Advertisement

ಭೂಮಿಗೆ ಜ್ವರ ಬಂದಾಗ!

08:33 PM Aug 07, 2019 | mahesh |

ತಾಪಮಾನ ಏರಿಕೆಯಿಂದಾಗಿ ದೂರದಲ್ಲೆಲ್ಲೋ ಹಿಮ ಕರಗಿದರೆ ನಾವೇಕೆ ಚಿಂತಿಸಬೇಕು ಎಂದು ಮಾತ್ರ ಹೇಳದಿರಿ. ಏಕೆಂದರೆ ಒಂದು ವೇಳೆ ಉತ್ತರ ಮತ್ತು ದಕ್ಷಿಣ ಧೃವಗಳಲ್ಲಿನ ಮಂಜುಗಡ್ಡೆ ಪೂರ್ತಿ ಕರಗಿದರೆ ಭೂಮಿಯು “ವಾಸಯೋಗ್ಯ ಗ್ರಹ’ ಎಂಬ ಪಟ್ಟವನ್ನು ಕಳೆದುಕೊಳ್ಳಬಹುದು!

Advertisement

ನಮ್ಮ ಸುತ್ತಮುತ್ತಲ ವಾತಾವರಣ ವಾರದಿಂದ ವಾರಕ್ಕೆ, ದಿನದಿಂದ ದಿನಕ್ಕೆ ಬದಲಾಗುವುದನ್ನು ಯಾವತ್ತಾದರೂ ಗಮನಿಸಿದ್ದೀರಾ? ಮಲೆಗಾಲ, ಚಳಿಗಾಲ ಮತ್ತು ಬೇಸಗೆ ಕಾಲಗಳು ನಿಗದಿತ ಅವಧಿಗಿಂತ ತಡವಾಗಿ ಶುರುವಾಗುವುದು ಅಥವಾ ಬೇಗನೆ ಮುಗಿಯುವುನ್ನು ಗಮನಿಸಿದ್ದೀರಾ? ಈ ಪರಿ ಹವಾಮಾನ ಬದಲಾವಣೆ ಆತಂಕಕಾರಿಯಾದುದು.

ಭೂಮಿಗೊಂದು ರಕ್ಷಾಕವಚ
ನಮ್ಮ ಭೂಮಂಡಲವು ಮೇಲಕ್ಕೆ ಹೋಗುತ್ತಿದ್ದಂತೆ ಅನೇಕ ಬಗೆಯ ಅನಿಲಗಳಿಂದ ಸುತ್ತುವರಿಯಲ್ಪಟ್ಟಿದೆ. ಅವುಗಳಿಂದಲೇ ವಿವಿಧ ಬಗೆಯ ವಲಯಗಳೆಂದು ವಿಂಗಡಿಸಲ್ಪಟ್ಟಿವೆ. ಪ್ರತಿಯೊಂದು ವಲಯವೂ ಒಂದಕ್ಕಿಂತ ಒಂದು ಭಿನ್ನವಾಗಿದ್ದು ವಿವಿಧ ಬಗೆಯ ಅನಿಲಗಳನ್ನು ಹೊಂದಿದೆ. ಭೂಮಿ ಮೇಲೆ ಲಕ್ಷ ಕೋಟಿ ಜೀವಿಗಳು ಬದುಕಿವೆ ಎಂದರೆ ಅದಕ್ಕೆ ಈ ವಲಯಗಳ ಶ್ರೀರಕ್ಷೆಯೇ ಕಾರಣ. ಇವು ಅಂತರಿಕ್ಷದ ಅಪಾಯಕಾರಿ ಕಿರಣ, ಕಾಯಗಳಿಂದ ನಮಗೆ ರಕ್ಷಣೆ ಒದಗಿಸುತ್ತಿವೆ. ಅವುಗಳಿಲ್ಲದೇ ಇರುತ್ತಿದ್ದರೆ ನಮ್ಮ ಭೂಮಿ ಹುಲ್ಲು ಕಡ್ಡಿಯೂ ಬೆಳೆಯದಂತಾಗಿ, ಮಂಗಳ ಗ್ರಹದಂತೆ ಮರಗಟ್ಟಿ ಹೋಗುತ್ತಿತ್ತು. ಈ ಶ್ರೀರಕ್ಷೆ ಈಗ ನಲುಗುತ್ತಿದೆ.

ಇದಕ್ಕೆ ಕಾರಣಗಳೇನು?
ಕಳೆದ ನೂರು ವರ್ಷಗಳಲ್ಲಿ ಕೈಗಾರಿಕಾ ಕ್ರಾಂತಿಯಿಂದಾಗಿ, ಅಭಿವೃದ್ಧಿಯೆಡೆಗೆ ಮುನ್ನುಗ್ಗುವ ಮನುಷ್ಯನ ಹಪಾಹಪಿಯಿಂದಾಗಿ ಪ್ರತಿಒಂದಕ್ಕೂ ಯಂತ್ರಗಳ ಮೇಲೆ ಅವಲಂಬಿತನಾಗುವ ಸ್ಥಿತಿಗೆ ಮನುಷ್ಯ ಬಂದಿದ್ದಾನೆ. ಎಲ್ಲಾ ಯಂತ್ರಗಳ ಚಾಲನೆಗೆ ಇಂಧನವಾಗಿ ಕಲ್ಲಿದ್ದಲು, ಪೆಟ್ರೋಲು, ಡೀಸೆಲ್ಲು, ಮತ್ತಿನ್ನೊಂದೋ ಅಗತ್ಯವಾಗಿ ಬೇಕು. ಅವುಗಳಿಂದಾಗಿ ಇಂಗಾಲ ಆಮ್ಲ ಮತ್ತಿತರ ವಿಷಯುಕ್ತ ಅನಿಲಗಳು ವಾತಾವರಣ ಸೇರುತ್ತಿವೆ. ಭೂಮಿಯ ತಾಪಮಾನ ಹೆಚ್ಚಳಕ್ಕೆ ಇದುವೇ ಪ್ರಮುಖ ಕಾರಣ.
ವಿಜ್ಞಾನಿಗಳ ಪ್ರಕಾರ ಇಂದು ಭೂಮಿಯ ತಾಪಮಾನ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹತ್ತುಪಟ್ಟು ವೇಗವಾಗಿ ಏರುತ್ತಿದೆ. ಇದು ಮನುಷ್ಯನ ಸ್ವಾರ್ಥದಿಂದ ಹಾಗು ಅವನು ಪ್ರಕೃತಿಗೆ ವಿರುದ್ಧವಾಗಿ ನಡೆಸುತ್ತಿರುವ ಬದುಕಿನಿಂದ ಎಂಬ ಎಚ್ಚರಿಕೆಯನ್ನು ಸಹ ಕೊಟ್ಟಿದ್ದಾರೆ.

ದುಷ್ಪರಿಣಾಮಗಳು
ಹಿಮ ಪರ್ವತಗಳು ತಾಪದಿಂದ ಕರಗಿ ನದಿಗಳಲ್ಲಿ, ಸಮುದ್ರಗಳ ನೀರಿನ ಮಟ್ಟ ಹೆಚ್ಚಾಗಬಹುದು. ಸಮುದ್ರ ತಟದಲ್ಲಿನ ನಗರಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಬಹುದು. ಕಾಡಿನಲ್ಲಿದ್ದ ಪ್ರಾಣಿಗಳು ಮನುಷ್ಯ ವಾಸಿಸುತ್ತಿಲ್ಲಿಗೆ ಲಗ್ಗೆ ಇಡಬಹುದು. ಅಕಾಲಿಕ ಮಳೆಯಿಂದ ತೀವ್ರ ಪ್ರವಾಹ ಉಂಟಾಗಬಹುದು. ಇನ್ನೊಂದು ಕಡೆ ತೀವ್ರ ಬರ ಕಾಡಬಹುದು. ಇವೆಲ್ಲವೂ ಕೃಷಿಗೆ ಮಾರಕವೇ. ಬೆಳೆ ಬೆಳೆಯಲಾಗದೆ ಆಹಾರ ಕೊರತೆ ಉಂಟಾಗಬಹುದು. ಭೂಕಂಪ ಆಗಬಹುದು. ಸುನಾಮಿ ಉಂಟಾಗಬಹುದು. ಇವೆಲ್ಲಾ ಪ್ರಾಕೃತಿಕ ವಿಕೋಪಗಳಾದರೆ ಭೂಮಿ ಮೇಲೆ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳಬಹುದು. ಒಟ್ಟಿನಲ್ಲಿ ಪ್ರಳಯ ಎಂದರೆ ಇದೇ…

Advertisement

ಪರಿಹಾರ ಮಾರ್ಗಗಳು
ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಕಿಂಚಿತ್ತು ಬದಲಾವಣೆ ಮಾಡಿಕೊಂಡರೆ, ಪರಿಸರ ಕಾಳಜಿಯನ್ನು ಬೆಳೆಸಿಕೊಂಡರೆ ಹವಾಮಾನ ವೈಪರೀತ್ಯದ ಬಗ್ಗೆ ಜಾಗೃತಿ ಮೂಡಿಸಬಹುದಾಗಿದೆ.
-ಬಸ್ಸು, ರೈಲು ಮುಂತಾದ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಬಳಸುವುದು
-ಹತ್ತಿರದ ಜಾಗಗಳಿಗೆ ನಡೆದೇ ಹೋಗುವುದು ಅಥವಾ ಸೈಕಲ್‌ನ ಬಳಕೆ
– ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದು
– ಮನೆಗಳಲ್ಲಿ ವಿದ್ಯುನ್ಮಾನ ಉಪಕರಣಗಳ ದುಂದು ಬಳಕೆ ತಡೆಯುವುದು
– ನೀರನ್ನು ಪೋಲು ಮಾಡದಿರುವುದು
– ಪದೇಪದೆ ರೆಫ್ರಿಜರೇಟರ್‌ನ ಬಾಗಿಲು ತೆಗೆಯದಿರುವುದು
– ಎಲ್ಲೆಂದರಲ್ಲಿ ಕಸ ಎಸೆಯದಿರುವುದು ಇತ್ಯಾದಿ…

– ರಜನಿ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next