Advertisement
ಎರಡು ತಿಂಗಳ ಹಿಂದೆ ಹೆದ್ದಾರಿ ಇಲಾಖೆ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ 27.4 ಕೋಟಿ ರೂ. ವೆಚ್ಚದಲ್ಲಿ ಓವರ್ ಪಾಸ್ (ಸರ್ವಿಸ್ ರಸ್ತೆ ಸಂಪರ್ಕಕ್ಕೆ ಮೇಲ್ಸೆತುವೆ) ನಿರ್ಮಾಣ ಪ್ರಸ್ತಾವನೆಗೆ ಪ್ರಾಧಿಕಾರ ಒಪ್ಪಿಗೆ ನೀಡಿತ್ತು. ಈ ಓವರ್‌ಪಾಸ್ ನಿರ್ಮಾಣ ಯಾವ ರೀತಿ ನಿರ್ಮಾಣವಾಗಲಿದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಗೊಂದಲವಿದೆ. ಅಲ್ಲದೆ ಅದಕ್ಕೂ ಮುನ್ನ ಇಲ್ಲಿನ ಬಸ್ ನಿಲ್ದಾಣಗಳನ್ನು ವಿಂಗಡಿಸಿ ಟ್ರಾಫಿಕ್ ದಟ್ಟಣೆ ಕಡಿಮೆ ಗೊಳಿಸಲು ಸ್ಥಳೀಯರು ಆಗ್ರಹಿಸಿದ್ದಾರೆ. ಜಿಲ್ಲಾ ನ್ಯಾಯಾಧೀಶರು ಸ್ಥಳಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದರೂ, ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳು ಇನ್ನೂ ಎಚ್ಚೆತ್ತಿಲ್ಲ ಎಂಬುದು ನಾಗರಿಕರ ಆರೋಪವಾಗಿದೆ.
ಸಂತೆಕಟ್ಟೆ ಜಂಕ್ಷನ್ ಟ್ರಾಫಿಕ್ ಜಾಮ್‌ನಿಂದ ಬೇಸತ್ತಿರುವ ಸ್ಥಳೀಯರು ನೂತನ ಓವರ್‌ಪಾಸ್ ನಿರ್ಮಾಣ ಗೊಂದಲ ಪರಿಹಾರಕ್ಕಾಗಿ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ದೂರಿಗೆ ಸ್ಪಂದಿಸಿದ ಜಿಲ್ಲಾ ಸತ್ರ ನ್ಯಾಯಾಧೀಶರು ಕೂಡಲೇ ಸಭೆ ಕರೆದಿದ್ದು, ಕುಂದಾಪುರ ಎಸಿ, ಎಎಸ್‌ಪಿ, ಪೌರಾಯುಕ್ತರು, ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ| ರವೀಂದ್ರನಾಥ್ ಶಾನುಭಾಗ್, ಹೆದ್ದಾರಿ ಎಂಜಿನಿಯರ್, ಸಂತೆಕಟ್ಟೆ 12 ನಾಗರಿಕರು ಸಭೆಯಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ನ್ಯಾ| ಜೆ.ಎನ್ ಸುಬ್ರಹ್ಮಣ್ಯ ಅವರು ನ.28ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಟ್ರಾಫಿಕ್ ಒತ್ತಡ ಕಡಿಮೆಗೊಳಿಸಲು ತುರ್ತಾಗಿ ಬಸ್ ನಿಲ್ದಾಣ ವಿಂಗಡಣೆಗೆ ಹೆದ್ದಾರಿ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆಗೆ ಮಾರ್ಗದರ್ಶನ ನೀಡಿದ್ದರು. ಬಸ್‌ನಿಲ್ದಾಣಗಳ ವಿಂಗಡಣೆ
ಸದ್ಯದ ಪರಿಹಾರ
ಈ ಜಂಕ್ಷನ್‌ನಲ್ಲಿ 7 ಕಡೆಗೆ ಸಾಗುವ ಬಸ್‌ಗಳು ಒಂದೇ ಕಡೆ ನಿಲುಗಡೆ ಆಗುತ್ತಿರುವುದು ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿರುವ ಬಸ್ ನಿಲ್ದಾಣವನ್ನು ಸ್ಥಳಾಂತರಿಸಬೇಕು. ಕಲ್ಯಾಣಪುರ, ನಿಡಂಬಳ್ಳಿ, ಕೆಮ್ಮಣ್ಣು, ಹೂಡೆ, ಕೋಡಿ ಬೆಂಗ್ರೆ ಕಡೆ ಸಾಗುವ ಬಸ್‌ಗಳ ನಿಲ್ದಾಣ ವನ್ನು ತಾತ್ಕಾಲಿಕ ಮೀನು ಮಾರುಕಟ್ಟೆ ಹತ್ತಿರದ ತಿರುವಿಗೆ ಸ್ಥಳಾಂತರಿಸಬೇಕು. ಕುಂದಾಪುರ, ಬ್ರಹ್ಮಾವರ, ಬಾರಕೂರು, ಪೇತ್ರಿ, ಕೊಳಲಗಿರಿ, ಪೆರ್ಡೂರು ಕಡೆ ಸಾಗುವ ಬಸ್ ನಿಲ್ದಾಣವನ್ನು ಹೈವೇ ಸರ್ವಿಸ್ ರಸ್ತೆಯಲ್ಲೆ ಇರುವ ತಾತ್ಕಾಲಿಕ ಶೌಚಾಲಯಕ್ಕಿಂತ ಸ್ವಲ್ಪ ಮುಂದಕ್ಕೆ ಸ್ಥಳಾಂತರಿಸಬೇಕು. ಉಡುಪಿ ಕಡೆ ಸಾಗುವ ಬಸ್‌ಗಳು ಎಕ್ಸ್‌ಪ್ರೆಸ್ ಹೈವೇಯಲ್ಲಿ ನಿಲ್ಲಿಸದೆ ಸರ್ವಿಸ್ ರಸ್ತೆಗೆ ಸ್ಥಳಾಂತರಗೊಳಿಸಬೇಕು ಎಂದು ಡಾ| ರವೀಂದ್ರನಾಥ್ ಶಾನುಭಾಗ್ ಸಲಹೆ ನೀಡಿದ್ದಾರೆ.
Related Articles
ಮಹತ್ವ ಏನು?
ಗೋಪಾಲಪುರ, ನಯಂಪಳ್ಳಿ, ಕಲ್ಯಾಣಪುರ, ನಿಡಂಬಳ್ಳಿ, ನೇಜಾರು, ಕೆಮ್ಮಣ್ಣು, ಹೂಡೆ, ಬೆಂಗ್ರೆ, ಕೋಡಿ ಬೆಂಗ್ರೆ, ಬಡಾನಿಡಿ ಯೂರು, ತೊಟ್ಟಂ, ತೆಂಕನಿಡಿಯೂರು, ಲಕ್ಷ್ಮೀನಗರ, ಸುಬ್ರಹ್ಮಣ್ಯನಗರ, ಕೊಡವೂರು, ಕೊಳಲಗಿರಿ ಸೇರಿದಂತೆ ಸಂತೆಕಟ್ಟೆ ಸುತ್ತಮುತ್ತಲಿನ 18 ಹಳ್ಳಿಗಳ ಜನ ಸಾಮಾನ್ಯರು ಉಡುಪಿಗೆ ಹೋಗಿ ಬರಲು ಇದೇ ಜಂಕ್ಷನ್ ದಾಟಬೇಕು.
Advertisement
ಅಲ್ಲದೆ ಉಡುಪಿ ನಗರ ಸಭೆ ಗೋಪಾಲಪುರ ವಾರ್ಡ್, ಕಲ್ಯಾಣಪುರ, ಕೆಮ್ಮಣ್ಣು, ಬಡಾನಿಡಿಯೂರು, ತೆಂಕ ನಡಿಯೂರು ಗ್ರಾ.ಪಂ. ಸೇರಿದಂತೆ 5 ಆಡಳಿತ ಕೇಂದ್ರಗಳ ಭಾಗವಾಗಿದೆ. ಐದಾರು ಶಿಕ್ಷಣ ಸಂಸ್ಥೆಗಳು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದಿನನಿತ್ಯ ಸಂಚರಿಸುವ ಪ್ರಮುಖ ಪ್ರದೇಶ. ಬೆಳಗ್ಗೆ 8ರಿಂದ 10 ಗಂಟೆವರೆಗೆ ಸಾಯಂಕಾಲ 4ರಿಂದ 7 ಗಂಟೆಯ ವರೆಗೆ ದಿನನಿತ್ಯ ಟ್ರಾಫಿಕ್ ಸಮಸ್ಯೆಯಿಂದ ಬಳಲುವಂಥ ಪರಿಸ್ಥಿತಿ ನಿರ್ಮಾಣ ಗೊಂಡಿದೆ. ವಿದ್ಯಾರ್ಥಿ, ಮಹಿಳೆಯರು ಜೀವ ಕೈಯಲ್ಲಿಡಿದು ರಸ್ತೆ ದಾಟಬೇಕು. ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ಅವೈಜ್ಞಾನಿಕ ತ್ರಿಪಲ್ ಹಂಪ್ ಅಳವಡಿಸಿದ್ದು ಹಲವು ಮಂದಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಗೊಂಡಿದ್ದಾರೆ.
ಸ್ಥಳೀಯರಿಗೆ ಮಾಹಿತಿ ನೀಡಿಸಂತೆಕಟ್ಟೆ ಜಂಕ್ಷನ್‌ನಲ್ಲಿ ಓವರ್‌ಪಾಸ್(ಕಿನ್ನಿಮೂಲ್ಕಿ ಮಾದರಿಯಲ್ಲಿ)ನಿರ್ಮಿಸುವ ಬಗ್ಗೆ ಹೆದ್ದಾರಿ ಇಲಾಖೆ ಅಧಿಕಾರಿಗಳು ಮೌಖೀಕವಾಗಿ ತಿಳಿಸಿದ್ದಾರೆ. ಆದರೆ ಓವರ್‌ಪಾಸ್ ಬಗ್ಗೆ ಇನ್ನು ನಮ್ಮಲ್ಲಿ ಗೊಂದಲವಿದೆ. ಜನರಿಗೆ ಅನಾನುಕೂಲವಾಗುವ ರೀತಿಯಲ್ಲಿ ಓವರ್‌ಪಾಸ್ ನಿರ್ಮಾಣವಾಗಬಾರದು. ಫುಟ್‌ಪಾತ್, ಸರ್ವಿಸ್ ರಸ್ತೆಗಳನ್ನು ವ್ಯವಸ್ಥಿತವಾಗಿಸಬೇಕು. ಕಾಮಗಾರಿ ಆರಂಭಕ್ಕೂ ಮೊದಲು ಸ್ಥಳೀಯರಿಗೆ ನಕ್ಷೆ ಸಹಿತ ಪೂರ್ಣಮಾಹಿತಿ ಒದಗಿಸಬೇಕು. ಜಿಲ್ಲಾ ನ್ಯಾಯಾಧೀಶರ ನಿರ್ದೇಶನವನ್ನು ಹೆದ್ದಾರಿ ಅಧಿಕಾರಿಗಳು ಪಾಲಿಸಿಲ್ಲ.
-ಜೋಸೆಫ್ ಜಿ.ಎಂ. ರೆಬೆಲ್ಲೊ, ಸೇವಾ ಸದಸ್ಯ, ಕಾನೂನು ಸೇವೆಗಳ ಪ್ರಾಧಿಕಾರಿ, ಉಡುಪಿ – ಅವಿನ್ ಶೆಟ್ಟಿ