ವಾಟ್ಯಾಪ್ ಗ್ರೂಪ್:ಜೈ ಕಿಸಾನ್ ಅಡ್ಡ ಬಾಯ್ಸ…
ಅಡ್ಮಿನ್: ಮಲ್ಲ, ಎರ್ರಿಸ್ವಾಮಿ,ರೇವ,ಗಿರಿ
ಹುಟ್ಟಿದ ಹಬ್ಬ ಆಚರಿಸಲು, ನಮ್ಮದೇ ಒಂದು ಸಣ್ಣ ಆನ್‌ಲೈನ್ ಸಂಘವನ್ನು ಕಟ್ಟಬೇಕೆಂದು ನಿರ್ಧರಿಸಿದ್ದೆವು. ಗೆಳೆಯ ಮಲ್ಲ ಅದಕ್ಕೆ “ಜೈ ಕಿಸಾನ್ ಅಡ್ಡ ಸಂಘ ‘ ಎಂದು ಹೆಸರಿಟ್ಟು, ಅದೇ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ಮಾಡಿದ. ಬರ್ತಡೇ ವಿಶ್ ಕಂಪಲ್ಸರಿ ಮಾಡಬೇಕು ಎನ್ನುವುದು ಗ್ರೂಪ್‌ನ ನಿಯಮವಾಗಿತ್ತು.
ಆರಂಭದಲ್ಲಿ ಹತ್ತು ಹುಡುಗರು ಮಾತ್ರ ಇದ್ದೆವು. ಆಮೇಲಾಮೇಲೆ ಈ ಸಂಖ್ಯೆ ಹೆಚ್ಚುತ್ತಾ ಹೋಯಿತು. ಆದರೆ, ಇಡೀ ಗ್ರೂಪ್‌ನಲ್ಲಿ ಕೇವಲ ಹತ್ತಾರು ಹುಡುಗರು ಮಾತ್ರ ಪ್ರತಿಕ್ರಿಯಿಸುತ್ತಿದ್ದರು. ಇನ್ನುಳಿದವರು ಪರಸ್ಪರ ಮಾತನಾಡುತ್ತಿಲ್ಲ ಎಂದು ಗ್ರೂಪ್ ನಲ್ಲಿ ಸೇರಿಸಿಕೊಂಡ ಮೇಲೆಯೇ ತಿಳಿದದ್ದು.
ಹೀಗಾಗಿ, ಗ್ರೂಪ್‌ನಲ್ಲಿ ಎರಡು ಬಣಗಳು ಆದವು. ಅದಕ್ಕೆ ತಕ್ಕಂತೆ, ಒಂದು ಬಣದ ಸದಸ್ಯರು ತಮ್ಮ ಹುಟ್ಟು ಹಬ್ಬ ಬಂದಾಗ ಕೇವಲ ಅವರ ಫೋಟೋ, ವೀಡಿಯೋ ಹಾಕಿ, ಅವರವರೇ ವಿಶ್ ಮಾಡಿಕೊಳ್ಳುತ್ತಿದ್ದರು. ಇನ್ನೊಂದು ಬಣದವರು, ಇವರಿಗೆ ವಿಶ್ ಮಾಡುವ ಗೋಜಿಗೇ ಹೋಗುತ್ತಿರಲಿಲ್ಲ. ಅಡ್ಮಿನ್, ಗ್ರೂಪ್ ನ ನಿಯಮವನ್ನು ಉಲ್ಲಂ ಸಿದೆ ಎಂದು ಗುಟುರು ಹಾಕಿದಾಗ ಒಂದಷ್ಟು ಜನ ರೊಚ್ಚಿಗೇಳುತ್ತಿದ್ದರು. ಇದೇ ವಿಚಾರಕ್ಕೆ ಅವನಿಗೂ, ಕೆಲ ಗೆಳೆಯರಿಗೂ ಆಗಾಗ ಚಕಮಕಿಗಳು ನಡೆಯುತ್ತಿದ್ದವು. ವಾರಕ್ಕೆ ಒಬ್ಬರಲ್ಲಾ ಒಬ್ಬರದು ಬರ್ತಡೇ ಇದ್ದುದರಿಂದ ಹೀಗೆ ಗಲಾಟೆಗಳು ಮುಗಿಯದ ರಾಮಾಯಣದಂತಾಗಿತ್ತು. ಒಂದು ಸಲ ಈ ರೀತಿ ಗಲಾಟೆ ಶುರುವಾಗಿ ಮುಕ್ತಾಯವಾದ ನಂತರ, ಒಂದು ವಾರ ಗ್ರೂಪ್ ಸ್ತಬ್ಧವಾಗಿಬಿಡೋದು.
ಮತ್ತೂಬ್ಬರ ಹುಟ್ಟುಹಬ್ಬ ಎದುರಾದಾಗ ಈ ಮೊದಲು ಆಚರಿಸಿಕೊಂಡವರು ಯಾರೂ ಕೂಡ ವಿಶ್ ಮಾಡುತ್ತಿರಲಿಲ್ಲ. ಮತ್ತೆ ಮಲ್ಲ ಮೌನ ಮುರಿದಾಗ ಯಾರು ಕ್ಯಾರೇ ಅಂತ ಕೂಡ ಅನ್ನುತ್ತಿರಲಿಲ್ಲ. ಕುತೂಹಲದ ವಿಚಾರ ಎಂದರೆ, ಅಡ್ಮಿನ್‌ರ ಬರ್ತಡೇ ಬಂದಾಗಂತೂ- ವಿಶ್ ಮಾಡುವ ಬದಲು-“ನೋಡ್ರಪ್ಪಾ, ಸಮನ್ವಯ ಸಮಿತಿ ಅಧ್ಯಕ್ಷರ ಬರ್ತಡೇ ಇವತ್ತು. ಎಲ್ಲರೂ ವಿಶ್ ಮಾಡಿ’ ಅಂತ ಗೇಲಿ ಮಾಡಿದರು. ಇದರಿಂದ ಬೇಸತ್ತು, ಮಲ್ಲ “ನೀವು ಈ ಜನ್ಮದಲ್ಲಿ ಒಂದಾಗಲ್ಲೋ. ನಿಮ್ಮಲ್ಲಿ ಒಗ್ಗಟ್ಟೇ ಇಲ್ಲ ಹೋಗ್ರೋ’ ಅಂತ ತಾನೇ ಗ್ರೂಪಿನಿಂದ ಹೊರಗೆ ಹೋಗಿಬಿಟ್ಟ. ಅಲ್ಲಿಗೆ, ಹುಟ್ಟು ಹಬ್ಬಕ್ಕೆ ಶುಭ ಕೋರುವ ಉದ್ದೇಶ ಸಂಪೂರ್ಣ ನಶಿಸಿ, ಅವರ “ವಿಶ್’ ನಂತೆಯೇ ಆಯಿತು.
ಎಸ್. ಎರ್ರಿಸ್ವಾಮಿ