Advertisement

ಜಾಗತೀಕರಣ ಹುಟ್ಟು ಹಾಕಿದ ಕೌಟುಂಬಿಕ ತಲ್ಲಣಗಳಿಂದ ಪಾರಾಗುವುದೆಂತು?

10:41 PM Nov 27, 2019 | mahesh |

ವಸುದೈವ ಕುಟುಂಬಕಂ ಎಂಬ ಮಹಾನ್‌ ಕಲ್ಪನೆಯ ತಳಹದಿಯ ಮೇಲೆ ವಿಕಾಸಗೊಂಡಿರುವ ನಮ್ಮ ಸಮಾಜದಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಕಾಣೆಯಾಗಿ ಕುಟುಂಬದ ವ್ಯಾಖ್ಯಾನ ಗಂಡ-ಹೆಂಡತಿ ಮಕ್ಕಳು ಎಂಬಷ್ಟಕ್ಕೆ ಸೀಮಿತವಾಗುತ್ತಿದೆ. ಕೈ-ಬಾಯಿ ಸಂಘರ್ಷದ ವೇಗದ ಬದುಕಿನ ನಡುವೆ ತಲೆಯ ಮೇಲೊಂದು ಸೂರು, ಮಕ್ಕಳ ಶಿಕ್ಷಣ ಎಂದು ತಮ್ಮೆಲ್ಲಾ ಆಸೆಗಳ ಸಮಾಧಿ ಮಾಡಿ ಭವಿಷ್ಯದ ಉಜ್ವಲ ಕನಸು ಕಾಣುತ್ತಾ ಸಂಘರ್ಷದ ಬಾಳು ಸವೆಸಿದ ದೊಡ್ಡ ಮಧ್ಯಮ ವರ್ಗ ಇಂದು ಭಾರೀ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗುತ್ತಿದೆ. ಬಾಳ ಸಂಜೆಯ ಲ್ಲಿರುವ ಅದೆಷ್ಟೊ ಹಿರಿಯ ಜೀವಗಳು ಜಾಗತೀಕರಣ ಎಬ್ಬಿಸಿದ ತಲ್ಲಣಗಳಿಂದ ದಿಗ್ಭ್ರಾಂತ ಸ್ಥಿತಿಯಲ್ಲಿವೆ. ರಕ್ತ ಸಂಬಂಧಗಳು ಅರ್ಥಹೀನ ವಾಗುತ್ತಿರುವುದರ ಕುರಿತು ಅವರ ಅಳಲು ಅರಣ್ಯರೋದನವಾಗುತ್ತಿದೆ. ಅನೇಕ ಹಿರಿಯ ಜೀವಗಳು ಹತಾಶೆ-ನಿರಾಶೆಯಲ್ಲಿ ಬದುಕು ಕಳೆಯುತ್ತಿವೆ. ಚಿಂತೆಯೇ ಮುಪ್ಪು, ಸಂತೋಷವೇ ಯೌವ್ವನ ಎಂಬಂತೆ ವಾರ್ಧಕ್ಯದ ಬವಣೆ ಒಂದೆಡೆಯಾದರೆ, ಮನವನ್ನು ಘಾಸಿ ಗೊಳಿಸುತ್ತಿರುವ ಏಕಾಕಿತನದ ನೋವು ಇನ್ನಿಲ್ಲದಂತೆ ಕಾಡುತ್ತಿದೆ. ಮಧ್ಯ ವಯಸ್ಕರು-ಹಿರಿಯರ ಈ ಮನೋವೇದನೆಗೆ ಕೊನೆಯಿಲ್ಲವೇ?

Advertisement

ಹೆಸರಾಂತ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುವ ತಮ್ಮ ಪುತ್ರ-ಪುತ್ರಿಯರ ಸಾಧನೆಯನ್ನು ಸಮಾಜದಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವ ಅನೇಕ ಹಿರಿಯ ಜೀವಗಳನ್ನು ಇಂದು ಏಕಾಕಿತನ ಕಾಡುತ್ತಿದೆ. ವಿದೇಶಗಳಲ್ಲಿ ದೊಡ್ಡ ಮೊತ್ತದ ಸಂಬಳದ ನೌಕರಿ, ಆಗಿಂದಾಗ್ಗೆ ವಿಶ್ವ ಭ್ರಮಣದಲ್ಲಿರುವ ತಮ್ಮ ಕರುಳಿನ ಕುಡಿಗಳ ವೈಭವಯುತ ಜೀವನದ ಕುರಿತು ಎದೆಯುಬ್ಬಿಸಿ ಹೇಳಿಕೊಳ್ಳುವ ಪೋಷಕರು ತಮ್ಮನ್ನು ಕಾಡುವ ಮಾನಸಿಕ ಅಶಾಂತಿ, ತಳಮಳಗಳನ್ನು ತಮ್ಮೆದೆಯಲ್ಲಿ ಹುದುಗಿಸಿಡಬೇಕಾಗುತ್ತದೆ. ನೀರಸ ಬದುಕು ನಿರರ್ಥಕ ಎನಿಸಿದ ಭಾವದಲ್ಲಿ ಅನೇಕ ಹಿರಿಯರು ಬಾರದ ಸಾವನ್ನು ಹಂಬಲಿಸ ತೊಡಗುತ್ತಾರೆ. ವಿದೇಶದಲ್ಲಷ್ಟೇ ಅಲ್ಲ, ದೂರದ ಊರುಗಳಲ್ಲಿರುವ, ಕೆಲವೊಮ್ಮೆ ಹತ್ತಿರವಿದ್ದರೂ ಭಾವನಾತ್ಮಕವಾಗಿ ದೂರವಿರುವ ಸಂತಾನಗಳ ಅಗಲಿಕೆಯಿಂದ ಮಾನಸಿಕ ಘಾಸಿಗೊಳಗಾದ ಮಾತಾ- ಪಿತೃಗಳ ಸಂಖ್ಯೆಯೂ ನಗಣ್ಯವಲ್ಲ. ಕೌಟುಂಬಿಕ ನೆಮ್ಮದಿ ಮರೀಚಿಕೆ ಆಗುತ್ತಿರುವ ಇಂದಿನ ಸ್ಥಿತಿಗೆ ಜಾಗತೀಕರಣದ ಪ್ರಭಾವವೇ ಮುಖ್ಯ ಕಾರಣ ಎನ್ನಬೇಕಾಗುತ್ತದೆ.

ಮಾರುಕಟ್ಟೆ ಆಧಾರಿತ ವಿತ್ತ ವ್ಯವಸ್ಥೆಯಲ್ಲಿ ಸರಕುಗಳಂತೆ ಮಾನವಶ್ರಮ ಕೂಡಾ ಮುಕ್ತ ವಿನಿಮಯಕ್ಕೆ ಒಗ್ಗಿಕೊಂಡಿದೆ. sky is the limit ಎನ್ನುವಂತೆ ವಿಶ್ವದ ಯಾವುದೋ ಮೂಲೆಗೆ ಅವಕಾಶಗಳನ್ನರಸಿ ತೆರಳುವ ಯುವಕರನ್ನು ತಡೆಯುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ. ದೇಶ ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಬಂದ ಆರ್ಥಿಕ ಸಂಪನ್ನತೆ ಹಾಗೂ ಭೋಗ-ವೈಭವದ ಜೀವನದ ಮೆರುಗನ್ನು ಬೆರಗುಗಣ್ಣಿನಿಂದ ನೋಡುತ್ತಾ ನಾವು ತೆರೆದ ತೋಳುಗಳಿಂದ ಅಪ್ಪಿಕೊಂಡಿದ್ದೇವೆ. ವಿಲಾಸಿ ಜೀವನದ ಕುರುಹುಗಳು ಇಂದು ಜೀವನಾವಶ್ಯಕ ವಸ್ತುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ನಗರಗಳ ಥಳಕು-ಬಳಕಿನ ವರ್ಣರಂಜಿತ ಜೀವನಶೈಲಿ ಹಳ್ಳಿಗಳವರೆಗೆ ವ್ಯಾಪಿಸಿದೆ. ವಿದೇಶಗಳಲ್ಲಿ ನೌಕರಿ, ವಿಶ್ವದ ಖ್ಯಾತ ವಿಶ್ವ ವಿದ್ಯಾಲಯಗಳಲ್ಲಿ ಮಕ್ಕಳಿಗೆ ಸೀಟು ಬೇಕು ಎನ್ನುವ, ಅಲ್ಲಿನ ಸರಕುಗಳನ್ನು ಇಷ್ಟಪಡುವ ನಾವು ಅಲ್ಲಿನ ಸಾಂಸ್ಕೃತಿಕ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಪಾಶ್ಚಾತ್ಯ ಸಮಾಜ-ಸಂಸ್ಕೃತಿ, ಜೀವನ ಪದ್ಧತಿಯನ್ನು ಅನುಕರಿಸುವ ನಮ್ಮ ಸಂತಾನಗಳನ್ನು ನಿಯಂತ್ರಿಸಲು ಸಾಧ್ಯವೇ? ಜಾಗತೀಕರಣದ ಸಕಾರಾತ್ಮಕ-ನಕಾರಾತ್ಮಕ ಕೊಡುಗೆಗಳನ್ನು ಸ್ವೀಕರಿಸಲೇಬೇಕಾದ ಅನಿವಾರ್ಯ ಸ್ಥಿತಿ ನಮ್ಮ ಮುಂದಿದೆ. ರೆಕ್ಕೆ ಬಲಿತ ಹಕ್ಕಿಗಳು ಹಾರಿ ಹೋಗುವಂತೆ ಉಜ್ವಲ ಭವಿಷ್ಯದ ಕಾಮನೆಯೊಂದಿಗೆ ದೂರವಾಗುವ ಸಂತಾನಗಳನ್ನು ಹಿಡಿದಿರಿಸಿಕೊಳ್ಳುವುದು ಅಸಂಭವವೇ ಸರಿ.

ಸಂತೋಷ ಎನ್ನುವುದು ಒಂದು ಮಾನಸಿಕ ಸ್ಥಿತಿ. ಐಷಾರಾಮಿ ಭೌತಿಕ ವಸ್ತುಗಳು, ಐಶ್ವರ್ಯ, ಆಸ್ತಿ-ಅಂತಸ್ತುಗಳು ನಮ್ಮ ಇಹದ ಬದುಕಿಗೆ ಅಗತ್ಯವಾದರೂ ಕೇವಲ ಅವುಗಳಿಂದ ನಮ್ಮ ಮಾನಸಿಕ ನೆಮ್ಮದಿ ಉಚ್ಚ ಸ್ಥಿತಿಯಲ್ಲಿರುತ್ತದೆಂದು ಅಪೇಕ್ಷಿಸಲಾಗದು. ವಿಶ್ವದ ಸಿರಿವಂತ ದೇಶಗಳಿಗಿಂತಲೂ ಭೂತಾನದಂತಹ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳ ಪ್ರಜೆಗಳು ಸಂತೋಷವಾಗಿದ್ದಾರೆಂದು ಸಮೀಕ್ಷೆಗಳು ತಿಳಿಸಿವೆ. ಸಮಾಜ ಶಾಸ್ತ್ರಜ್ಞ ಮೆಕೈವರ್‌ ಹೇಳುವಂತೆ ಸಮಾಜ ಸಾಮಾಜಿಕ ಸಂಬಂಧಗಳ ಜಾಲ. ಸಂಘ ಜೀವಿಯಾದ ಮನುಷ್ಯ ಒಂಟಿಯಾಗಿ ಬದುಕಲಾರ. ಏಕಾಕಿತನಕ್ಕಿಂತ ದೊಡ್ಡ ಶಿಕ್ಷೆ ಮನುಷ್ಯನಿಗಿಲ್ಲ. ಯಾಂತ್ರಿಕ ಬದುಕಿನಲ್ಲಿ ಕಳೆದು ಹೋಗುವ ಮನಸ್ಸಿಗೆ ಔಷಧಿಯಾಗಿ ಹವ್ಯಾಸಗಳು ಊರುಗೋಲಾಗಬಹುದು. ಸಮಾಜಮುಖೀ ಸಂಘಟನೆಗಳಲ್ಲಿ ಭಾಗಿಯಾಗುವುದರಿಂದ ಬದುಕು ಹೊಸ ಅರ್ಥ ಕಂಡುಕೊಳ್ಳಲು ಸಾಧ್ಯ. ಸಕಾರಾತ್ಮಕ ಚಿಂತನೆಗೆ ಅಸ್ಪದ ಕೊಡುವ ಸಮಾನ ಮನಸ್ಸುಗಳ ಒಡನಾಟ ಮನಸ್ಸಿಗೆ ಮುದ ನೀಡಬಲ್ಲವು.

ಕೌಟುಂಬಿಕ ಬದುಕಿನಲ್ಲಿ ಜಾಗತೀಕರಣ ಸೃಷ್ಟಿಸಿದ ಅಲ್ಲೋಕಲ್ಲೋಲಗಳನ್ನು ಸಮರ್ಥವಾಗಿ ಎದುರಿಸಲು ನಮ್ಮ ಸಮಾಜ ಸಿದ್ಧವಾಗಬೇಕಾಗಿದೆ. ನಿವೃತ್ತಿಯ ಅನಂತರ ಜೀವನೋತ್ಸಾಹ ಕಳೆದುಕೊಳ್ಳದೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಸಾಹಸ ಹಿರಿಯರು ಮಾಡಬೇಕಿದೆ. An idle mind is devil’s workshop ಎಂಬ ಆಂಗ್ಲ ಮಾತಿನಂತೆ ಕೆಲಸವಿಲ್ಲದ ಖಾಲಿ ಮನಸ್ಸು ನಕಾರಾತ್ಮಕ ಚಿಂತನೆಗೆ ಆಸ್ಪದ ಮಾಡಿಕೊಡುತ್ತದೆ.

Advertisement

ನೋವಿನ ಮೇಲೆ ಬರೆ ಎಳೆದಂತೆ ಕಿರಿಯರ ನಿರ್ಲಕ್ಷ್ಯ, ಏಕಾಕಿತನದ ಅನುಭವ ಬದುಕಿನಲ್ಲಿ ಜುಗುಪ್ಸೆಗೆ ಕಾರಣವಾಗಬಹುದು. ಸಜ್ಜನರ ಸಂಗ ಹೆಜ್ಜೆನು ಸವಿದಂತೆ ಎನ್ನುವಂತೆ ಸಮಾನ ವಯಸ್ಕರ-ಮನಸ್ಕರ ಸಂಗ ಆಹ್ಲಾದಕರ ಎನಿಸುತ್ತದೆ. ಸಮಾನ ಮನಸ್ಕರೊಂದಿಗೆ ಬೆರೆಯುವ, ವಿಚಾರ ವಿನಿಮಯಕ್ಕೆ ಮುಕ್ತ ಅವಕಾಶ ಕಲ್ಪಿಸುವ ಹಿರಿಯ ನಾಗರಿಕರ ವೇದಿಕೆಗಳು ಈ ನಿಟ್ಟಿನಲ್ಲಿ ಸಹಾಯಕವಾಗಬಲ್ಲವು. ಬದುಕನ್ನು ಪ್ರೀತಿಸುವ, ಉತ್ತಮ ಜೀವನಕ್ರಮ, ವ್ಯಾಯಾಮ- ವಿಹಾರಗಳಿಂದ ಮನಸ್ಸನ್ನು ಪ್ರಫ‌ುಲ್ಲಿತವಾಗಿಟ್ಟುಕೊಳ್ಳುವುದನ್ನು ಹಿರಿಯರು ರೂಢಿಸಿಕೊಳ್ಳಬೇಕಾಗಿದೆ. ಸಾಮಾಜಿಕ ಸಂಘ-ಸಂಸ್ಥೆಗಳು ಏರ್ಪಡಿಸುವ ಕೌಟುಂಬಿಕ ಸಮ್ಮಿಲನ-ಪುನರ್ಮಿಲನದಂತಹ ಕಾರ್ಯಕ್ರಮಗಳು ಹಿರಿಯರ ಮನಸ್ಸುಗಳಿಗೆ ಅಮೃತ ಸಿಂಚನ ಮಾಡಿ ಹೊಸ ಹುರುಪನ್ನು ತುಂಬಬಲ್ಲದು.

– ಬೈಂದೂರು ಚಂದ್ರಶೇಖರ ನಾವಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next