ನ್ಯೂಯಾರ್ಕ್: “ಎಚ್ಚರವಾಗಿ ಇದ್ದೀರಾ?’ ಹೀಗೆಂದು ಪ್ರಧಾನಿ ಮೋದಿ 2016ರಲ್ಲಿ ತಮ್ಮನ್ನು ಪ್ರಶ್ನಿಸಿದ್ದ ಒಂದು ಘಟನೆಯನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ನೆನಪಿಸಿಕೊಂಡಿದ್ದಾರೆ.
ನ್ಯೂಯಾರ್ಕ್‌ನಲ್ಲಿ “ಮೋದಿ ಅಟ್ 20: ಡ್ರೀಮ್ಸ್ ಮೀಟ್ ಡೆಲಿವರಿ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2016ರಲ್ಲಿ ಅಫ್ಘಾನಿಸ್ತಾನದ ಮಜಾರ್-ಇ-ಷರೀಫ್ನಲ್ಲಿ ಭಾರತೀಯ ದೂತಾವಾಸದಲ್ಲಿ ಬಾಂಬ್ ಸ್ಫೋಟ ನಡೆದಿದ್ದ ವೇಳೆ ಖುದ್ದು ಪ್ರಧಾನಿ ಮೋದಿಯವರೇ ಫೋನ್ ಮಾಡಿದ್ದರು. “ಎಚ್ಚರವಾಗಿ ಇದ್ದೀರಾ’ ಎನ್ನುವುದು ಪ್ರಧಾನಿಯವರ ಮೊದಲ ಪ್ರಶ್ನೆಯಾಗಿತ್ತು ಎಂದು ನೆನಪಿಸಿಕೊಂಡರು.
ಪ್ರಧಾನಿ ಮೋದಿಯವರು ಅದ್ಭುತ ನಾಯಕ ಎಂದು ಬಣ್ಣಿಸುವ ಸಂದರ್ಭದಲ್ಲಿ ಅವರು ಈ ಘಟನೆಯನ್ನು ಉಲ್ಲೇಖಿಸಿದ್ದಾರೆ. ಆ ಸಂದರ್ಭದಲ್ಲಿ ಜೈಶಂಕರ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು.
ದೂತಾವಾಸದ ಮೇಲೆ ನಡೆದ ದಾಳಿಯಲ್ಲಿ ಏನಾಗಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೆವು. ಆ ಸಂದರ್ಭದಲ್ಲಿ ಅಚ್ಚರಿ ಎಂಬಂತೆ ರಾತ್ರಿ 12.30ಕ್ಕೆ ಪ್ರಧಾನಿ ಫೋನ್ ಮಾಡಿ ಟಿವಿ ನೋಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿ, ದಾಳಿಯ ವಿಚಾರ ಗೊತ್ತಾಗಿದೆ ಎಂದು ಅವರಿಗೆ ಮಾಹಿತಿ ನೀಡಿದೆ ಎಂದರು ವಿದೇಶಾಂಗ ಸಚಿವ.
ನನಗೇ ಫೋನ್ ಮಾಡಿ:
ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ 2-3 ಗಂಟೆ ಬೇಕಾಗುತ್ತದೆ. ಅದರ ಸಮಗ್ರ ಮಾಹಿತಿಯನ್ನು ಪ್ರಧಾನಿ ಕಚೇರಿಗೇ ನೀಡುವುದಾಗಿ ಅವರಿಗೆ ತಿಳಿಸಿದೆ. ಅದಕ್ಕೆ ಉತ್ತರಿಸಿದ ಪ್ರಧಾನಿ ಕಾರ್ಯಾಚರಣೆ ಮುಕ್ತಾಯಗೊಂಡಾಗ ಖುದ್ದು ತಮಗೇ ವರದಿ ಸಲ್ಲಿಸುವಂತೆ ಸೂಚಿಸಿದರು ಎಂದು ಜೈಶಂಕರ್ ನೆನಪಿಸಿಕೊಂಡರು. ಪ್ರಧಾನಿ ಮೋದಿ ದೇಶದ ಆಡಳಿತದ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಹೊಣೆಯನ್ನು ಹೊತ್ತಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದರು.