ಚೆನ್ನೈ: ಸನಾತನ ಧರ್ಮ ಕುರಿತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಇದೀಗ ಮತ್ತೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಯಾವುದೇ ಕಾನೂನು ಕ್ರಮ ಎದುರಿಸಲು ಸಿದ್ದನಿದ್ದೇನೆ ಎಂದಿದ್ದಾರೆ.
ಆಡಳಿತಾರೂಢ ಡಿಎಂಕೆ ಸರ್ಕಾರದ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು “ಡೆಂಗ್ಯೂ” ಮತ್ತು “ಮಲೇರಿಯಾ” ಕ್ಕೆ ಹೋಲಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಸನಾತನ ಧರ್ಮವನ್ನು ಕೇವಲ ವಿರೋಧಿಸುವುದಲ್ಲ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.
ಇದರ ಬಗ್ಗೆ ಮಾತನಾಡಿದ ಸ್ಟಾಲಿನ್ ಪುತ್ರ ಉದಯನಿಧಿ, “ನಾನು ಇದನ್ನು ನಿರಂತರವಾಗಿ ಹೇಳುತ್ತೇನೆ. ನಾನು ನರಮೇಧಕ್ಕೆ ಆಹ್ವಾನಿಸಿದ್ದೇನೆ ಎಂದು ಕೆಲವರು ಬಾಲಿಶರಾಗಿ ಹೇಳುತ್ತಿದ್ದಾರೆ, ಇತರರು ದ್ರಾವಿಡಂ ಅನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದರರ್ಥ ಡಿಎಂಕೆಯವರನ್ನು ಕೊಲ್ಲಬೇಕೇ? ‘ಕಾಂಗ್ರೆಸ್ ಮುಕ್ತ ಭಾರತ’ ಎಂದು ಪ್ರಧಾನಿ ಮೋದಿ ಹೇಳಿದಾಗ, ಕಾಂಗ್ರೆಸ್ಸಿಗರನ್ನು ಕೊಲ್ಲಬೇಕು ಎಂದರ್ಥವೇ?. ಸನಾತನ ಎಂದರೇನು? ಇದರರ್ಥ ಏನನ್ನೂ ಬದಲಾಯಿಸಬಾರದು ಮತ್ತು ಎಲ್ಲವೂ ಶಾಶ್ವತ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:Bumrah- Sanjana; ಮೊದಲ ಮಗುವಿನ ಸಂಭ್ರಮದಲ್ಲಿ ಜಸ್ಪ್ರೀತ್- ಸಂಜನಾ; ಫೋಟೊ ಹಂಚಿಕೊಂಡ ವೇಗಿ
“ಆದರೆ ದ್ರಾವಿಡ ಮಾದರಿಯು ಬದಲಾವಣೆ ಬಯಸುತ್ತದೆ. ಮತ್ತು ಇಲ್ಲಿ ಎಲ್ಲರೂ ಸಮಾನರು. ಬಿಜೆಪಿ ನನ್ನ ಹೇಳಿಕೆಯನ್ನು ತಿರುಚಿ ಸುಳ್ಳು ಸುದ್ದಿ ಹರಡಿಸುತ್ತಿದೆ. ಇದು ಅವರ ಮಾಮೂಲಿ ಕೆಲಸ. ನನ್ನ ವಿರುದ್ದ ಯಾವುದೇ ಕೇಸು ಹಾಕಿದರೂ ಅದನ್ನು ಎದುರಿಸಲು ನಾನು ಸಿದ್ದನಿದ್ದೇನೆ” ಎಂದಿದ್ದಾರೆ.
“ಬಿಜೆಪಿಯುವರು ವಿಪಕ್ಷಗಳ ಇಂಡಿಯಾ ಒಕ್ಕೂಟಕ್ಕೆ ಹೆದರಿ ಈ ರೀತಿ ಮಾಡುತ್ತಿದ್ದಾರೆ. ಅದಕ್ಕಾಗಿ ಜನರ ಗಮನ ಬೇರೆಡೆ ಹರಿಸುತ್ತಿದ್ದಾರೆ. ‘ಒಂದು ಕುಲ ಒಂದು ದೇವರು’ ಇದು ಡಿಎಂಕೆ ಸಿದ್ದಾಂತ” ಎಂದು ಉದಯನಿಧಿ ಹೇಳಿದರು.