Advertisement

ಪಾರಂಪರಿಕ ತಾಣ ದತ್ತು ಯೋಜನೆ ಸ್ವಾಗತಾರ್ಹ

06:09 PM May 11, 2018 | Sharanya Alva |

ಕೆಂಪುಕೋಟೆಯೂ ಸೇರಿದಂತೆ ಶತಮಾನಗಳ ಇತಿಹಾಸ ಇರುವ ಪ್ರಾಚೀನ ಕಟ್ಟಡಗಳನ್ನು ನಿರ್ವಹಣೆಗಾಗಿ ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ಕೇಂದ್ರದ ಯೋಜನೆ ಸಮರ್ಥನೀಯ. ಅತ್ಯಪೂರ್ವ ಸ್ಮಾರಕಗಳ ರಕ್ಷಣೆ ಮತ್ತು ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ವಿಫ‌ಲವಾಗಿರುವುದರಿಂದ ಸ್ಮಾರಕಗಳು ಭಗ್ನಗೊಂಡಿವೆ, ಅತ್ಯಪೂರ್ವ ಶಿಲ್ಪಗಳು ವಿಕಾರಗೊಂಡಿವೆ, ಪ್ರಾಚೀನ ದೇವಾಲಯಗಳು ವಿನಾಶದಂಚಿನಲ್ಲಿವೆ. ಇವೆಲ್ಲವನ್ನೂ ನೋಡುತ್ತಿರುವ ಸರಕಾರಿ ಇಲಾಖೆಗಳು ತಮಗೆ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ
ಕಾರ್ಯವೆಸಗುತ್ತಿವೆ.

Advertisement

ಇಲಾಖಾ ಅಧಿಕಾರಿಗಳಿಗೆ, ಮಂತ್ರಿ ಮಾಗಧರಿಗೆ ಇಲಾಖೆಯ ಅನುದಾನದ ಬಗ್ಗೆ ಕಾಳಜಿಯೆ ವಿನಹಾ ಸ್ಮಾರಕ ರಕ್ಷಣೆಯಾಗಲಿ ನಿರ್ವಹಣೆಯಾಗಲೀ ಅಲ್ಲ. ಯುನೆಸ್ಕೊ ವಿಶ್ವ ಪಾರಂಪರಿಕ ಸ್ಮಾರಕಗಳ ಪಟ್ಟಿಯಲ್ಲಿ ಭಾರತದ ಸುಮಾರು 36ಕ್ಕಿಂತಲೂ ಹೆಚ್ಚು ತಾಣಗಳು ಸ್ಥಾನ ಕಂಡಿವೆ. ಅದರಲ್ಲಿ ನಮ್ಮ ರಾಜ್ಯದ ಹಂಪೆ ಮತ್ತು ಪಟ್ಟದಕಲ್ಲು ಸೇರಿದೆ. ಹಂಪೆಯ ಕಥೆ, ವ್ಯಥೆಯ ಕುರಿತಾಗಿ ಆಗಾಗ್ಗೆ ವರದಿಗಳನ್ನು ಕಂಡಿದ್ದೇವೆ. ಹಂಪೆ ನರಿನಾಯಿಗಳ ತಾಣವಾಗಿದೆ, ಅಕ್ರಮ ಚಟುವಟಿಕೆಗಳೂ ನಡೆಯುತ್ತಿವೆ. ವಿಗ್ರಹಗಳು ಭಗ್ನಗೊಂಡಿವೆ. ಶಿಲ್ಪಕಲಾ ವೈಭವವನ್ನು ಸಾರುವ ಕಲ್ಲಿನ ಕಂಬಗಳು, ಗೋಡೆಗಳು ವಿಕೃತರ ಬರಹಗಳಿಂದ ತುಂಬಿಹೋಗಿವೆ. ಸರಕಾರಿ ನಿರ್ವಹಣೆಯ ಪರಿಯೇ ಇದು? ಇಂತಹ ಸರಕಾರಿ ಉಸ್ತುವಾರಿ ಇನ್ನೂ ಮುಂದುವರಿಯಬೇಕೇ?

ವಾಸ್ತುಶಿಲ್ಪ ವೈಭವದ, ಹಿರೇಕಡಲೂರಿನ ಶ್ರೀ ಚೆನ್ನಕೇಶವ ದೇವಾಲಯದ ದುಸ್ಥಿತಿಯ ಕುರಿತು ಫೇಸ್‌ಬುಕ್‌ನಲ್ಲಿದ್ದ ಸಚಿತ್ರ ವರದಿಯನ್ನು ಗಮನಿಸಿದೆ. 12ನೇ ಶತಮಾನದಲ್ಲಿ ಹೊಯ್ಸಳ ನಿರ್ಮಿತ ಶಿಲ್ಪಕಲೆಯ ಸೊಬಗಿನಿಂದೊಡಗೂಡಿದ ಈ ಸುಂದರ ದೇವಾಲಯವನ್ನು ಎರಡನೇ ನರಸಿಂಹರಾಯ ಕಟ್ಟಿಸಿದ್ದನಂತೆ. ಈ ಊರಿನ ಹೆಸರು ಅರುಂಧತೀಪುರ. ಸ್ವಯಂಸೇವಕರ ತಂಡವೊಂದು ಇತ್ತೀಚೆಗೆ ಈ ದೇವಾಲಯ ಪರಿಸರವನ್ನು ಸ್ವತ್ಛಗೊಳಿಸಿದೆಯಂತೆ. ಹೋಗಲು ಸರಿಯಾದ ರಸ್ತೆ ಸೌಕರ್ಯವೂ ಇಲ್ಲ ಎನ್ನುತ್ತಾರೆ ಆ ಊರವರು. ಇಲಾಖಾ ಅಧಿಕಾರಿಗಳಿಗೆ ತಿಳಿಯದ ವಿಚಾರವೇ ಇದು? ಅಸಡ್ಡೆಗೆ ಇನ್ನೊಂದು ಹೆಸರೇ ಸರಕಾರೀ ಇಲಾಖೆಗಳು. ನಮ್ಮ ಜೀವತಾವಧಿಯಲ್ಲಿ ಕಟ್ಟಲಸಾಧ್ಯವಾದ ಇಂತಹ ಸ್ಮಾರಕಗಳನ್ನು ಉಳಿಸಿ, ಸಂರಕ್ಷಿಸುವ ಅರ್ಹತೆಯಾಗಲಿ, ಯೋಗ್ಯತೆಯಾಗಲಿ ನಮ್ಮ ಸರಕಾರಗಳಿಗೆ ಇಲ್ಲ. 

ಅವರಿಗೆ ಬೇಕೂ ಇಲ್ಲ. ಪ್ರಾಚೀನ ಕಟ್ಟಡ ಸಂರಕ್ಷಣೆಯ ಅನುದಾನದಲ್ಲಿ ತಮ್ಮ ಖಾಸಗಿ ಕಟ್ಟಡಗಳನ್ನು ಸಂರಕ್ಷಿಸಲು ಹೊರಟಿದ್ದಾರೆ ಇವರು. ಇಂತಹ ಸರಕಾರೀಕರಣ ಸಾಕಿನ್ನು. ಖಾಸಗಿ ಭಾಗಿತ್ವವನ್ನು ಆರಂಭಿಸೋಣ. ನಮ್ಮ ದೇಶದ ಯಾವ ಪಾರಂಪರಿಕ ತಾಣವಾಗಲಿ, ಕಟ್ಟಡವಾಗಲಿ ಇಂದು ಸುರಕ್ಷಿತವಾಗಿಲ್ಲ. ವಿನಾಶ, ವಿಕೃತ ದಾಳಿ ಮುಂದುವರಿಯುತ್ತಲೇ ಇದೆ. ಕೆಲವು ವಿಪಕ್ಷಗಳವರು, ಇತಿಹಾಸಕಾರರು ಕೇಂದ್ರದ ಈ ವಿಶಿಷ್ಟ ಹೆಜ್ಜೆಯನ್ನು ವಿರೋಧಿಸಿದ್ದಾರೆ. 

ಟೀಕಿಸುವವರು ಫೀಲ್ಡ್ ವರ್ಕರ್ಸ್‌ ಅಲ್ಲ. ಫೀಲ್ಡ್‌ ವರ್ಕರ್ಸ್‌ ಎಂದೂ ಟೀಕಿಸುವ ಗೋಜಿಗೆ ಹೋಗಲ್ಲ. ಆರು ದಶಕಗಳಲ್ಲಿ ಸರಕಾರಿ ಯಂತ್ರ ಕೆಟ್ಟುನಿಂತಿದೆ. ಅದನ್ನು ದುರಸ್ತಿ ಮಾಡಬೇಕಲ್ಲ. ಒಂದೊಂದೇ ಇಲಾಖೆಗಳ ದುರಸ್ತೀಕರಣವನ್ನು ಕೇಂದ್ರ ಕೈಗೆತ್ತಿಕೊಂಡಿದೆ. ಖಾಸಗಿ, ಸರಕಾರೀ ಎಂಬ ಔಟ್‌ ಡೇಟೆಡ್‌ ಸಿಲೆಬಸ್‌ನ್ನು ಕಿತ್ತೂಗೆಯೋಣ. ದೇಶ ಮುಂದುವರಿಯಬೇಕಾದರೆ ಕಾಲಕಾಲಕ್ಕೆ ಸಿಲೆಬಸ್‌ನ ಪರಿಷ್ಕರಣೆಯಾಗಬೇಕು.
ಅಜ್ಜ ನೆಟ್ಟ ಆಲದ ಮರವನ್ನು ಸಂರಕ್ಷಿಸದಿದ್ದರೆ ಅದು ಉಳಿದೀತೇ? ಆಲದಮರ ಇರಲಿ. ಉಳಿಸುವ ಕಾರ್ಯ ಬೇಡ ಎಂದರೆ ಹೇಗೆ? ಪಾರಂಪರಿಕ ತಾಣ ರಕ್ಷಣೆ ಸರಕಾರಗಳಿಂದ ಅಸಾಧ್ಯ ಎಂದಾದರೆ, ಖಾಸಗಿ ನಿರ್ವಹಣೆಗೆ ನೀಡುವುದು ಸೂಕ್ತವಲ್ಲವೇ? ನಿರ್ವಹಣೆಯಲ್ಲಿ ವಿಫ‌ಲಗೊಂಡುದರ ಪರಿಣಾಮ ನಮ್ಮ ದೇಶದ ಕೆಲ ಪಾರಂಪರಿಕ ತಾಣಗಳನ್ನು ಯುನೆಸ್ಕೋ ತನ್ನ ಪಟ್ಟಿಯಿಂದ ಕೈಬಿಟ್ಟಿದೆ ಎಂಬ ಸುದ್ದಿ ಓದಿದ ನೆನಪಿದೆ. 

Advertisement

ಭವ್ಯ ಹಿಂದೂ ಸಂಸ್ಕೃತಿಯ ಕುರುಹುಗಳನ್ನು ನಾಶಪಡಿಸುವ ಸುವ್ಯವಸ್ಥಿತ ಯೋಜನೆಯನ್ನು ನಮ್ಮ ಹಿಂದಿನ ಸರಕಾರಗಳು ಮೌನವಾಗಿ ಮಾಡುತ್ತಿದ್ದ ಪರಿಣಾಮವೇ ನಮ್ಮ ಸ್ಮಾರಕಗಳು, ಭವ್ಯ ದೇವಾಲಯಗಳು, ಇಲಾಖೆಗಳ ಅಸಡ್ಡೆಯಿಂದ ಇಂದು ನಾಶದಂಚಿನಲ್ಲಿವೆ. ಭವಿಷ್ಯದಲ್ಲಿ ಹಿಂದೂ ಧರ್ಮ ಸಂಸ್ಕೃತಿ ಉಳಿಯಬೇಕಾದರೆ ನಮ್ಮ ಪಾರಂಪರಿಕ ತಾಣಗಳು ಉಳಿಯಬೇಕು. ಇಲ್ಲವಾದಲ್ಲಿ ಅದೇ ತಾಣದಲ್ಲಿ ಮುಂದೊಂದು ದಿನ ಬೃಹತ್‌ ಮಾಲ್‌ ಗಳು, ವಾಣಿಜ್ಯ, ವಸತಿ ಸಂಕೀರ್ಣ‌ಗಳು ತಲೆ ಎತ್ತಿದರೂ ಆಶ್ಚರ್ಯವಿಲ್ಲ. 

*ಜಲಂಚಾರು ರಘುಪತಿ ತಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next