ಬೆಂಗಳೂರು: ಶೆಡ್ ನಿರ್ಮಿಸಲು ಆಳವಾದ ಅಡಿಪಾಯ ತೆಗೆದಿದ್ದರಿಂದ ನಿವೇಶನ ಸುತ್ತಲಿನ ಮೂರು ಕಟ್ಟಡಗಳು ವಾಲಿರುವ ಘಟನೆ ಬುಧವಾರ ಆರ್.ಟಿ.ನಗರದ ಚಾಮುಂಡಿನಗರದಲ್ಲಿ ನಡೆಸಿದ್ದು, ಆತಂಕಗೊಂಡ ನಿವಾಸಿಗಳು ಮನೆ ಖಾಲಿ ಮಾಡಿದ್ದಾರೆ.
ಚಾಮುಂಡಿನಗರದ ನೀಲಕಂಠೇಶ್ವರ ದೇವಸ್ಥಾನ ಬಳಿ ಮೌಲ ಎಂಬುವವರಿಗೆ ಸೇರಿದ ಕಟ್ಟಡದ ಪಕ್ಕದ ನಿವೇಶನದಲ್ಲಿ ಶೆಡ್ ನಿರ್ಮಿಸಲು ಮನೆ ಪಕ್ಕದಲ್ಲಿ ಆಳವಾಗಿ ಪಾಯ ಅಗೆಯಲಾಗಿದೆ. ಬುಧವಾರ ನುಸುಕಿನಲ್ಲಿ ಪಾಯ ಮಣ್ಣು ಕುಸಿದ ಪರಿಣಾಮ ಪಕ್ಕದಲ್ಲಿರುವ ಕಟ್ಟಡಗಳು ವಾಲಿಕೊಂಡಿದೆ. ಇದರಿಂದ ಭಯಗೊಂಡ ಮನೆಯಲ್ಲಿದ್ದವರು ಕೂಡಲೇ ಹೊರಗೆ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಬಾಡಿಗೆದಾರರು ವಿಷಯವನ್ನು ಕೂಡಲೇ ಕಟ್ಟಡ ಮಾಲೀಕ ಮೌಲ ಅವರಿಗೆ ತಿಳಿಸಿದ್ದಾರೆ. ಜತೆಗೆ ಸ್ಥಳೀಯರಿಂದ ವಿಷಯ ತಿಳಿದ ಕೂಡಲೇ ಪಾಲಿಕೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಸುರಕ್ಷತಾ ದೃಷ್ಟಿಯಿಂದ ನಿವಾಸಿಗಳನ್ನು ಖಾಲಿ ಮಾಡಿಸಿದ್ದು, ಕಟ್ಟಡ ಇನ್ನಷ್ಟು ವಾಲದಂತೆ ಪಾಯಗೆ ಮಣ್ಣು ತುಂಬಲಾಗಿದೆ.
ಕಟ್ಟಡ ತೆರವಿಗೆ ನೋಟಿಸ್: ವಾಲಿದ ಕಟ್ಟಡ ಪರಿಶೀಲಿಸಿದ ಪಾಲಿಕೆಯ ಅಧಿಕಾರಿಗಳು ಕಟ್ಟಡ ನಿರ್ಮಿಸಿ ಹಲವು ವರ್ಷಗಳಾಗಿದೆ. ಹೀಗಾಗಿ ದುರಸ್ತಿಪಡಿಸಿದರೂ ಮುಂದೆ ಅನಾಹುತಗಳು ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಕಟ್ಟಡ ನೆಲಸಮಗೊಳಿಸುವಂತೆ ಮನೆಯ ಮಾಲೀಕ ಮೌಲ ಅವರಿಗೆ ನೋಟಿಸ್ ನೀಡಿದ್ದಾರೆ. ಅದಕ್ಕೊಪ್ಪಿರುವ ಮನೆಯ ಮಾಲೀಕ ಬುಧವಾರದಿಂದಲೇ ಕಟ್ಟಡ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಪಾಯ ತೆಗೆದವರಿಗೆ ನೋಟಿಸ್: ಪಾಯ ತೆಗೆದು ಕಟ್ಟಡ ವಾಲುವುದಕ್ಕೆ ಕಾರಣವಾಗಿರುವ ನಿವೇಶನ ಮಾಲೀಕ ಇಲಿಯಾಸ್ ಪಾಷಾ ಅವರಿಗೆ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ. ಪಾಯ ಅಗೆಯಲು ಪಾಲಿಕೆಯಿಂದ ಅನುಮತಿ ಪಡೆದಿರುವ ಪತ್ರವನ್ನು ಸಲ್ಲಿಸುವಂತೆ ಹಾಗೂ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಒಂದೊಮ್ಮೆ ಅನುಮತಿ ಪಡೆಯದಿದ್ದರೆ ನಿವೇಶನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.