Advertisement

ಯಾತ್ರಿ ನಿವಾಸಗಳ ಉದ್ಘಾಟನೆ ಯಾವಾಗ?

08:57 AM Jul 29, 2019 | Suhan S |

ನರೇಗಲ್ಲ: ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಯಾದರೆ ಮಾತ್ರ ಆ ಯೋಜನೆಗಳಿಗೆ ಸಾರ್ಥಕತೆ ಬರುವುದು. ಆದರೆ ಯೋಜನೆಗಳು ಸಮರ್ಪಕ ಅನುಷ್ಠಾನವಾಗದಿದ್ದರೆ ಹೆಬ್ಬಂಡೆ ಮೇಲೆ ನೀರು ಸುರಿದಂತಾಗುತ್ತದೆ. ಇದಕ್ಕೆ ನಿಡಗುಂದಿ, ಮಾರನಬಸರಿ ಹಾಗೂ ಅಬ್ಬಿಗೇರಿ ಗ್ರಾಮಗಳಲ್ಲಿ ನಿರ್ಮಾಣವಾಗಿರುವ ಯಾತ್ರಿ ನಿವಾಸಗಳೇ ಉತ್ತಮ ನಿದರ್ಶನ.

Advertisement

ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಇನ್ನು ಉದ್ಘಾಟನೆಯಾಗದೇ ಭಕ್ತರ ಬಳಕೆಗೆ ಬಾರದಂತಾಗಿದೆ.

ಹೋಬಳಿ ವ್ಯಾಪ್ತಿಯ ನಿಡಗುಂದಿಯಲ್ಲಿನ ಇಟಗಿ ಭೀಮಾಂಬಿಕಾ ದೇವಿ ದೇವಸ್ಥಾನ ಆವರಣದಲ್ಲಿ, ಮಾರನಬಸರಿ ಮುರುಘರಾಜೇಂದ್ರ ಮಠದಲ್ಲಿ, ಅಬ್ಬಿಗೇರಿ ಹಿರೇಮಠ ಆವರಣದಲ್ಲಿ ಯಾತ್ರಿ ನಿವಾಸಗಳು ತಲೆಯೆತ್ತಿವೆ. ನಿಡಗುಂದಿ ಯಾತ್ರಿ ನಿವಾಸಕ್ಕೆ ಅಂದಾಜು 50 ಲಕ್ಷ, ಮಾರನಬಸರಿಗೆ ಯಾತ್ರಿ ನಿವಾಸಕ್ಕೆ 25 ಲಕ್ಷ, ಅಬ್ಬಿಗೇರಿ ಯಾತ್ರಿ ನಿವಾಸಕ್ಕೆ 25 ಲಕ್ಷ ರೂ. ಖರ್ಚು ಮಾಡಲಾಗಿದೆ. ಮಠಗಳಿಗೆ ಬರುವ ಭಕ್ತರಿಗೆ ಅನುಕೂಲವಾಗಲಿ ಎನ್ನುವುದಕ್ಕಾಗಿ ಶಾಸಕರ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಅವುಗಳು ಭಕ್ತರ ಬಳಕೆಗೆ ದೊರೆಯದಿರುವುದು ನಿರಾಸೆ ಮೂಡಿಸಿವೆ.

ಹಸ್ತಾಂತರ ಹಂತದಲ್ಲಿ ಕಟ್ಟಡಗಳು: 2016-17ನೇ ಸಾಲಿನ ವಿಶೇಷ ಅನುದಾನದಲ್ಲಿ ಮೂರು ಕಡೆಗಳಲ್ಲಿ 1 ಕೋಟಿಗೂ ಹೆಚ್ಚು ಹಣ ಬಳಸಿ ಯಾತ್ರಿ ನಿವಾಸಗಳನ್ನು ಕೆಎಲ್ಐಆರ್‌ಡಿಎಲ್ ಇಲಾಖೆಯವರು ಮಾಡಿದ್ದಾರೆ. ಈಗ ಅವರು ಸಂಬಂಧಿಸಿದ ಪ್ರವಾಸೋದ್ಯಮ ಇಲಾಖೆಗೆ ಕಾಮಗಾರಿಗಳು ಮುಗಿದಿವೆ. ಕಟ್ಟಡಗಳನ್ನು ಹಸ್ತಾಂತರ ಮಾಡಿಕೊಳ್ಳಿ ಎಂದು ಹೇಳುವ ಹಂತದಲ್ಲಿದೆ. ಇದಕ್ಕೆ ಉದ್ಘಾಟನೆ ಭಾಗ್ಯ ಬರಬೇಕಾಗಿದೆ. ಇದಕ್ಕಾಗಿ ಈ ಭಾಗದ ಜನಪ್ರತಿನಿಧಿಗಳು ಬಂದು ಈ ಕಾರ್ಯ ನಡೆಸಬೇಕಿರುವುದರಿಂದ ಅವರಿಗಾಗಿ ಕಾಯುತ್ತಿವೆ ಯಾತ್ರಿ ನಿವಾಸಗಳು.

ಹೆಚ್ಚಿನ ಅನುದಾನ ಅವಶ್ಯ: ಕಟ್ಟಡಗಳೇನೂ ನಿರ್ಮಾಣವಾಗಿವೆ. ಅಲ್ಲಿ ನೀರು, ಕಾಂಪೌಂಡ್‌ ನಿರ್ಮಾಣ ಸೇರಿದಂತೆ ಇತರ ಸೌಲಭ್ಯಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬೇಕಾಗಿರುವುದು ಈಗಿನ ಪರಿಸ್ಥಿತಿ ನೋಡಿದರೆ ಗೊತ್ತಾಗುತ್ತದೆ.

Advertisement

ಭಕ್ತರು ಮಠಗಳಿಗೆ ಬಂದು ವಾಸ್ತವ್ಯ ಮಾಡಿದಾಗ ಅವರಿಗೆ ಬೇಕಾದ ಸೌಲಭ್ಯಗಳು ಇಲ್ಲದಿರುವುದರಿಂದ ಭಕ್ತರಿಗೆ ತೊಂದರೆಯಾಗುವುದನ್ನು ಮನಗಂಡು ಸಂಬಂಧಪಟ್ಟ ಇಲಾಖೆಯವರು ತಕ್ಷಣವೇ ಈ ಮೂರು ಗ್ರಾಮಗಳ ಯಾತ್ರಿ ನಿವಾಸಗಳ ಕಡೆಗೆ ಗಮನ ಹರಿಸಿ ಅಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆನ್ನುವುದು ಭಕ್ತರ ಒತ್ತಾಯವಾಗಿದೆ.

ನಿಡಗುಂದಿ, ಮಾರನಬಸರಿ ಹಾಗೂ ಅಬ್ಬಿಗೇರಿ ಗ್ರಾಮಗಳಲ್ಲಿ ನಿರ್ಮಾಣವಾಗಿರುವ ಯಾತ್ರಿ ನಿವಾಸಗಳು ಉದ್ಘಾಟನೆ ಹಂತದಲ್ಲಿವೆ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ. ಆಯಾ ಗ್ರಾಮಗಳ ಜನತೆ, ಮಠಗಳ ಶ್ರೀಗಳು ಹಾಗೂ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಿಸಿ ಶೀಘ್ರದಲ್ಲಿಯೇ ಅವುಗಳ ಉದ್ಘಾಟನೆ ಮಾಡಿ ಭಕ್ತರ ಅನುಕೂಲಕ್ಕೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ಮಾಡುವೆ.•ಕಳಕಪ್ಪ ಬಂಡಿ, ಶಾಸಕ, ರೋಣ

ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ಇಲಾಖೆ ವತಿಯಿಂದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನು ಪ್ರವಾಸೋದ್ಯಮ ಇಲಾಖೆಗೆ ಕಟ್ಟಡಗಳ ಹಸ್ತಾಂತರಗೊಳಿಸುವ ಕಾರ್ಯ ಬಾಕಿ ಇದೆ.•ಆರ್‌. ಶ್ರೀನಿವಾಸ, ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಅಭಿಯಂತರ

 

•ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next