Advertisement

“ನನ್ನ ತಂಟೆಗೆ ಬಂದ್ರೆ  ಬಿಪಿ, ಶುಗರ್‌ ಬರಿಸುವೆ’

03:45 AM May 09, 2017 | Team Udayavani |

ಸಿಂಧನೂರು: “ನನಗೆ ಬಿಪಿ-ಶುಗರ್‌ ಇಲ್ಲ. ನಾನು ಯಾರ ತಂಟೆಗೂ ಹೋಗುವುದಿಲ್ಲ. ನನ್ನ ತಂಟೆಗೆ ಬಂದವರಿಗೆ ಬಿಪಿ- ಶುಗರ್‌ ಬರಿಸುವೆ’ ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,”ರಾಯಣ್ಣ ಬ್ರಿಗೇಡ್‌ ಸಂವಿಧಾನಿಕವಾಗಿ ರಿಜಿಸ್ಟರ್‌  ಮಾಡಲಾಗಿದೆ. ಇದು ಹಿಂದುಳಿದ, ಶೋಷಿತ ವರ್ಗದ ಜನರಿಗೆ ಸೌಲಭ್ಯ ಒದಗಿಸಿಕೊಡುವ ಸಂಘಟನೆ. ಯಾರೋ ಹೇಳಿದ ಕೂಡಲೇ ನಿಲ್ಲಿಸುವ ಗೋಜು ನಮಗಿಲ್ಲ’ ಎಂದರು.

ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬ್ರಿಗೇಡ್‌ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಬ್ರಿಗೇಡ್‌ ಕಾರ್ಯ ಚಟುವಟಿಕೆಗಳನ್ನು ರಾಜ್ಯಾಧ್ಯಕ್ಷ ಕೆ.ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಮುಕಡಪ್ಪ ನೋಡಿಕೊಳ್ಳುತ್ತಾರೆ ಎಂದರು.

ಅನುದಾನ ಸದ್ಭಳಕೆ ಮಾಡಲಿ: ಬರ ಹಾಗೂ ರೈತರ ವಿಷಯ ಬಂದಾಗ ಮಾತು ಮಾತಿಗೆ ಕೇಂದ್ರದ ಕಡೆ ಬೆಟ್ಟು ಮಾಡಿ ತೋರಿಸುವ ಸಿಎಂ ಸಿದ್ದರಾಮಯ್ಯ, ಬರ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ನಿರ್ವಹಣೆಗೆ 1,742 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಬರ ನಿರ್ವಹಣೆಗೆ 1,042 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಇನ್ನೂ 700 ಕೋಟಿ ರೂ. ಅನುದಾನ ರಾಜ್ಯ ಸರ್ಕಾರದ ಖಜಾನೆಯಲ್ಲಿ ಕೊಳೆಯುತ್ತಿದೆ. ಮೊದಲು ಅದರ ಸಮರ್ಪಕ ಬಳಕೆಗೆ ಮುಂದಾಗಲಿ ಎಂದರು.

ನಾನು, ಬಿಎಸ್‌ವೈ ಹಿಂದೂಸ್ತಾನ್‌ ಪಾಕಿಸ್ತಾನ್‌ ಅಲ್ಲ
ಬಳ್ಳಾರಿ:
ಯಡಿಯೂರಪ್ಪ ನಾನು ಹಿಂದೂಸ್ತಾನ್‌-ಪಾಕಿಸ್ತಾನ ಅಲ್ಲ. ನಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಿಷನ್‌-150 ನಮ್ಮ ಗುರಿ. ಇದನ್ನು ಪಡೆಯುವುದೇ ನಮ್ಮ ಉದ್ದೇಶ ಎಂದು  ಕೆ.ಎಸ್‌. ಈಶ್ವರಪ್ಪ ಹೇಳಿದರು. ಸೋಮವಾರ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ತಾವು, ಯಡಿಯೂರಪ್ಪ ಒಟ್ಟಿಗೆ ಇದ್ದೆವು. ಈ ಕುರಿತು ಯಾವುದೇ ಗೊಂದಲ ಬೇಡ ಎಂದರು. ರಾಯಣ್ಣ ಬ್ರಿಗೇಡ್‌ ನಿಲ್ಲಲ್ಲ. ಬ್ರಿಗೇಡ್‌ಗೂ ಬಿಜೆಪಿಗೂ ಸಂಬಂಧವಿಲ್ಲ. ಬ್ರಿಗೇಡ್‌ ಚಟುವಟಿಕೆಗಳು ಮುಂದುವರಿಯಲಿವೆ  ಎಂದರು.

Advertisement

ಬಳ್ಳಾರಿ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ಸಂಸದ ಶ್ರೀರಾಮುಲು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಿದ ಕುರಿತು ಕೇಳಿದ ಪ್ರಶ್ನೆಗೆ, ಶ್ರೀರಾಮುಲು ಯಾವ ಕಾರಣಕ್ಕಾಗಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೋ ಗೊತ್ತಿಲ್ಲ. ಕಾರ್ಯಕಾರಿಣಿ ಸಂದರ್ಭ ಈ ಬಗ್ಗೆ ರಾಮುಲು ಜತೆ ಚರ್ಚೆ ಮಾಡಬೇಕೆಂದಿದ್ದೆ. ಆದರೆ, ಅವರು ಕಾರ್ಯಕಾರಿಣಿಗೆ ಹಾಜರಾಗಿರಲಿಲ್ಲ.  ಈ ಬಗ್ಗೆ ತಿಳಿದುಕೊಂಡು ಉತ್ತರಿಸುವೆ ಎಂದರು.

ಗೋಶಾಲೆ ತೋರಿಸಲಿ: ಬರೀ ಬೊಗಳೆ ಭಾಷಣ ಮಾಡುವ ಸಿಎಂ ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಕಳಕಳಿಯೇ ಇಲ್ಲ. ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕುಗಳಲ್ಲಿ ಮೇವು ಬ್ಯಾಂಕ್‌ ಗೋಶಾಲೆ ಆರಂಭಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ಯಾವ ತಾಲೂಕಿನಲ್ಲೂ ಒಂದೂ ಗೋಶಾಲೆ, ಮೇವು ಬ್ಯಾಂಕ್‌ ತೆರೆದಿಲ್ಲ. ಬೇಕಾದರೆ ಎಲ್ಲಿ ಗೋಶಾಲೆಗಳು ತೆರೆಯಲಾಗಿದೆ ಎಂದು ತೋರಿಸಲಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next