ನಾನು ಸ್ನಾತಕೋತ್ತರ ಪದವಿ ಓದುವ ಹಂತಕ್ಕೆ ಬಂದರೂ ರೈಲಿನಲ್ಲಿ ಪ್ರವಾಸ ಮಾಡಿರಲಿಲ್ಲ. ಆದರೆ ರೈಲು ನೋಡಿದ್ದೆ. ಇತ್ತೀಚೆಗೆ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್‌ಗಾಗಿ ಗುಜರಾತ್‌ಗೆ ತೆರಳುವ ಅವಕಾಶ ಲಭಿಸಿದಾಗ, ಅದು ನನಗೆ ರೈಲು ಪ್ರಯಾಣದ ಅವಕಾಶವನ್ನೂ ಒದಗಿಸಿತು. ಕೇವಲ ಸಿನಿಮಾಗಳಲ್ಲಿ ರೈಲು ನೋಡಿದ್ದ ನಾನು ಅಂತಹುದೇ ರೈಲಿನಲ್ಲಿ ಪ್ರಯಾಣ ಮಾಡುವ ತವಕದಿಂದಲೇ ಕ್ಯಾಂಪ್‌ಗೆ ಅಗತ್ಯವಾದ ವಸ್ತುಗಳನ್ನೆಲ್ಲ ವಾರದ ಮೊದಲೇ ಜೋಡಿಸಿಟ್ಟುಕೊಂಡಿದ್ದೆ. ಆ ದಿನ ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ರೈಲೇರಿದ ನನಗೆ ಹೊಸ ಲೋಕದೊಳಗೆ ಕಾಲಿಟ್ಟ ಅನುಭವ. ಬಸ್ಸಿನಲ್ಲಿ ಯಾವ ಹಂಗಿಲ್ಲದೇ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ನನಗೆ ಈ ಟ್ರೈನ್ ಏರಿದಾಗ ಯಾವುದೋ ಗುಹೆಯೊಳಗೆ ಹೊಕ್ಕಿ ಉಸಿರುಗಟ್ಟುವಂತಾಯಿತು.
ಗಂಟೆಗೊಮ್ಮೆ ಟೀ, ಕಾಫಿ, ತಿಂಡಿ, ಊಟ ಹಿಡಿದು ಬರೋ ರೈಲಿನ ಅಡುಗೆ ಸಿಬ್ಬಂದಿ, ಅವರಿಗೇ ಪೈಪೋಟಿ ನೀಡಲೆಂದೇ ಸ್ಟೇಷನ್‌ಗಳಲ್ಲಿ ಟ್ರೇನ್ ಏರುವ ಚಿಕ್ಕಪುಟ್ಟ ತಿಂಡಿತಿನಿಸು ವ್ಯಾಪಾರಸ್ಥರು. ಯಾರ ಬಳಿ ಊಟ ಖರೀದಿಸುವುದು ಎನ್ನುವ ಗೊಂದಲ ನನಗೆ.
ನಮ್ಮ ಕಾಲೇಜಿನಿಂದ ಸುಮಾರು 120 ವಿದ್ಯಾರ್ಥಿಗಳು ಕ್ಯಾಂಪ್‌ಗೆ ಸಾಗುತ್ತಿದ್ದುದರಿಂದ ಬೇರೆ ಬೇರೆ ಬೋಗಿಗಳಲ್ಲಿ ನಮ್ಮನ್ನೆಲ್ಲ ಹರಿದು ಹಂಚಿ ಹಾಕಿದ್ದರು. ಇದೇ ಕಾರಣಕ್ಕಾಗಿಯೇ ಪದೇಪದೇ ನಮ್ಮ ಗೆಳೆಯರಿದ್ದ ಬೋಗಿಗಳಿಗೆ ತೆರಳಿ ಡ್ಯಾನ್ಸ್ , ಹಾಡು, ಹರಟೆ ಅಂತ ಕಾಲಕಳೆಯುತ್ತಿದ್ದೆವು.
ಇನ್ನು ಫ್ರೆಂಡ್ಸ್ ಜೊತೆಗಿದ್ರೆ ಕೇಳಬೇಕೆ… ಹಾಡು, ಹರಟೆ, ಡ್ಯಾನ್ಸ್, ಗೇಮ್ಸ್ ಅಂತಾ ಇಡೀ ರೈಲಿನ ಪ್ರಯಾಣಿಕರೆಲ್ಲ ತಿರುಗಿ ನೋಡುವಂತೆ ಮಾಡುತ್ತಿದ್ದೆವು. ಹೀಗೆ ಎರಡು ದಿನಗಳ ಕಾಲ ರೈಲಿನಲ್ಲಿ ಪ್ರಯಾಣಿಸಿ ದೂರದ ಗುಜರಾತ್ ಸೇರುವಷ್ಟರಲ್ಲಿ ನೂರಾರು ಅನುಭವಗಳು ನಮ್ಮ ನೆನಪಿನ ಬುತ್ತಿಯಲ್ಲಿ ಸಂಗ್ರಹವಾಗಿದ್ದವು. ಇದು ನನ್ನ ಜೀವನದ ಮರೆಯಲಾಗದ ದಿನಗಳಾಗಿ ಚಿರಕಾಲ ಉಳಿಯುತ್ತವೆ ಎಂಬುದರಲ್ಲಿ ಸಂಶಯಲ್ಲ.
ಶ್ರೀರಕ್ಷಾ ಶಿರ್ಲಾಲ್
ಪ್ರಥಮ ಎಂ.ಎ (ಪತ್ರಿಕೋದ್ಯಮ), ಆಳ್ವಾಸ್ ಕಾಲೇಜು, ಮೂಡುಬಿದಿರೆ