Advertisement
ಆಕೆ ಇದ್ದದ್ದೇ ಹಾಗಿರಬೇಕು. ಪರೀಕ್ಷೆ ಮಾಡಿದೆ.ಯಕೃತ್ತಿನಲ್ಲಿ ಬಾವು ಇದ್ದಂತೆನಿಸಿತು. ಸ್ಕ್ಯಾನಿಂಗ್ ಮಾಡಿ ನೋಡಿದರೆ ಯಕೃತ್ತಿನ ತುಂಬ ತುಂಬಿದ ಕ್ಯಾನ್ಸರ್ ಗಡ್ಡೆಗಳು. ನನಗೆ ಬೇಸರ. ಇವರಿಗೆ ಹೇಳುವುದು ಹೇಗೆ? ಬಂದವರು ಇಬ್ಬರೇ. ಅವಳು ಮುದುಕಿಯಾದರೆ ಇವನು ಅವಳಿಗಿಂತ ವಯಸ್ಸಾದವ.
Related Articles
Advertisement
ಮಗ ನೌಕರಿಗಾಗಿ ಪಟ್ಟಣ ಸೇರಿದ. ಇವರಿಗೆ ತಮ್ಮ ಮನೆ ಹೊಲ ಬಿಟ್ಟು ಕದಲಲಾರದ ಮನಸ್ಥಿತಿ. ತಾವೇ ಸ್ವತಃ ಕಟ್ಟಿ ನಿಲ್ಲಿಸಿದ ಮನೆ, ದುಡಿದ, ಬದುಕು ಸವೆಸಿದ ಹೊಲ ಬಿಟ್ಟು ಹೊರಡಲಿಲ್ಲ. ಭಾವನಾತ್ಮಕ ಬಂಧವೇ ಹಾಗೆ. ಆದರೆ ಅವನು ಪೇಟೆಯಿಂದ ಬರಲಾರ. ಅದು ಆತನಿಗೆ ಅನಿವಾರ್ಯ ಕೂಡ. ಇವರು ಮಾತ್ರ ಹಳ್ಳಿಯಿಂದ ಹೊರಡಲಾರರು. ಹೀಗಾಗಿ ಅವನದು ಅವನಿಗೆ, ಇವರದು ಇವರಿಗೆ ಸರಿ ಎನಿಸತೊಡಗಿತು. ಮೊದಲಿಗೆ ದುಡಿಯುವ ಶಕ್ತಿ ಇದ್ದ ಇವರಿಗೆ ಅದೇನೂ ಅನಿಸಲೇ ಇಲ್ಲ. ಮಗನೂ ತನ್ನ ಸಂಸಾರದಲ್ಲಿ ತಾನು ತೊಡಗಿಕೊಂಡ. ಮೊದಲು ವಾರಕ್ಕೊಮ್ಮೆಯಾದರೂ ಬರುವ ಮಗ, ಬರ ಬರುತ್ತ ತಿಂಗಳಿಗೊಮ್ಮೆ ಮುಂದೆ ಯಾವಾಗಲಾದರೊಮ್ಮೆ ಬರತೊಡಗಿದ. ಕಾಲನ ತುಳಿತದಲಿ ಕೊಂಡಿ ಕಳಚತೊಡಗಿದ್ದು ಗೊತ್ತಾಗಲೇ ಇಲ್ಲ. ಈಗ ಬರುತ್ತಲೇ ಇಲ್ಲ. ಅನೇಕ ಬಾರಿ ಅವ್ವನಿಗೆ ಅನಾರೋಗ್ಯ ಎಂದು ತಿಳಿಸಿದಾಗಲೂ ಬಂದಿಲ್ಲ. ಹೀಗಾಗಿ ಈಗ ಬರುತ್ತಾನೆನ್ನುವ ಭರವಸೆ ಇಲ್ಲ.
ಬಂದರೂ ಸಹಾಯ ಮಾಡುತ್ತಾನೆ ಎನ್ನುವ ನಂಬಿಕೆಯಿಲ್ಲ. ನಡುವಿನ ಅಂತರ ಹೆಚ್ಚಿದೆಯಲ್ಲ. ಇದನ್ನೆಲ್ಲ ಹೇಳಿ ಸುಮ್ಮನಾದ, ಮತ್ತೆ ಹೆಂಡತಿಯೆಡೆಗೆ ನೋಡಿದ, ಅವಳು ಶೂನ್ಯ ದಿಟ್ಟಿಸುತ್ತಿದ್ದಳು. ನಿರ್ಲಕ್ಷಿಸಿದ ಮಗನ ನೆನೆಯುತ್ತಿದ್ದಳೇನೋ.
ಅವನದೊಂದು ದೀರ್ಘ ನಿಟ್ಟುಸಿರು, “ಮುಂದಿನ ವಾರ ಬರ್ತೀನ್ರಿ’ ಎಂದವನೇ ಎದ್ದು ಹೊರಟ. ಅವಳು ತಲೆತಗ್ಗಿಸಿ ಹಿಂಬಾಲಿಸಿದಳು. ತುರ್ತಿಗೆ ಏನಾದರೂ ಔಷಧಿ ಬರೆದುಕೊಡಬೇಕೆನ್ನುವುದರೊಳಗೆ ಅವರು ನಡೆದೇಬಿಟ್ಟಿದ್ದರು. ಅದೇಕೋ ಮನದಲ್ಲಿ ನಿಂತೇಬಿಟ್ಟ ಅವರಿಗಾಗಿ ಒಂದು ವಾರವಲ್ಲದೆ, ವಾರದ ನಂತರವೂ ಕಾಯ್ದೆ. ಆದರೆ ನಾನು ಕಾಯ್ದ ದಾರಿ ವ್ಯರ್ಥ. ಯಾಕೆ ಬರಲಿಲ್ಲವೋ ಉತ್ತರ ಸಿಗಲಿಲ್ಲ. ಮಗ ಒಪ್ಪಲಿಲ್ಲವೇ, ಸೊಸೆ ಖರ್ಚು ಬೇಡವೆಂದಳೇ. “ಹೇಗೂ ಮುಪ್ಪು ಸಾಯಲು ಬಿಡಿ, ನನ್ನಿಂದೇಕೆ ಕಷ್ಟ’ ಎಂದಿರಬಹುದೇ ಮುದುಕಿ?! ನಾನು ನೂರು ರೋಗಿಗಳ ನಡುವೆ ಆ ಸಂತಳಂಥವಳ ಮುಖಕ್ಕಾಗಿ ಹುಡುಕುತ್ತಿ¨ªೆ. ಸ್ವಾರ್ಥಿ ಸಂಸಾರಸ್ಥರ ಧಾವಂತದ ಬದುಕು ಅವಳ ಶೇಷ ವರ್ಷಗಳನು ನುಂಗಿಬಿಟ್ಟಿತೆ, ಎಂಬ ಕಳವಳ ಕಾಡತೊಡಗಿತು. ಆದರೆ ಕೆಲವೊಮ್ಮೆ ರೋಗಿಗಳು ಬೇರೆ ಬೇರೆ ಆಸ್ಪತ್ರೆಗೆ ಹೋಗಿಬಿಡುತ್ತಾರೆ. ಕಾರಣಗಳು ಹಲವಾರು. ನಾವು ವಿವರಿಸುವ ರೀತಿ ಇಷ್ಟವಾಗಿರಲಿಕ್ಕಿಲ್ಲ. ಅಥವಾ ತಮ್ಮ ಸಮೀಪದ ವೈದ್ಯರೆಡೆಗೆ ಹೋಗುತ್ತಾರೆ. ಇಲ್ಲವೇ ದುಡ್ಡು ಹೊಂದಿಸುವುದರಲ್ಲಿ ಸಮಯವಾಗುತ್ತದೆ.
ಆಯುರ್ವೇದ, ಹೋಮಿಯೋಪಥಿ ಇತ್ಯಾದಿ ಬೇರೆ ವೈದ್ಯಕೀಯದ ಮೊರೆಹೋಗುತ್ತಾರೆ. ಹೀಗೇನಾದರೂ ಆಗಿರಬಹುದೆಂದು ಸಮಾಧಾನಿಸಿಕೊಂಡೆ. ಅದಾವ ಕಾರಣವಿದ್ದರೂ ಒಮ್ಮೊಮ್ಮೆ ಕೆಲ ರೋಗಿಗಳು ಮರೆಯಲಾಗದೆ ಮನದಲ್ಲಿ ಉಳಿದುಬಿಡುತ್ತಾರೆ. ಈ ಜೋಡಿಯ ಹಾಗೆ.
ರೋಗಿಗಳಲ್ಲಿ, ಮತ್ತೆ ಅವರ ಜೊತೆ ಬಂದವರಲ್ಲಿ ಹಲವು ವಿಧ. ಅದರಲ್ಲೂ ಅಲ್ಲಿ ಖರ್ಚು ಹೆಚ್ಚಿದ್ದರಂತೂ ಮುಗಿದೇ ಹೋಯ್ತು. ಎಲ್ಲದಕ್ಕೂ ಧಾರಾಳವಾಗಿ ಖರ್ಚು ಮಾಡುವ ಜನ ಆಸ್ಪತ್ರೆಗೆ ಬಂದೊಡನೆ ಬಡವರಾಗಿಬಿಡುತ್ತಾರೆ. ವಯಸ್ಸಾದವರಿಗೆ ರೋಗ ಬಂದರೆ ಇನ್ನೂ ಅಸಡ್ಡೆ. ಹಳೆಯ ವಾಹನವನ್ನು ಗುಜರಿಗೆ ಹಾಕಿದಂತಿರುತ್ತದೆ.ಆಸ್ಪತ್ರೆಯಲ್ಲಿ ಹಲವು ಬಾರಿ ದುಡ್ಡಿಗಾಗಿ ಜರುಗುವ ಮನ ಹಿಂಡುವ ಘಟನೆಗಳನ್ನು ನೋಡಿದಾಗಲೆಲ್ಲ ಮನಸ್ಸು ಭಾರವಾಗುತ್ತದೆ. ಮನುಷ್ಯ ಸಂಬಂಧಗಳು ಇಷ್ಟೇನಾ.? ಎನಿಸುತ್ತದೆ. ಹೊತ್ತು ತಿರುಗಿದ ಅಪ್ಪ, ಅವ್ವ ಹೊರೆಯಾದದ್ದನ್ನು ಕಂಡಿದ್ದೇನೆ. ಬಹುತೇಕ ಸಂದರ್ಭಗಳಲ್ಲಿ ಮುಪ್ಪಿನ ಗಂಡ-ಹೆಂಡತಿ ಜೊತೆಯಾಗಿ ಬರುತ್ತಾರೆ. ಜೊತೆಗೆ ಮಕ್ಕಳು ಬರುವುದೇ ಇಲ್ಲ. ಅವರು ತಮ್ಮ ಕೆಲಸಗಳಲ್ಲಿ, ಅಥವಾ ತಮ್ಮ ಹೆಂಡತಿ ಮಕ್ಕಳ ಜೊತೆ ಬಿಜಿಯಾಗಿಬಿಡುತ್ತಾರೆ.
ಇವರಿಗೋ ಕಣ್ಣು ಕಾಣದು, ಕಿವಿ ಕೇಳದು. ಅವಳಿಗೆ ಇವನು, ಇವಳಿಗೆ ಅವನು ಆಸರೆ, ಅಷ್ಟೇ. ಸೃಷ್ಟಿಯ ನಿಯಮವೇ ಹಾಗೇನೋ ಎಂದು ಕೆಲವೊಮ್ಮೆ ಅನಿಸುತ್ತದೆ. ಯಾಕೆಂದರೆ ಸೃಷ್ಟಿ ಮುಖ ಮಾಡುವುದು ಭವಿಷ್ಯದ ಕಡೆಗೇನೆ. ಆದರೆ ಭೂತದ ಬೇರುಗಳಿಲ್ಲದ ಭವಿಷ್ಯ ಭದ್ರವಾಗಿರದು ಎಂಬುದನ್ನು, ಮುಂದೊಂದು ದಿನ ತಾನೂ ಭೂತಕ್ಕೆ ದಬ್ಬಲ್ಪಡುತ್ತೇನೆ ಎನ್ನುವ ನಿತ್ಯಸತ್ಯವನು ಮನುಷ್ಯ ಮರೆತುಬಿಡುತ್ತಾನೆ. ಅದು ಕೆಲವೊಮ್ಮೆ ಜಾಣಮರೆವೂ ಕೂಡ. ಆದರೂ ಕೆಲವೊಮ್ಮೆ ಎಂಥ ಕಷ್ಟವಾದರೂ ರೋಗಿಗಳನ್ನು ಜತನ ಮಾಡಿ, ಆರೈಕೆ, ಉಪಚಾರ ಮಾಡುವ ಜನರನ್ನು ಕಂಡಿದ್ದೇನೆ. ಆಗ ಮನಸ್ಸು ಪ್ರಫುಲ್ಲವಾಗುತ್ತದೆ. ಮಾನವೀಯತೆಯಲ್ಲಿ ಮತ್ತೆ ಭರವಸೆ ಮೂಡುತ್ತದೆ. ಹಿಮ್ಮಡಿ ಸವೆದ ಹವಾಯಿ ಚಪ್ಪಲಿ ಮೆಟ್ಟಿಕೊಂಡು, ಹರಕಲು ಅಂಗಿ ಹಾಕಿಕೊಂಡು ಬರುವ ಅವಿದ್ಯಾವಂತ ಬಡವ ತನ್ನ ಮುಪ್ಪಿನ ತಾಯಿಯನ್ನು, ಹೆಗಲ ಮೇಲೆ ಹೊತ್ತು ತಂದು ದೀನನಾಗಿ ನಮ್ಮೆದುರು ಕೈಜೋಡಿಸಿ ನಿಂತು, “ಏನೇ ಖರ್ಚಾಗಲಿ ನಮ್ಮವ್ವನನ್ನು ಉಳಿಸಿರಿ. ಇದ್ದ ಜಮೀನೆಲ್ಲವನ್ನು ಮಾರಿ, ಸಾಲದಿದ್ದರೆ ನಿಮ್ಮಲ್ಲಿ ಜೀವನ ಪರ್ಯಂತ ದುಡಿದು ಮುಟ್ಟಿಸುವೆ’ ಎಂದು ಅಂಗಲಾಚುವುದನ್ನೂ ನೋಡಿದ್ದೇನೆ. ಹಣ್ಣು ಹಣ್ಣು ಮುದುಕನನ್ನು ಕರೆತಂದು “ನಮ್ಮಪ್ಪ ಮೊದಲ ನಾಕ ರೊಟ್ಟಿ ತಿಂತಿದ್ದ. ಈಗ ಎರಡ ತಿಂತಾನ. ಟಾನಿಕ್ ಬರದ ಕೊಡ್ರೀ. ನಮ್ಮಪ್ಪ ಕುದರಿ ಹಾಂಗ ಆಗಬೇಕ್ರೀ ಸಾಹೇಬರ’ ಎಂದು ಅಂಗಲಾಚುವ ಅರವತ್ತು ವರ್ಷದ ಮಗನನ್ನು ನೋಡಿದ್ದೇನೆ.
ಐಷಾರಾಮಿ ಕಾರಿನಲ್ಲಿ ತಮ್ಮಪ್ಪನನ್ನು ಕರೆತಂದು, ದೂರದಿಂದಲೇ ಗಾಲಿ ಕುರ್ಚಿ ತರಲು ಆರ್ಡರ್ ಮಾಡಿ, ಅವನನ್ನು ಮುಟ್ಟಿದರೆ ಎಲ್ಲಿ ತನ್ನ “ಬ್ರಾಂಡೆಡ್’ ಡ್ರೆಸ್‌ಗಳು ಹೊಲಸಾಗುತ್ತವೆಯೋ ಎಂದು ದೂರದಲ್ಲಿಯೇ ನಿಂತು, ವೈದ್ಯರೆದುರು, “”ವಯಸ್ಸು ಬಹಳವಾಗಿದೆ. ಆರಾಮ ಆಗುತ್ತಾನೋ ಇಲ್ಲವೋ ನೋಡಿ. ಅದಕ್ಕೆ ಎಷ್ಟು ಖರ್ಚಾಗಬಹುದು. ಇಷ್ಟು ಖರ್ಚು ಮಾಡಿದರೆ ಎಷ್ಟು ದಿನ ಬದುಕಿರಬಹುದು. ಅಕಸ್ಮಾತ್ ಬದುಕಿದರೆ ಮುಂದೆ ದಿನನಿತ್ಯ ಎಷ್ಟು ಖರ್ಚಾಗಬಹುದು. ಮನೆಗೆ ಕರೆದೊಯ್ದ ಮೇಲೆ ಅವರ “ತೊಳೆ-ಬಳೆ’ ಕೆಲಸಕ್ಕೆ ನರ್ಸ್‌ಗಳನ್ನು ಮನೆಗೆ ಕಳಿಸಲು ಸಾಧ್ಯವೇ? ಅಥವಾ ಬದುಕುವ ಸಾಧ್ಯತೆಗಳಿಲ್ಲದಿದ್ದರೆ ಬೇಡ ಬಿಡಿ, ಹಾಗೇ ಮನೆಗೆ ಕರೆದೊಯ್ಯುವೆ”ಎಂದು ವಾರ್ಷಿಕ ಬಜೆಟ್ಟಿನ ವ್ಯವಹಾರ ಮಾತಾಡುವ, ಬದುಕೆಂದರೆ ಲೆಕ್ಕಾಚಾರ ಮಾತ್ರ ಎಂಬಂತಹ ವಿದ್ಯಾವಂತ ಶ್ರೀಮಂತರನ್ನೂ ಕಂಡಿದ್ದೇವೆ. ಮಾನವ ಸಂಬಂಧಗಳೇ ಬಲು ಸಂಕೀರ್ಣ, ಅಲ್ಲವೇ?* * *
ತಿಂಗಳುಗಳು ಉರುಳಿದವು. ನಾನೂ ನನ್ನ ದಿನನಿತ್ಯದ ಜಂಜಾಟದಲ್ಲಿ, ರೋಗಿಗಳ ಗಡಿಬಿಡಿಯಲ್ಲಿ ಆ ಜೋಡಿಯನ್ನು ಮರೆತೇಬಿಟ್ಟೆ. ಮುಂದೆ ಒಂದು ದಿನ ಆತ ಒಬ್ಬನೇ ಬಂದ. ತನಗೆ ಸ್ವಲ್ಪ ಅಜಾರಿಯೆಂದು ಹೇಳಿದ. ಈಗ ತುಂಬ ಸೊರಗಿಬಿಟ್ಟಿದ್ದ. ಕಳೆಗುಂದಿದ ಮುಖ, ನೆಟ್ಟಗಿಲ್ಲದ ರುಮಾಲು, ಬಿಳುಪನ್ನು ಕಳೆದುಕೊಂಡ ಅಂಗಿ, ಎಲ್ಲವೂ ಕಹಿ ಸತ್ಯವನ್ನು ಹೇಳುತ್ತಿದ್ದವು. ಅವನ ಹೆಂಡತಿಗೆ ಏನಾಯಿತೆಂದು ಕೇಳುವ ಮನಸ್ಸಾಗಲಿಲ್ಲ…! – ಡಾ. ಶಿವಾನಂದ ಕುಬಸದ