ನರೇಗಲ್ಲ: ಪಟ್ಟಣದ ರೈತರು, ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸ್ವಯಂ ಪ್ರೇರಣೆಯಿಂದ ಹಿರೇಕೆರೆಯ ಹೂಳು ತೆಗೆದಿರುವುದು ಈಗ ಇತಿಹಾಸ. ಕಳೆದ ಐದಾರು ವರ್ಷಗಳಿಂದ ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ಇಲ್ಲಿನ ಜನ, ಜಾನುವಾರುಗಳಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಈ ವರ್ಷದ ಮುಂಗಾರು ಸಂಪೂರ್ಣ ಇಲ್ಲದೇ ಇರುವುದರಿಂದ ಕೆರೆ ತುಂಬುವುದು ಇರಲಿ ಇಲ್ಲಿ ಹನಿ ನೀರು ಸಹ ಸಂಗ್ರಹವಾಗಿಲ್ಲ. ಜನರ ಜೀವನಾಡಿಯಂತಿರುವ ಕೆರೆಗೆ ನೀರು ತುಂಬಿಸುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ವಿಫಲವಾಗಿರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಹಣವಿಲ್ಲದೆ ಅಭಿವೃದ್ಧಿ: ಕಳೆದ ವರ್ಷ ಕೆರೆಯ ಅಭಿವೃದ್ಧಿಗೆ ಪಣತೊಟ್ಟು ಇಲ್ಲಿನ ಹಾಲಕೆರೆಯ ಡಾ| ಅಭಿನವ ಅನ್ನದಾನ ಸ್ವಾಮೀಜಿಗಳು, ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳು ಹಾಗೂ ಹಿತ ಚಿಂತಕರು, ಪರಿಸರ ಪ್ರೇಮಿಗಳ ನೇತೃತ್ವದಲ್ಲಿ ನೆಲ ಜಲ ಸಂರಕ್ಷಣೆ ಸಮಿತಿ ರಚಿಸಿಕೊಂಡು ಕೆರೆಯ ಹೂಳು ತೆಗೆಸಿದ್ದಾರೆ. ಸುತ್ತಮುತ್ತಲಿನ ರೈತರ ಸಹಕಾರದೊಂದಿಗೆ ಸರ್ಕಾರದ ಸಹಾಯಧನ ಅಪೇಕ್ಷಿಸದೇ, ಕೆರೆಯ ಹೊಳೆತ್ತುವ ಕಾರ್ಯದ ಜತೆಗೆ ಫಲವತ್ತಾದ ಹೂಳಿನ ಮಣ್ಣನ್ನು ರೈತರು ತಮ್ಮ ಹೊಲಗಳಿಗೆ ಹಾಕಿಕೊಂಡಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಹಿರೇಕೆರೆಯು ಕೊಡಿಕೊಪ್ಪಕ್ಕೆ ಹೊಂದಿಕೊಂಡಿದೆ. ಸುಮಾರು 39 ಎಕರೆ ವಿಸ್ತೀರ್ಣ ಹೊಂದಿದೆ. ಇದನ್ನು ಹಂತ ಹಂತವಾಗಿ ನಾಲ್ಕು ಕೆರೆಗಳನ್ನಾಗಿ ಭಾಗ ಮಾಡಲಾಗಿದೆ. ಇದಕ್ಕೆ ನದಿ ಮೂಲದಿಂದ ನೀರು ತುಂಬಿಸುವ ವ್ಯವಸ್ಥೆ ಈಗ ಸದ್ಯಕ್ಕೆ ಮಾಡಬೇಕಾಗಿದೆ.
ಕಳೆದ ಐದು ವರ್ಷಗಳಿಂದ ಸತತ ಬರಗಾಲ ಇರುವುದರಿಂದ ಅಂತರ್ಜಲ ಬತ್ತಿ ಹೋಗಿದೆ. ನರೇಗಲ್ಲ ಸೇರಿದಂತೆ ಮಜರೆ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ತೊಂದರೆ ಪ್ರಾರಂಭವಾಗಿದೆ. ಹಿಂಗಾರು ಮತ್ತು ಮುಂಗಾರು ಮಳೆ ಸರಿಯಾಗಿ ಬಾರದೇ ಇರುವುದರಿಂದ ಜನರು ಪಟ್ಟಣಗಳಿಗೆ ಗುಳೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಹಮ್ಮಿಗಿ ಏತ ನೀರಾವರಿಯಿಂದ ಅಥವಾ ಮಲಪ್ರಭಾ ಕಾಲುವೆಯಿಂದ ನರೇಗಲ್ಲ-ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ಕೆಲಸ ಬೇಗನೆ ಪ್ರಾರಂಭಿಸಬೇಕು. ಕೆರೆ ತುಂಬಿಸುವ ಕೆಲಸವಾಗೇಕೆಂಬುದು ಜನಾಗ್ರಹವಾಗಿದೆ.
•ಸಿಕಂದರ ಎಂ. ಆರಿ