ್ಟರು ನಿರ್ದೇಶಕರು.
ಇದು ಕಣ್ಣಾರೆ ಕಂಡ ಘಟನೆ ಇಟ್ಟುಕೊಂಡು ಮಾಡಿದ ಚಿತ್ರವೋ ಅಥವಾ ಕಲ್ಪನೆಯ ಚಿತ್ರವೋ ಎಂಬ ಪ್ರಶ್ನೆಗೆ, “ಹಾಗೇನೂ ಇಲ್ಲ. ಇದೊಂದು ಕಾಲ್ಪನಿಕ ಚಿತ್ರ. ಸಾಮಾನ್ಯವಾಗಿ ಗಂಡ ಇದ್ದಾಗ ಹೆಂಡತಿಯರಿಗೆ ಹೆಚ್ಚು ಸ್ವಾತಂತ್ರ್ಯವಾಗಿರಲ್ಲ. ಅದೇ ಬೇರೆ ಊರಿಗೆ ಹೋದಾಗ ಎಷ್ಟೆಲ್ಲಾ ಸ್ವಾತಂತ್ರ್ಯದಿಂದ ಇರುತ್ತಾರೆ ಎಂಬ ಸುತ್ತ ಕಥೆ ಸಾಗುತ್ತೆ. ಹಾಗಂತ, ಇಲ್ಲಿ ಅಶ್ಲೀಲತೆಯಾಗಲಿ, ಅಸಹ್ಯ ಹುಟ್ಟಿಸುವ ಸಂಭಾಷಣೆಯಾಗಲಿ ಇಲ್ಲ. ಈಗಿನ ಸಂಬಂಧಗಳು ಹೇಗೆಲ್ಲಾ ಇವೆ ಎಂಬುದನ್ನು ಹೇಳಹೊರಟಿದ್ದೇನೆ. ಬರೀ ಕುಡಿತ, ಕುಣಿತ ಬದುಕಲ್ಲ ಎಂಬ ಸಂದೇಶ ಇಲ್ಲಿದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಸಾಯಿಕೃಷ್ಣ.
ಸಂಗೀತ ನಿರ್ದೇಶಕ ಅರುಣ್ ಅವರಿಗೆ ಇದು ಎರಡನೇ ಚಿತ್ರ. ಅವರಿಲ್ಲಿ ಮೂರು ಹಾಡುಗಳನ್ನು ನೀಡಿದ್ದಾರಂತೆ. ಪವನ್ ಎಂಬ ಹೊಸ ಪ್ರತಿಭೆ ಬರೆದ ಗೀತೆಗಳಿಗೆ ಪಲ್ಲವಿ, ಅನುರಾಧ ಭಟ್, ಶಶಿಕಲಾ ಹಾಡಿದ್ದಾರೆ. ಎಲ್ಲಾ ಹಾಡುಗಳು ಕಥೆಗೆ ಪೂರಕವಾಗಿವೆ ಅಂತ ಹೇಳಿ ನಿರ್ಮಾಪಕರಿಗೆ ಮೈಕ್ ಕೊಟ್ಟರು ಅರುಣ್.
ನಿರ್ಮಾಪಕ ಜಗದೀಶ್ ಅವರಿಗೆ ಇದು ಮೊದಲ ಅನುಭವ. ಎಸ್‌ಬಿಎಲ್ ಹೆಸರಿನ ಸೇಲ್ಸ್ ಉದ್ಯಮಿಯಾಗಿರುವ ಅವರಿಗೆ ಕಥೆ ಇಷ್ಟವಾಗಿದ್ದರಿಂದ ಚಿತ್ರ ಮಾಡಿದ್ದಾರಂತೆ. ಅವರ ಜತೆ ನಿರ್ಮಾಣದಲ್ಲಿ ಕಿರಣ್ ಮತ್ತು ಜಾನ್ ಕೂಡ ಕೈ ಜೋಡಿಸಿದ್ದಾರೆ. “ಹತ್ತು ಮಂದಿ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಶೀರ್ಷಿಕೆ ನೋಡಿದಾಗ, ಹಲವು ಪ್ರಶ್ನೆಗಳು ಬರಬಹುದು. ಆದರೆ, ಇದು ಬೇರೆ ರೀತಿಯ ಚಿತ್ರ ಎಂಬ ಗ್ಯಾರಂಟಿ ಕೊಡುತ್ತೇನೆ’ ಅಂದರು ಜಗದೀಶ್.
ಅಂದು ಐವರು ನಾಯಕಿಯರು ಹೈಲೈಟ್ ಆಗಿದ್ದರು. ಸಿಂಧು ರಾವ್, ರಾಧಿಕಾ ರಾಮ್, ಅನು ಗೌಡ, ಶಾಲಿನಿ, ಸ್ವಪ್ನ ಇವರೆಲ್ಲರೂ, “ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಗಂಡ ಊರಿಗೆ ಹೋದಾಗ ಏನೆಲ್ಲಾ ಆಗುತ್ತೆ ಎಂಬ ಕುತೂಹಲ ಇದ್ದರೆ ಚಿತ್ರ ನೋಡಿ. ಇಲ್ಲಿ ನಮಗೂ ಎಣ್ಣೆ ಸಾಂಗ್ ಇದೆ. ಅದು ಯಾಕೆ ಬರುತ್ತೆ ಅನ್ನುವದಕ್ಕೆ ಚಿತ್ರ ಬರುವವರೆಗೆ ಕಾಯಬೇಕು’ ಅಂತ ಹೇಳುವ ಹೊತ್ತಿಗೆ ಸಮಯ ಮೀರಿತ್ತು. ಸಹ ನಿರ್ಮಾಪಕ ವಿ.ಸಿ.ಎನ್ ಮಂಜು, “ಇದೊಂದು ಸಂದೇಶ ಇರುವ ಚಿತ್ರ. ಇಲ್ಲಿ ಅಸಹ್ಯ ಹುಟ್ಟಿಸುವಂಥದ್ದು ಏನೂ ಇಲ್ಲ. ಒಂದು ಮನರಂಜನೆಯ ಚಿತ್ರವಿದು ಅಂದರು ಅವರು. ಕೊನೆಯಲ್ಲಿ ನಿರ್ಮಾಪಕ ಬೆಂಕೋಶ್ರೀ ಆಡಿಯೋ ರಿಲೀಸ್ ಮಾಡಿ ಶುಭ ಹಾರೈಸಿದರು.