Advertisement

ಹೆಸರು ಖರೀದಿಗೆ ಚಾಲನೆ ಎಂದು?

04:07 PM Sep 20, 2018 | |

ನರಗುಂದ: ಆರಂಭ ಶೂರರಂತೆ ಕೇಂದ್ರದ ಅನುಮೋದನೆ ದೊರೆತ ಮರುದಿನವೇ ರಾಜ್ಯ ಸರ್ಕಾರ ರಾಜ್ಯಾದ್ಯಂತ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಕೇಂದ್ರ ತೆರೆದಿದ್ದು, 21 ದಿನ ಗತಿಸಿದರೂ ಈವರೆಗೆ ಹೆಸರು ಖರೀದಿಗೆ ಚಾಲನೆ ನೀಡಿದಿದ್ದರಿಂದ ರೈತರು ಕಂಗಾಲಾಗಿದ್ದಾರೆ.

Advertisement

ಪ್ರತಿ ಕ್ವಿಂಟಲ್‌ಗೆ 6,975 ರೂ. ದರದಂತೆ ಪ್ರತಿ ರೈತನಿಂದ 10 ಕ್ವಿಂಟಲ್‌ ಖರೀದಿಗೆ ಒಳಗೊಂಡು 23,230 ಮೆಟ್ರಿಕ್‌ ಟನ್‌ ಖರೀದಿಗೆ ಕೇಂದ್ರ ಸರ್ಕಾರ ಆ. 30ರಂದು ಅನುಮೋದನೆ ನೀಡಿ ಆ. 31ರಿಂದಲೇ ಎಲ್ಲೆಡೆ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಆರು ದಿನಗಳ ಕಾಲ ಮೊಬೈಲ್‌ ಆಪ್‌ ಬಾರದೇ ಒಂದು ವಾರದ ಬಳಿಕ ನೋಂದಣಿ ಪ್ರಾರಂಭಿಸಲಾಯಿತು.

ಸೆ. 7ರಂದು ಮತ್ತೂಂದು ಆದೇಶ ಹೊರಡಿಸಿದ ರಾಜ್ಯ ಸರ್ಕಾರ 30 ದಿನಗಳ ಖರೀದಿ ಪ್ರಕ್ರಿಯೆಗೆ ಸುತ್ತೋಲೆ ಹೊರಡಿಸಿ ನೋಂದಣಿಗೆ 10 ದಿನ ಹೆಚ್ಚಳಗೊಳಿಸಿತು. ಸೆ. 16ಕ್ಕೆ ನೋಂದಣಿ ಮುಗಿದು ಮೂರು ದಿನಗಳಾದರೂ ಖರೀದಿ ಕೇಂದ್ರಗಳ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಖರೀದಿ ಪ್ರಕ್ರಿಯೆಗೆ ಉಳಿದಿದ್ದು 11 ದಿನಗಳು ಮಾತ್ರ!.

ಮತ್ತೊಂದು ಗೊಂದಲ: ಮೊಬೈಲ್‌ ಆಫ್‌ ಮುಗಿದ ಬಳಿಕ ಇದೀಗ ಮತ್ತೊಂದು ಗೊಂದಲ ಕೇಂದ್ರಗಳಿಗೆ ಅಪ್ಪಳಿಸಿದೆ. ಗದಗ ಜಿಲ್ಲೆಗೆ ರಾಜ್ಯ ಸರ್ಕಾರ ಕೇವಲ 4,883 ಟನ್‌ ಖರೀದಿಗೆ ಗುರಿ ನೀಡಿದ್ದು, ರೈತರು ಮತ್ತು ಖರೀದಿ ಕೇಂದ್ರಗಳ ಸಮರಕ್ಕೆ ವೇದಿಕೆಯಾಗುತ್ತಿದೆ. ಈಗಾಗಲೇ ನರಗುಂದ ತಾಲೂಕಿನಲ್ಲೇ ಏಳು ಕೇಂದ್ರಗಳ ವತಿಯಿಂದ 6810 ರೈತರು ನೋಂದಣಿ ಮಾಡಿದ್ದರಿಂದ ಜಿಲ್ಲೆಯ ಟಾರ್ಗೆಟ… ನರಗುಂದಕ್ಕೇ ಸಾಕಾಗದ ಸ್ಥಿತಿ ಉದ್ಭವಿಸಿದೆ. ಪಟ್ಟಣದ ಎಪಿಎಂಸಿ ಪ್ರಾಂಗಣದ ಖರೀದಿ ಕೇಂದ್ರ ಸೆ.19ರ ಮಧ್ಯಾಹ್ನನ್ಹದಿಂದಲೇ ಬಾಗಿಲಿಗೆ ಬೀಗ ಜಡಿದುಕೊಂಡಿದೆ. ಹಲವಾರು ರೈತರು ತಂದಿದ್ದ ಹೆಸರು ಕಾಳು ಕೇಂದ್ರದಲ್ಲಿ ದಾಸ್ತಾನು ಮಾಡಲಾಗಿದೆ.

ಇನ್ನೂ 2 ದಿನ: ಈ ಮಧ್ಯೆ ಖರೀದಿ ಕೇಂದ್ರ ಪ್ರಕ್ರಿಯೆ ಇನ್ನೂ ಎರಡು ದಿನ ವಿಳಂಬವಾಗುವ ಸಾಧ್ಯತೆಯಿದೆ. ಖರೀದಿ ನಿಗದಿ ಪ್ರಮಾಣ ಗೊಂದಲದಿಂದ ನಾಳೆ ಅಥವಾ ನಾಡಿದ್ದು ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Advertisement

ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿ ಖರೀದಿ ಕೇಂದ್ರದ ಮೇಲೆ ಭರವಸೆಯಿಂದ ಹೆಸರು ಕಾಳು ದಾಸ್ತಾನು ಇಟ್ಟುಕೊಂಡು ಕಾಯ್ದು ಕುಳಿತ ರೈತರು ಕೇಂದ್ರಗಳ ಗೊಂದಲದಿಂದ ಚಿಂತಾಕ್ರಾಂತರಾಗಿದ್ದಾರೆ. ರೈತನ ಮಕ್ಕಳು ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರದ ಆಡಳಿತದಲ್ಲಿ ಮುಗ್ಧ ರೈತ ಎದುರಿಸುತ್ತಿರುವ ಸವಾಲು ಇದಾಗಿದೆ. ಮುಂದಿನ ಬೆಳವಣಿಗೆ ಕಾಯ್ದು ನೋಡಬೇಕು.

ಕೇಂದ್ರವಾರು ಖರೀದಿ ಪ್ರಮಾಣ
ಶನಿವಾರ ಜಿಲ್ಲಾಧಿಕಾರಿ ನೇತೃತ್ವದ ಕಾರ್ಯಪಡೆ ಸಮಿತಿ ನರಗುಂದ ತಾಲೂಕಿನ ಕೇಂದ್ರಗಳಿಗೆ ಖರೀದಿ ಪ್ರಮಾಣ ನಿಗದಿಗೊಳಿಸಿದ್ದು, ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ. ಟಿಎಪಿಸಿಎಂಎಸ್‌ 213 ಟನ್‌, ಚಿಕ್ಕನರಗುಂದ ಕೇಂದ್ರಕ್ಕೆ 76 ಟನ್‌, ಕೊಣ್ಣೂರ 41 ಟನ್‌, ನರಗುಂದದ ಎಫ್‌ಪೋ 161 ಟನ್‌, ಸುರಕೋಡ 163 ಟನ್‌, ಸಂಕದಾಳ 100 ಟನ್‌, ಜಗಾಪುರ 223 ಟನ್‌ ನಿಗದಿ ಮಾಡಿದೆ. ತಾಲೂಕಿನ ಎಲ್ಲ ಏಳು ಖರೀದಿ ಕೇಂದ್ರಗಳಲ್ಲಿ 6810 ರೈತರು ನೋಂದಣಿ ಮಾಡಿದ್ದಾರೆ. ಅಂದರೆ ಕನಿಷ್ಟ 68 ಸಾವಿರ ಕ್ವಿಂಟಲ್‌ ಬೇಡಿಕೆ ಇರುವ ತಾಲೂಕಿಗೆ ನಿಗದಿಯಾಗಿದ್ದು 9,770 ಕ್ವಿಂಟಾಲ್‌ ಮಾತ್ರ!. ಜಿಲ್ಲೆಯಾದ್ಯಂತ ನರಗುಂದ 977 ಟನ್‌, ಗದಗ 1717 ಟನ್‌, ಶಿರಹಟ್ಟಿ -ಲಕ್ಷ್ಮೇಶ್ವರ 824 ಟನ್‌, ಮುಂಡರಗಿ 370 ಟನ್‌, ರೋಣ-ಗಜೇಂದ್ರಗಡ 1000 ಟನ್‌, ಒಟ್ಟು ಜಿಲ್ಲೆಯ 4883 ಟನ್‌ ನಿಗದಿ ಹಂಚಿಕೆ ಮಾಡಲಾಗಿದೆ. ಜಿಲ್ಲೆ ಎಲ್ಲ 30 ಕೇಂದ್ರಗಳಲ್ಲಿ 15,270 ರೈತರ ನೋಂದಣಿಯಾಗಿದೆ!.

Advertisement

Udayavani is now on Telegram. Click here to join our channel and stay updated with the latest news.

Next