Advertisement

ಕುಸಿದ ಮೇಲ್ಸೇತುವೆ ದುರಸ್ತಿ ಯಾವಾಗ?

08:23 PM Jun 07, 2021 | Team Udayavani |

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ -ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಶಿರೂರ ಹತ್ತಿರ ರೈಲ್ವೆ ಮಾರ್ಗಕ್ಕೆ ನಿರ್ಮಿಸಿದ ಮೇಲ್ಸೇತುವೆ ಕುಸಿದು ಒಂದೂವರೆ ತಿಂಗಳು ಕಳೆದರೂ ಸಂಬಂಧಪಟ್ಟವರು ಪರ್ಯಾಯ ವ್ಯವಸ್ಥೆಗೆ ಮುಂದಾಗದೇ ಇರುವುದರಿಂದ ಲಕ್ಷ್ಮೇಶ್ವರ ಮತ್ತು ಕುಂದಗೋಳ ತಾಲೂಕಿನ ಜನರು ಪರದಾಡುವಂತಾಗಿದೆ.

Advertisement

ಏ.27ರಂದು ರಾತ್ರಿ ಸುರಿದ ಮಳೆಗೆ ಸೇತುವೆ ಕೆಳಗಿನ ತಡೆಗೋಡೆ ಕುಸಿದಿದೆ. ಇದರಿಂದ ವ್ಯಾಪಾರ- ವಹಿವಾಟು, ಆಸ್ಪತ್ರೆ, ಉದ್ಯೋಗ, ಶಿಕ್ಷಣ ಸೇರಿ ಎಲ್ಲದಕ್ಕೂ ಮುಖ್ಯ ಕೇಂದ್ರವಾಗಿರುವ ಲಕ್ಷ್ಮೇಶ್ವರ ಭಾಗದ ಜನರಿಗೆ ಹುಬ್ಬಳ್ಳಿ ಸಂಪರ್ಕವೇ ಕಡಿತಗೊಂಡಂತಾಗಿದ್ದು, ತೊಂದರೆಯಾಗಿದೆ.

ಕೊಂಕಣ ಸುತ್ತಿ ಮೈಲಾರಕ್ಕೆ: ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಹೋಗಬೇಕಾದರೆ ಗುಡಗೇರಿ, ಹುಲಗೂರ ಇಲ್ಲವೇ ಸಂಶಿಯಿಂದ ಬಸಾಪುರ, ನೆರ್ತಿ, ಬೆನಕನಹಳ್ಳಿ ಕುಂದಗೋಳ ರಸ್ತೆ ಸಂಪರ್ಕಿಸಬೇಕು. ಇದರಿಂದ 15 ಕಿ.ಮೀ ಅಂತರ ಹೆಚ್ಚಾಗುತ್ತದೆ. ಆದರೆ ಈ ರಸ್ತೆ ಅತ್ಯಂತ ಕಿರಿದಾಗಿದ್ದು ಮತ್ತು ಹದಗೆಟ್ಟಿದ್ದು ದೊಡ್ಡ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಮಾರ್ಗದಲ್ಲಿನ ಹಳ್ಳಿಗಳ ಜನರು ಮರಳು, ಸಿಲಿಂಡರ್‌, ಕೃಷಿ ಉತ್ಪನ್ನ ಸೇರಿ ಇತರೆ ದೊಡ್ಡ ವಾಹನಗಳ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಸವಣೂರು-ಶಿಗ್ಗಾಂವ ಮೂಲಕ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವಂತಾಗಿದೆ.

ವ್ಯಾಪಾರ-ವಹಿವಾಟಿಗೆ ತೊಂದರೆ: ಲಕ್ಷ್ಮೇಶ್ವರ ಸೇರಿ ತಾಲೂಕಿನ ಎಲ್ಲ ಭಾಗದ ಜನರು ಕಿರಾಣಿ, ಕಟ್ಟಡ ಸಾಮಗ್ರಿ, ಆಹಾರ ಪದಾರ್ಥ, ಔಷಧ, ಕೃಷಿ ಉತ್ಪನ್ನ, ದಿನಪತ್ರಿಕೆ ಸೇರಿ ಇತರೆ ಜೀವನಾವಶ್ಯಕ ವಸ್ತುಗಳ ಸಾಗಾಟಕ್ಕೆ ಈ ಮಾರ್ಗವೇ ಆಧಾರ. ಆದರೆ ಒಂದೂವರೆ ತಿಂಗಳಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಮತ್ತು ಕೊರೊನಾ ಸಂಕಷ್ಟದಲ್ಲಿ ಅಗತ್ಯ ವಸ್ತುಗಳ ಕೊರತೆ ಜತೆಗೆ ಬೆಲೆ ಹೆಚ್ಚಳಕ್ಕೂ ಕಾರಣವಾಗಿದೆ. ಇದರಿಂದ ಎಲ್ಲ ಬಗೆಯ ವ್ಯಾಪಾರಸ್ಥರಿಗೆ ಪೆಟ್ಟು ಬಿದ್ದಿದೆ. ರಸಗೊಬ್ಬರ ಸರಬರಾಜಿಗೆ ತೊಂದರೆಯಾಗಿ ರೈತರು ಗೊಬ್ಬರವಿಲ್ಲದೇ ಪರದಾಡುವಂತಾಗಿದೆ.

ರೋಗಿಗಳ ಪರದಾಟ: ಲಕ್ಷ್ಮೇಶ್ವರ ಮತ್ತು ಕುಂದಗೋಳ ತಾಲೂಕಿನ ಕೆಲ ಭಾಗದ ರೋಗಿಗಳಿಗೆ ಹುಬ್ಬಳ್ಳಿಯೇ ಸಂಜೀವಿನಿ. ಸದ್ಯ ಹೆಚ್ಚುತ್ತಿರುವ ಕೊರೊನಾ ಸೋಂಕಿತರು, ಅಪಘಾತಕ್ಕೀಡಾದವರು, ತೀವ್ರ ಆರೋಗ್ಯ ತೊಂದರೆಗೀಡಾದವರು ಹುಬ್ಬಳ್ಳಿ ತಲುಪಲು ಹೆಚ್ಚು ಸಮಯ ಬೇಕಾಗುವುದರಿಂದ ಪ್ರಾಣಕ್ಕೂ ಕುತ್ತು ಬರುವಂತಾಗಿದೆ. ರಸ್ತೆ ಸಮಸ್ಯೆಯಿಂದ ಬಾಡಿಗೆ ವಾಹನದವರೂ ಹುಬ್ಬಳ್ಳಿಗೆ ಹೋಗಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಮತ್ತಷ್ಟು ಸಮಸ್ಯೆ ಹೆಚ್ಚಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next