Advertisement
ಹೌದು, ಸಮಸ್ತ ಸಂಪತ್ತು ಭೋಗಭಾಗ್ಯಗಳನ್ನೂ ನಿಂತ ಹೆಜ್ಜೆಯಲ್ಲಿ ಕೊಡವಿ, ಅಡವಿಗೆ ಹೋಗಬೇಕಾಗಿ ಬಂದಾಗ, ನನ್ನ ಹಾಗೂ ನನ್ನವರ ಮಾನಸಿಕ ಸ್ಥಿತಿ ಹೇಗಿದ್ದಿರಬಹುದು? ನನ್ನವರ ಹೊರತಾಗಿ ಬೇರೆ ಯಾರೇ ಆ ಜಾಗದಲ್ಲಿ ಇದ್ದಿದ್ದರೂ ಅವರ ಕ್ರಿಯೆ-ಪ್ರತಿಕ್ರಿಯೆ ಹೇಗಿರುತ್ತಿತ್ತು?
Related Articles
Advertisement
ಯಾವುದೇ ಮಾತಿನ ವ್ಯವಹಾರವಾಗಲಿ, ಅಲ್ಲಲ್ಲೇ ಮುಗಿಸಿಕೊಳ್ಳುವುದು ಅತ್ಯುತ್ತಮ ಹಾದಿ. ಮಾತಿನ ಕ್ರಿಯೆ, ಪ್ರಕ್ರಿಯೆ, ಪ್ರತಿಕ್ರಿಯೆ ಹೇಗೆಲ್ಲ, ಏನೆಲ್ಲ ಪರಿಣಾಮ ಬೀರುತ್ತದೆ ಎಂದು ಹೇಳುವುದು ಕಷ್ಟ. (ವನವಾಸದ ಸಂದರ್ಭದಲ್ಲಿ ನನ್ನವರ ಮೇಲಿನ ಕಾಳಜಿಯಿಂದ ನಾನು ಮೈದುನ ಲಕ್ಷ್ಮಣನಿಗೆ ಆಡಿದ ಒಂದು ಮಾತು ಮುಂದೆ ಎಷ್ಟು ಆತ್ಮಘಾತುಕವಾಯಿತು ಎಂಬುದನ್ನು ನೆನೆದರೆ ಈಗಲೂ ಮೈ ನಡುಗುತ್ತದೆ) ಒಟ್ಟಿನಲ್ಲಿ ಹೇಳಬೇಕೆಂದರೆ ಕೈಕೇಯಿಯೇ ಮರೆತಿದ್ದ ಆ ವರದ ಮೊರೆತ ಮಾತ್ರ ದಕ್ಷಿ$ಣ ಸಮುದ್ರದ ಆಚೆವರೆಗೂ 14 ವರ್ಷಗಳಷ್ಟು ದೀರ್ಘಕಾಲ ಕೇಳಿಸುತ್ತಿತ್ತು!
ಅಪ್ಪನನ್ನು ಸತ್ಯಪ್ರತಿಜ್ಞನನ್ನಾಗಿ ಉಳಿಸಲು ನನ್ನವರು, ನಾನು ಹಾಗೂ ಲಕ್ಷ್ಮಣ ತೆತ್ತ ಬೆಲೆ ಮಾತ್ರ ಬಲು ದುಬಾರಿಯದು. ಅಷ್ಟೇ ಅಲ್ಲ ಆ ನಾಲ್ಕು ಪದದ ವರ ಮಾಡಿದ ಪರಿಣಾಮಗಳೆಷ್ಟು ಗೊತ್ತೇ?… ಇದೇ ಘಟನೆ ಇತಿಹಾಸದ ಘನಘೋರ ಯುದ್ಧಕ್ಕೆ ನಾಂದಿಯಾುತು. ನನ್ನ ಬದುಕನ್ನೇ ಅಗ್ನಿಪರೀಕ್ಷೆಗೆ ಈಡು ಮಾಡಿತು. ಹೋಗಲಿ; ವರ ಕೇಳಿದವರಿಗಾಗಲೀ, ಕೊಟ್ಟವರಿಗಾಗಲೀ ಅನುಕೂಲವಾಯಿತಾ ಎಂದರೆ ಅದೂ ಇಲ್ಲ. ವರ ಕೊಟ್ಟ ದಶರಥ ರಾಜರು ಮರುದಿನವೇ ಮರಣ ಹೊಂದಿದರು. ವರಪಡೆದ ಕೈಕೇಯಿ ಅತ್ತೆ ಬದುಕಿಯೂ ಸತ್ತಂತಾದರು.
(ಮುಂದೆ ಹದಿನಾಲ್ಕು ವರ್ಷ ಯಾರೊಂದಿಗೂ ಅವರು ಮಾತನಾಡಲಿಲ್ಲವಂತೆ. ಮಲಿನ ವಸ್ತ ಧರಿಸಿ ಮೂಲೆಯಲ್ಲಿ ಕುಳಿತು ಅಳುತ್ತಲೇ ಇದ್ದರಂತೆ. ನಾನು ರಾಮನಿಗೆ ಅನ್ಯಾಯ ಮಾಡಿಬಿಟ್ಟೆ ಎಂದು ಹಲುಬುತ್ತಿದ್ದರಂತೆ. ಹದಿನಾಲ್ಕು ವರ್ಷಗಳ ನಂತರ ನನ್ನವರೇ ಬಂದು ಕೈಕೇಯಿ ಅತ್ತೆಯನ್ನು ಕುರಿತು “ಅಮ್ಮಾ, ನಿಮ್ಮಿಂದಾಗಿ ನಮ್ಮ ಅಪ್ಪ ಸತ್ಯವಂತನಾಗಿ ಉಳಿಯುವಂತಾಯಿತು. ಅವರನ್ನು ನರಕದಿಂದ ಪಾರುಮಾಡಿದ ಪುಣ್ಯಮಾತೆ ನೀವು’ ಎಂದು ಸಮಾಧಾನ ಮಾಡಿದ್ದು ನನ್ನ ಸ್ಮತಿಪಟಲದಲ್ಲಿ ಹಸಿರಾಗಿದೆ)
ವರದ ಫಲಾನುಭವಿಯಾಗಬೇಕಾಗಿದ್ದ ಭರತ, ರಾಜ್ಯಸಂಪತ್ತನ್ನೂ ತಿರಸ್ಕರಿಸಿದ, ಅಮ್ಮನನ್ನೂ ತಿರಸ್ಕರಿಸಿದ. ಅಮ್ಮನ ತಪ್ಪಿಗೆ ಮಗನ ಪ್ರಾಯಶ್ಚಿತ್ತ. ಮಗ ಒಪ್ಪಲಿಲ್ಲವೆಂದು ಅಮ್ಮನ ಮುನಿಸು. ಅಣ್ಣ ಕಾಡಿನಲ್ಲಿ ತಪಸ್ವಿ, ತಮ್ಮ ನಾಡಿನಲ್ಲಿ ತಪಸ್ವಿ. ಲಕ್ಷ್ಮಣ ಕಾಡಿನಲ್ಲಿ, ಆತನ ಹೆಂಡತಿ ಊರ್ಮಿಳೆ ನಗರದಲ್ಲಿ. ಹದಿನಾಲ್ಕು ವರ್ಷ ಗಂಡನಿದ್ದೂ ಇಲ್ಲದ ಸ್ಥಿತಿ. ಭರತ, ಶತ್ರುಘ್ನರು ಅಯೋಧ್ಯೆಗೆ ದೂರದ ನಂದಿಗ್ರಾಮದಲ್ಲಿ ಉಳಿದರು. ಮಾಂಡವಿ- ಶ್ರುತಕೀರ್ತಿಯರು ಭೌತಿಕವಾಗಿ ಮಾತ್ರ ಅರಮನೆಯಲ್ಲುಳಿದರು.
ಅತ್ತೆಯರಾದ ಕೌಸಲ್ಯಾ- ಸುಮಿತ್ರೆಯರು ಮಕ್ಕಳಿದ್ದೂ ಅನಾಥರಾದರು. ಹೀಗೆ ಅಯೋಧ್ಯೆಯಲ್ಲಿ ಅನಾಥ ಪ್ರಜ್ಞೆಯದೇ ಕಾರುಬಾರು. ನಾವು ವನವಾಸಕ್ಕೆ ಹೋದ ನಂತರ ಅಯೋಧ್ಯೆಗೆ ಬಂದ ಭರತ, ಕೈಕೇಯಿ ಅತ್ತೆಯನ್ನು ಬಹಳ ನಿಂದಿಸಿದನಂತೆ. ಗಂಗಾ- ಯಮುನೆಯರ (ಕೌಸಲೆÂ-ಸುಮಿತ್ರೆ) ಮಧ್ಯೆ ಕೊಚ್ಚೆ ನೀರಿನಂತೆ ನೀನೆಲ್ಲಿಂದ ಬಂದು ಸೇರಿದೆ ಎಂದು ಜರಿದನಂತೆ. ಆ ಅಮ್ಮನ ಸ್ಥಿತಿ ಏನಾಗಿರಬೇಡ? ಕುಪುತ್ರ ಹುಟ್ಟಬಹುದಂತೆ, ಕುಮಾತೆ ಎಂದೂ ಇರುವುದಿಲ್ಲವಂತೆ. ಇಲ್ಲಿ ಕುಮಾತೆ ಯಾರು? ಕುಪುತ್ರ ಯಾರು? ಅರ್ಥವಾಗದು.
ಇಡೀ ಅಯೋಧ್ಯೆ ಕಣ್ಣೀರ ಮಡುವಾಯಿತು. ಎಲ್ಲೆಲ್ಲೂ ಪರಿತಾಪ, ಸಂತಾಪ, ಪ್ರಾಯಶ್ಚಿತ್ತಗಳು. ಒಬ್ಬೊಬ್ಬರ ಮನಸ್ಸೂ ಬೇಗುದಿಯ ಅಗ್ನಿಕುಂಡ. ಎಲ್ಲವೂ ಒಂದು ಹೆಣ್ಣಿನಿಂದ ಎಂಬ ಅಪವಾದ ಬೇರೆ. ಇವೆಲ್ಲ ಮರೆತ ಒಂದು ವರ ಧುತ್ತೆಂದು ಎದುರಾದುದರ ಪರಿಣಾಮ. ಇವೆಲ್ಲವೂ ದೈವಲೀಲೆಯೋ? ಸ್ವಾರ್ಥದ ಪರಿಣಾಮವೋ? ದಂಡಕಾರಣ್ಯದ ನಿವಾಸಿಗಳ ಅದೃಷ್ಟವೋ? ಭವಿಷ್ಯದ ದುಷ್ಟದಮನಕ್ಕೆ ಪೀಠಿಕೆಯೋ? ತಂಗಾಳಿಗೆ ಬದಲಾಗಿ ಬಿರುಗಾಳಿಯ ಅಟ್ಟಹಾಸ ಅಯೋಧ್ಯೆಯ ನೆಲದಲ್ಲಿ!
ನನ್ನ ಗಂಡ ಏನಾದರೂ ಅಂಥ ಸಂದರ್ಭದಲ್ಲಿ ವರ ಕೊಡುತ್ತೇನೆಂದು ಹೇಳಿದ್ದರೆ, ನಾನೇನು ಹೇಳುತ್ತಿದ್ದೆ ಗೊತ್ತೆ? “ಅಯ್ಯೋ, ಗಂಡನಿಗೆ ಗಂಡಾಂತರ ಬಂದಾಗ ಪರಿಹರಿಸಲು ಯತ್ನಿಸುವುದು ಹೆಂಡತಿಯ ಕರ್ತವ್ಯ. ಆ ಕರ್ತವ್ಯವನ್ನಷ್ಟೇ ನಾನು ಮಾಡಿದ್ದೇನೆ. ನನಗಾವ ವರವೂ ಬೇಡ. ಪತಿ-ಪತ್ನಿ ನಡುವೆ ಇದೆಂಥ ವ್ಯವಹಾರ?’ ಎಂದುಬಿಡುತ್ತಿದ್ದೆ.
ಪಟ್ಟಾಭಿಷೇಕಕ್ಕೆಂದು ಪಟ್ಟೆ- ಪೀತಾಂಬರ ಧರಿಸಿ ಸಿದ್ಧರಾಗಿದ್ದ ನನ್ನವರು ಮರುಕ್ಷಣದಲ್ಲೇ ನಾರುಡೆ ಉಟ್ಟು ಕಾಲುನಡಿಗೆಯಲ್ಲಿಯೇ ಕಾಡಿಗೆ ಹೊರಡಲು ಸಿದ್ಧವಾದರು ಎಂದೆನಲ್ಲ. ಆಗ ನನ್ನವರ ಮುಖವನ್ನೊಮ್ಮೆ, ಉದ್ವೇಗ, ಅಂಜಿಕೆಯಿಂದ ಮೆಲ್ಲಗೆ ನೋಡಿದೆ. ಪರಮಾಶ್ಚರ್ಯವಾಯಿತು… ಪೂರ್ಣ ನಿರ್ವಿಕಾರ ಮುಖಮುದ್ರೆ. ಅವರಿಗೆ ಪಟ್ಟೆ ಪೀತಾಂಬರವೂ, ನಾರುಡೆಯೂ ಒಂದೇ. ಅಷ್ಟೇ ಅಲ್ಲ ಕಾಡೂ -ನಾಡೂ ಎಲ್ಲ ಒಂದೇ.
ಎಂಥ ಸ್ಥಿತಪ್ರಜ್ಞತೆ. ಅವರದ್ದು ಎಂಥ ನಿರ್ವಿಕಾರ ಮನೋಸ್ಥೈರ್ಯ? ರಾಮನಂಥ ರಾಮ ಮಾತ್ರ ಕೈಗೊಳ್ಳಬಹುದಾದ ನಿರ್ಧಾರ ಅದು. ಅಬ್ಟಾ! ಎನಿಸಿತು. ನನ್ನ ಅಂತರಂಗವೂ ಜಾಗೃತವಾಯಿತು. ನಾನೂ ಸ್ಥಿತಪ್ರಜ್ಞಳಾದೆ. ಆಗಲೇ ಒಂದು ನಿರ್ಧಾರ ಮಾಡಿಬಿಟ್ಟೆ. ಅಪ್ಪನ ನೆನಪೂ ಆಯಿತು. (ಮುಂದುವರಿಯುವುದು) * ಸಿ.ಎ. ಭಾಸ್ಕರ ಭಟ್ಟ, ನಾಗಮಂಗಲ