Advertisement

ಏನಿದು ಪ್ರಕರಣ; ಅಂದು ಚಿದು ಗೃಹಸಚಿವ, ಶಾ ಜೈಲುಶಿಕ್ಷೆ ಅನುಭವಿಸಿದ್ರು; ಇಂದು ಶಾ ಗೃಹಸಚಿವ!

09:02 AM Aug 22, 2019 | Nagendra Trasi |

ನವದೆಹಲಿ:ಐಎನ್ ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ತನ್ನನ್ನು ಬಂಧಿಸದಂತೆ ತಡೆ ನೀಡಬೇಕೆಂದು ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ. ಈ ನಿಟ್ಟಿನಲ್ಲಿ ಚಿದಂಬರಂಗೆ ಬಂಧನ ಭೀತಿ ಎದುರಾಗಿದೆ.

Advertisement

ಐಎನ್ ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಯಾಕೆ ಚಿದಂಬರಂ ಬೆನ್ನ ಹಿಂದೆ ಬಿದ್ದಿದೆ? ಅಂದು ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದಾಗ ಏನಾಗಿತ್ತು..ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ! ಚಿದಂಬರಂ ವಿರುದ್ಧ ಸಿಬಿಐ ಬೆನ್ನತ್ತಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಐಎನ್ ಎಕ್ಸ್ ಪ್ರಕರಣವನ್ನು ರಾಜಕೀಯವಾಗಿ ವಿಶ್ಲೇಷಿಸಿರುವ ವರದಿ ಇಲ್ಲಿದೆ.

ಅಂದು ಅಮಿತ್ ಶಾ ಗುಜರಾತ್ ಗೃಹಮಂತ್ರಿ!

ಹಿಂದಿನ ಯುಪಿಎ ಸರಕಾರದ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಚಿದಂಬರಂ ಕೇಂದ್ರದಲ್ಲಿ ಗೃಹ, ವಿತ್ತ ಖಾತೆ ಸೇರಿದಂತೆ ಪ್ರಭಾವಿ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಯುಪಿಎ ಮೊದಲ ಸರಕಾರದ ಅವಧಿ ವೇಳೆ ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದರೆ, ಗುಜರಾತ್ ನಲ್ಲಿ ಅಮಿತ್ ಶಾ ಗೃಹ ಸಚಿವರಾಗಿದ್ದರು.

ಈ ಸಂದರ್ಭದಲ್ಲಿ ಸೋಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ತನಿಖೆ ನಡೆಯುತ್ತಿತ್ತು. ಸೋಹ್ರಾಬುದ್ದೀನ್ ವಿರುದ್ಧ 60 ಕೇಸುಗಳು ವಿಚಾರಣೆಗೆ ಬಾಕಿ ಇದ್ದಿರುವಾಗಲೇ 2005ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸೋಹ್ರಾಬುದ್ದೀನ್ ಹತ್ಯೆಯಾಗಿದ್ದ. ಗುಜರಾತ್ ಗೃಹ ಸಚಿವರಾಗಿದ್ದ ಅಮಿತ್ ಶಾ ನಿರ್ದೇಶನದ ಮೇರೆಗೆ ಸೋಹ್ರಾಬುದ್ದೀನ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿದೆ ಎಂದು ಆರೋಪಿಸಲಾಗಿತ್ತು.

Advertisement

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸೋಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣವನ್ನು 2010ರಲ್ಲಿ ಸಿಬಿಐಗೆ ವರ್ಗಾಯಿಸಲಾಗಿತ್ತು. ಆಗ ಪಿ.ಚಿದಂಬರಂ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದರು.

ಎನ್ ಕೌಂಟರ್ ಪ್ರಕರಣದಲ್ಲಿ ಶಾ 3 ತಿಂಗಳು ಜೈಲುಪಾಲು:

2010ರ ಜುಲೈನಲ್ಲಿ ಸೋಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಸಿಬಿಐ ಅಮಿತ್ ಶಾ ಅವರನ್ನು ಕೊಲೆ, ಕಿಡ್ನಾಪ್ ಮತ್ತು ವಸೂಲಿ ಪ್ರಕರಣದ ಆರೋಪದಡಿ ಬಂಧಿಸಿ, ಜೈಲುಪಾಲಾಗುವಂತೆ ಮಾಡಿತ್ತು. ಈ ಸಂದರ್ಭದಲ್ಲಿ ಶಾ ಜಾಮೀನು ಅರ್ಜಿ ಸಲ್ಲಿಸಿದಾಗ ಗುಜರಾತ್ ಹೈಕೋರ್ಟ್ ನಲ್ಲಿ ಸಿಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಅಮಿತ್ ಶಾ ರಾಜಕೀಯವಾಗಿ ಪ್ರಭಾವಶಾಲಿಯಾಗಿದ್ದು, ಸಾಕ್ಷಿಗಳನ್ನು ಬೆದರಿಸುವ ಸಾಧ್ಯತೆ ಇದ್ದು, ಜಾಮೀನು ನೀಡಬಾರದು ಎಂದು ತಕರಾರು ತೆಗೆದಿತ್ತು.

2010ರ ಅಕ್ಟೋಬರ್ 29ರಂದು(ಮೂರು ತಿಂಗಳ ಬಳಿಕ) ಅಮಿತ್ ಶಾಗೆ ಗುಜರಾತ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಮರುದಿನ ಹೈಕೋರ್ಟ್ ಗೆ ವಾರಾಂತ್ಯದ ರಜೆ ಇದ್ದಿತ್ತು. ಆದರೆ ಸಿಬಿಐ ನ್ಯಾಯಮೂರ್ತಿ ಅಫ್ತ್ ತಾಬ್ ಆಲಂ ಅವರ ಮನೆಯಲ್ಲೇ ಅರ್ಜಿ ಸಲ್ಲಿಸಿ, ಅಮಿತ್ ಶಾಗೆ ಗುಜರಾತ್ ಪ್ರವೇಶಿಸದಂತೆ ನಿರ್ಬಂಧ ವಿಧಿಸಬೇಕೆಂದು ಕೋರಿತ್ತು. ಈ ನಿಟ್ಟಿನಲ್ಲಿ ಶಾಗೆ 2010ರಿಂದ 2012ರವರೆಗೆ ಗುಜರಾತ್ ಗೆ ಕಾಲಿಡದಂತೆ ಕೋರ್ಟ್ ನಿರ್ದೇಶನ ನೀಡಿತ್ತು.

ಇಂದು ಶಾ ಕೇಂದ್ರ ಗೃಹ ಮಂತ್ರಿ!

ಚಿದಂಬರಂ ಮತ್ತು ಕಾಂಗ್ರೆಸ್ ಸಿಬಿಐ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದೊಂದು ರಾಜಕೀಯ ದುರುದ್ದೇಶದಿಂದ ಗುರಿಯಾಗಿರಿಸಿಕೊಂಡು ನಡೆಸಿದ ಸಂಚು ಎಂದು ಅಂದು ಅಮಿತ್ ಶಾ ಆರೋಪಿಸಿದ್ದರು. 2014ರ ಡಿಸೆಂಬರ್ ನಲ್ಲಿ ಅಮಿತ್ ಶಾ ಎಲ್ಲಾ ಆರೋಪದಿಂದ ಮುಕ್ತರಾಗಿದ್ದರು. ಈ ಸಂದರ್ಭದಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರ ಅಧಿಕಾರದಲ್ಲಿತ್ತು.

ಕೋರ್ಟ್ ನಲ್ಲಿ ಎಲ್ಲಾ ಆರೋಪಗಳಿಂದ ಮುಕ್ತಗೊಂಡ ನಂತರ, ಅಮಿತ್ ಶಾ ನಿರಪರಾಧಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಹಿಂಸೆ ನೀಡಿದೆ ಎಂದು ಬಿಜೆಪಿ ಹೇಳಿತ್ತು. ಇದೀಗ ಐಎನ್ ಎಕ್ಸ್ ಪ್ರಕರಣದಲ್ಲಿ ಚಿದಂಬರಂ ವಿರುದ್ಧ ಸಿಬಿಐ ಬೆನ್ನತ್ತಿದೆ. ಈಗ ಕಾಂಗ್ರೆಸ್ ಶಾ ಮತ್ತು ಸಿಬಿಐ ವಿರುದ್ಧ ಆರೋಪಿಸುತ್ತಿದೆ ಎಂದು ವರದಿ ವಿಶ್ಲೇಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next