Advertisement

ನಮ್ಮ ಮೂಲ ತಿಳಿದಾಗ‌ ಪ್ರಪಂಚ ಸುಭಿಕ್ಷವಾಗುತ್ತದೆ

10:55 AM Feb 13, 2018 | Harsha Rao |

ಎಲ್ಲಾ ದೇಹರಾಶಿಯ ಭೂತ ಕಣಗಳು ಅಣುವಿನಿಂದ ಶುರುವಾಗಿ ಕೊನೆಗೂ ಅಣುಗಳಾಗಿಯೇ ಉಳಿದುಕೊಳ್ಳುತ್ತವೆ.ಕೆಲವು ಸಲ ರಾತ್ರಿ ಹೊತ್ತು ನಾವು ತಲೆ ಎತ್ತಿ ನಕ್ಷತ್ರಗಳನ್ನು ಗಮನಿಸುತ್ತೇವೆ. ಆದರೆ ಅನೇಕ ಕೋಟಿ ವರ್ಷಗಳ ಹಿಂದೆ ನಾವೂ ಕೂಡ ಆ ನಕ್ಷತ್ರದಲ್ಲಿ ಸೂಕ್ಷ್ಮಕಣಗಳಾಗಿದ್ದೆವು.

Advertisement

ಮನುಷ್ಯ ಹೇಗೆ ಹುಟ್ಟಿದ ಅಂತ ಪ್ರಶ್ನೆ ಬಂದಾಗ ಸಾಮಾನ್ಯವಾಗಿ ನಾವೆಲ್ಲ ನಮ್ಮ ವಂಶವೃಕ್ಷದ ಮೇಲೆ ಕಣ್ಣು ಹಾಯಿಸುತ್ತೇವೆ. ನಾನು ನಮ್ಮಮ್ಮನಿಂದ ಬಂದೆ, ನಮ್ಮಮ್ಮ ನಮ್ಮಜ್ಜಿಯಿಂದ, ನಮ್ಮ ಅಜ್ಜಿ ತಾತ ಅವರವರ ಅಮ್ಮನಿಂದ ಹೀಗೆ. ಆದರೆ ಈ ಜಗತ್ತಿಗೆ ಮನುಷ್ಯರು ಹೇಗೆ ಬಂದರು ಅಂತ ವೈಜ್ಞಾನಿಕವಾಗಿ ಹುಡುಕುತ್ತಾ ಹೋದರೆ ನಮ್ಮ ಮೂಲ ಜನ್ಮವಾಗಿದ್ದು ನಕ್ಷತ್ರಗಳಿಂದ ಎಂಬುದು ಗೊತ್ತಾಗುತ್ತದೆ. ಈ ಯೂನಿವರ್ / ವಿಶ್ವ ಸೃಷ್ಟಿಯಾಗಿದ್ದು ಒಂದು ಅಣುವಿನಿಂದ.

ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರದ ಪ್ರಕಾರ ಜಗತ್ತಿನಲ್ಲಿ ಒಂದೇ ತೂಕದ ಸಣ್ಣ ಸಣ್ಣ ಅಣುಗಳಿವೆ. ಆ ಅಣುಗಳು ಒಡೆದಾಗಲೂ ಶಕ್ತಿ ಉತ್ಪತ್ತಿ ಮಾಡುತ್ತವೆ ಮತ್ತು ಸೇರಿಕೊಂಡಾಗಲೂ ಶಕ್ತಿ ಉತ್ಪತ್ತಿ ಮಾಡುತ್ತವೆ. ಈ ಅಣುಗಳೆಲ್ಲಾ ಗುಂಪಾಗಿ ಸೇರಿಕೊಳ್ಳುತ್ತಾ ನಕ್ಷತ್ರಗಳಾಗಿವೆ. ಅವುಗಳಿಂದ ಬೆಳಕು ಹೊರಬರಲು ಕಾರಣ ಕೂಡ ಹೆಚ್ಚಾಗಿ ಅಣುಗಳ ಜೋಡಣೆಯಾಗುತ್ತಿರುವುದು. ಒಂದು ಅಣುವಿನ ತೂಕವನ್ನು ಹೈಡ್ರೋಜನ್‌, ಎರಡು ಅಣುವಿನ ತೂಕವನ್ನು ಹೀಲಿಯಮ್‌, ಹನ್ನೆರಡು ಅಣುವಿನ ತೂಕವನ್ನು ಕಾರ್ಬನ್‌, ಹದಿನಾರು ಅಣುವಿನ ತೂಕವನ್ನು ಆಕ್ಸಿಜನ್‌ ಅಂತ ಗುರುತಿಸಲಾಗಿದೆ. ಹಾಗೇ ಐವತ್ತಾರು ಅಣುಗಳ ತೂಕ ಐರನ್‌ ಆಗಿ ಮಾರ್ಪಾಡಾಗುತ್ತದೆ. ನಕ್ಷತ್ರಗಳ ನಡುವಿರುವ ಬ್ಲ್ಯಾಕ್‌ಹೋಲ್‌ ಕೆಲವು ಸಲ ಎಲ್ಲ ಅಣುಗಳನ್ನೂ ಒಳಗೆ ಎಳೆದುಕೊಳ್ಳುತ್ತದೆ ಅಥವಾ ನೋವಾ ಆಗಿ ಕೆಲವು ಸಲ ಎಲ್ಲವನ್ನೂ ಛಿದ್ರ ಛಿದ್ರವಾಗಿ ಒಡೆದು ಸೂಕ್ಷ್ಮಕ್ಕಿಂತ ಸೂಕ್ಷ್ಮವಾಗಿರುವ ಅಣುಗಳನ್ನಾಗಿ ಮಾಡುತ್ತದೆ. ಆಗ‌ ಹೊರಬಿದ್ದಿರುವ ಅಣುಗಳಲ್ಲಿ ಕೆಲವು ಗ್ರಹಗಳಾಗಿವೆ. ಅತಿ ಸೂಕ್ಷ್ಮ ಅಣುಗಳು ನಿಸರ್ಗ/ ಪ್ರಕೃತಿ ಮತ್ತು ಮನಷ್ಯರನ್ನು ಸೃಷಿ¡ಸಿವೆ.

ಮನುಷ್ಯ ಬದುಕಲು ಬೇಕಾಗಿರುವುದು ಆಮ್ಲಜನಕ. ಹಾಗೇ ನಾವು ಉಸಿರಾಡಿ ಹೊರ ಹಾಕುವುದು ಇಂಗಾಲಾಮ್ಲವನ್ನು. ಮರ ಗಿಡಗಳಿಗೆ ಬೇಕಿರುವುದು ಇಂಗಾಲಾಮ್ಲ. ಅವು ಉಸಿರಾಡಿ ಹೊರ ಹಾಕುವುದು ಆಮ್ಲಜನಕವನ್ನು. ನಮ್ಮೊಳಗೆ ಹಾಗೂ ಪ್ರಕೃತಿಯೊಳಗೆ ಇರುವ ಎಲಿಮೆಂಟ್ಸ್‌ ಎಲ್ಲವೂ ಎಷ್ಟೋ ಸಾವಿರ ಕೋಟಿ ವರ್ಷಗಳ ಹಿಂದೆ ನಕ್ಷತ್ರದಿಂದ ಛಿದ್ರವಾಗಿಬಿದ್ದ ಅತಿ ಸೂಕ್ಷ್ಮ ಅಣುಗಳು. ಉದಾಹರಣೆಗೆ, ನಾವು ಒಂದು ಲೋಟ ನೀರನ್ನು ಕೈಯಲ್ಲಿ ಹಿಡಿದುಕೊಂಡು ಮೇಲಿನಿಂದ ಚೆಲ್ಲಿದಾಗ ನೀರು ಕೆಳಗೆ ಚೆಲ್ಲಿರುವುದು ಕಾಣಿಸುತ್ತದೆ. ಆದರೂ ನೀರಿನ ಸಣ್ಣ ಸಣ್ಣ ಹನಿಗಳು ನಮ್ಮ ಕಣ್ಣಿಗೆ ಕಾಣಿಸದಂತೆ ಎಲ್ಲೆಲ್ಲೋ ಎರಚಿಕೊಂಡಿರುತ್ತವೆ.

ಹಾಗೇ ನಾವು ಎಷ್ಟೋ ಕೋಟಿ ವರ್ಷಗಳ ಹಿಂದೆ ಒಂದು ನಕ್ಷತ್ರದಲ್ಲಿದ್ದೆವು. ಮನುಷ್ಯನ ದೇಹ ಶೇ.93ರಷ್ಟು ನಕ್ಷತ್ರದ ಪುಡಿ ಧೂಳಿನಿಂದ ಮಾಡಲ್ಪಟ್ಟಿದೆ. ಉಳಿದ ಶೇ.7 ಬಿಗ್‌ಬ್ಯಾಂಗ್‌ ಹೈಡ್ರೋಜನ್‌ನಿಂದ ಬಂದಿದೆ. ಆಧ್ಯಾತ್ಮಿಕವಾಗಿ ಹಿರಣ್ಯಗರ್ಭದಿಂದ ಮನುಷ್ಯ ಬಂದ ಎಂದು ಹೇಳುವುದು ಇದೇ ಕಾರಣಕ್ಕೆ. ಇಂಗ್ಲಿಷ್‌ನಲ್ಲಿ ಮ್ಯಾನ್‌ ಈಸ್‌ ಮೇಡ್‌ ಆಫ್ ಸ್ಟಾರ್‌ಡಸ್ಟ್‌ ಅಂತ ಹೇಳುವುದೂ ಇದೇ ಕಾರಣಕ್ಕೆ.

Advertisement

ಮಂಗಳ ಗ್ರಹಕ್ಕೆ ಹೋಗುವಿರಾ?
ನಾವೆಲ್ಲ ಈಗ ಭೂಮಿಯ ಮೇಲಿದ್ದೇವೆ. ನಮಗೆ ಜೀವ ತುಂಬಿದ್ದು ಪ್ರಕೃತಿ. ಹಾಗೆಯೇ ನಾವು ಜೀವಂತವಾಗಿರುವುದಕ್ಕೂ ಪ್ರಕೃತಿಯೇ ಸಹಾಯ ಮಾಡುತ್ತಿದೆ. ಈಗ ಮಂಗಳ ಗ್ರಹಕ್ಕೆ ಜನರು ಪ್ರಯಾಣ ಬೆಳೆಸಿ ಪ್ರಯೋಗಾತ್ಮಕವಾಗಿ ಬದುಕಲು ಸಾಧ್ಯವೇ ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಎಲ್ಲಾ ಗ್ರಹಗಳು ಸೃಷ್ಟಿಯಾಗಿರುವುದೇ ನಕ್ಷತ್ರಗಳ ಧೂಳಿನಿಂದ ಎಂದಾದ ಮೇಲೆ ಮಂಗಳ ಗ್ರಹದಲ್ಲೂ ಆಕ್ಸಿಜನ್‌, ಹೈಡ್ರೋಜನ್‌, ಹೀಲಿಯಮ್‌, ಕಾರ್ಬನ್‌ ಇವೆಲ್ಲವೂ ಇರಲೇಬೇಕು. ಆದರೆ ಜನರು ಅಲ್ಲಿಗೆ ಹೋದ ಮೇಲೆ ಇವೆಲ್ಲವನ್ನೂ ಕಂಡುಕೊಂಡು ಬದುಕಲು ಸಾಧ್ಯವಿಲ್ಲ. ಹಾಗಾಗಿ, ಅಲ್ಲಿಗೆ ಹೋಗುವುದಕ್ಕೂ ಮೊದಲೇ ಇಲ್ಲಿಂದಲೇ ಅವುಗಳ ಹುಡುಕಾಟ ನಡೆಯುತ್ತಿದೆ. 2011ರಲ್ಲಿ ಮಾರ್ಸ್‌ ಒನ್‌ ಎಂಬ ಮಂಗಳ ಗ್ರಹಕ್ಕೆ ಒನ್‌ವೇ ಪ್ರಯಾಣಕ್ಕಾಗಿ ಜನರಿಗೆ ಆಹ್ವಾನ ನೀಡಿತು.

ಪ್ರಪಂಚದಾದ್ಯಂತ ಎರಡು ಲಕ್ಷ ಜನ ಅರ್ಜಿ ಹಾಕಿಕೊಂಡರು. ಅದರಲ್ಲಿ ಇನ್ನೂರು ಜನರನ್ನು ಆಯ್ಕೆ ಮಾಡಲಾಗಿದೆ. ಈ ವರ್ಷದಿಂದ ಅವರಿಗೆ 8 ವರ್ಷ ಸತತವಾಗಿ ಜನರಹಿತ ಪ್ರದೇಶದಲ್ಲಿ ಮಂಗಳ ಗ್ರಹದ ವಾತಾವರಣವನ್ನು ಸೃಷ್ಟಿಸಿ ತರಬೇತಿ ನೀಡಲಾಗುತ್ತದೆ. 2020ರಲ್ಲಿ ರೋಬೋಟ್‌ ಕಳಿಸಿ, 2024ರಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು ಕಳಿಸಿ, 2026ರಲ್ಲಿ ಮೊದಲನೆಯ ಜನರ ಗುಂಪನ್ನು ಕಳಿಸಲು ನಿರ್ಧಾರವಾಗಿದೆ.

ಇಲ್ಲಿಂದ ಮಂಗಳ ಗ್ರಹಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಕಿ.ಮೀ. ವೇಗದಲ್ಲಿ ಚಲಿಸುವ ರಾಕೆಟ್‌ನಲ್ಲಿ ಒಂದು ವರ್ಷದ ಸತತ ಪ್ರಯಾಣ. ಇದು ಒನ್‌ವೇ ಟಿಕೆಟ್‌ ಅಷ್ಟೆ. ವಾಪಸ್‌ ಬರಲು ಸಾಧ್ಯವಿಲ್ಲ. ಆದರೂ ಜನ ತಮ್ಮ ಜೀವನವನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳಲು ಸಿದ್ಧರಾಗಿದ್ದಾರೆ. 107 ದೇಶಗಳ ಜನರು ಹಣ ನೀಡಿ ಮಂಗಳ ಗ್ರಹದ ಪ್ರಯಾಣಕ್ಕೆ ಸಹಾಯ ಮಾಡುತ್ತಿದ್ದಾರೆ. 

ನಾವೊಂದು ಧೂಳಿನ ಕಣವಷ್ಟೆ
ಒಂದೇ ಜೀವಾತ್ಮದ ಚೈತನ್ಯದಿಂದ ಎಲ್ಲಾ ಜೀವರಾಶಿಗಳಲ್ಲಿ ಆತ್ಮ ಸಂಚಯವಾಗಿದೆ ಎಂದು ಅಧ್ಯಾತ್ಮ ಹೇಳುತ್ತದೆ. ಎಲ್ಲಾ ಜೀವರಾಶಿಗಳಿಗೆ ಕೊನೆಯಲ್ಲಿ ಮುಕ್ತಿ ಸಿಕ್ಕಾಗ ಮತ್ತೆ ಅದೇ ಮೂಲ ಜೀವಾತ್ಮದಲ್ಲಿ ಅವು ಒಂದಾಗುತ್ತವೆ. ಹಾಗೆ ಎಲ್ಲಾ ದೇಹರಾಶಿಯ ಭೂತ ಕಣಗಳು ಅಣುವಿನಿಂದ ಶುರುವಾಗಿ ಕೊನೆಗೂ ಅಣುಗಳಾಗಿಯೇ ಉಳಿದುಕೊಳ್ಳುತ್ತವೆ.

ಕೆಲವು ಸಲ ರಾತ್ರಿ ಹೊತ್ತು ನಾವು ತಲೆ ಎತ್ತಿ ನಕ್ಷತ್ರಗಳನ್ನು ಗಮನಿಸುತ್ತೇವೆ. ಆದರೆ ಅನೇಕ ಕೋಟಿ ವರ್ಷಗಳ ಹಿಂದೆ ನಾವೂ ನಕ್ಷತ್ರದಲ್ಲಿ ಸೂಕ್ಷ್ಮಕಣಗಳಾಗಿದ್ದೆವು. ಹಾಗೇ ನಾವು ಈಗ ನೋಡುತ್ತಿರುವ ನಕ್ಷತ್ರ ಎಷ್ಟೋ ಕೋಟಿ ವರ್ಷಗಳ ನಂತರ ಛಿದ್ರವಾಗಿ ಯಾವ ಪ್ರಪಂಚವನ್ನು ಸೃಷ್ಟಿಮಾಡುತ್ತದೆಯೋ, ಯಾವ ರೀತಿಯ ಜೀವರಾಶಿಗಳನ್ನು ಹುಟ್ಟಿಸುತ್ತದೆಯೋ ನಮಗೆ ಗೊತ್ತಿಲ್ಲ. ನಮ್ಮದು ನಕ್ಷತ್ರದ ಧೂಳಿನಿಂದ ಆದ ದೇಹವೇ ಹೊರತು ನಾವೇ ನಕ್ಷತ್ರವಲ್ಲ. ಅದರ ಒಂದು ಸೂಕ್ಷ್ಮ ಅಣುವಿನ ಕಣ ನಮ್ಮಲ್ಲಿದೆೆ. ಹಾಗೇ ನಮ್ಮಲ್ಲಿರುವುದು ಜೀವಾತ್ಮದ ಅಂಶವೇ ಹೊರತು ನಾವೇ ಜೀವಾತ್ಮದ ಮೂಲನಾದ ಪರಮಾತ್ಮನಲ್ಲ.

ಇಷ್ಟೆಲ್ಲ ಹೇಳಿದ್ದು ಈ ಸೃಷ್ಟಿಯಲ್ಲಿ ನಾವೆಷ್ಟು ಸಣ್ಣವರು ಎಂಬುದನ್ನು ತಿಳಿಸುವುದಕ್ಕೆ. ನಮಗಿಂತ ಮೊದಲೂ ಮತ್ತು ನಂತರವೂ ವಿಶ್ವ ಇರುತ್ತದೆ. ನಾವು ಮಧ್ಯದಲ್ಲೆಲ್ಲೋ ಒಂದು ಸಣ್ಣ ಅವಧಿಗೆ ಬಂದು ಹೋಗುತ್ತೇವೆ. ಆದರೂ ಜಗತ್ತೇ ನನ್ನದು ಎಂಬಂತೆ ಆಡುತ್ತೇವೆ ಅಥವಾ ನಾವು ಬಹಳ ದೊಡ್ಡವರು ಎಂಬ ಬೀಗುತ್ತೇವೆ. ಈ ಅಪ್ರಬುದ್ಧ ಮನಃಸ್ಥಿತಿಯೇ ಜಗತ್ತಿನ ಎಲ್ಲ ಕೆಡಕುಗಳಿಗೂ ಮೂಲ.
ಅಧ್ಯಾತ್ಮ ಏನು ಮಾಡುತ್ತದೆ ಅಂದರೆ ಅದು ನಮ್ಮ ನಿಜವಾದ ಸ್ಥಾನವನ್ನು ಅರ್ಥ ಮಾಡಿಸುತ್ತದೆ. ಅದನ್ನು ಅರಿತರೆ ನಮ್ಮೆಲ್ಲಾ ಹಮ್ಮುಬಿಮ್ಮುಗಳೂ, ದೊಡ್ಡಸ್ತಿಕೆಯ ಅಹಮಿಕೆಗಳೂ, ಬೇರೆಯವರನ್ನು ಕ್ಷುಲ್ಲಕವಾಗಿ ನೋಡುವ ದುರಹಂಕಾರವೂ, ಆತ್ಮರತಿಯೂ, ತರ್ಕಹೀನ ನಂಬಿಕೆಗಳಿಗಾಗಿ ಹೊಡೆದಾಡುವುದೂ, ಜನಾಂಗೀಯ ಮೇಲರಿಮೆಯೂ ನಾಶವಾಗುತ್ತದೆ. ಮನುಷ್ಯ ನಿಜವಾದ ಮನುಷ್ಯನಾಗುವುದು ಹೀಗಾದಾಗಲೇ. ಇದು ನಮಗೂ ಸಾಧ್ಯವಾಗಬೇಕು. ಅಂದರೆ ನಾವೂ ನಿಜವಾದ ಮನುಷ್ಯರಾಗಬೇಕು ಎಂದಾದರೆ ಮೊದಲು ನಮ್ಮ ಜಾಗವನ್ನು ತಿಳಿದುಕೊಳ್ಳಬೇಕು.

– ರೂಪಾ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next