ಮಗಳು ಕಾಣೆಯಾಗಿದ್ದಾಳೆ ಎಂದು ತಿಳಿದು ಅಮ್ಮ ಕಂಗಾಲಾಗಿದ್ದಳು. ಬಿಕ್ಕಿ ಬಿಕ್ಕಿ ಅಳುತ್ತ ಕುಳಿತಿದ್ದಳು. ತಂದೆಯೂ, ಅಣ್ಣನೂ ಊರ ತುಂಬಾ ಹುಡುಕಾಟ ನಡೆಸಿದ್ದರು. ಇದ್ಯಾವುದರ ಪರಿವೆಯಿಲ್ಲದೆ ನಾನು ಗೆಳತಿಯ ಮನೆಯಲ್ಲಿ ವಿಶೇಷ ಭೋಜನ ಸವಿಯುತ್ತ, ಸಂತೋಷದಿಂದ ಕುಣಿಯುತ್ತಿದ್ದೆ…
ಈ ಘಟನೆ ನಡೆದಿದ್ದು ಸುಮಾರು 20 ವರ್ಷಗಳ ಹಿಂದೆ. ನನಗೆ ಈಗಲೂ ಕಣ್ಣಿಗೆ ಕಟ್ಟಿದ ಹಾಗೆ ನೆನಪಿರದಿದ್ದರೂ, ವರ್ಷದಲ್ಲಿ ಸರಿಸುಮಾರು 2-3 ಬಾರಿಯಾದರೂ ನನ್ನ ಅಕ್ಕ-ಅಣ್ಣ ಈ ಘಟನೆಯನ್ನು ನೆನಪಿಸುತ್ತಿರುತ್ತಾರೆ. ನಮ್ಮೂರಿನ ಇಡೀ ಶಾಲೆಯ ಮಕ್ಕಳೆಲ್ಲರೂ ಒಬ್ಬರಿಗೊಬ್ಬರು ಪರಿಚಯ. ಅವರು ನಮ್ಮ ತಂದೆ ತಾಯಂದಿರಿಗೂ ಪರಿಚಯ. ನಮ್ಮ ಮನೆ, ಶಾಲೆಯ ಹತ್ತಿರದಲ್ಲೇ ಇದ್ದುದರಿಂದ ಎಲ್ಲರೂ ನಮ್ಮ ಮನೆಗೆ ಬರುತ್ತಿದ್ದರು. ಅದರಲ್ಲೊಬ್ಬಳು ಹುಡುಗಿ “ಡಿವೈನ್ ನೋಲಾ ಬ್ರಿಟ್ಟೊ’.
ಊರಿನಲ್ಲಿ ಇವರದೊಂದೇ ಕ್ರಿಶ್ಚಿಯನ್ ಕುಟುಂಬ. ಉಡುಪಿ-ಮಂಗಳೂರು ಮೂಲದವರಾದ್ದರಿಂದ ಆಹಾರ ಪದ್ಧತಿಯೂ ವಿಶಿಷ್ಟ. ನಾವೆಲ್ಲ ಅವಳಿಗೆ “ಡೇವಿ , ಡೇವಿ’ ಎಂದು ಕರೆಯುತ್ತಿದ್ದರೆ. ನಮ್ಮಮ್ಮ ಮಾತ್ರ ಅವಳಿಗೆ “ದೇವಿ ‘ ಎಂದು ಕರೆಯುತ್ತಿದ್ದರು (ಇಂದಿಗೂ ಕೂಡ!). ಇವಳು ತರುತ್ತಿದ್ದ ಕೆಂಪವಲಕ್ಕಿ (ಎಳನೀರಲ್ಲಿ ತೋಯಿಸಿ, ಬೆಲ್ಲ ಕೊಬ್ಬರಿ ಹಾಕಿ ಮಾಡುತ್ತಿದ್ದ ಅವಲಕ್ಕಿ) ತುಂಬಾ ಸಿಹಿಯಾಗಿ ರುಚಿಯಾಗಿರುತ್ತಿತ್ತು. ತಂದ ದಿನ ಡಬ್ಬ ಎಕ್ಸೆಜ್ ಗ್ಯಾರಂಟಿ. “ನಮ್ಮನೆಗೆ ಬನ್ನಿ, ಇನ್ನೂ ವಿಶೇಷವಾದ ಅಡುಗೆ ತಿನ್ನಬಹುದು’ ಅಂತ ಕರೆಯುತ್ತಿದ್ದಳು. ಆದರೆ, ಅವರ ಮನೆ ತುಂಬಾ ದೂರವಿದ್ದುದರಿಂದ ಅಮ್ಮ ಕಳಿಸುತ್ತಲೇ ಇರಲಿಲ್ಲ. ಕೊನೆಗೆ ಒಂದು ದಿನ ನಾವಿಬ್ಬರೂ ತೀರ್ಮಾನಿಸಿದೆವು; ಶಾಲೆ ಬಿಟ್ಟೊಡನೆ ನಾನು ಡೇವಿಯ ಮನೆಗೆ ಅಮ್ಮನಿಗೆ ಹೇಳಲಾರದೇ ಹೋಗುವುದೆಂದು!
ನಮ್ಮ ಮನೆಯ ಮುಂದಿನ ರಸ್ತೆಯಿಂದಲೇ ಹೋಗಬೇಕಾದ್ದರಿಂದ, ಕಿಟಕಿ ಹತ್ತಿರ ಬಗ್ಗಿ ಯಾರಿಗೂ ಕಾಣಿಸಿಕೊಳ್ಳದೇ ಹೋದ ನೆನಪು. ಡೇವಿಯ ಮನೆಯಲ್ಲಿ ಊಟ ಮಾಡುತ್ತಿರಬೇಕಾದರೆ “ನಿಮ್ಮ ಮನೆಯಲ್ಲಿ ತಿಳಿಸಿದ್ದೀರಲ್ಲವೇ?’ ಎಂದು ಕೇಳಿದ್ದಕ್ಕೆ “ಹೌದು’ ಎಂದು ಉತ್ತರಿಸಬೇಕೆಂದು ಮೊದಲೇ ಯೋಜಿಸಿದ್ದೆವು. ಅಲ್ಲಿಯೇ ಆಟ ಆಡುತ್ತ ಸಂಜೆವರೆಗೆ ಕಾಲ ಕಳೆದೆವು.
ಇತ್ತ ಮನೆಯ ಪರಿಸ್ಥಿತಿಯೇ ಬೇರೆ ಆಗಿತ್ತು. ಶಾಲೆ ಬಿಟ್ಟು ನಂತರ ಮಗಳು ಬರಲಿಲ್ಲವೆಂದು ತಿಳಿದು ಅಮ್ಮ ಕಂಗಾಲಾಗಿದ್ದಳು. ತನಗೆ ಗೊತ್ತಿದ್ದ ಕಡೆಯಲ್ಲ ಹೋಗಿ ಹುಡುಕಿದ್ದಳು. ಕಡೆಗೆ, ಮಗಳು ಕಾಣೆಯಾಗಿದ್ದಾಳೆ ಎಂದು ಕೊಂಡು, ಅಮ್ಮ ನನಗೋಸ್ಕರ ಅತ್ತೂ ಅತ್ತೂ ಬಡವಾಗಿದ್ದಳು. ಅಣ್ಣ, ನನ್ನ ಬಗ್ಗೆ ಎಲ್ಲ ಸ್ನೇಹಿತೆಯರ ಮನೆಯಲ್ಲೂ ವಿಚಾರಿಸಿ ಬಂದಿದ್ದನು. ಎಲ್ಲೂ ಸುಳಿವಿಲ್ಲ. ಡೇವಿ ಮನೆ ದೂರವಾಗಿದ್ದರಿಂದ ಯಾರೂ ಅದರ ಬಗ್ಗೆ ಊಹಿಸಿರಲಿಲ್ಲ. ಓಣಿಯಲ್ಲಿದ್ದವರೆಲ್ಲಾ ಮನೆಯಲ್ಲಿ ಜಮಾಯಿಸಿದ್ದರು. ಕೊನೆಗೆ ಅಪ್ಪ, ಎಲ್ಲ ಕಡೆಯೂ ಹುಡುಕಿದ್ದಾಯಿತು, ಇನ್ನು ಬ್ರಿಟ್ಟೊ ಅವರಿಗೊಂದು ಫೋನ್ ಮಾಡಿ ವಿಚಾರಿಸುವ ಎಂದು ಫೋನ್ ಮಾಡಿದರೆ, ಆ ಮನೆಯವರು, ಇಷ್ಟು ಹೊತ್ತು ನಮ್ಮಲ್ಲಿಯೇ ಇದ್ದಳು. ಈಗಷ್ಟೇ ಮನೆ ಕಡೆ ಹೊರಟಿದ್ದಾಳೆ ಎಂದು ತಿಳಿಸಿದ್ದಾರೆ. ಅಣ್ಣ, ಇದ್ದ ಬದ್ದ ಎಲ್ಲ ಗಲ್ಲಿಗಳಲ್ಲಿ ತನ್ನ ಸೈಕಲ್ ಮೇಲೆ ಗಸ್ತು ಹೊಡೆಯುತ್ತಿದ್ದ. ಅವನನ್ನು ನೋಡಿದ್ದೇ, ಅವನ ಸೈಕಲ್ ಮೇಲೇರಿ ಮನೆಗೆ ಬಂದೆ. ಅಮ್ಮ ನನ್ನನ್ನು ತಬ್ಬಿಕೊಂಡು ಅಳತೊಡಗಿದ್ದರು.
ಮಗುವಿನ ತಾಯಿಯಾಗಿರುವ ನನಗೆ, ಈಗ ಘಟನೆಯ ತೀವ್ರತೆ ಅರ್ಥವಾದರೂ ಕೂಡ, ನೀಲಾವರದಲ್ಲಿರುವ, ಎರಡು ಮಕ್ಕಳ ತಾಯಿಯಾಗಿರುವ ಡೇವಿಗೆ ಫೋನ್ ಮಾಡಿದಾಗೆಲ್ಲ, ಕೆಂಪವಲಕ್ಕಿ ಬಗ್ಗೆ ಕೇಳುವುದನ್ನು ಮಾತ್ರ ಮರೆಯುವುದಿಲ್ಲ!
-ಅನುಪಮ ಕೆ. ಬೆಣಚಿನ ಮರ್ಡಿ