Advertisement

ದರ್ಬೆ ವೃತ್ತದ ವೈಜ್ಞಾನಿಕ ಅಭಿವೃದ್ಧಿ ಯಾವಾಗ?

12:54 PM Jun 04, 2018 | |

ನಗರ : ಪುತ್ತೂರಿಗೆ ಸವಾಲೊಡ್ಡಿ ಬೆಳೆಯುತ್ತಿದೆ ದರ್ಬೆ. ಒಂದು ಕಾಲೇಜು ಬಿಟ್ಟರೆ ಬೇರೇನೂ ಇಲ್ಲ ಎಂಬಂತಹ ಸ್ಥಿತಿ ಈಗಿಲ್ಲ. ಬೆಳೆಯುತ್ತಿರುವ ಪಟ್ಟಣಕ್ಕೆ ತಕ್ಕಂತೆ ಅಪಘಾತ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವೂ ಎದುರಾಗಿದೆ.

Advertisement

ಪುತ್ತೂರಿನಿಂದ 2 ಕಿ.ಮೀ. ಮುಂದಕ್ಕೆ ಸಾಗಿದರೆ ದರ್ಬೆ ವೃತ್ತ ಎದುರಾಗುತ್ತದೆ. ಇಲ್ಲಿ ರಸ್ತೆ ವಿಭಜನೆ ಆಗಿದ್ದು, ಒಂದು ರಸ್ತೆ ಸುಳ್ಯಕ್ಕೆ ಹಾಗೂ ಇನ್ನೊಂದು ಕಾಣಿಯೂರಿಗೆ ಸಾಗುತ್ತದೆ. ಪುತ್ತೂರಿನಿಂದ ಹೋಗುವ ವೇಳೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಈ ಎರಡು ರಸ್ತೆಗಳಿಂದ ಪುತ್ತೂರಿಗೆ ಆಗಮಿಸುವ ವಾಹನಗಳು ಅಪಾಯವನ್ನು ಎದುರು ನೋಡುತ್ತಿವೆ.

ಪುತ್ತೂರಿನ ಎರಡನೇ ಅತಿದೊಡ್ಡ ಪೇಟೆ ದರ್ಬೆ. ಆದರೆ ಇಲ್ಲಿನ ವೃತ್ತ ಸಮರ್ಪಕ ವಾಗಿಲ್ಲದೆ ಅಪಾಯವನ್ನು ಕೈಬೀಸಿ ಕರೆಯುವಂತಿದೆ. ಇಲ್ಲಿನ ಪ್ರಸಿದ್ಧ ಅಶ್ವತ್ಥ ಕಟ್ಟೆ ರಸ್ತೆಯ ಅಂಚಿನಲ್ಲಿದೆ. ಅಂದರೆ ಕಾಣಿಯೂರು ರಸ್ತೆಯನ್ನು ವಿಭಾಗಿಸಿ ಕೊಡುವಂತಿದೆ. ಕಾಣಿಯೂರು- ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯಾದರೂ, ಒಳ ರಸ್ತೆಯ ರೀತಿಯಲ್ಲಿ ಕಂಡುಬರುತ್ತದೆ.

ಹಂಪ್ಸ್‌ ಹಾಕಲಾಗಿತ್ತು
ದರ್ಬೆ ರಸ್ತೆಯ ಅವೈಜ್ಞಾನಿಕ ವೃತ್ತದ ಬಗ್ಗೆ ಈ ಹಿಂದೆಯೇ ನಗರಸಭೆ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಆ ಸಂದರ್ಭ, ಅಶ್ವತ್ಥ ಕಟ್ಟೆಯ ಬಳಿ ಹಂಪ್ಸ್‌ ಹಾಕಲಾಗಿತ್ತು. ಇದರಿಂದ ಕಾಣಿಯೂರು ಭಾಗದಿಂದ ಬರುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಸುಲಭ ಸಾಧ್ಯವಾಯಿತು. ವಾಹನ ಸವಾರರು ಸ್ವಲ್ಪ ಸಮಯ ನಿರಾಳರಾಗಿದ್ದರು. ಇದೀಗ ಹಂಪ್ಸ್‌ ಕಿತ್ತು ಹೋಗಿವೆ. ಮತ್ತೆ ಸಮಸ್ಯೆ ಮುನ್ನೆಲೆಗೆ ಬಂದಿದೆ. ವಾಹನ ಸವಾರರು, ಅದರಲ್ಲೂ ದ್ವಿಚಕ್ರ ವಾಹನಗಳು ಕಾಣಿಯೂರು ರಸ್ತೆಯಿಂದ ವೇಗವಾಗಿ ಸುಳ್ಯ- ಪುತ್ತೂರು ರಸ್ತೆಗೆ ಧಾವಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೆಚ್ಚು ವಾಹನಗಳು ಜಮೆ ಆಗುವ ಸ್ಥಳದಲ್ಲಿ ಅಪಘಾತ ಸಾಮಾನ್ಯ. ಆದರೆ ವಾಹನಗಳನ್ನು ಶಿಸ್ತುಬದ್ಧವಾಗಿ ಪಾರ್ಕ್‌ ಮಾಡಿಸಿದರೆ, ವಾಹನ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಇದ್ದರೆ ಅಪಘಾತ ನಡೆಯದು. ಆದರೆ ದರ್ಬೆಯಲ್ಲಿ ವಾಹನ ಪಾರ್ಕ್‌ ಹಾಗೂ ವಾಹನ ಸಂಚಾರದ ವ್ಯವಸ್ಥೆ ಸರಿಯಾಗಿಲ್ಲ. ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕ್‌ ಮಾಡಲಾಗುತ್ತಿದೆ. ಇದಕ್ಕೆ ಸರಿಯಾಗಿ ವಾಹನಗಳು ಒಟ್ಟಾರೆ ಯಾಗಿ ನುಗ್ಗಿದರೆ, ಅಪಾಯ ಹೆಚ್ಚು. ಯಾರದ್ದೋ ತಪ್ಪಿಗೆ, ಇನ್ಯಾರದ್ದೋ ಜೀವಬಲಿ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾದೀತು. ಈ ಬಗ್ಗೆ ನಗರಸಭೆ ಹಾಗೂ ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Advertisement

ವೇಗಕ್ಕೆ  ಕಡಿವಾಣ
ಸುಳ್ಯ ಕಡೆಯಿಂದ ಆಗಮಿಸುವ ವಾಹನಗಳು ವೇಗವಾಗಿ ಮುಖ್ಯರಸ್ತೆಯಿಂದ ಸಾಗುತ್ತದೆ. ಇಲ್ಲಿ ಡಿವೈಡರ್‌ ಇದೆಯಾದರೂ, ಕಾಣಿಯೂರು ಭಾಗದ ವಾಹನಗಳನ್ನು ನಿಯಂತ್ರಿಸಲು ಅಥವಾ ಸುಳ್ಯ ಭಾಗದಿಂದ ಬರುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಇದು ಸಮರ್ಥವಾಗಿಲ್ಲ. ಕಾಣಿಯೂರು ಭಾಗದ ವಾಹನಗಳು ನೇರವಾಗಿ ಮುಖ್ಯರಸ್ತೆಗೆ ಬಂದರೆ, ಸುಳ್ಯ ಕಡೆಯಿಂದ ಬರುವ ವಾಹನಗಳಿಗೆ ಢಿಕ್ಕಿ ಸಂಭವಿಸುವ ಸಾಧ್ಯತೆ ಅಧಿಕವಾಗಿದೆ. ಮಾತ್ರವಲ್ಲ, ಕಾಣಿಯೂರು ಭಾಗದ ವಾಹನಗಳು ನೇರವಾಗಿ ಬರುವುದರಿಂದ ಪುತ್ತೂರು ಕಡೆಯಿಂದ ಸುಳ್ಯಕ್ಕೆ ಹೋಗುವ ವಾಹನಗಳ ಚಾಲಕರು ಗಲಿಬಿಲಿಗೆ ಒಳಗಾಗುತ್ತಾರೆ.

 ವೃತ್ತ ಅಭಿವೃದ್ಧಿಗೆ ಕ್ರಮ
ಪುತ್ತೂರು ಪೇಟೆಯ ಮೂರು ವೃತ್ತಗಳನ್ನು ಅಭಿವೃದ್ಧಿ ಪಡಿಸಲಿದ್ದು, ಇದರಲ್ಲಿ ದರ್ಬೆ ವೃತ್ತವೂ ಸೇರಿದೆ. ಇದನ್ನು ಯಾವ ರೀತಿ ಅಭಿವೃದ್ಧಿ ಪಡಿಸುವುದು ಎಂಬ ಬಗ್ಗೆ ಎಸ್ಟಿಮೇಷನ್‌ ಸಿದ್ಧ ಪಡಿಸಲು ತಿಳಿಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸದ್ಯ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ.
 - ರೂಪಾ ಶೆಟ್ಟಿ, ಪೌರಾಯುಕ್ತೆ,
   ಪುತ್ತೂರು ನಗರಸಭೆ 

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next