ಬೇರೆ ಯಾರೇ ಆಗಿದ್ದರೂ, ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಲೂ ಹೆದರುತ್ತಿದ್ದರೇನೋ. ಆದರೆ, ವೈಷ್ಣವಿ ಎದೆಗುಂದಲಿಲ್ಲ. ನನ್ನ ನಗುವನ್ನು ಕಸಿದುಕೊಳ್ಳಲು ನಿನಗೂ ಸಾಧ್ಯವಿಲ್ಲ ಅಂತ ಕ್ಯಾನ್ಸರ್‌ಗೆ ಚಾಲೆಂಜ್ ಹಾಕಿದರು…
ಉದ್ದನೆಯ ಜಡೆ ಹೆಣೆದು, ಮಲ್ಲಿಗೆ ಹೂ ಮುಡಿದು, ನೆತ್ತಿಬೊಟ್ಟನಿಟ್ಟು, ಅಂಗೈನ ಮದರಂಗಿಯ ರಂಗನ್ನು ಕೆನ್ನೆ ಮೇಲೂ ಮೂಡಿಸಿಕೊಳ್ಳುತ್ತಾ ಹೆಣ್ಣು, ಮದುಮಗಳಾಗಿ ಶೃಂಗರಿಸಿಕೊಳ್ಳುತ್ತಾಳೆ. ಮದುವೆಯ ದಿನ ತಾನು ಜಗತ್ತಿನ ಅತ್ಯಂತ ಸುಂದರಿಯಾಗಿ ಕಾಣಿಸಿಕೊಳ್ಳಬೇಕು ಅನ್ನೋದು ಎಲ್ಲ ಹುಡುಗಿಯರ ಕನಸು. ವೈಷ್ಣವಿ ಪೂವೇಂದ್ರನ್ ಅವರಿಗೂ ಆ ಕನಸಿತ್ತು. ಅದನ್ನವರು ನನಸು ಮಾಡಿಕೊಂಡಿದ್ದಾರೆ ಕೂಡ. ಮದು ಮಗಳ ಅಲಂಕಾರದಲ್ಲಿ ನಗುತ್ತಿರುವ ವೈಷ್ಣವಿಯ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿವೆ.
ಹುಡುಗಿಯೊಬ್ಬಳು ಮದುಮಗಳಂತೆ ಅಲಂಕರಿಸಿಕೊಳ್ಳುವುದರಲ್ಲಿ ವಿಶೇಷ ಏನಿದೆ ಅನ್ನುತ್ತೀರಾ? ವೈಷ್ಣವಿ ಒಂದಲ್ಲ… ಎರಡೆರಡು ಬಾರಿ ಕ್ಯಾನ್ಸರ್‌ಗೆ ತುತ್ತಾದ ಹುಡುಗಿ. ಸ್ತನ ಕ್ಯಾನ್ಸರ್‌ನಿಂದ ಅಪಾರ ನೋವುಂಡ ಈ ಹೆಣ್ಣು, ವರ್ಷಾನುಗಟ್ಟಲೆ ಕೀಮೋಥೆರಪಿ ಪಡೆದು ಚೇತರಿಸಿಕೊಂಡಳು. ಕೊನೆಗೂ ಕ್ಯಾನ್ಸರ್ ಅವರ ದೇಹದಿಂದ ದೂರಾಯ್ತು. ಅಬ್ಟಾ, ಬಚಾವಾದೆ ಎಂದು ನಿಟ್ಟುಸಿರುಬಿಡುವಷ್ಟರಲ್ಲಿ, ಕರುಳು ಮತ್ತು ಬೆನ್ನುಮೂಳೆಯ ಮೇಲೆ ಕ್ಯಾನ್ಸರ್ ಮತ್ತೂಮ್ಮೆ ಅಟ್ಯಾಕ್ ಮಾಡಿತು. ಯಾತನಾಮಯ ಚಿಕಿತ್ಸೆಗಳು ಮತ್ತೆ ಶುರುವಾದವು. ಕೀಮೋಥೆರಪಿಯಿಂದ ತಲೆಗೂದಲಷ್ಟೇ ಅಲ್ಲ, ಹುಬ್ಬಿನ ಮೇಲಿನ ಕೂದಲೂ ಉದುರತೊಡಗಿತು. ಸುಂದರಿಯಾಗಿ ಕಾಣಬೇಕು ಎಂಬ ಹುಡುಗಿಗೆ ಕೂದಲೇ ಇಲ್ಲ ಅನ್ನೋ ಪರಿಸ್ಥಿತಿ ಬಂತು. ನೋವು, ಯಾತನೆ ನಿತ್ಯ ಜೊತೆಯಾಯ್ತು.
ಬೇರೆ ಯಾರೇ ಆಗಿದ್ದರೂ, ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಲೂ ಹೆದರುತ್ತಿದ್ದರೇನೋ. ಆದರೆ, ವೈಷ್ಣವಿ ಎದೆಗುಂದಲಿಲ್ಲ. ನನ್ನ ನಗುವನ್ನು ಕಸಿದುಕೊಳ್ಳಲು ನಿನಗೂ ಸಾಧ್ಯವಿಲ್ಲ ಅಂತ ಕ್ಯಾನ್ಸರ್‌ಗೆà ಚಾಲೆಂಜ್ ಹಾಕಿದರು. ಕ್ಯಾನ್ಸರ್ ಬಂದರೇನಾಯ್ತು, ಕೂದಲು ಇಲ್ಲದಿದ್ದರೆ ಏನಾಯ್ತು? ನಾನು ಎಂದೆಂದಿಗೂ ಸುಂದರಿಯೇ ಅಂತ ನಿರೂಪಿಸಲು ಪಣ ತೊಟ್ಟರು. ಆ ಮೂಲಕ ತನ್ನಂಥ ಇತರ ಮಹಿಳೆಯರಿಗೆ ಧೈರ್ಯ ಹೇಳಲು ನಿಂತರು. ಮದುವೆಯ ದಿನ ಹೆಣ್ಣೊಬ್ಬಳು ಎಷ್ಟು ಚೆನ್ನಾಗಿ ಅಲಂಕರಿಸಿಕೊಳ್ಳುತ್ತಾಳ್ಳೋ ಹಾಗೆ ಅಲಂಕರಿಸಿಕೊಂಡು ಫೋಟೊಶೂಟ್ ಮಾಡಿಸಿಕೊಂಡರು. “ಬೋಲ್ಡ್ ಇಂಡಿಯನ್ ಬ್ರೈಡ್’ ಕ್ಯಾಪ್ಷನ್‌ನ ಆ ಫೋಟೊಗಳನ್ನು ನೋಡಿದರೆ, ವೈಷ್ಣವಿಗಿಂತ ಸುಂದರಿ ಬೇರೊಬ್ಬಳಿಲ್ಲ ಎಂದು ನಿಮಗೂ ಅನ್ನಿಸುತ್ತದೆ.
ಮದುಮಗಳಂತೆ ಅಲಂಕರಿಸಿಕೊಳ್ಳುವುದು ಕೂಡಾ ಸುಲಭದ ಮಾತಾಗಿರಲಿಲ್ಲ. ವೈಷ್ಣವಿಗೆ ಆ ಮೇಕಪ್ ಮಾಡಲು ಮೇಕಪ್ ಆರ್ಟಿಸ್ಟ್‌ಗಳು ಬಹಳ ಶ್ರಮಪಟ್ಟಿದ್ದಾರೆ. ಕ್ಯಾನ್ಸರ್‌ನಿಂದ ಹುಬ್ಬಿನ ಕೂದಲೂ ಉದುರಿ ಹೋಗಿತ್ತು. ಹುಬ್ಬುಗಳು ಸಹಜವಾಗಿ ಕಾಣುವಂತೆ ಮಾಡಲು, ಹುಬ್ಬಿನ ಕೂದಲನ್ನು ಎಳೆಎಳೆಯಾಗಿ ಬರೆದು, ನ್ಯಾಚುರಲ್ ಲುಕ್ ನೀಡಲಾಯ್ತು. ಕೂದಲಿಲ್ಲದ ತಲೆಗೆ, ಹೇರ್‌ಪಿನ್‌ನ ಸಹಾಯವಿಲ್ಲದೆ ಬೈತಲೆ ಬೊಟ್ಟನ್ನು ತೊಡಿಸುವುದೂ ಸವಾಲೇ. ಎಲ್ಲ ಚಾಲೆಂಜ್‌ಗಳನ್ನೂ ಎದುರಿಸಿದ ವೈಷ್ಣವಿ, ಕೆಂಪು ಸೀರೆ ತೊಟ್ಟು, ಮದರಂಗಿ ಹಚ್ಚಿಕೊಂಡು ಮದುಮಗಳಂತೆ ಕಂಗೊಳಿಸಿದಳು.
ಸಾಮಾನ್ಯರಂತೆ ಬದುಕುವ, ಸಂಭ್ರಮಿಸುವ ಅವಕಾಶ ಕ್ಯಾನ್ಸರ್ ಪೀಡಿತರಿಗೂ ಇದೆ ಎಂದು ಜಗತ್ತಿಗೆ ಸಾರುವುದು ಈ ಫೋಟೊಶೂಟ್‌ನ ಉದ್ದೇಶ ಅನ್ನುತ್ತಾರೆ ವೈಷ್ಣವಿ ಪೂವೇಂದ್ರನ್. ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ವೈಷ್ಣವಿ, ಡ್ಯಾನ್ಸರ್ ಕೂಡಾ ಹೌದು. ದೇಹವನ್ನು ಹೊಕ್ಕುವ ಕ್ಯಾನ್ಸರ್ ಕಣಗಳು ನಿಮ್ಮ ಕನಸುಗಳನ್ನು ಚಿವುಟದಿರಲಿ ಅನ್ನೋದು ಆಕೆಯ ಮಾತು. navi indran pillai ಇನ್‌ಸ್ಟಗ್ರಾಂ ಖಾತೆಯ ಮೂಲಕ ವೈಷ್ಣವಿಯನ್ನು ಫಾಲೊ ಮಾಡಬಹುದು.
– ಪ್ರಿಯಾ