ನಿನ್ನನ್ನು ಕಂಡು ಸಣ್ಣದೊಂದು ಶಾಕ್‌ಗೆ ಒಳಗಾಗಿ, ಆ ಕ್ಷಣ ಕನಸೋ, ನನಸೋ? ಅನ್ನೋ ನಂಬಿಕೆ ಮತ್ತು ಅನುಮಾನಗಳ ಗಡಿಯಲ್ಲಿ ನಿಲುತ್ತೇನೆ. ಇದು ಸುಳ್ಳಾಗದಿರಲಿ ಅನ್ನುವಂತೆ ಪ್ರಾರ್ಥಿಸುತ್ತೇನೆ. ಆಗೆಲ್ಲ ನಿನ್ನೆಡೆಗೆ ಕೈ ಚಾಚುವಾಸೆ. ಬದುಕು ಪುಟ್ಟದೇ ಆದರೂ ಹಾದಿಯ ತಿರುವಿನ ಅನೂಹ್ಯಕ್ಕೆ ಬೆಲೆ ಕಟ್ಟಲಾಗದು.
ಒಲವೇ…
ಯಾವುದೋ ಸೇಡು ತೀರಿಸಿಕೊಳ್ಳುವಂತೆ ನೆತ್ತಿಯಲ್ಲಿ ಉರಿಯುತ್ತಿದ್ದ ಸೂರ್ಯ. ನಿಧಾನಕ್ಕೆ ಪಶ್ಚಿಮಕ್ಕೆ ವಾಲತೊಡಗಿದಂತೆ ಮೋಡಗಳ ಪರಿಷೆ ಶುರುವಾಗುತ್ತದೆ. ಕಡುಗಪ್ಪು ಬಣ್ಣದ ಜಾತ್ರೆ ಆಗಸದ ತುಂಬ ನೆರೆಯುತ್ತದೆ. ಮೊದಲ ಮಳೆಗೆ ಸಜ್ಜುಗೊಂಡು ಇಳೆ ಕಾಯುತ್ತದೆ. ಮೋಡದ ಒಡಲಿಂದ ಜಾರಿ, ಗಾಳಿಯ ಮೈ ಸವರುತ್ತಾ, ನೆಲ ತಲುಪಿದ ಮೊದಲ ಹನಿ ಶುದ್ಧ ಮೃದ್ಗಂಧ. ಅಂತಹ ಮೃದ್ಗಂಧ ನಿನ್ನ ನೆನಪು. ಒಂದೊಂದು ವಾಸನೆಯೂ ಒಂದೊಂದು ನೆನಪನ್ನು ಉದ್ದೀಪಿಸುವಂತೆ. ಮೊದಲ ಮಳೆಯಿಂದೆದ್ದ ಆ ದೈವೀಕ ಸುಗಂಧ ಕೇವಲ ನಿನ್ನ ನೆನಪಿಗಷ್ಟೇ ಮೀಸಲಾಗಿ ಹೋಗಿದೆ. ನಾ ಒಬ್ಬಂಟಿಯಾಗಿದ್ದಾಗೆಲ್ಲಾ ಛೇ ಪಾಪ… ಅಂತ ನನಗೇ ನಾನೇ ಅಂದುಕೊಳ್ಳುತ್ತೇನೆ. ಅದೇನೋ ಗೊತ್ತಿಲ್ಲ, ನೀ ಬರುವುದು ನಿನಗಿಂತ ಮೊದಲು ನನ್ನ ಮನಸಿಗೆ ತಿಳಿದುಬಿಡುತ್ತದೆ. ನಿನ್ನದೇ ಹತ್ತಾರು ಕೆಲಸಗಳ ಗಡಿಬಿಡಿಯಲ್ಲಿ ಮುಳುಗಿದವಳು, ಇಳಿಸಂಜೆ ರಸ್ತೆಯಂಚಿನ ಚಾ ದುಕಾನ್‌ನಲ್ಲಿ ನಾ ಚಾ ಕುಡಿಯೋ ವೇಳೆಗೆ ಇದ್ದಕ್ಕಿದ್ದಂತೆ ನೆನಪಾಗುತ್ತಾಳೆ. ಈಗ ಬರುವೆಯಾ? ಆಮೇಲೆ ಬರುವೆಯಾ? ಹೀಗೆ ಹುಚ್ಚು ಹುಚ್ಚಾಗಿ ಯೋಚಿಸುವ ಘಳಿಗೆಯಲ್ಲಿಯೇ ಆಗುತ್ತದೆ ನಿನ್ನ ಹಾಜರಾತಿ. ಆ ಘಳಿಗೆಯಲ್ಲಿ ನಿನ್ನ ಅಭೋದ ಕಣ್ಣ ಮಿಂಚು ಚಂದ. ನಿನ್ನ ಮುಗ್ಧ ನಗುವಿನೊಳಗಿನ ಅವ್ಯಕ್ತ ಸಂಭ್ರಮ ಇಷ್ಟ. ನಿನ್ನನ್ನು ಕಂಡು ಸಣ್ಣದೊಂದು ಶಾಕ್‌ಗೆ ಒಳಗಾಗಿ, ಆ ಕ್ಷಣ ಕನಸೋ, ನನಸೋ? ಅನ್ನೋ ನಂಬಿಕೆ ಮತ್ತು ಅನುಮಾನಗಳ ಗಡಿಯಲ್ಲಿ ನಿಲುತ್ತೇನೆ. ಇದು ಸುಳ್ಳಾಗದಿರಲಿ ಅನ್ನುವಂತೆ ಪ್ರಾರ್ಥಿಸುತ್ತೇನೆ. ಆಗೆಲ್ಲ ನಿನ್ನೆಡೆಗೆ ಕೈ ಚಾಚುವಾಸೆ. ಬದುಕು ಪುಟ್ಟದೇ ಆದರೂ ಹಾದಿಯ ತಿರುವಿನ ಅನೂಹ್ಯಕ್ಕೆ ಬೆಲೆ ಕಟ್ಟಲಾಗದು. ಮನಸಿಗೆ ಬಂದವಳು ಎದುರಿಗೇ ಬಂದಾಗ ಆ ಕ್ಷಣಗಳಿಗೆ ಕನಸಿನ ಬಣ್ಣ.
ಯಾಕೋ, ಇವತ್ತು ಮೋಡಗಳ ಸುಳಿವಿಲ್ಲ. ಗಾಳಿ, ಬೀಸುವುದನ್ನೇ ಮರೆತು ಮಲಗಿದೆ. ಮನೆಯೊಳಗೆ ಮುಗಿಯದ ಧಗೆ. ಮನದೊಳಗೆ ನೀ ಸನಿಹವಿಲ್ಲದ ಬೇಗೆ. ಟೆರೇಸು ಹತ್ತಿ ಬಂದು ಅಂಗಾತ ಮಲಗಿದವನಿಗೆ ಅಗಾಧ ಆಕಾಶಕ್ಕೆ ಅಂಟಿಕೊಂಡ ಅಸಂಖ್ಯ ನಕ್ಷತ್ರಗಳು ಮಳೆ ಬಾರದು ಅಂತ ಷರಾ ಬರೆದಂತೆ ಹೊಳೆಯುತ್ತಿವೆ. ಯಾಕೋ ನನ್ನೊಳಗೊಂದು ಅಸಹನೆ ಕದಲುತ್ತಿದೆ. ನೀ ಇಲ್ಲದಾಗ ಮಳೆ ಬರಲೆಂದು ಪ್ರಾರ್ಥಿಸುತ್ತಾ ಕಾಯುತ್ತೇನೆ. ಮಳೆ ಬಂದಾಗೆಲ್ಲಾ ಅದರ ಒಡಲೊಳಗೆ ಅಡಗಿದ ಒಲವಿನ ಹಾಡನ್ನು ಕೇಳುತ್ತಾ ಮೈಮರೆಯುತ್ತೇನೆ. ಹನಿಗಳ ಏರಿಳಿತಗಳ ಲಯದಲ್ಲೇ ಹಾಡು ತಂಪಾಗಿ ಇಂಪಾಗಿ ಕಿವಿ ತಾಕುತ್ತದೆ, ಕಿವಿಯಲ್ಲಿ ನಿನ್ನುಸಿರು ಬಿಸುಪಿನ ಆಟವಾಡಿದಂತೆ. ಬೇಗ ಬಂದು ಬಿಡು ಹುಡುಗಿ. ಮುಂಜಾನೆಯೆಂಬುದು ನಿನ್ನೊಂದಿಗೆ ಬಂದು ಈ ಒಬ್ಬಂಟಿ ಜೀವಿಯ ಮನೆಯ ಕದ ಬಡಿಯಲಿ. ಕಣ್ಣ ತುಂಬ ನಿನ್ನ ಬಿಂಬ ತುಂಬಿಕೊಳ್ಳುವಾಸೆ.
ನಿನ್ನವನು
– ಜೀವ ಮುಳ್ಳೂರು